ಕರ್ನಾಟಕದ ದಲಿತ ಚಳುವಳಿಯ ನೇತಾರ, ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಸದಸ್ಯರು ಹಾಗೂ ರಾಜ್ಯ ಸಂಚಾಲಕರಾಗಿದ್ದ ‘ಬಿ.ವಿ ಚಂದ್ರಪ್ರಸಾದ್ ತ್ಯಾಗಿ’ಯವರ 75ನೇ ಜನ್ಮದಿನವನ್ನು ಏಪ್ರಿಲ್ 8 ರ ಬುಧವಾರ ಹಾಸನ ನಗರದಲ್ಲಿ ಆರ್.ಸಿ ರಸ್ತೆಯಲ್ಲಿರುವ ‘ಶ್ರಮ’ ಕಚೇರಿಯಲ್ಲಿ ಆಚರಿಸಲಾಯಿತು.
ದಲಿತ- ಜನಪರ ಸಂಘಟನೆಗಳು ಮುಖಂಡರು ಹಾಗು ತ್ಯಾಗಿಯವರ ಒಡನಾಡಿಗಳು, ಅಭಿಮಾನಿಗಳು ಭಾಗವಹಿಸಿ ಅವರ ಬದುಕು ಮತ್ತು ಹೋರಾಟಗಳ ಕುರಿತು ಮಾತನಾಡುವ ಮೂಲಕ ಸ್ಮರಿಸಿಕೊಳ್ಳಲಾಯಿತು.
ಇದೇ ಸಂದರ್ಭದಲ್ಲಿ ಚಂದ್ರಪ್ರಸಾದ್ ತ್ಯಾಗಿ 75ನೇ ಜನ್ಮ ವರ್ಷಾಚರಣೆ ಭಾಗವಾಗಿ ದಲಿತ-ತಳ ಸಮುದಾಯಗಳು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳು, ಬಿಕ್ಕಟ್ಟುಗಳು, ಸವಾಲುಗಳನ್ನು ದಲಿತ ಐಕ್ಯತೆಯಿಂದ ಎದುರಿಸಲು ಈ ವರ್ಷ ಮುಂದಿನ ದಿನಗಳಲ್ಲಿ ವಿಚಾರ ಗೊಷ್ಠಿ, ಚಿಂತನೆ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಲಾಯಿತು. ತ್ಯಾಗಿಯವರು ತಾಯಿ ಹೃದಯದ ಸಂಘಟನಾ ಕಾರರಾಗಿದ್ದು, ಐಕ್ಯ ಭಾವನೆಯಿಂದ ಅಸ್ಪೃಶ್ಯತೆ, ಜಾತಿತಾರತಮ್ಯ ಗಳ ವಿರುದ್ಧ, ಭೂಮಿ ಹಕ್ಕಿಗಾಗಿ ದಲಿತರನ್ನು ಒಂದು ವರ್ಗವಾಗಿ ಸಂಘಟಿಸಿ ಅನೇಕ ಹೋರಾಟಗಳಿಗೆ ನೇತೃತ್ವದ ನೀಡುತ್ತಿದ್ದರು. ಸಾಮಾಜಿಕ ಆರ್ಥಿಕವಾಗಿ ವಂಚನೆಗೆ ಒಳಗಾಗಿರುವ ದಲಿತ ಸಮುದಾಯದಲ್ಲಿ ಮೀಸಲಾತಿ, ಒಳ ಮೀಸಲಾತಿ ವಿಷಯದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಿ ಒಡಕು ಉಂಟುಮಾಡಲಾಗುತ್ತಿದೆ. ಇದರ ಹಿಂದೆ ಮನುವಾದಿ ಶಕ್ತಿಗಳ, ಆಳುವ ವರ್ಗಗಳ ಹುನ್ನಾರ ಇದೆ.
ದಲಿತ ಸಮುದಾಯಕ್ಕೆ ಅರ್ಥ ಮಾಡಿಸುವ ಅತ್ಯಗತ್ಯ ಇದಾಗಿದೆ. ಕೇವಲ ಮೀಸಲಾತಿ, ಒಳ ಮೀಸಲಾತಿಯಲ್ಲ ಆಳುವ ಸರ್ಕಾರಗಳ ಖಾಸಗೀಕರಣ, ಉದಾರೀಕರಣ ನೀತಿಗಳಿಂದಾಗಿ ಇರುವ ಮೀಸಲಾತಿ ಅವಕಾಶಗಳೇ ಕ್ಷೀಣಿಸುತ್ತಿರುವ ಇಂತಹ ಸಂಧರ್ಭದಲ್ಲಿ ಖಾಸಗೀ ಕ್ಷೇತ್ರದಲ್ಲೂ ಮೀಸಲಾತಿ ಜಾರಿಗಾಗಿ ದಲಿತರು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕಿದೆ. ಭೂಮಿ, ನಿವೇಶನ ಎಲ್ಲಾ ಸಂಪತ್ತಿನಲ್ಲಿ ದಲಿತರು ತಮ್ಮ ಪಾಲು ಕೇಳಬೇಕಿದೆ. ಅಂತಹ ಪ್ರಜ್ಞೆ ಮತ್ತು ತಾತ್ವಿಕ ಚಿಂತನೆಗಳನ್ನು ಬೆಳಸಿಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಚಂದ್ರಪ್ರಸಾದ್ ಪ್ರಸಾದ್ ತ್ಯಾಗಿಯವರ 75 ನೇ ವರ್ಷಾಚಣೆನ್ನು ನಡೆಸಬೇಕಿದೆ ಎಂದು ತೀರ್ಮಾನಿಸಲಾಯಿತು.
ಇದನ್ನೂ ಓದಿದ್ದೀರಾ?ಹಾಸನ | 80ಲಕ್ಷ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ; ಶಾಸಕ ಸಿಮೆಂಟ್ ಮಂಜು
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ರಾಜಶೇಖರ್ ಹುಲಿಕಲ್, ಎಚ್.ಕೆ ಸಂದೇಶ್, ವೀರಭದ್ರಯ್ಯ, ಕೃಷ್ಣದಾಸ್, ಸಿಪಿಐಎಂ ಮುಖಂಡ ಧರ್ಮೇಶ್, ನಿವೃತ್ತ ಪ್ರಾಂಶುಪಾಲ ಅತ್ನಿ ಕೃಷ್ಣಯ್ಯ, ಮಾದಿಗ ದಂಡೋರ ಮುಖಂಡ ಟಿ.ಆರ್ ವಿಜಯ್ ಕುಮಾರ್, ಪತ್ರಕರ್ತ ಹಾ. ನ, ಪ್ರಸನ್ನ ಕುಮಾರ್, ಲೇಖಕ ಗುರುಮೂರ್ತಿ, ಡಿಎಚ್ಎಸ್ ಎಂ.ಜಿ ಪೃಥ್ವಿ, ರೈತ ಮುಖಂಡ ನವೀನ್ ಕುಮಾರ್, ಸಾಹಿತಿ ಹರೀಶ್ ಕಟ್ಟೆಬೆಳಗಲಿ, ತೋಟೇಶ್ ನಿಟ್ಟೂರು ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.




