ಇತ್ತೀಚೆಗೆ ನೇರವಾಗಿ ಟಿಎಂಸಿಗೆ ಎಚ್ಚರಿಕೆ ನೀಡಿದ ಚುನಾವಣಾ ಆಯೋಗದ ವಿರುದ್ಧ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಆಡಳಿತ ಪಕ್ಷದ ಪ್ರತಿನಿಧಿಯಂತೆ ವರ್ತಿಸುತ್ತಿದ್ದಾರೆ. ಚುನಾವಣಾ ಆಯೋಗವು ಬಿಜೆಪಿಯ ನಿಲುವನ್ನು ಪ್ರತಿಬಿಂಬಿಸುತ್ತಿದೆ” ಎಂದು ಆರೋಪಿಸಿದರು.
ಇತ್ತೀಚೆಗೆ ಚುನಾವಣಾ ಆಯೋಗವು ತನ್ನ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ “ತೃಣಮೂಲ ಕಾಂಗ್ರೆಸ್‌ಗೆ ಚುನಾವಣಾ ಆಯೋಗದ ನೇರ ಮಾತು” (ECI’s Straight-talk to Trinamool Congress) ಎಂಬ ಶೀರ್ಷಿಕೆಯಡಿ ಪೋಸ್ಟ್ ಹಾಕುವ ಮೂಲಕ ಎಚ್ಚರಿಸಿದೆ. ಆದರೆ ಚುನಾವಣಾ ಆಯೋಗವು ಕೇವಲ ಒಂದು ಪಕ್ಷವನ್ನು ಗುರಿಯಾಗಿಸಿಕೊಂಡು ಇಂತಹ ಎಚ್ಚರಿಕೆ ನೀಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆಯೋಗವು ಬಿಜೆಪಿ ಪರವಾಗಿ ವರ್ತಿಸುತ್ತಿದೆ ಎಂದು ಹಲವು ಪಕ್ಷಗಳು ದೂರಿವೆ.
ಇದನ್ನು ಓದಿದ್ದೀರಾ? ಜ್ಞಾನೇಶ್ ಕುಮಾರ್ ಪದಚ್ಯುತಿಗೆ ನಿರ್ಣಯ: ನೋಟಿಸ್‌ಗೆ 200ಕ್ಕೂ ಹೆಚ್ಚು ಸಂಸದರ ಸಹಿ
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿನ್ಹಾ, “ಮುಖ್ಯ ಚುನಾವಣಾ ಆಯುಕ್ತರಾದ ಗ್ಯಾನೇಶ್ ಕುಮಾರ್ ಬಿಜೆಪಿಯ ಸದಸ್ಯ, ಪಕ್ಷದ ಕಾರ್ಯಕಾರಿಯಂತೆ ವರ್ತಿಸುತ್ತಿದ್ದಾರೆ. ಚುನಾವಣಾ ಆಯೋಗವು ತನ್ನ ಆಶ್ರಯದಲ್ಲಿ ನಿಷ್ಪಕ್ಷಪಾತ ಚುನಾವಣೆಗಳನ್ನು ನಡೆಸಬೇಕೆಂಬ ನಿರೀಕ್ಷೆ ಸ್ವಾಭಾವಿಕವಾಗಿ ಇರುತ್ತದೆ” ಎಂದು ಹೇಳಿದ್ದಾರೆ.
ಟಿಎಂಸಿಗೆ ನೇರ ಎಚ್ಚರಿಕೆ ನೀಡಿದ ಚುನಾವಣಾ ಆಯೋಗಕ್ಕೆ ಆಡಳಿತಾರೂಢ ಟಿಎಂಸಿ ತೀಕ್ಷ್ಣವಾದ ಪ್ರತಿಕ್ರಿಯಿಸಿದೆ. ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗ ತಟಸ್ಥತೆಯನ್ನು ಟಿಎಂಸಿ ಪ್ರಶ್ನಿಸಿದೆ.
ಪಶ್ಚಿಮ ಬಂಗಾಳದ 294 ಸದಸ್ಯ ಬಲದ ವಿಧಾನಸಭೆಗೆ ಏಪ್ರಿಲ್ 23 ಮತ್ತು ಏಪ್ರಿಲ್ 29ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೇ 4 ರಂದು ಮತ ಎಣಿಕೆ ನಡೆಯಲಿದೆ.




