ಮುಂಬರುವ ಜೂನ್ 21 ರಂದು ನಿಗದಿಯಾಗಿರುವ NEET-UG 2026ರ ಮರುಪರೀಕ್ಷೆಯನ್ನು ಪ್ರಸ್ತುತ ಇರುವ ಪೆನ್-ಅಂಡ್-ಪೇಪರ್ ಮಾದರಿಯ ಬದಲಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆ ಮಾದರಿಯಲ್ಲಿ ನಡೆಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅರವಿಂದ್ ಕುಮಾರ್ ಅವರಿದ್ದ ಪೀಠವು ಈ ಅರ್ಜಿಗೆ ತಕ್ಷಣದ ಪರಿಹಾರ ನೀಡಲು ಅಸಮ್ಮತಿ ಸೂಚಿಸಿದ್ದು, ವಿಚಾರಣೆಯನ್ನು ಜುಲೈ ತಿಂಗಳಿಗೆ ಮುಂದೂಡಿದೆ. ಹೀಗಾಗಿ ಜೂನ್ 21ರ ಮರುಪರೀಕ್ಷೆಯನ್ನು ಕಂಪ್ಯೂಟರ್ ಮಾದರಿಯಲ್ಲಿ ನಡೆಸಬೇಕೆಂಬ ಬೇಡಿಕೆಗೆ ಸದ್ಯಕ್ಕೆ ಮನ್ನಣೆ ಸಿಕ್ಕಿಲ್ಲ.
ಸುಪ್ರೀಂ ಕೋರ್ಟ್, ಆರ್ಜೆಡಿ ಸಂಸದ ಸುಧಾಕರ್ ಸಿಂಗ್ ನೀಟ್ ಪರೀಕ್ಷೆಗೆ ಸಂಬಂಧಿಸಿದಂತೆ ಹಲವು ಸುಧಾರಣೆಗಳನ್ನು ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸುತ್ತಿತ್ತು. ಈ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲರು, ತಾವು ಕೇವಲ ಮರುಪರೀಕ್ಷೆಯನ್ನು ಸಿಬಿಟಿ (CBT) ಮಾದರಿಯಲ್ಲಿ ನಡೆಸಬೇಕು ಎಂಬ ಕೋರಿಕೆಯನ್ನು ಮಾತ್ರ ನ್ಯಾಯಾಲಯದ ಮುಂದೆ ಮಂಡಿಸುತ್ತಿರುವುದಾಗಿ ತಿಳಿಸಿದರು. ಆದರೆ, ಈ ಬೇಡಿಕೆಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ನರಸಿಂಹ, ಈ ಹಿಂದೆಯೂ ಇಂತಹದೇ ಸಾದೃಶ್ಯದ ಅರ್ಜಿಗಳನ್ನು ನ್ಯಾಯಾಲಯವು ವಜಾಗೊಳಿಸಿದೆ ಎಂದು ನೆನಪಿಸಿದರು.
ಪ್ರಸ್ತುತ ಪರೀಕ್ಷಾ ಸಂಸ್ಥೆಗಳು ಎದುರಿಸುತ್ತಿರುವ ಪ್ರಾಯೋಗಿಕ ತೊಂದರೆಗಳು ಮತ್ತು ಒತ್ತಡಗಳತ್ತ ಗಮನ ಸೆಳೆದ ಪೀಠವು, ಈ ಹಂತದಲ್ಲಿ ಇಂತಹ ಆದೇಶ ನೀಡುವುದು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿತು. ಮೇ 3 ರಂದು ನಡೆದಿದ್ದ NEET-UG 2026 ರ ಪರೀಕ್ಷೆಯು ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣದಿಂದಾಗಿ ರದ್ದಾಗಿದ್ದು, ಅದನ್ನ ಈಗ ಮರುಪರೀಕ್ಷೆ ನಡೆಸಲಾಗುತ್ತಿದೆ. ಹೀಗಾಗಿ ಅಧಿಕಾರಿಗಳು ಈಗಾಗಲೇ ಸಾಕಷ್ಟು ಸವಾಲುಗಳು ಮತ್ತು ತೀವ್ರ ಒತ್ತಡದ ನಡುವೆ ಕೆಲಸ ಮಾಡುತ್ತಿದ್ದಾರೆ, ಆದ್ದರಿಂದ ಈ ಅರ್ಜಿಯ ವಿಚಾರಣೆಯನ್ನು ಬೇಸಿಗೆ ರಜೆಯ ನಂತರ ಜುಲೈನಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಪೀಠ ಹೇಳಿದೆ.
ಮೇ 3 ರಂದು ನಡೆದಿದ್ದ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಈ ರಿಟ್ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈ ಅರ್ಜಿಯಲ್ಲಿ ಕೇವಲ ಕಂಪ್ಯೂಟರ್ ಆಧಾರಿತ ಪರೀಕ್ಷೆ ಮಾತ್ರವಲ್ಲದೆ, ಇಡೀ ಪರೀಕ್ಷಾ ವ್ಯವಸ್ಥೆಯಲ್ಲಿ ವ್ಯಾಪಕ ಸುಧಾರಣೆ ತರಲು ಹಲವು ಪ್ರಮುಖ ಕೋರಿಕೆಗಳನ್ನು ನ್ಯಾಯಾಲಯದ ಮುಂದೆ ಇಡಲಾಗಿತ್ತು.
ಇದನ್ನೂ ಓದಿ: ಸೇನೆಯ ಕನಸು ಮೀರಿದ ಕ್ರಿಕೆಟ್ ಪ್ರೇಮ: ಆರ್ಸಿಬಿಗೆ ಕಪ್ ಗೆದ್ದುಕೊಟ್ಟ ಕಾಶ್ಮೀರದ ಯುವಕ ರಸಿಕ್ ದರ್
ಪ್ರಸ್ತುತ ಇರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಬದಲಿಗೆ, ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಸಾಂಸ್ಥಿಕ ಹೊಣೆಗಾರಿಕೆಯನ್ನು ಹೊಂದಿರುವ ಸ್ವತಂತ್ರ ಶಾಸನಬದ್ಧ ‘ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ’ವನ್ನು ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು, ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ಶಿಕ್ಷಣ ತಜ್ಞರು, ಮನಶ್ಶಾಸ್ತ್ರಜ್ಞರು, ಸೈಬರ್ ಭದ್ರತಾ ತಜ್ಞರು ಮತ್ತು ವಿಧಿವಿಜ್ಞಾನ ವಿಜ್ಞಾನಿಗಳನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚಿಸಿ ಪರೀಕ್ಷಾ ಸುಧಾರಣೆಗಳಿಗೆ ಶಿಫಾರಸು ಪಡೆಯಬೇಕು, ಇಸ್ರೋ ಮಾಜಿ ಅಧ್ಯಕ್ಷ ಕೆ. ರಾಧಾಕೃಷ್ಣನ್ ಸಮಿತಿಯ ಶಿಫಾರಸುಗಳ ಕಡ್ಡಾಯ ಜಾರಿ, ಎನ್ಕ್ರಿಪ್ಟ್ ಮಾಡಿದ ಡಿಜಿಟಲ್ ಪ್ರಶ್ನೆಪತ್ರಿಕೆ ರವಾನೆ, ಬಯೋಮೆಟ್ರಿಕ್ ಪರಿಶೀಲನೆ, ಕೃತಕ ಬುದ್ಧಿಮತ್ತೆ (AI) ಆಧಾರಿತ ಕಣ್ಗಾವಲು ಮತ್ತು ಪ್ರಶ್ನೆಪತ್ರಿಕೆಗಳಿಗೆ ‘ಡಿಜಿಟಲ್ ಲಾಕಿಂಗ್’ ವ್ಯವಸ್ಥೆಯನ್ನು ತರಬೇಕು, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಸಂಘಟಿತ ನಕಲು ದಂಧೆಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳು, ತರಬೇತಿ ಕೇಂದ್ರಗಳು ಮತ್ತು ಮಧ್ಯವರ್ತಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಿಮಿನಲ್ ಮೊಕದ್ದಮೆ ಹೂಡಬೇಕು, ನೀಟ್ ಪೇಪರ್ ಸೋರಿಕೆ ಕುರಿತು ಕೇಂದ್ರ ತನಿಖಾ ದಳ (CBI) ನಡೆಸುತ್ತಿರುವ ತನಿಖೆಯ ಪ್ರಗತಿ, ಬಂಧನಗಳು ಮತ್ತು ಆರೋಪಪಟ್ಟಿಗಳ ವಿವರಗಳನ್ನು ಒಳಗೊಂಡ ಸ್ಥಿತಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಆದೇಶಿಸಬೇಕು ಹಾಗೂ ಪರೀಕ್ಷೆಯಲ್ಲಿನ ಅಕ್ರಮಗಳನ್ನು ಸುಲಭವಾಗಿ ಪತ್ತೆಹಚ್ಚಲು ಅನುವಾಗುವಂತೆ, ಎನ್ಟಿಎ (NTA) ಸಂಸ್ಥೆಯು ನೀಟ್ ಫಲಿತಾಂಶಗಳನ್ನು ಪರೀಕ್ಷಾ ಕೇಂದ್ರಗಳ ಆಧಾರದ ಮೇಲೆ ಪ್ರಕಟಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.
ಸದ್ಯ ಈ ಅರ್ಜಿಯನ್ನು NTA ಸುಧಾರಣೆಗೆ ಕೋರಿ ಸಲ್ಲಿಕೆಯಾಗಿರುವ ಇತರ ಅರ್ಜಿಗಳ ಜೊತೆಗೆ ಟ್ಯಾಗ್ ಮಾಡಲಾಗಿದ್ದು, ಸುಪ್ರೀಂ ಕೋರ್ಟ್ ಜುಲೈ ತಿಂಗಳಿನಲ್ಲಿ ಇದರ ಮುಂದಿನ ವಿಚಾರಣೆ ನಡೆಸಲಿದೆ.




