ವಿಶ್ವದ ಐದನೇ ಅತಿ ದೊಡ್ಡ ಆರ್ಥಿಕತೆ, ಡಿಜಿಟಲ್ ಕ್ರಾಂತಿಯ ಹರಿಕಾರ – ಹೀಗೆ ಜಾಗತಿಕ ಮಟ್ಟದಲ್ಲಿ ಭಾರತವನ್ನು ಕೇಂದ್ರ ಸರ್ಕಾರ ಹಾಡಿಹೊಗಳುತ್ತಿದೆ. ಆದರೆ ಮತ್ತೊಂದೆಡೆ ಕಣ್ಣಿಗೆ ಕಾಣದ, ಆದರೆ ದೇಶದ ಭವಿಷ್ಯವನ್ನೇ ಕೊರೆಯುತ್ತಿರುವ ಮಕ್ಕಳ ಅಪೌಷ್ಟಿಕತೆ ನಮ್ಮ ಸರ್ಕಾರವನ್ನು ಅಣಕಿಸುತ್ತಿದೆ. ಇತ್ತೀಚೆಗೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS-6) ವರದಿಯು ದತ್ತಾಂಶಗಳು ಈ ಕಹಿ ಸತ್ಯವನ್ನು ಬಹಿರಂಗಪಡಿಸಿದೆ.
ಆರ್ಥಿಕವಾಗಿ ನಮಗಿಂತ ತೀರಾ ಹಿಂದುಳಿದಿರುವ, ದಶಕಗಳಿಂದ ಅಂತರ್ಯುದ್ಧ ಮತ್ತು ಬಡತನದಿಂದ ಜರ್ಜರಿತವಾಗಿರುವ ಆಫ್ರಿಕಾದ ಹಲವು ದೇಶಗಳಿಗಿಂತಲೂ ಭಾರತದಲ್ಲಿ ಮಕ್ಕಳ ಪೌಷ್ಟಿಕತೆಯ ಮಟ್ಟ ಕಳಪೆಯಾಗಿದೆ! ಅಷ್ಟು ಮಾತ್ರವಲ್ಲದೆ 90ರ ದಶಕದಲ್ಲಿ ಭಾರತಕ್ಕಿಂತ ಹಿಂದಿದ್ದ ವಿಯೆಟ್ನಾಮ್ ಈಗ ಬಹಳ ಸುಧಾರಿಸಿದೆ. ಹೀಗಿರುವಾಗ “ನಿಜಕ್ಕೂ ಅಭಿವೃದ್ಧಿಯಾಗಿದ್ದು ಯಾವ ದೇಶ?” ಎಂದು ನಮ್ಮನ್ನು ನಾವು ಪ್ರಶ್ನಿಸುವಂತಾಗಿದೆ.
ಇದನ್ನು ಓದಿದ್ದೀರಾ? ದಕ್ಷಿಣ ಕನ್ನಡವನ್ನು ಅಪೌಷ್ಟಿಕತೆ ಮುಕ್ತ ಜಿಲ್ಲೆಯನ್ನಾಗಿ ಮಾಡಬೇಕು: ಜಿಪಂ ಸಿಇಒ ಸೂಚನೆ
ಹಿಂದಿನ ಸಮೀಕ್ಷೆಗೆ (NFHS-5, 2019-21) ಹೋಲಿಸಿದರೆ ದೇಶದಲ್ಲಿ ಮಕ್ಕಳ ಅಪೌಷ್ಟಿಕತೆಯ ಪ್ರಮಾಣವು ಸುಧಾರಣೆ ಕಂಡುಬಂದಿದೆ. ಆದರೆ ಇಂದಿಗೂ ಪರಿಸ್ಥಿತಿ ಗಂಭೀರವಾಗಿದೆ. ಖಂಠಿತ ಬೆಳವಣಿಗೆ ಅಂದರೆ ವಯಸ್ಸಿಗೆ ತಕ್ಕ ಎತ್ತರ ಇಲ್ಲದಿರುವುದು ನಮ್ಮ ದೇಶದಲ್ಲಿ ಹೆಚ್ಚಾಗುತ್ತಿದ್ದು, ಇದು ದೀರ್ಘಕಾಲದ ಅಪೌಷ್ಟಿಕತೆಯನ್ನು ಸೂಚಿಸುತ್ತದೆ. ಈ ಪ್ರಮಾಣವು ಶೇ. 35.5 ರಿಂದ ಶೇ. 29.3 ಕ್ಕೆ ಕುಸಿದಿದೆ. ಇದು ಸಕಾರಾತ್ಮಕ ಬದಲಾವಣೆ.
ಆದರೆ ಕೃಶತೆ ಅಂದರೆ ಎತ್ತರಕ್ಕೆ ತಕ್ಕ ತೂಕ ಇಲ್ಲದಿರುವುದು ತೀವ್ರತರದ ಅಪೌಷ್ಟಿಕತೆಯನ್ನು ಸೂಚಿಸುತ್ತದೆ. ರಾಷ್ಟ್ರೀಯ ಸರಾಸರಿ ಶೇ. 19.3ರಿಂದ ಶೇ. 19 ಕ್ಕೆ ಅತ್ಯಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆದರೆ ತೀವ್ರ ಕೃಶತೆ ಶೇ. 7.7 ರಿಂದ ಶೇ. 5.2 ಕ್ಕೆ ಇಳಿದಿದೆ. ಕಡಿಮೆ ತೂಕ ಅಂದರೆ ವಯಸ್ಸಿಗೆ ತಕ್ಕ ತೂಕ ಇಲ್ಲದಿರುವ ಪ್ರಮಾಣವು ಶೇ. 32.1 ರಿಂದ ಶೇ. 31.8 ಕ್ಕೆ ಅಲ್ಪ ಪ್ರಮಾಣದಲ್ಲಿ ಮಾತ್ರ ಸುಧಾರಿಸಿದೆ.
ಇವೆಲ್ಲವುದರ ನಡುವೆ ಆತಂಕಕಾರಿ ಅಂಶವನ್ನೂ ಈ ವರದಿ ಬಹಿರಂಗಪಡಿಸಿದೆ. ಮೊದಲ 6 ತಿಂಗಳು ಮಕ್ಕಳಿಗೆ ಕೇವಲ ಎದೆಹಾಲು ಮಾತ್ರ ನೀಡುವ ಪ್ರಮಾಣ NFHS-5ರಲ್ಲಿ ಶೇ. 63.7 ರಷ್ಟಿತ್ತು. ಆದರೆ NFHS-6 ರಲ್ಲಿ ಅದು ಶೇ. 55.8 ಕ್ಕೆ ಕುಸಿದಿದೆ. ಇದು ಮಕ್ಕಳ ರೋಗನಿರೋಧಕ ಶಕ್ತಿ ಮತ್ತು ಪೌಷ್ಟಿಕತೆಯ ಮೇಲೆ ನೇರ ಪರಿಣಾಮ ಬೀರುತ್ತಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಆಫ್ರಿಕನ್ ದೇಶಗಳಿಗಿಂತ ಹಿಂದಿರುವ ಭಾರತ!
ಜಾಗತಿಕ ಹಸಿವು ಸೂಚ್ಯಂಕ (Global Hunger Index – GHI) ಮತ್ತು ಯುನಿಸೆಫ್ (UNICEF) ದತ್ತಾಂಶಗಳ ಪ್ರಕಾರ, ಮಕ್ಕಳ ಪೌಷ್ಟಿಕತೆಯ ಕೆಲವು ಪ್ರಮುಖ ಮಾನದಂಡಗಳಲ್ಲಿ ಭಾರತದ ಸ್ಥಿತಿ ಹಲವು ಆಫ್ರಿಕನ್ ದೇಶಗಳಿಗಿಂತಲೂ ಕಳಪೆಯಾಗಿದೆ. ವಿಶೇಷವಾಗಿ ‘ಚೈಲ್ಡ್ ವೇಸ್ಟಿಂಗ್’ ( ತೀವ್ರ ಕೃಶತೆ) ವಿಚಾರದಲ್ಲಿ ಭಾರತದ ಪರಿಸ್ಥಿತಿ ಜಗತ್ತಿನಲ್ಲೇ ಅತ್ಯಂತ ಗಂಭೀರ ಮಟ್ಟದಲ್ಲಿದೆ. ಭಾರತದಲ್ಲಿ ಮಕ್ಕಳ ಎತ್ತರಕ್ಕೆ ತಕ್ಕ ತೂಕವಿಲ್ಲದಿರುವ ಪ್ರಮಾಣ ಸುಮಾರು ಶೇ. 18.7 ರಿಂದ 19 ರಷ್ಟಿದೆ.
ಇದನ್ನು ಓದಿದ್ದೀರಾ? ‘ಮಾದರಿ ರಾಜ್ಯ’ ಗುಜರಾತ್ ಅಪೌಷ್ಟಿಕತೆ, ಬಡತನ, ಶಿಕ್ಷಣದ ವಿಚಾರದಲ್ಲಿ ಬಿಹಾರದ ಸಮೀಪದಲ್ಲಿದೆ: ಅಧ್ಯಯನ ವರದಿ
ನಾವು ಆಫ್ರಿಕನ್ ದೇಶಗಳೊಂದಿಗೆ ಭಾರತದ ಹೋಲಿಕೆ ಮಾಡಿದರೆ ಸುಡಾನ್, ಮಾಲಿ, ಕಾಂಗೋ, ಮತ್ತು ಇಥಿಯೋಪಿಯಾದಂತಹ ತೀವ್ರ ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟು ಎದುರಿಸುತ್ತಿರುವ ಆಫ್ರಿಕನ್ ದೇಶಗಳಿಗಿಂತಲೂ ಭಾರತದಲ್ಲಿ ‘ಚೈಲ್ಡ್ ವೇಸ್ಟಿಂಗ್’ (ಎತ್ತರಕ್ಕೆ ತಕ್ಕ ತೂಕ ಇಲ್ಲದಿರುವುದು) ಪ್ರಮಾಣ ಹೆಚ್ಚಾಗಿದೆ. ಇದು ಜಗತ್ತಿನಲ್ಲೇ ಅತ್ಯಂತ ಗರಿಷ್ಠ ಮಟ್ಟದಲ್ಲಿದೆ. ಆಫ್ರಿಕಾದ ಒಟ್ಟಾರೆ ಸರಾಸರಿಗಿಂತಲೂ (ಸುಮಾರು ಶೇ. 6-8) ಭಾರತದ ಸ್ಥಿತಿ ಈ ವಿಷಯದಲ್ಲಿ ಕೆಟ್ಟದಾಗಿದೆ.
ಇನ್ನು ಇತ್ತೀಚಿನ ವರದಿಗಳ ಪ್ರಕಾರ, ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು ಒಟ್ಟು 123 ದೇಶಗಳಲ್ಲಿ 102 ನೇ ಸ್ಥಾನದಲ್ಲಿದೆ. ಅಂದರೆ GHI Score 25.8 ಆಗಿದೆ. ಇದು ಗಂಭೀರ ಹಸಿವಿನ ಮಟ್ಟವನ್ನು ಸೂಚಿಸುತ್ತದೆ.
ವಿಯೆಟ್ನಾಮ್ ಕಲಿಸಿದ ಪಾಠ
ನಾವು ಆಫ್ರಿಕಾವನ್ನು ಬಿಟ್ಟು ಏಷ್ಯಾದ ಕಡೆಗೆ ಕಣ್ಣು ಹಾಯಿಸಿದರೆ ನಮಗೆ ಸಿಗುವ ಉತ್ತಮ ಉದಾಹರಣೆ ವಿಯೆಟ್ನಾಮ್. 1990ರ ದಶಕದ ಆರಂಭದಲ್ಲಿ ವಿಯೆಟ್ನಾಮ್ ದೇಶವು ಭಾರತಕ್ಕಿಂತಲೂ ಭೀಕರ ಅಪೌಷ್ಟಿಕತೆಯಿಂದ ಬಳಲುತ್ತಿತ್ತು. ಆ ದೇಶದ ತಲಾ ಆದಾಯ ತೀರಾ ಕೆಳಮಟ್ಟದಲ್ಲಿತ್ತು. ಆದರೆ ಕಳೆದ ಮೂರು ದಶಕಗಳಲ್ಲಿ ವಿಯೆಟ್ನಾಮ್ ತನ್ನ ಮಕ್ಕಳ ಖಂಠಿತ ಬೆಳವಣಿಗೆಯನ್ನು ಅಂದರೆ ವಯಸ್ಸಿಗೆ ತಕ್ಕ ಎತ್ತರ ಇಲ್ಲದಿರುವುದು ಶೇ. 19 ಕ್ಕಿಂತ ಕೆಳಕ್ಕೆ ತಂದು ನಿಲ್ಲಿಸಿದೆ.
ವಿಯೆಟ್ನಾಮ್ ಆರ್ಥಿಕ ಬೆಳವಣಿಗೆ ಜತೆಜತೆಗೆ ಮಾನವ ಸಂಪನ್ಮೂಲದ ಅಭಿವೃದ್ಧಿಗೆ ಹೂಡಿಕೆ ಮಾಡಿದೆ. ಗ್ರಾಮೀಣ ಆರೋಗ್ಯ ರಕ್ಷಣೆಯನ್ನು ಯುದ್ಧೋಪಾದಿಯಲ್ಲಿ ಬಲಪಡಿಸಿದೆ. ತಾಯಂದಿರ ಶಿಕ್ಷಣಕ್ಕೆ ಆದ್ಯತೆ ನೀಡಿದೆ. ನಾವು ಐಟಿ ಹಬ್, ಡಿಜಿಟಲ್ ಇಂಡಿಯಾದಲ್ಲಿ ಬ್ಯುಜಿಯಾಗಿದ್ದಾಗ ವಿಯೆಟ್ನಾಮ್ ತಳಮಟ್ಟದ ಪೌಷ್ಟಿಕತೆಯ ಅಡಿಪಾಯವನ್ನು ಗಟ್ಟಿಗೊಳಿಸಿದೆ. ಇದೀಗ ಜಾಗತಿಕ ಉತ್ಪಾದನಾ ವಲಯದಲ್ಲೂ ಭಾರತಕ್ಕೆ ಪೈಪೋಟಿ ನೀಡುವ ಮಟ್ಟಿಗೆ ವಿಯೆಟ್ನಾಮ್ ಬೆಳೆದು ನಿಂತಿದೆ.




