‘ಮರಣಾನಂತರ ದೇಹದಾನ ಮಾಡಬೇಡಿ, ಅಂಗದಾನ ಮಾಡಿ ಎಂದು ಪಶ್ಚಿಮ ಬಂಗಾಳದ ಆರೋಗ್ಯ ಸಚಿವ ಡಾ. ಶರದ್ವತ್ ಮುಖರ್ಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ವಿರುದ್ಧ ವೈದ್ಯಕೀಯ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಸ್ವತಃ ನೋಂದಾಯಿತ ವೈದ್ಯರೂ ಆಗಿರುವ ಸಚಿವ ಮುಖರ್ಜಿ ಬಂಗಾಳದ ಸಾಲ್ಟ್ ಲೇಕ್ನಲ್ಲಿ ನಡೆದ ನೇತ್ರದಾನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದರು. “ನಮ್ಮ ರಾಜ್ಯದಲ್ಲಿ ಹಲವರು ಉತ್ಸಾಹದಿಂದ ಸಂಪೂರ್ಣ ದೇಹದಾನ ಮಾಡುವುದಾಗಿ ಹೇಳುತ್ತಾರೆ. ದಯವಿಟ್ಟು ಯಾರೂ ದೇಹದಾನ ಮಾಡಬೇಡಿ, ದೇಹದಾನದಿಂದ ಯಾವುದೇ ಪ್ರಯೋಜನವಿಲ್ಲ. ಮಾಜಿ ಮುಖ್ಯಮಂತ್ರಿ ಜ್ಯೋತಿ ಬಸು ಕೂಡ ತಮ್ಮ ದೇಹವನ್ನು ದಾನ ಮಾಡಿದ್ದರು. ಆದರೆ, ಅದರಿಂದ ಏನು ಉಪಯೋಗವಾಗಲಿಲ್ಲ” ಎಂದು ಉಡಾಫೆಯ ಹೇಳಿಕೆ ನೀಡಿದ್ದರು.
ಸಚಿವರು ನೀಡಿರುವ ಈ ಅವೈಜ್ಞಾನಿಕ ಅಭಿಪ್ರಾಯವನ್ನು ವೈದ್ಯಕೀಯ ತಜ್ಞರು ಮತ್ತು ದೇಹದಾನ ಅಭಿಯಾನದ ಕಾರ್ಯಕರ್ತರು ಕಟುವಾಗಿ ಖಂಡಿಸಿದ್ದಾರೆ.
1986ರಿಂದ ದೇಹದಾನ ಅಭಿಯಾನದಲ್ಲಿ ತೊಡಗಿಸಿಕೊಂಡಿರುವ ‘ಗಣದರ್ಪಣ’ ಸಂಸ್ಥೆಯ ಸುದೀಪ್ತ ರಾಹಾ ಸೇರಿದಂತೆ ಹಲವು ಸಾಮಾಜಿಕ ಕಾರ್ಯಕರ್ತರು ಸಚಿವರ ನಿಲುವನ್ನು ಕಟುವಾಗಿ ಪ್ರಶ್ನಿಸಿದ್ದಾರೆ. “ಅಂಗದಾನ ಮತ್ತು ದೇಹದಾನ ಎರಡರ ಉದ್ದೇಶವೂ ಸಂಪೂರ್ಣ ವಿಭಿನ್ನ. ಮಿದುಳು ನಿಷ್ಕ್ರಿಯಗೊಂಡ ರೋಗಿಗಳಿಂದ ಅಂಗಾಂಗಗಳನ್ನು ತೆಗೆದು ಮತ್ತೊಬ್ಬ ರೋಗಿಯ ಜೀವ ಉಳಿಸಲು ‘ಅಂಗದಾನ’ ನೆರವಾದರೆ, ಭವಿಷ್ಯದ ವೈದ್ಯರನ್ನು ಸಿದ್ಧಪಡಿಸುವ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಗೆ ‘ದೇಹದಾನ’ ಅತ್ಯಗತ್ಯ. ಎರಡನ್ನೂ ಒಂದಕ್ಕೊಂದು ಪರ್ಯಾಯವಾಗಿ ನೋಡುವುದು ಅಜ್ಞಾನ” ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ರಾಷ್ಟ್ರೀಯ ವೈದ್ಯಕೀಯ ಆಯೋಗದ (NMC) ನಿಯಮಾವಳಿ ಪ್ರಕಾರ, ವೈದ್ಯಕೀಯ ಶಿಕ್ಷಣದ (MBBS) ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಮಾನವ ದೇಹರಚನೆ (Anatomy) ಕಲಿಯಲು ಪ್ರತಿ 10 ವಿದ್ಯಾರ್ಥಿಗಳಿಗೆ ಕನಿಷ್ಠ ಒಂದು ಮೃತದೇಹದ ಅಗತ್ಯವಿರುತ್ತದೆ. ಪ್ರತಿಯೊಂದು ವೈದ್ಯಕೀಯ ಕಾಲೇಜಿಗೂ ವರ್ಷಕ್ಕೆ ಕನಿಷ್ಠ 10ರಿಂದ 14 ದೇಹಗಳು ಬೇಕಾಗುತ್ತವೆ. ಹಾಗಿರುವಾಗ, ಸ್ವತಃ ಆರೋಗ್ಯ ಸಚಿವರೇ ದೇಹದಾನ ಬೇಡ ಎನ್ನುವುದು ವೈದ್ಯಕೀಯ ಶಿಕ್ಷಣದ ತಳಹದಿಯನ್ನೇ ಅಲ್ಲಾಡಿಸುವಂತಹ ದುರದೃಷ್ಟಕರ ಸಂಗತಿ ಎಂದು ಕೊಲ್ಕತ್ತಾದ ಹಿರಿಯ ಅನಾಟಮಿ ತಜ್ಞರು ಕಿಡಿಕಾರಿದ್ದಾರೆ.
ಜೀವ ಉಳಿಸಲು ಅಂಗದಾನ ಎಷ್ಟು ಮುಖ್ಯವೋ, ನಾಳೆಯ ದಿನಗಳಲ್ಲಿ ಜೀವ ಉಳಿಸುವ ವೈದ್ಯರನ್ನು ಸೃಷ್ಟಿಸಲು ದೇಹದಾನವೂ ಅಷ್ಟೇ ಮುಖ್ಯ ಎಂಬುದನ್ನು ಸಚಿವರು ಅರಿಯಬೇಕು ಎಂದು ವೈದ್ಯರು ಆಗ್ರಹಿಸಿದ್ದಾರೆ.



