‘ನಿರುದ್ಯೋಗಿ ಯುವಕರನ್ನು ಜಿರಳೆಗಳು ಮತ್ತು ಪರಾವಲಂಬಿಗಳಿಗೆ ಹೋಲಿಸಲಾಗಿದೆ’ ಎಂಬ ಮಾಧ್ಯಮಗಳ ವರದಿಯನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ತಳ್ಳಿಹಾಕಿದ್ದಾರೆ. ತಮ್ಮ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿ, ತಿರುಚಿವೆ ಹೇಳಿರುವ ಅವರು, “ನನ್ನ ಟೀಕೆಯು ನಕಲಿ ಪದವಿಗಳನ್ನು ಪಡೆದು ವೃತ್ತಿ ಪ್ರವೇಶಿಸುವವರ ವಿರುದ್ಧವಾಗಿತ್ತೇ ವಿನಃ ದೇಶದ ನಿರುದ್ಯೋಗಿ ಯುವಕರ ವಿರುದ್ಧವಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ (ಮೇ 15) ಹಿರಿಯ ವಕೀಲ ಸ್ಥಾನಮಾನ ಕೋರಿ ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸಿಜೆಐ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರಿದ್ದ ಪೀಠವು ಕೆಲವು ಮೌಖಿಕ ವೀಕ್ಷಣೆಗಳನ್ನು ಮಾಡಿತ್ತು. ಈ ವೇಳೆ ನ್ಯಾಯಾಲಯದ ವ್ಯವಸ್ಥೆ ಹಾಗೂ ಇತರರ ಮೇಲೆ ವಿನಾಕಾರಣ ದಾಳಿ ಮಾಡುವವರನ್ನು ‘ಜಿರಳೆಗಳು’ ಮತ್ತು ‘ಪರಾವಲಂಬಿಗಳು’ ಎಂದು ಪೀಠ ಉಲ್ಲೇಖಿಸಿತ್ತು. ಈ ಹೇಳಿಕೆಯು ದೇಶದ ನಿರುದ್ಯೋಗಿ ಯುವಕರನ್ನು ಗುರಿಯಾಗಿಸಿ ಮಾಡಲಾದ ಕಟು ಟೀಕೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿ ಆಕ್ರೋಶ ವ್ಯಕ್ತವಾಗಿತ್ತು.
ಈ ಕುರಿತು ಇಂದು ಲಿಖಿತ ಸ್ಪಷ್ಟನೆ ನೀಡಿರುವ ಸಿಜೆಐ ಸೂರ್ಯ ಕಾಂತ್, “ನಿನ್ನೆ ಕ್ಷುಲ್ಲಕ ಪ್ರಕರಣವೊಂದರ ವಿಚಾರಣೆ ವೇಳೆ ನಾನು ಮಾಡಿದ ಮೌಖಿಕ ವೀಕ್ಷಣೆಗಳನ್ನು ಮಾಧ್ಯಮದ ಒಂದು ವಿಭಾಗವು ಹೇಗೆ ತಿರುಚಿದೆ ಎಂಬುದನ್ನು ಓದಿ ನನಗೆ ತೀವ್ರ ನೋವಾಗಿದೆ. ನಕಲಿ ಮತ್ತು ಬೋಗಸ್ ಪದವಿಗಳ ಸಹಾಯದಿಂದ ವಕೀಲಿಕೆಯಂತಹ (ಬಾರ್) ವೃತ್ತಿಗಳಿಗೆ ಪ್ರವೇಶಿಸಿದವರನ್ನು ಮಾತ್ರ ನಾನು ನಿರ್ದಿಷ್ಟವಾಗಿ ಟೀಕಿಸಿದ್ದೆ. ಇಂತಹ ನಕಲಿ ವ್ಯಕ್ತಿಗಳು ಮಾಧ್ಯಮ, ಸಾಮಾಜಿಕ ಮಾಧ್ಯಮ ಮತ್ತು ಇತರ ಉದಾತ್ತ ವೃತ್ತಿಗಳಿಗೂ ನುಸುಳಿದ್ದಾರೆ. ಆದ್ದರಿಂದ ಅವರು ವ್ಯವಸ್ಥೆಯನ್ನು ಹಾಳುಮಾಡುವ ಪರಾವಲಂಬಿಗಳಾಗಿದ್ದಾರೆ ಎಂದಷ್ಟೇ ನಾನು ಹೇಳಿದ್ದೆ,” ಎಂದು ವಿವರಿಸಿದ್ದಾರೆ.
ಇದನ್ನು ಓದಿದ್ದೀರಾ? ನಿರುದ್ಯೋಗಿಗಳು ‘ಜಿರಳೆಗಳ’ ಹಾಗೆ; ಮಾಧ್ಯಮ, RTI ಕಾರ್ಯಕರ್ತರಾಗಿ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತಾರೆ: ಸಿಜೆಐ ಸೂರ್ಯ ಕಾಂತ್
ತಮ್ಮ ಹೇಳಿಕೆ ಭಾರತೀಯ ಯುವಕರನ್ನು ಗುರಿಯಾಗಿಸಿದೆ ಎಂಬ ವರದಿಗಳನ್ನು ‘ಸಂಪೂರ್ಣ ಆಧಾರರಹಿತ’ ಎಂದು ಕರೆದಿರುವ ಮುಖ್ಯ ನ್ಯಾಯಮೂರ್ತಿಗಳು, “ನಮ್ಮ ದೇಶದ ಪ್ರಸ್ತುತ ಮತ್ತು ಭವಿಷ್ಯದ ಮಾನವ ಸಂಪನ್ಮೂಲಗಳ ಬಗ್ಗೆ ನನಗೆ ಅಪಾರ ಹೆಮ್ಮೆಯಿದೆ. ಭಾರತದ ಪ್ರತಿಯೊಬ್ಬ ಯುವಕನೂ ನನಗೆ ಸ್ಫೂರ್ತಿ. ಭಾರತೀಯ ಯುವಕರು ನನ್ನ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದಾರೆ ಎಂಬುದರಲ್ಲಿ ಯಾವುದೇ ಉತ್ಪ್ರೇಕ್ಷೆಯಿಲ್ಲ ಮತ್ತು ನಾನು ಕೂಡ ಅವರನ್ನು ಅಭಿವೃದ್ಧಿ ಹೊಂದಿದ ಭಾರತದ ಆಧಾರಸ್ತಂಭಗಳಾಗಿಯೇ ನೋಡುತ್ತೇನೆ,” ಎಂದು ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದಾರೆ.
ಶುಕ್ರವಾರದ ವಿಚಾರಣೆ ವೇಳೆ, ಹಿರಿಯ ವಕೀಲ ಸ್ಥಾನಮಾನಕ್ಕಾಗಿ ಒತ್ತಾಯಿಸುತ್ತಿದ್ದ ಅರ್ಜಿದಾರ ವಕೀಲರ ಸಾಮಾಜಿಕ ಜಾಲತಾಣದ ನಡವಳಿಕೆಗಳ ಬಗ್ಗೆ ಕಿಡಿಕಾರಿದ್ದ ಪೀಠ, “ವೃತ್ತಿಯಲ್ಲಿ ಯಾವ ಸ್ಥಾನವೂ ಇಲ್ಲದ, ಯಾವ ಉದ್ಯೋಗವೂ ಇಲ್ಲದ ಜಿರಳೆಗಳಂತಹ ಕೆಲ ಯುವಕರು ಸಮಾಜದಲ್ಲಿದ್ದಾರೆ. ಅವರಲ್ಲಿ ಕೆಲವರು ಮಾಧ್ಯಮ, ಸಾಮಾಜಿಕ ಜಾಲತಾಣ, ಆರ್.ಟಿ.ಐ ಕಾರ್ಯಕರ್ತರು ಮತ್ತು ಇತರ ಸಾಮಾಜಿಕ ಕಾರ್ಯಕರ್ತರಾಗುತ್ತಾರೆ. ಆ ನಂತರ ಅವರು ಎಲ್ಲರ ಮೇಲೂ ದಾಳಿ ಮಾಡಲು ಶುರು ಮಾಡುತ್ತಾರೆ” ಎಂದು ಹೇಳಿತ್ತು.




