OBC ಕ್ರೀಮಿ ಲೇಯರ್ ನಿರ್ಧಾರಕ್ಕೆ ಸಂಬಂಧಿಸಿದಂತೆ ಮಾರ್ಚ್ 11ರಂದು ನೀಡಿದ್ದ ತೀರ್ಪನ್ನು ತಕ್ಷಣ ಜಾರಿಗೆ ತರದೆ, ಹೊಸ ನೀತಿ ರೂಪಿಸಲು ಎರಡು ವರ್ಷಗಳ ಕಾಲಾವಕಾಶ ನೀಡಬೇಕು ಎಂಬ ಕೇಂದ್ರ ಸರ್ಕಾರದ ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಗುರುವಾರ ಪೂರ್ಣಗೊಳಿಸಿದೆ. ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಲಯ, ಕೇಂದ್ರದ ಮನವಿಯ ಕುರಿತು ಆದೇಶ ಕಾಯ್ದಿರಿಸಿದೆ.
ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಆರ್. ಮಹದೇವನ್ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿತು.
OBC ಮೀಸಲಾತಿ ಪಡೆದು ಸಾಮಾಜಿಕವಾಗಿ ಮುಂದುವರಿದವರನ್ನು ‘ಕ್ರೀಮಿ ಲೇಯರ್’ ಎಂದು ಗುರುತಿಸಿ ಮೀಸಲಾತಿಯ ಪ್ರಯೋಜನದಿಂದ ಹೊರಗಿಡಲಾಗುತ್ತದೆ. ಈ ಸಂಬಂಧ ಕೇಂದ್ರ ಸರ್ಕಾರ 1993ರಲ್ಲಿ ಕಚೇರಿ ಜ್ಞಾಪನ ಹೊರಡಿಸಿತ್ತು. ಈ ನಿಯಮದಡಿ OBC ಅಭ್ಯರ್ಥಿಯ ಕ್ರೀಮಿ ಲೇಯರ್ ಸ್ಥಾನಮಾನ ನಿರ್ಧರಿಸುವಾಗ ಪೋಷಕರ ವೇತನ ಮತ್ತು ಕೃಷಿ ಆದಾಯವನ್ನು ಆದಾಯ-ಸಂಪತ್ತು ಪರೀಕ್ಷೆಯಿಂದ ಹೊರಗಿಡಲಾಗಿತ್ತು. ಆದರೆ 2004ರಲ್ಲಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DoPT) ಹೊರಡಿಸಿದ ಸ್ಪಷ್ಟೀಕರಣದಲ್ಲಿ ಸಾರ್ವಜನಿಕ ವಲಯದ ಸಂಸ್ಥೆಗಳು (PSU), ಬ್ಯಾಂಕ್‌ಗಳು ಹಾಗೂ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಪೋಷಕರ ವೇತನವನ್ನು ಕ್ರೀಮಿ ಲೇಯರ್ ನಿರ್ಧಾರದಲ್ಲಿ ಪರಿಗಣಿಸುವ ವ್ಯವಸ್ಥೆ ಜಾರಿಗೆ ಬಂತು.
ಇದೇ ವೇಳೆ, ಸಮಾನ ಹುದ್ದೆಯಲ್ಲಿರುವ ಸರ್ಕಾರಿ ನೌಕರರ ವೇತನವನ್ನು ಅದೇ ರೀತಿಯಲ್ಲಿ ಪರಿಗಣಿಸಲಾಗುತ್ತಿರಲಿಲ್ಲ. ಇದರಿಂದ ಸಮಾನ ಸ್ಥಾನಮಾನ ಹೊಂದಿರುವ ನೌಕರರ ಮಕ್ಕಳಿಗೆ ಕ್ರೀಮಿ ಲೇಯರ್ ನಿರ್ಧಾರದಲ್ಲಿ ವಿಭಿನ್ನ ಮಾನದಂಡ ಅನ್ವಯಿಸುವಂತಾಗಿದೆ ಎಂಬ ಆಕ್ಷೇಪ ವ್ಯಕ್ತವಾಯಿತು. ಈ ವ್ಯತ್ಯಾಸವನ್ನು ಪ್ರಶ್ನಿಸಿ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು.
ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ 2026r ಮಾರ್ಚ್ 11ರಂದು ತೀರ್ಪು ನೀಡಿತ್ತು. ಕುಟುಂಬದ ಒಟ್ಟು ವೇತನವನ್ನು ಮಾತ್ರ ಆಧಾರವಾಗಿಸಿಕೊಂಡು OBC ಕ್ರೀಮಿ ಲೇಯರ್ ಸ್ಥಾನಮಾನ ನಿರ್ಧರಿಸುವಂತಿಲ್ಲ ಎಂದು ನ್ಯಾಯಾಲಯ ಹೇಳಿತ್ತು. ಕ್ರೀಮಿ ಲೇಯರ್ ಪರಿಕಲ್ಪನೆಯ ಉದ್ದೇಶ ಸಾಮಾಜಿಕವಾಗಿ ಮುಂದುವರಿದ ವರ್ಗಗಳನ್ನು OBC ಮೀಸಲಾತಿಯಿಂದ ಹೊರಗಿಡುವುದಾಗಿದೆ. ಹೀಗಾಗಿ ಕೇವಲ ಕುಟುಂಬದ ವೇತನದ ಮೊತ್ತವನ್ನು ಆಧಾರವಾಗಿಸಿಕೊಂಡು ಅಭ್ಯರ್ಥಿಯನ್ನು ಮೀಸಲಾತಿಯಿಂದ ಹೊರಗಿಡುವುದು ಸರಿಯಲ್ಲ ಎಂಬ ನಿಲುವನ್ನು ನ್ಯಾಯಾಲಯ ವ್ಯಕ್ತಪಡಿಸಿತ್ತು.
PSU ನೌಕರರು ಮತ್ತು ಸಮಾನ ಹುದ್ದೆಯ ಸರ್ಕಾರಿ ನೌಕರರ ಮಕ್ಕಳಿಗೆ ಹುದ್ದೆಗಳ ಸಮಾನತೆಯನ್ನು ಸರಿಯಾಗಿ ಪರಿಶೀಲಿಸದೆ ವಿಭಿನ್ನ ಮಾನದಂಡ ಅನ್ವಯಿಸುವುದು ʼhostile discrimination’ ಗೆ ಕಾರಣವಾಗಬಹುದು ಎಂದು ನ್ಯಾಯಾಲಯ ಹೇಳಿತ್ತು.
ತಪ್ಪಾದ ಕ್ರೀಮಿ ಲೇಯರ್ ವರ್ಗೀಕರಣದಿಂದ ಸೇವಾ ಹಂಚಿಕೆಯಿಂದ ವಂಚಿತರಾದ ಅರ್ಹ OBC-NCL ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲು ಆರು ತಿಂಗಳೊಳಗೆ ಹೆಚ್ಚುವರಿ ಹುದ್ದೆಗಳನ್ನು ಸೃಷ್ಟಿಸುವಂತೆ DoPTಗೆ ನ್ಯಾಯಾಲಯ ನಿರ್ದೇಶನ ನೀಡಿತ್ತು.
ಮಾರ್ಚ್ 11ರ ತೀರ್ಪನ್ನು ತಕ್ಷಣ ಜಾರಿಗೆ ತಂದರೆ ಈಗಾಗಲೇ ನಡೆದ ನೇಮಕಾತಿ ಹಾಗೂ ಸೇವಾ ಹಂಚಿಕೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ತೀರ್ಪನ್ನು ಹಿಂದಿನ ಅವಧಿಗೂ ಅನ್ವಯಿಸಿದರೆ ನೇಮಕಾತಿ, ಸೇವಾ ಹಂಚಿಕೆ, ಕೇಡರ್ ಹಂಚಿಕೆ, ಹಿರಿತನ, ಉನ್ನತ ಶಿಕ್ಷಣ ಪ್ರವೇಶ ಹಾಗೂ OBC ಮೀಸಲಾತಿಯ ಆಡಳಿತ ವ್ಯವಸ್ಥೆ ಮೇಲೆ ಪರಿಣಾಮ ಬೀರಬಹುದು ಎಂದು ಕೇಂದ್ರ ವಾದಿಸಿತು. 2012ರಿಂದ ನಡೆದ ಸೇವಾ ಹಂಚಿಕೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ರೈಲ್ವೆ, ಬ್ಯಾಂಕ್, ಅಂಚೆ ಇಲಾಖೆ ಹಾಗೂ ಅರೆಸೇನಾ ಪಡೆಗಳಂತಹ ದೊಡ್ಡ ಸಂಸ್ಥೆಗಳಲ್ಲಿ ನಡೆದ ನೇಮಕಾತಿಗಳನ್ನು ಮರುಪರಿಶೀಲಿಸಬೇಕಾದ ಪರಿಸ್ಥಿತಿ ಎದುರಾಗಬಹುದು ಎಂದು ಕೇಂದ್ರದ ಪರ ವಕೀಲರು ಹೇಳಿದರು. ಹೀಗಾಗಿ ವಿವಿಧ ಹಿತಾಸಕ್ತಿದಾರರೊಂದಿಗೆ ಸಮಾಲೋಚನೆ ನಡೆಸಿ, ವಿವಿಧ ಹುದ್ದೆಗಳ ಸಮಾನತೆಯನ್ನು ನಿರ್ಧರಿಸಲು ಹೊಸ ಮತ್ತು ಏಕರೂಪದ ನೀತಿ ರೂಪಿಸಬೇಕಿದೆ. ಇದಕ್ಕಾಗಿ ಎರಡು ವರ್ಷಗಳ ಕಾಲಾವಕಾಶ ನೀಡಬೇಕು ಎಂದು ಕೇಂದ್ರ ಮನವಿ ಮಾಡಿತು.
ಕೇಂದ್ರ ಸರ್ಕಾರವು ಮಾರ್ಚ್ 11ರ ತೀರ್ಪಿಗೆ ‘prospective effect’ ನೀಡುವಂತೆಯೂ ಮನವಿ ಮಾಡಿದೆ. ಅಂದರೆ, ತೀರ್ಪನ್ನು ಹಿಂದಿನ ನೇಮಕಾತಿ ಮತ್ತು ಸೇವಾ ಹಂಚಿಕೆಗಳಿಗೆ ಅನ್ವಯಿಸದೆ, ಮುಂದಿನ ಅವಧಿಯಿಂದ ಜಾರಿಗೆ ತರಬೇಕು ಎಂಬುದು ಕೇಂದ್ರದ ಮನವಿ. ಇದಕ್ಕಾಗಿ ಸಂವಿಧಾನದ 142ನೇ ವಿಧಿಯಡಿ ಸುಪ್ರೀಂ ಕೋರ್ಟ್‌ಗೆ ಇರುವ ಅಧಿಕಾರವನ್ನು ಬಳಸಬಹುದು ಎಂದು ಕೇಂದ್ರ ವಾದಿಸಿತು. ತೀರ್ಪನ್ನು ತಕ್ಷಣ ಅಥವಾ ಹಿಂದಿನ ಪ್ರಕರಣಗಳಿಗೂ ಅನ್ವಯಿಸಿದರೆ, ಮೂಲ ಪ್ರಕರಣದ ಭಾಗವಾಗಿರದ ಹಲವು ನೌಕರರು ಮತ್ತು ಈಗಾಗಲೇ ನೇಮಕಗೊಂಡವರ ಮೇಲೂ ಪರಿಣಾಮ ಬೀಳಬಹುದು. ಇದರಿಂದ ಆಡಳಿತಾತ್ಮಕ ಗೊಂದಲ ಉಂಟಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಹೇಳಿದೆ.
ಇದನ್ನೂ ಓದಿ: ಉತ್ತರ ಪ್ರದೇಶ | ಅಖಿಲೇಶ್ ‘ಧರ್ಮ ರಕ್ಷಣೆ’ಯ ಯುದ್ಧ ಬಿಜೆಪಿಯ ಮತ ಹುಂಡಿ ಖಾಲಿ ಮಾಡುವುದೇ?
ಆದರೆ, ಕೇಂದ್ರದ ಮನವಿಗೆ ಅಭ್ಯರ್ಥಿಗಳ ಪರ ಹಿರಿಯ ವಕೀಲ ಪಿ. ವಿಲ್ಸನ್ ವಿರೋಧ ವ್ಯಕ್ತಪಡಿಸಿದರು. ಕೇಂದ್ರವು ಎರಡು ವರ್ಷಗಳ ಕಾಲಾವಕಾಶ ಕೇಳುವ ಮೂಲಕ ಸುಪ್ರೀಂ ಕೋರ್ಟ್‌ನ ಅಂತಿಮ ತೀರ್ಪನ್ನು ಜಾರಿಗೊಳಿಸುವುದನ್ನು ವಿಳಂಬಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಅವರು ವಾದಿಸಿದರು. DoPT ನ್ಯಾಯಾಲಯದ ನಿರ್ದೇಶನಗಳು, ಸಂಸದೀಯ ಸಮಿತಿಯ ಶಿಫಾರಸುಗಳು ಹಾಗೂ 1993ರ ತನ್ನದೇ ನಿಯಮಗಳನ್ನು ಸರಿಯಾಗಿ ಜಾರಿಗೊಳಿಸಿಲ್ಲ ಎಂದು ಅವರು ಆರೋಪಿಸಿದರು.
ತಪ್ಪಾದ ಕ್ರೀಮಿ ಲೇಯರ್ ವರ್ಗೀಕರಣದಿಂದ ವಂಚಿತರಾದ ಅರ್ಹ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲು ಅಗತ್ಯವಿದ್ದರೆ ಹೆಚ್ಚುವರಿ ಹುದ್ದೆಗಳನ್ನು ಸೃಷ್ಟಿಸಬಹುದು. ಹೀಗಿರುವಾಗ ತೀರ್ಪಿನ ಅನುಷ್ಠಾನಕ್ಕೆ ಮತ್ತೆ ಎರಡು ವರ್ಷಗಳ ಕಾಲಾವಕಾಶ ನೀಡುವ ಅಗತ್ಯವಿಲ್ಲ ಎಂದು ಅಭ್ಯರ್ಥಿಗಳ ಪರ ವಾದಿಸಲಾಯಿತು.
ಎರಡೂ ಕಡೆಯ ವಾದಗಳನ್ನು ಆಲಿಸಿರುವ ಸುಪ್ರೀಂ ಕೋರ್ಟ್ ಇದೀಗ ಆದೇಶ ಕಾಯ್ದಿರಿಸಿದೆ. ಹೀಗಾಗಿ ಮಾರ್ಚ್ 11ರ ತೀರ್ಪು ತಕ್ಷಣ ಜಾರಿಗೆ ಬರಲಿದೆಯೇ, ಕೇಂದ್ರಕ್ಕೆ ಎರಡು ವರ್ಷಗಳ ಕಾಲಾವಕಾಶ ಸಿಗಲಿದೆಯೇ ಅಥವಾ ತೀರ್ಪಿನ ಅನುಷ್ಠಾನಕ್ಕೆ ನ್ಯಾಯಾಲಯವೇ ನಿರ್ದಿಷ್ಟ ಮಾರ್ಗಸೂಚಿ ನೀಡಲಿದೆಯೇ ಎಂಬುದು ಮುಂದಿನ ಆದೇಶದಲ್ಲಿ ಸ್ಪಷ್ಟವಾಗಲಿದೆ. ಈ ಪ್ರಕರಣದ ಕೇಂದ್ರಬಿಂದು OBC ಕ್ರೀಮಿ ಲೇಯರ್ ನಿರ್ಧಾರದಲ್ಲಿ ಪೋಷಕರ ವೇತನವನ್ನು ಮಾತ್ರ ಪರಿಗಣಿಸಬೇಕೇ ಅಥವಾ ಅವರ ಹುದ್ದೆ, ಸಾಮಾಜಿಕ ಸ್ಥಾನಮಾನ ಹಾಗೂ ಹುದ್ದೆಗಳ ಸಮಾನತೆಯನ್ನೂ ಪರಿಗಣಿಸಬೇಕೇ ಎಂಬ ಪ್ರಶ್ನೆಯಾಗಿದೆ.




