ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅತಿ ದೊಡ್ಡ ದೇಶದ್ರೋಹಿ ಎಂಬುದು ಬಹಿರಂಗವಾಗಿದೆ. ಆದ್ದರಿಂದ ಅವರು ಕೂಡಲೇ ರಾಜೀನಾಮೆ ನೀಡಬೇಕು. ಗ್ಯಾನೇಶ್ ದೇಶದ ಪ್ರಜಾಪ್ರಭುತ್ವಕ್ಕೆ ದೊಡ್ಡ ಬೆದರಿಕೆ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ಯಾನೇಶ್ ಕುಮಾರ್ ನೇತೃತ್ವದ ಮೂವರು ಸದಸ್ಯರ ಆಯೋಗದಲ್ಲಿ ಇಬ್ಬರು ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು, ಕಳೆದ 10 ತಿಂಗಳುಗಳಲ್ಲಿ ಕನಿಷ್ಠ 14 ಬಾರಿ ಆಯೋಗದ ನಿರ್ಧಾರಗಳ ವಿರುದ್ಧ ಲಿಖಿತ ಆಕ್ಷೇಪಣೆಗಳನ್ನು ದಾಖಲಿಸಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆಯ ‘SIR’ ಪ್ರಕ್ರಿಯೆ ಹಾಗೂ ಪ್ರಮುಖ ತೀರ್ಮಾನಗಳನ್ನು ತಮಗೆ ತಿಳಿಸದೆ ಏಕಪಕ್ಷೀಯವಾಗಿ ಕೈಗೊಳ್ಳಲಾಗಿದೆ ಎಂದು ಇಬ್ಬರು ಆಯುಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬುದು ತನಿಖಾ ವರದಿಯೊಂದರಿಂದ ಬಹಿರಂಗವಾಗಿದೆ. ಇದಾದ ಬಳಿಕ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ವಿಪಕ್ಷಗಳು, ಹೋರಾಟಗಾರರು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ: ಗ್ಯಾನೇಶ್ ಕುಮಾರ್ – ಮೇಧಾ ರೂಪಂ: ತಪ್ಪು ಕಾರಣಗಳಿಗಾಗಿ ಸುದ್ದಿಯ ಸುಳಿಯಲ್ಲಿ ಐಎಎಸ್ ಅಪ್ಪ-ಮಗಳ ಜೋಡಿ
ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಸಿಜೆಪಿ ನಾಯಕ ಅಭಿಜೀತ್ ದೀಪ್ಕೆ, “ಪ್ರಜಾಪ್ರಭುತ್ವದಲ್ಲಿ ಜನರು ತಮ್ಮ ಸರ್ಕಾರವನ್ನು ಮತದ ಮೂಲಕ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಗ್ಯಾನೇಶ್ ಕುಮಾರ್ ಆಯುಕ್ತರಾದ ಬಳಿಕ ಯಾರು ಮತ ಹಾಕಬೇಕು, ಹಾಕಬಾರದು ಎಂಬುದನ್ನು ಸರ್ಕಾರ ನಿರ್ಧರಿಸುವಂತಾಗಿದೆ. ಇದು ಪ್ರಜಾಪ್ರಭುತ್ವವೇ? ಇದು ಯಾವ ಪ್ರಜಾಪ್ರಭುತ್ವ? ನೀವು ಇಡೀ ಪ್ರಜಾಪ್ರಭುತ್ವವನ್ನೇ ಬುಡಮೇಲು ಮಾಡಿದ್ದೀರಿ. ಇದು ಸರ್ವಾಧಿಕಾರ. ಇದರ ದೊಡ್ಡ ಅಪರಾಧಿ, ದೇಶದ್ರೋಹಿ ಗ್ಯಾನೇಶ್ ಕುಮಾರ್ ಅವರು” ಎಂದು ದೂರಿದ್ದಾರೆ.
This video cannot be played in your browser. Open the video directly
“ಗ್ಯಾನೇಶ್ ಕುಮಾರ್ ಅವರು ಆಯುಕ್ತರಾದ ಬಳಿಕ ಮಹಾರಾಷ್ಟ್ರದಲ್ಲಿ ಎರಡು ಕೋಟಿ, ಉತ್ತರ ಪ್ರದೇಶದಲ್ಲಿ ಎರಡು ಕೋಟಿ, ಪಶ್ಚಿಮ ಬಂಗಾಳದಲ್ಲಿ 90 ಲಕ್ಷ, ದೆಹಲಿಯಲ್ಲಿ 47 ಲಕ್ಷ, ಕೇರಳ 24 ಲಕ್ಷ, ತಮಿಳುನಾಡಿನಲ್ಲಿ 97 ಲಕ್ಷ, ಕರ್ನಾಟಕದಲ್ಲಿ ಒಂದು ಕೋಟಿ ಜನರ ಹೆಸರನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ. 13 ಕೋಟಿಗಿಂತ ಅಧಿಕ ಮತ ಡಿಲೀಟ್ ಮಾಡಲಾಗಿದೆ. ಅಷ್ಟಕ್ಕೂ ಇದು ಸಣ್ಣ ಪ್ರಮಾಣವೇನಲ್ಲ” ಎಂದು ಹೇಳಿದ್ದಾರೆ.
“2024ರ ಲೋಕಸಭೆ ಚುನಾವಣೆಯಲ್ಲಿ ವಿಪಕ್ಷ ಮತ್ತು ಎನ್‌ಡಿಎ ನಡುವೆ ಬರೀ ಶೇ.2ರಷ್ಟು ವ್ಯತ್ಯಾಸವಿತ್ತು. 13 ಕೋಟಿ ಮತಗಳ ಡಿಲೀಟ್ ಮಾಡುವುದೆಂದರೆ ಹೆಚ್ಚು ಕಡಿಮೆ ಶೇಕಡ 13-14 ಮತಗಳನ್ನು ಡಿಲೀಟ್ ಮಾಡಿದಂತೆ. ಉದ್ದೇಶಪೂರ್ವಕವಾಗಿ ಈ ಮತಗಳನ್ನು ಡಿಲೀಟ್ ಮಾಡಲಾಗಿದೆ. ಶೇ.2ರಷ್ಟಿದ್ದ ವ್ಯತ್ಯಾಸ ಇನ್ನಷ್ಟೂ ಕಡಿಮೆಯಾಗಿ ತಾವು ಅಧಿಕಾರವನ್ನು ಕಳೆದುಕೊಳ್ಳುತ್ತೇವೆ ಎಂಬ ಆತಂಕದಲ್ಲಿ ಈ ರೀತಿ ಅಗಾಧ ಪ್ರಮಾಣದ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ” ಎಂದು ಆರೋಪಿಸಿದ್ದಾರೆ.
“ಯಾಕೆ ಈ ರೀತಿ ಮಾಡುತ್ತಿದ್ದಾರೆ ಎಂಬುದನ್ನು ತಿಳಿಯಲು ನಾವು ಮತ್ತೆ 2024ರ ಚುನಾವಣೆಯನ್ನು ನೆನೆಪಿಸಿಕೊಳ್ಳಬೇಕಾಗುತ್ತದೆ. 2024ರ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯಲು ಸಾಧ್ಯವಾಗಿರಲಿಲ್ಲ. ಚಾರ್ ಸೋ ಪಾರ್ (400ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು) ಎಂದು ಘೋಷಣೆ ಕೂಗಿದವರಿಗೆ ಬಹುಮತ ಪಡೆಯಲೂ ಸಾಧ್ಯವಾಗಿರಲಿಲ್ಲ. ಇದರಿಂದ ಬಿಜೆಪಿಗೆ ತಮ್ಮ ಹಿನ್ನಡೆಯ ಅರಿವಾಗಿದೆ” ಎಂದಿದ್ದಾರೆ.
“ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಅವರ ಶಿವಸೇನೆ, ಎನ್‌ಸಿಪಿ, ಸ್ಟ್ಯಾಲಿನ್, ಪಿಣರಾಯಿ ವಿಜಯನ್, ಅರವಿಂದ್ ಕೇಜ್ರಿವಾಲ್, ಮಮತಾ ಬ್ಯಾನರ್ಜಿ- ಹೀಗೆ ಇವರೆಲ್ಲ ಮುಖ್ಯಮಂತ್ರಿಗಳಾಗಿದ್ದರು. ಇವರೆಲ್ಲರನ್ನು ಒಬ್ಬೊಬ್ಬರಾಗಿ ಸೋಲಿಸಲಾಗಿದೆ. ಇವೆಲ್ಲವೂ ಕಾಕತಾಳೀಯವಾಗಲು ಸಾಧ್ಯವಿಲ್ಲ. ಎಲ್ಲವೂ ಒಂದೇ ರೀತಿಯಾಗಿ ನಡೆದಿರುವುದು. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಕ್ಷೇತ್ರದಲ್ಲಿ 50 ಸಾವಿರ ಮತವನ್ನು ಡಿಲೀಟ್ ಮಾಡಲಾಗಿದೆ. ಬ್ಯಾನರ್ಜಿ ಅವರು 15 ಸಾವಿರ ಮತಗಳ ಅಂತರದಲ್ಲಿ ಸೋಲು ಕಂಡರು. ಎಂ ಕೆ ಸ್ಟ್ಯಾಲಿನ್ ಅವರ ಕ್ಷೇತ್ರದಲ್ಲಿ ಒಂದು ಲಕ್ಷ ಮತಗಳನ್ನು ಡಿಲೀಟ್ ಮಾಡಲಾಗಿದೆ. ಅವರು 45 ಸಾವಿರ ಮತಗಳ ಅಂತರದಲ್ಲಿ ಸೋಲು ಕಂಡರು ಎಂದು ಹೇಳಿದ್ದಾರೆ. ಎಸ್‌ಐಆರ್ ಆರಂಭಿಸಿರುವುದೇ ವಿಪಕ್ಷಗಳನ್ನು ಅಧಿಕಾರದಿಂದ ಕೆಳಗಿಳಿಸಲು” ಎಂದು ದೂರಿದರು.
“ನಮಗೆ ವಿಪಕ್ಷಗಳೊಂದಿಗೆ ಉತ್ತಮ ನಂಟೇನೂ ಇಲ್ಲ. ಆದರೆ ವಿಪಕ್ಷಗಳೆಲ್ಲವನ್ನೂ ನಾಶ ಮಾಡುವುದು ಪ್ರಜಾಪ್ರಭುತ್ವವಾಗುವುದೇ? ಇದು ಮುಕ್ತ ಮತ್ತು ನ್ಯಾಯಯುತ ಚುನಾವಣೆಯೇ” ಎಂದು ಪ್ರಶ್ನಿಸಿದರು.
“ಇದು ಹೊಸದಾಗಿ ನಡೆಯುತ್ತಿರುವುದೇನಲ್ಲ. 2015-16ರ ಸಮಯದಲ್ಲಿ ಮಧ್ಯಪ್ರದೇಶದಲ್ಲಿ ಸರ್ಕಾರವನ್ನು ಉರುಳಿಸಲಾಗಿತ್ತು, ಅದಾದ ಬಳಿಕ ಕರ್ನಾಟಕದಲ್ಲೂ ಹೀಗೆಯೇ ಮಾಡಲಾಗಿದೆ. ಗೋವಾದಲ್ಲಿ ರಾತ್ರೋರಾತ್ರಿ ಶಾಸಕರನ್ನು ಖರೀದಿಸಲಾಗಿದೆ. ಕೊನೆಗೆ 10 ಶಾಸಕರನ್ನು ಹೊಂದಿದ್ದ ಪಕ್ಷ ಅಧಿಕಾರಕ್ಕೇರಿದೆ. ಶಾಸಕರನ್ನು ಖರೀದಿಸಿ ಸಮಾಧಾನವಾಗದ ಕಾರಣ ಸಂಸದರನ್ನು ಖರೀದಿಸುವುದನ್ನು ಆರಂಭಿಸಿದರು. ಅದರಿಂದಲೂ ಸಮಾಧಾನ ಆಗದೆ ಪಕ್ಷಗಳನ್ನು ಒಡೆಯುವ ಕೆಲಸ ಆರಂಭಿಸಿದರು” ಎಂದು ಸಿಜೆಪಿ ನಾಯಕ ಅಭಿಜೀತ್ ದೀಪ್ಕೆ ಆರೋಪಿಸಿದರು.
“ಮಹಾರಾಷ್ಟ್ರದಲ್ಲಿ ಸ್ಥಳೀಯ ಪಕ್ಷಗಳನ್ನು ಒಡೆದು ಹಾಕಲಾಗಿದೆ. ಉದ್ಧವ್ ಠಾಕ್ರೆ ಅವರ ಚುನಾವಣಾ ಚಿಹ್ನೆಯನ್ನೇ ಚುನಾವಣಾ ಆಯೋಗವು ಕಸಿದು ಬಂಡಾಯ ಪಕ್ಷಕ್ಕೆ ನೀಡಲಾಗಿದೆ. ಹೀಗೆ ಅಧಿಕೃತ ಪಕ್ಷಗಳ ಚಿಹ್ನೆಯನ್ನು ಮಧ್ಯವರ್ತಿ ಪಕ್ಷಗಳಿಗೆ ನೀಡಲಾಗುತ್ತಿದೆ. ಹೀಗೆ ಬಿಜೆಪಿ ಜತೆ ಸೇರಿರುವ ಪಕ್ಷಗಳೆಲ್ಲವೂ ಬಿಜೆಪಿಯ ಶೆಲ್ ಕಂಪನಿಗಳು (ಕಾಗದದ ಮೇಲೆ ಮಾತ್ರ ಅಸ್ತಿತ್ವದಲ್ಲಿರುವ ಕಂಪನಿ) ಇದ್ದಂತೆ. ಇವೆಲ್ಲವುದರ ಹಿಂದಿರುವ ಮುಖ್ಯ ಅಪರಾಧಿ ಗ್ಯಾನೇಶ್ ಕುಮಾರ್. ಗ್ಯಾನೇಶ್ ಕುಮಾರ್ ಅವರು ಚುನಾವಣಾ ಪ್ರಕ್ರಿಯೆ ದುರ್ಬಲಗೊಳಿಸಿರುವುದು ಮಾತ್ರವಲ್ಲ, ಬಿಜೆಪಿ ಅಧಿಕಾರದಲ್ಲಿಯೇ ಇರುವಂತೆ ನೋಡಿಕೊಂಡಿದ್ದಾರೆ” ಎಂದು ದೂರಿದರು.
“ಗ್ಯಾನೇಶ್ ಕುಮಾರ್ ಚುನಾವಣಾ ಆಯುಕ್ತರಾಗುವುದಕ್ಕೂ ಮುನ್ನ ಹರಿಯಾಣದಲ್ಲಿ ಬಿಜೆಪಿಯ ಮತ ಪ್ರಮಾಣ ಶೇ.36 ಆಗಿತ್ತು, ಆದರೆ ಗ್ಯಾನೇಶ್ ಕುಮಾರ್ ಚುನಾವಣಾ ಆಯುಕ್ತರಾದ ಬಳಿಕ ಬಿಜೆಪಿ ಮತ ಪ್ರಮಾಣ ಶೇ.4ರಷ್ಟು ಹೆಚ್ಚಾಗಿ ಶೇ.40ಕ್ಕೆ ತಲುಪಿದೆ. ಮಹಾರಾಷ್ಟ್ರದಲ್ಲಿ ಮತ ಪ್ರಮಾಣ ಶೇ.25ರಿಂದ ಶೇ.27ಕ್ಕೆ ಏರಿದೆ. ದೆಹಲಿಯಲ್ಲಿ ಶೇ.36ರಿಂದ ಶೇ.45, ಬಂಗಾಳದಲ್ಲಿ ಶೇ.37 ರಿಂದ ಶೇ.46, ಅಸ್ಸಾಂ ಶೇ.33ರಿಂದ ಶೇ.37 – ಇವೆಲ್ಲವನ್ನೂ ನೋಡಿದಾಗ ಬಿಜೆಪಿ ಚುನಾವಣೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಂದಾಗಿ ಗೆಲ್ಲುತ್ತಿಲ್ಲ. ನಿಜವಾದ ಹಿರೋ ಗ್ಯಾನೇಶ್ ಕುಮಾರ್” ಎಂದು ವ್ಯಂಗ್ಯವಾಡಿದರು.
“ಬಿಜೆಪಿಗಾಗಿ ಗ್ಯಾನೇಶ್ ಕುಮಾರ್ ಅಭೂತಪೂರ್ವವಾಗಿ ಕಾರ್ಯನಿರ್ವಹಿಸಿದ್ದಾರೆ. ಹಾಗಾಗಿ ಗ್ಯಾನೇಶ್ ಕುಮಾರ್ ಅವರು ಅಧಿಕೃತವಾಗಿ ಬಿಜೆಪಿ ಸೇರಬಹುದು ಎಂಬುದು ನನ್ನ ಅನಿಸಿಕೆ. 2014ರ ಸಂದರ್ಭದಲ್ಲಿ ಮೋದಿ ಹೋಗಿ ಪ್ರಚಾರ ಮಾಡಿದಲ್ಲಿ ಬಿಜೆಪಿ ಗೆಲ್ಲುತ್ತಿತ್ತು. ಆ ಕಾಲದಲ್ಲಿ ಮೋದಿ ಹವಾ ಇತ್ತು. ಆದರೆ ಈಗ ಹಾಗಿಲ್ಲ. ಜನರು ಸರ್ಕಾರ, ಮೋದಿ ಅವರಿಂದ ನಿರಾಶೆಗೆ ಒಳಗಾಗಿದ್ದಾರೆ, ಆಕ್ರೋಶದಲ್ಲಿದ್ದಾರೆ. ಹಾಗಿದ್ದರೂ ಬಿಜೆಪಿ ಗೆಲ್ಲುತ್ತಿದೆ. ಈಗ ಗೆಲ್ಲಲು ಸಹಾಯ ಮಾಡುತ್ತಿರುವುದು ಯಾರು? ಸ್ಪಷ್ಟವಾಗಿ ಗ್ಯಾನೇಶ್ ಕುಮಾರ್ ಅವರು. ಹಾಗಾಗಿ ಚುನಾವಣಾ ಆಯುಕ್ತರಾಗಿ ಉಳಿಯುವ ಹಕ್ಕು ಗ್ಯಾನೇಶ್ ಕುಮಾರ್ ಅವರಿಗಿಲ್ಲ, ಅವರು ಕೂಡಲೇ ರಾಜೀನಾಮೆ ನೀಡಬೇಕು” ಎಂದು ಆಗ್ರಹಿಸಿದರು.
“ಎರಡು ದಿನದ ಹಿಂದೆ ಹೊರಬಿದ್ದ ವರದಿಯಿಂದ ಎಲ್ಲ ಮಾಹಿತಿಯೂ ಬಹಿರಂಗವಾಗಿದೆ. ಜನರ ಮತವನ್ನು ಕಳವು ಮಾಡುವುದು ಮಾತ್ರವಲ್ಲ, ಚುನಾವಣಾ ಆಯೋಗದಲ್ಲಿ ಕೆಲಸ ಮಾಡುತ್ತಿರುವವರ ಇತರೆ ಇತರೆ ಚುನಾವಣಾಧಿಕಾರಿಗಳ ಮತವನ್ನೂ ಕಸಿದುಕೊಳ್ಳಲಾಗುತ್ತಿದೆ. ಯಾಕೆಂದರೆ ಮೂವರಲ್ಲಿ ಇಬ್ಬರು ಒಪ್ಪದಿದ್ದರೂ ಅವರ ಮತ, ಅಭಿಪ್ರಾಯವನ್ನು ಪರಿಗಣಿಸಲಾಗುತ್ತಿಲ್ಲ” ಎಂದು ದೂರಿದರು.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




