ಪಶ್ಚಿಮ ಬಂಗಾಳದ ಬಿಜೆಪಿ ಸರ್ಕಾರವು ‘ಇತರ ಹಿಂದುಳಿದ ವರ್ಗ’ಗಳ (OBC) ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತರುವ ಎರಡು ವಿಧೇಯಕಗಳನ್ನು ಅಂಗೀಕರಿಸಿದೆ. ಈ ಹೊಸ ತಿದ್ದುಪಡಿಗಳು; ಒಬಿಸಿ ಪಟ್ಟಿಯಿಂದ ಒಟ್ಟು 77 ಮುಸ್ಲಿಂ ಸಮುದಾಯಗಳನ್ನು ಅಧಿಕೃತವಾಗಿ ತೆಗೆದುಹಾಕಲಿವೆ. ಜೊತೆಗೆ, ಒಬಿಸಿ ಮೀಸಲಾತಿ ಪ್ರಮಾಣವು 17%ನಿಂದ 7%ಗೆ ಕಡಿತಗೊಳಿಸಲಿವೆ.
ಹಿಂದುಳಿದ ವರ್ಗಗಳನ್ನು ಸಂಪೂರ್ಣವಾಗಿ ಮರುಹೊಂದಿಸುವ ಉದ್ದೇಶದಿಂದ ಈ ತಿದ್ದುಪಡಿಗಳನ್ನು ತರಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಅಲ್ಲದೆ, ಈ ತಿದ್ದುಪಡಿ ಮಸೂದೆಗಳನ್ನು ರೂಪಿಸಲು 2024ರ ಮೇ ತಿಂಗಳಿನಲ್ಲಿ ಕೋಲ್ಕತ್ತಾ ಹೈಕೋರ್ಟ್ ನೀಡಿದ್ದ ತೀರ್ಪು ಮತ್ತು ನಿರ್ದೇಶನವನ್ನು ನೆಪವಾಗಿ ಬಿಜೆಪಿ ಸರ್ಕಾರ ಬಳಸಿಕೊಂಡಿದೆ.
ಒಬಿಸಿ ಮೀಸಲಾತಿಗೆ ಸಂಬಂಧಿಸಿದಂತೆ 2024ರ ಮೇನಲ್ಲಿ ತೀರ್ಪು ನೀಡಿದ್ದ ಕೋಲ್ಕತ್ತಾ ಹೈಕೋರ್ಟ್, ಪಶ್ಚಿಮ ಬಂಗಾಳದಲ್ಲಿ 2010ರ ನಂತರ ಒಬಿಸಿ ಪಟ್ಟಿಗೆ ಸೇರಿಸಲಾಗಿದ್ದ ಒಟ್ಟು 77 ಮುಸ್ಲಿಂ ಸಮುದಾಯಗಳ ಒಬಿಸಿ ಸ್ಥಾನಮಾನ ಮತ್ತು ಅವರಿಗೆ ನೀಡಲಾಗಿದ್ದ ಒಬಿಸಿ ಪ್ರಮಾಣಪತ್ರಗಳನ್ನು ಕಾನೂನುಬಾಹಿರ ಮತ್ತು ಅಸಂವಿಧಾನಿಕ ಎಂದು ಘೋಷಿಸಿ, ರದ್ದುಗೊಳಿಸಿತ್ತು. 2010ಕ್ಕಿಂತ ಮೊದಲು ಸೂಕ್ತ ಸಮೀಕ್ಷೆಗಳ ಆಧಾರದ ಮೇಲೆ ಪಟ್ಟಿಯಲ್ಲಿದ್ದ 66 ಸಮುದಾಯಗಳಿಗೆ ಮಾತ್ರ ಒಬಿಸಿ ಮೀಸಲಾತಿಯನ್ನು ಸೀಮಿತಗೊಳಿಸಬೇಕು ಮತ್ತು ಒಟ್ಟಾರೆ ಒಬಿಸಿ ಮೀಸಲಾತಿ ಪ್ರಮಾಣವನ್ನು 7%ಗೆ ಇಳಿಸಬೇಕು ಎಂದು ಆದೇಶಿಸಿತ್ತು. ಆದರೆ, 2024ರಲ್ಲಿ ಅಧಿಕಾರದಲ್ಲಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರವು ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇನ್ನೂ ಪ್ರಕರಣ ಸುಪ್ರೀಂ ಕೋರ್ಟ್‌ನ ಪಡಸಾಲೆಯಲ್ಲಿಯೇ ಇದೆ.
ಈ ನಡುವೆ, ಸರ್ಕಾರ ಬದಲಾಗಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರವು, ತಮ್ಮ ಕೋಮು ದೃವೀಕರಣದ ರಾಜಕಾರಣಕ್ಕೆ ಹೈಕೋರ್ಟ್ ತೀರ್ಪನ್ನು ಬಳಸಿಕೊಳ್ಳುತ್ತಿದೆ. ಬಂಗಾಳದ ವಿಧಾನಸಭೆಯಲ್ಲಿ ಸೋಮವಾರ ಈ ಹೊಸ ವಿದೇಯಕಗಳನ್ನು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಗೌರಿಶಂಕರ್ ಘೋಷ್ ಅವರು ಮಂಡಿಸಿದ್ದು, ಅಂಗೀಕರಿಸಲಾಗಿದೆ.
ವಿಧೇಯಕದ ಕುರಿತು ವಿಧಾನಸಭೆಯಲ್ಲಿ ಮಾತನಾಡಿದ ಸಚಿವ ಗೌರಿಶಂಕರ್ ಘೋಷ್, “ಹಿಂದಿನ ಸರ್ಕಾರವು ಯಾವುದೇ ಅರ್ಹತಾ ಸಮೀಕ್ಷೆ ನಡೆಸದೆ, ಕೇವಲ ಮುಸ್ಲಿಂ ಸಮುದಾಯಗಳಿಗೆ ಅನುಚಿತ ಅನುಕೂಲವನ್ನು ಮಾಡಿಕೊಡುವ ಏಕೈಕ ಉದ್ದೇಶದಿಂದ ಹಲವು ಜಾತಿಗಳಿಗೆ ಒಬಿಸಿ ಸ್ಥಾನಮಾನ ನೀಡಿತ್ತು. ಹೈಕೋರ್ಟ್ ನಿರ್ದೇಶನದಂತೆ ಅಂತಹ ಎಲ್ಲ ಸಮುದಾಯಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ,” ಎಂದು ಹೇಳಿಕೊಂಡಿದ್ದಾರೆ. ನಿಯಮಾನುಸಾರ ಸಮೀಕ್ಷೆ ನಡೆಸಿದ ಬಳಿಕ ಸೇರಿಸಲಾಗಿದ್ದ ಕೇವಲ 66 ಸಮುದಾಯಗಳನ್ನು ಮಾತ್ರ ಪ್ರಸ್ತುತ ಪಟ್ಟಿಯಲ್ಲಿ ಉಳಿಸಿಕೊಳ್ಳಲಾಗಿದೆ ಎಂದಿದ್ದಾರೆ.
“ತಿದ್ದುಪಡಿಯಾದ ಕಾನೂನುಗಳ ಅನ್ವಯ, ಹೊಸ ಒಬಿಸಿ ಪಟ್ಟಿಯು ಜೊಲಾಹ್, ಫಕೀರ್, ಪಹಾಡಿಯಾ ಮುಸ್ಲಿಂ, ಹಜ್ಜಾಮ್ ಹಾಗೂ ಚೌದುಲಿಯಂತಹ ನಿರ್ದಿಷ್ಟ ಮುಸ್ಲಿಂ ಸಮುದಾಯಗಳನ್ನು ಮಾತ್ರ ಒಳಗೊಂಡಿರಲಿದೆ. ಮುಂಬರುವ ದಿನಗಳಲ್ಲಿ ಒಬಿಸಿ ಸ್ಥಾನಮಾನವನ್ನು ಕೋರುವ ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ನಿರ್ಧರಿಸಲು ಪಶ್ಚಿಮ ಬಂಗಾಳ ಹಿಂದುಳಿದ ವರ್ಗಗಳ ಆಯೋಗವು ಹೊಸದಾಗಿ ಸರ್ವೇಗಳನ್ನು ನಡೆಸಲಿದೆ” ಎಂದು ಸಚಿವರು ತಿಳಿಸಿದ್ದಾರೆ.



