ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಕೇರಳ ವಿಧಾನಸಭೆಯಲ್ಲಿ ಇಂದು (ಅ.12) ನಿರ್ಣಯ ಮಂಡಿಸಲು ಕಾಂಗ್ರೆಸ್ ನೇತೃತ್ವದ ಸರ್ಕಾರ ಸಿದ್ಧತೆ ನಡೆಸಿದೆ. ಈ ಮೂಲಕ ಮುಖ್ಯ ಚುನಾವಣಾ ಆಯುಕ್ತರ ಪದಚ್ಯುತಿಗೆ ಆಗ್ರಹಿಸಿ ನಿರ್ಣಯ ಮಂಡಿಸಿದ ದೇಶದ ಮೊದಲ ವಿಧಾನಸಭೆ ಎಂಬ ಹೆಗ್ಗಳಿಕೆಗೆ ಕೇರಳ ಪಾತ್ರವಾಗಲಿದೆ.
ವಿಧಾನಸಭೆಯ ಅಧಿಕೃತ ಕಲಾಪದ ಸೂಚನೆಯ ಪ್ರಕಾರ, ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಈ ನಿರ್ಣಯವನ್ನು ಮಂಡಿಸಲಿದ್ದಾರೆ. 16ನೇ ಕೇರಳ ವಿಧಾನಸಭೆಯ ಎರಡನೇ ಅಧಿವೇಶನ ಸೋಮವಾರ ಆರಂಭವಾಗಲಿದೆ.
ಸಿಇಸಿಯನ್ನು ಪದಚ್ಯುತಿಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವುದರ ಜೊತೆಗೆ, ನಿರ್ಣಯದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಿ, ಮತದಾರರ ಪಟ್ಟಿಯಿಂದ ಕೈಬಿಡಲಾದ ಅರ್ಹ ಮತದಾರರ ಹೆಸರನ್ನು ಮರುಸೇರ್ಪಡೆಗೊಳಿಸಬೇಕು, ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಸಮಿತಿಯಲ್ಲಿ ಪ್ರಧಾನಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನು ಸೇರಿಸಬೇಕು ಹಾಗೂ ಚುನಾವಣಾ ಆಯೋಗದ ನಿಷ್ಪಕ್ಷಪಾತತೆಯ ಬಗ್ಗೆ ಮೂಡಿರುವ ಅನುಮಾನಗಳನ್ನು ನಿವಾರಿಸಿ, ಆಯೋಗದ ಮೇಲಿನ ವಿಶ್ವಾಸಾರ್ಹತೆಯನ್ನು ಮರುಸ್ಥಾಪಿಸಬೇಕು ಎಂಬ ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಡಲಾಗಿದೆ.
140 ಸದಸ್ಯ ಬಲದ ಕೇರಳ ವಿಧಾನಸಭೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) 102 ಸದಸ್ಯರನ್ನು ಹೊಂದಿದ್ದರೆ, ಸಿಪಿಐ(ಎಂ) ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗ (LDF) 35 ಶಾಸಕರನ್ನು ಹೊಂದಿದೆ. ಬಿಜೆಪಿ ಮೂವರು ಶಾಸಕರನ್ನು ಹೊಂದಿದೆ.
ಮುಖ್ಯ ಚುನಾವಣಾ ಆಯುಕ್ತರ ಪದಚ್ಯುತಿಗೆ ಆಗ್ರಹಿಸಿ ಕಾಂಗ್ರೆಸ್ ಮತ್ತು ಸಿಪಿಐ(ಎಂ) ರಾಷ್ಟ್ರಮಟ್ಟದಲ್ಲಿ ಅಭಿಯಾನ ಹಾಗೂ ಪ್ರತಿಭಟನೆಗಳಲ್ಲಿ ಭಾಗಿಯಾಗಿರುವುದರಿಂದ, ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರವಾಗುವ ನಿರೀಕ್ಷೆಯಿದೆ.
ಅಲ್ಪಸಂಖ್ಯಾತರು, ವಲಸಿಗರು, ಹಿಂದುಳಿದ ವರ್ಗಗಳು ಮತ್ತು ಯುವಜನರ ಮತದಾನದ ಹಕ್ಕುಗಳನ್ನು ತಾಂತ್ರಿಕ ಲೋಪಗಳು ಹಾಗೂ ಅಕ್ರಮಗಳ ಮೂಲಕ ಕಸಿದುಕೊಳ್ಳುವುದು ಪ್ರಜಾಸತ್ತಾತ್ಮಕ ತತ್ವಗಳ ಉಲ್ಲಂಘನೆಯಾಗಿದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ. ವಿಶೇಷ ತೀವ್ರ ಪರಿಷ್ಕರಣೆಯ ನೆಪದಲ್ಲಿ ಲಕ್ಷಾಂತರ ಅರ್ಹ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂಬ ಆತಂಕವನ್ನೂ ವ್ಯಕ್ತಪಡಿಸಲಾಗಿದೆ. ಆದರೆ, ಕೇರಳದಲ್ಲಿ ನಡೆದ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅರ್ಹ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂಬ ನಿರ್ದಿಷ್ಟ ಆರೋಪವನ್ನು ಕಾಂಗ್ರೆಸ್ ಅಥವಾ ಸಿಪಿಐ(ಎಂ) ಮಾಡಿಲ್ಲ ಎಂದು ವರದಿ ತಿಳಿಸಿದೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಆಗಿನ ಪಿಣರಾಯಿ ವಿಜಯನ್ ನೇತೃತ್ವದ ಸಿಪಿಐ(ಎಂ) ಸರ್ಕಾರವು ದೇಶಾದ್ಯಂತ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಜಾರಿಗೊಳಿಸುವ ಚುನಾವಣಾ ಆಯೋಗದ ನಿರ್ಧಾರವನ್ನು ಕೈಬಿಡುವಂತೆ ಒತ್ತಾಯಿಸಿ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿತ್ತು. ಆ ನಿರ್ಣಯವು ಸರ್ವಾನುಮತದಿಂದ ಅಂಗೀಕಾರಗೊಂಡಿತ್ತು.
ಇದನ್ನೂ ಓದಿ: ಎಸ್ಐಆರ್ ಪ್ರಕ್ರಿಯೆ ಮುಂದೂಡಲು ಕೋರಿ ಸುಪ್ರೀಂ ಮೆಟ್ಟಿಲೇರಿದ ಕೇರಳ ಸರ್ಕಾರ
ವಿಧಾನಸಭೆಯ ಕಾರ್ಯವಿಧಾನ ಮತ್ತು ಕಲಾಪ ನಿರ್ವಹಣೆಯ ನಿಯಮ 118ರ ಅಡಿಯಲ್ಲಿ ಮಂಡಿಸಲಾಗಿದ್ದ ಆ ನಿರ್ಣಯದ ಮೂಲಕ, ಎಸ್‌ಐಆರ್ ವಿರುದ್ಧ ನಿರ್ಣಯ ಅಂಗೀಕರಿಸಿದ ದೇಶದ ಮೊದಲ ವಿಧಾನಸಭೆ ಎಂಬ ಹೆಗ್ಗಳಿಕೆಗೆ ಕೇರಳ ಪಾತ್ರವಾಗಿತ್ತು. ಎಸ್‌ಐಆರ್ ಪ್ರಕ್ರಿಯೆಯು ರಾಷ್ಟ್ರೀಯ ನಾಗರಿಕರ ನೋಂದಣಿ (NRC) ಜಾರಿಗೊಳಿಸುವ ಪರೋಕ್ಷ ಪ್ರಯತ್ನವಾಗಿರಬಹುದು ಎಂಬ ಗಂಭೀರ ಆತಂಕವನ್ನು ಚುನಾವಣಾ ಆಯೋಗದ ನಿರ್ಧಾರ ಮೂಡಿಸಿದೆ ಎಂದು ಹಿಂದಿನ ನಿರ್ಣಯದಲ್ಲಿ ಹೇಳಲಾಗಿತ್ತು.
ಇದೀಗ ಮುಖ್ಯ ಚುನಾವಣಾ ಆಯುಕ್ತರ ಪದಚ್ಯುತಿ, ಮತದಾರರ ಹಕ್ಕುಗಳ ಮರುಸ್ಥಾಪನೆ ಮತ್ತು ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯ ಪುನರ್‌ರಚನೆಗೆ ಸಂಬಂಧಿಸಿದ ಹೊಸ ನಿರ್ಣಯದ ಮೂಲಕ ಕೇರಳ ವಿಧಾನಸಭೆ ಮತ್ತೊಮ್ಮೆ ರಾಷ್ಟ್ರಮಟ್ಟದ ರಾಜಕೀಯ ಚರ್ಚೆಯ ಕೇಂದ್ರಬಿಂದುವಾಗುವ ನಿರೀಕ್ಷೆಯಿದೆ.
ಸಂವಿಧಾನದ ವಿಧಿ 324(5) ರ ಪ್ರಕಾರ, ಮುಖ್ಯ ಚುನಾವಣಾ ಆಯುಕ್ತರನ್ನು ಹುದ್ದೆಯಿಂದ ತೆಗೆದುಹಾಕಲು ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ವಜಾಗೊಳಿಸುವಷ್ಟೇ ಕಠಿಣ ಪ್ರಕ್ರಿಯೆ (ಮಹಾಭಿಯೋಗ / Impeachment) ಅಗತ್ಯವಿದೆ. ಈ ಅಧಿಕಾರ ಸಂಸತ್ತಿಗೆ ಮಾತ್ರ ಇದೆಯೇ ಹೊರತು ರಾಜ್ಯ ವಿಧಾನಸಭೆಗಳಿಗೆ ಇಲ್ಲ. ಕೇರಳ ವಿಧಾನಸಭೆಯ ನಿರ್ಣಯವು ಕೇಂದ್ರ ಸರ್ಕಾರಕ್ಕೆ ಯಾವುದೇ ಕಾನೂನಾತ್ಮಕ ಬಾಧ್ಯತೆಯನ್ನು ತರದಿದ್ದರೂ, ಇದು ರಾಜಕೀಯವಾಗಿ ಕೇಂದ್ರ ಸರ್ಕಾರದ ಮೇಲೆ ಮತ್ತು ಚುನಾವಣಾ ಆಯೋಗದ ಒತ್ತಡ ಸೃಷ್ಟಿಸುತ್ತದೆ




