ದೇಶದ ವಿರೋಧ ಪಕ್ಷಗಳಿಗೆ ‘ಅಕ್ರಮ/ಧಾಂದಲೆ ನಡೆಯುತ್ತಿರುವ’ ಚುನಾವಣೆಗಳಲ್ಲಿ ಭಾಗವಹಿಸುವುದನ್ನು ತಕ್ಷಣವೇ ನಿಲ್ಲಿಸುವಂತೆ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ಬಹಿರಂಗವಾಗಿ ಕರೆ ನೀಡಿದ್ದಾರೆ. “ಚುನಾವಣೆಗಳು ಅಕ್ರಮವಾಗಿ ನಡೆಯುತ್ತಿವೆ ಎಂದು ಹೇಳುತ್ತಲೇ ಅವುಗಳಲ್ಲಿ ಭಾಗವಹಿಸುವುದು ಅಂತಹ ವ್ಯವಸ್ಥೆಗೆ ಕಾನೂನುಬದ್ಧತೆ ನೀಡಿದಂತಾಗುತ್ತದೆ,” ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಾಮಾಜಿಕ ಜಾಲತಾಣ ‘X’ನಲ್ಲಿ ಈ ಕುರಿತು ವಿಸ್ತೃತವಾಗಿ ಬರೆದುಕೊಂಡಿರುವ ದೀಪ್ಕೆ, ವಿಪಕ್ಷಗಳ ಪ್ರಸ್ತುತ ನಡೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. “ಚುನಾವಣೆಗಳು ಅಕ್ರಮವಾಗಿ ನಡೆಯುತ್ತಿವೆ. ಆದರೆ ಅಕ್ರಮಗಳಿಂದ ಕೂಡಿದ ಚುನಾವಣೆಗಳಲ್ಲಿ ನೀವು ಭಾಗವಹಿಸುವುದನ್ನು ಮುಂದುವರಿಸಿದರೆ, ನೀವು ಆ ಚುನಾವಣೆಗಳಿಗೆ ಮಾನ್ಯತೆ ನೀಡಿದಂತೆ ಆಗುತ್ತದೆ. ಚುನಾವಣೆಯು ಮುಕ್ತ ಹಾಗೂ ನ್ಯಾಯಸಮ್ಮತವಾಗಿವೆ ಎಂಬ ಭ್ರಮೆಯನ್ನು ಉಳಿಸಿಕೊಳ್ಳಲು ನಿಮ್ಮ ಈ ನಡೆಯು ಸಹಾಯ ಮಾಡುತ್ತದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸಿಇಸಿ ಗ್ಯಾನೇಶ್ ದೇಶದ್ರೋಹಿ; ಕೂಡಲೇ ರಾಜೀನಾಮೆ ನೀಡಲಿ: ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ
“ಬಹುಶಃ, ಸ್ಪರ್ಧಿಸದಿದ್ದರೆ ತಮ್ಮ ಅಸ್ತಿತ್ವವೇ ಇಲ್ಲವಾಗುತ್ತದೆ ಎಂಬ ಭಯದಿಂದ ನೀವು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರಬಹುದು. ಆದರೆ ಮತಗಳ ಕಳ್ಳತನ ನಡೆಯುತ್ತಿರುವಾಗ, ನಿಮ್ಮ ಶಾಸಕರು ಮತ್ತು ಸಂಸದರನ್ನು ಸೆಳೆದುಕೊಳ್ಳಲಾಗುತ್ತಿರುವಾಗ ಹಾಗೂ ನಿಮ್ಮ ಪಕ್ಷಗಳನ್ನು ಒಡೆಯಲಾಗುತ್ತಿರುವಾಗ, ನೀವು ಯಾವ ರೀತಿಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಿ” ಎಂದು ಪ್ರಶ್ನಿಸಿದ್ದಾರೆ.
“ಇದು ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳುವ ಕ್ರಮವಲ್ಲ. ನಿಮ್ಮನ್ನು ದುರ್ಬಲಗೊಳಿಸುವ, ನಿಮ್ಮ ಪಕ್ಷವನ್ನು ಒಡೆಯುವ ಅಥವಾ ತನಗೆ ಬೇಕಾದಾಗ ನಿಮ್ಮ ಚುನಾಯಿತ ಪ್ರತಿನಿಧಿಗಳನ್ನು ಕಸಿದುಕೊಳ್ಳುವ ವ್ಯವಸ್ಥೆಯಲ್ಲಿ ನೀವು ಕೇವಲ ಬದುಕುಳಿಯಲು ಪ್ರಯತ್ನಿಸುತ್ತಿದ್ದೀರಿ ಅಷ್ಟೇ. ಹೀಗೆ ನೀವು ಎಷ್ಟು ಕಾಲ ಬದುಕುಳಿಯಲು ಸಾಧ್ಯ” ಎಂದು ಸಿಜೆಪಿ ಸಂಸ್ಥಾಪಕ ಕೇಳಿದ್ದಾರೆ.
“ನಿಮಗೆ ಮುಖ್ಯವೆನಿಸುವ ರಾಜ್ಯಗಳಲ್ಲಿ ಅಕ್ರಮಗಳು ನಡೆದಾಗ ಮಾತ್ರ ಅದರ ಬಗ್ಗೆ ಮಾತನಾಡಿ, ಬೇರೆಡೆ ನಡೆದಾಗ ಮೌನವಾಗಿರಲು ಸಾಧ್ಯವಿಲ್ಲ. ಚುನಾವಣೆಗಳಲ್ಲಿ ಅಕ್ರಮಗಳು ನಡೆಯುತ್ತಿದ್ದರೆ, ಅದು ಯಾವ ರಾಜ್ಯ ಅಥವಾ ಯಾವ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಲೆಕ್ಕಿಸದೆ ಅದು ಮುಖ್ಯವಾಗಬೇಕು” ಎಂದು ಹೇಳಿದ್ದಾರೆ.
“ಆಟದಲ್ಲಿ ಭಾಗವಹಿಸುತ್ತಲೇ ಆ ಆಟವು ಅಕ್ರಮಗಳಿಂದ ಕೂಡಿದೆ ಎಂದು ಹೇಳುತ್ತಾ ಇರಲು ಸಾಧ್ಯವಿಲ್ಲ. ನಿಮ್ಮ ಭಾಗವಹಿಸುವಿಕೆಯೇ ಇಂತಹ ಅಕ್ರಮ ಚುನಾವಣೆಗಳಿಗೆ ಮಾನ್ಯತೆ ನೀಡುವ ಏಕೈಕ ಅಂಶವಾಗಿದೆ. ನಿಮ್ಮ ಸ್ವಂತ ರಾಜಕೀಯ ಅಸ್ತಿತ್ವದ ಬಗ್ಗೆ ಯೋಚಿಸುವ ಮೊದಲು ದೇಶ ಮತ್ತು ಅದರ ಪ್ರಜಾಪ್ರಭುತ್ವದ ಬಗ್ಗೆ ಯೋಚಿಸಿ. ದೃಢ ನಿಲುವು ತಳೆಯಿರಿ ಮತ್ತು ಅಕ್ರಮಗಳಿಂದ ಕೂಡಿದ ಚುನಾವಣೆಗಳಲ್ಲಿ ಭಾಗವಹಿಸುವುದನ್ನು ನಿಲ್ಲಿಸಿ” ಎಂದು ಒತ್ತಾಯಿಸಿದ್ದಾರೆ.




