ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ನಡೆಸಿದ ಚುನಾವಣಾ ಅಕ್ರಮಗಳ ಕುರಿತಾಗಿ ಮನವಿ ಸಲ್ಲಿಸಲು ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟ ನಾಯಕರು ಕೋರಿದ್ದ ಭೇಟಿಯ ವಿನಂತಿಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ – ಸಿಜೆಐ ಸೂರ್ಯ ಕಾಂತ್ ತಿರಸ್ಕರಿಸಿದ್ದಾರೆ.
ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ವಿಪಕ್ಷ ನಾಯಕರು ಸುಪ್ರೀಂ ಕೋರ್ಟ್ಗೆ ಮೆರವಣಿಗೆ ನಡೆಸುವ ಮುನ್ನ ಸಿಜೆಐ ಅವರನ್ನು ಭೇಟಿಯಾಗಲು ಸಮಯ ಕೋರಿದ್ದರು. ಆದರೆ ಸುಪ್ರೀಂ ಕೋರ್ಟ್ನ ನಿಲುವನ್ನು ಸ್ಪಷ್ಟಪಡಿಸಿರುವ ಸಿಜೆಐ, ಈ ಭೇಟಿಯನ್ನು ನಿರಾಕರಿಸಿ ನಾಲ್ಕು ಪ್ರಮುಖ ಕಾರಣಗಳನ್ನು ನೀಡಿದ್ದಾರೆ.
ಮೊದಲನೆಯದಾಗಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಮತ್ತು ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ವಿಷಯಗಳು ಈಗಾಗಲೇ ಸುಪ್ರೀಂ ಕೋರ್ಟ್ನಲ್ಲಿ ನ್ಯಾಯಾಂಗ ಪರಿಶೀಲನೆಯಲ್ಲಿ ಇರುವುದರಿಂದ, ಆಡಳಿತಾತ್ಮಕ ಮಟ್ಟದಲ್ಲಿ ರಾಜಕೀಯ ನಿಯೋಗವನ್ನು ಭೇಟಿಯಾಗುವುದು ಸೂಕ್ತವಲ್ಲ.
ಇದನ್ನೂ ಓದಿ: ಅ.12ರಂದು ಸುಪ್ರೀಂ ಕೋರ್ಟ್ ಕಡೆ ರಾಹುಲ್ ಗಾಂಧಿ ನೇತೃತ್ವದ ನಡೆ: ಸಿಜೆಐ ಭೇಟಿಗೆ ‘ಇಂಡಿಯಾ’ ಒಕ್ಕೂಟ ನಿರ್ಧಾರ
ಎರಡನೆಯದಾಗಿ ಸುಪ್ರೀಂ ಕೋರ್ಟ್ ತನ್ನ ಆಡಳಿತಾತ್ಮಕ ಅಧಿಕಾರವನ್ನು ಬಳಸಿ ಸರ್ಕಾರದ ಅಥವಾ ಕಾರ್ಯಾಂಗದ ದೈನಂದಿನ ಕಾರ್ಯನಿರ್ವಹಣೆಯಲ್ಲಿ ನೇರವಾಗಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ.
ಮೂರನೆಯದಾಗಿ ರಾಜಕೀಯ ಪಕ್ಷಗಳು ಅಥವಾ ನಾಯಕರು ತಮ್ಮ ಕುಂದುಕೊರತೆಗಳು ಮತ್ತು ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ಅಧಿಕೃತವಾಗಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿಯನ್ನು ಸಲ್ಲಿಸುವ ಮೂಲಕ ನ್ಯಾಯಾಂಗ ಪ್ರಕ್ರಿಯೆಯನ್ನು ಅನುಸರಿಸಬೇಕು.
ನಾಲ್ಕನೆಯದಾಗಿ ಮುಖ್ಯ ನ್ಯಾಯಮೂರ್ತಿಗಳಾಗಿ ಸ್ವತಃ ತೀರ್ಪು ನೀಡುವ ಪೀಠದ ಭಾಗವಾಗಿರುವುದರಿಂದ, ಪ್ರಕರಣ ಸಲ್ಲಿಕೆಯಾಗುವ ಮೊದಲೇ ಹೊರಗೆ ಯಾವುದೇ ರಾಜಕೀಯ ನಿಯೋಗದಿಂದ ಈ ರೀತಿಯ ಆಹವಾಲುಗಳನ್ನು ಅಥವಾ ಮನವಿಗಳನ್ನು ಸ್ವೀಕರಿಸುವುದು ನ್ಯಾಯಾಂಗದ ಶಿಸ್ತಿಗೆ ವಿರುದ್ಧವಾಗಿದೆ.
ಹೀಗೆ ನಾಲ್ಕು ಕಾರಣಗಳನ್ನು ನೀಡಿರುವ ಸಿಜೆಐ ಸೂರ್ಯ ಕಾಂತ್ ಅವರು “ಸಭೆ ನಡೆಸುವ ಬದಲು ಮಂಗಳವಾರ ಅಧಿಕೃತವಾಗಿ ನ್ಯಾಯಾಲಯಕ್ಕೆ ನೂತನ ಅರ್ಜಿ ಸಲ್ಲಿಸಬಹುದು” ಎಂದು ವಿಪಕ್ಷ ನಾಯಕರಿಗೆ ತಿಳಿಸಿದ್ದಾರೆ.
ಸಿಜೆಐ ಭೇಟಿಗೆ ನಿರಾಕರಿಸಿದ ಬಳಿಕ ಮಧ್ಯಾಹ್ನ ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟವು ಸುಪ್ರೀಂ ಕೋರ್ಟ್ ಪ್ರತಿಭಟನಾ ಮೆರವಣಿಗೆಯನ್ನು ಮಧ್ಯಾಹ್ನ 1:30 ಗಂಟೆಗೆ ಪ್ರಾರಂಭಿಸಲು ನಿರ್ಧರಿಸಿದೆ. ಮಧ್ಯಾಹ್ನ 1:30ಕ್ಕೆ ದೆಹಲಿಯ ಕನೌಟ್ ಪ್ಲೇಸ್ – ಬರಖಾಂಬಾ ರೋಡ್ ಜಂಕ್ಷನ್ನಿಂದ ಈ ಕಾಲ್ನಡಿಗೆ ಜಾತ ಆರಂಭವಾಗಲಿದೆ. ಪ್ರತಿಭಟನೆ ನಡೆಯುತ್ತದೆ ಎಂಬ ಕಾರಣಕ್ಕೆ ಮೆಟ್ರೋ ಬಂದ್ ಮಾಡಬಾರದು ಎಂಬ ಸುಪ್ರೀಂ ಕೋರ್ಟ್ ಆದೇಶವಿದ್ದರೂ ಮತ್ತೆ ಆರು ಮೆಟ್ರೋ ನಿಲ್ದಾಣಗಳ ಪ್ರವೇಶ ನಿರ್ಗಮನ ದ್ವಾರ ಬಂದ್ ಮಾಡಲಾಗಿದೆ. ಬೆಳಗ್ಗೆ 6 ರಿಂದ ಸಂಜೆ 4 ಗಂಟೆಯವರೆಗೆ ಮುಚ್ಚಲಾಗಿದೆ. ಆದರೆ ಇಂಟರ್ಚೇಂಜ್ (ರೈಲು ಬದಲಾಯಿಸುವ) ಸೌಲಭ್ಯಗಳು ಎಂದಿನಂತೆ ಲಭ್ಯವಿರುತ್ತವೆ.




