ಕೆಲಸವಿಲ್ಲದ ನಿರುದ್ಯೋಗಿ ಯುವಕರನ್ನು ‘ಜಿರಳೆಗಳಿಗೆ’ ಹೋಲಿಸಿರುವ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು, ಇಂತಹ ಯುವಕರು ಮುಂದೆ ಮಾಧ್ಯಮ, ಸಾಮಾಜಿಕ ಜಾಲತಾಣ ಮತ್ತು ಆರ್.ಟಿ.ಐ ಕಾರ್ಯಕರ್ತರಾಗಿ ರೂಪಗೊಳ್ಳುತ್ತಾರೆ ಹಾಗೂ ವ್ಯವಸ್ಥೆಯ ಮೇಲೆ ದಾಳಿ ಮಾಡಲು ಶುರು ಮಾಡುತ್ತಾರೆ ಎಂದು ತಿಳಿಸಿದ್ದಾರೆ.
ಇಂದು (ಮೇ.15) ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ನ್ಯಾಯಪೀಠವು, ‘ಹಿರಿಯ ವಕೀಲ’ ರ ಹುದ್ದೆಗಾಗಿ ಸತತವಾಗಿ ಯತ್ನಿಸುತ್ತಿದ್ದ ಓರ್ವ ವಕೀಲರನ್ನು ತರಾಟೆಗೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಈ ಮಾತುಗಳನ್ನಾಡಿದೆ. “ಸಮಾಜದಲ್ಲಿ ಈಗಾಗಲೇ ವ್ಯವಸ್ಥೆಯ ಮೇಲೆ ದಾಳಿ ಮಾಡುವ ‘ಪರಾವಲಂಬಿಗಳು’ ಇದ್ದಾರೆ, ಅರ್ಜಿದಾರರಾದ ನೀವು ಅವರ ಜೊತೆ ಕೈ ಜೋಡಿಸುವೀರಾ?” ಎಂದು ನ್ಯಾಯಪೀಠವು ವಕೀಲರನ್ನು ಪ್ರಶ್ನಿಸಿತು.
“ಈ ಪ್ರಪಂಚದಲ್ಲಿ ಎಲ್ಲರೂ ಹಿರಿಯ ವಕೀಲರಾಗಲು ಅರ್ಹರಿರಬಹುದು, ಆದರೆ ನೀವು ಮಾತ್ರ ಈ ಹುದ್ದೆಗೆ ಖಂಡಿತಾ ಅರ್ಹರಲ್ಲ,” ಎಂದು ನ್ಯಾಯಪೀಠವು ಕಟ್ಟುನಿಟ್ಟಾಗಿ ಹೇಳಿತು. ವಕೀಲರು ತಮ್ಮ ಫೇಸ್‌ಬುಕ್‌ನಲ್ಲಿ ಬಳಸಿದ ಅಸಭ್ಯವಾದ ಭಾಷೆಯ ಬಗ್ಗೆಯೂ ನ್ಯಾಯಪೀಠ ಪ್ರಸ್ತಾಪಿಸಿತು. ಒಂದು ವೇಳೆ ದೆಹಲಿ ಹೈಕೋರ್ಟ್ ಇವರಿಗೆ ಹಿರಿಯ ವಕೀಲ ಸ್ಥಾನಮಾನ ನೀಡಿದ್ದರೂ, ಇವರ ವೃತ್ತಿಪರ ನಡತೆಯನ್ನು ಗಮನಿಸಿ ಸುಪ್ರೀಂ ಕೋರ್ಟ್ ಅದನ್ನು ರದ್ದುಗೊಳಿಸುತ್ತಿತ್ತು ಎಂದು ನ್ಯಾಯಮೂರ್ತಿಗಳು ಎಚ್ಚರಿಸಿದರು.
“ವೃತ್ತಿಯಲ್ಲಿ ಯಾವ ಸ್ಥಾನವೂ ಇಲ್ಲದ, ಯಾವ ಉದ್ಯೋಗವೂ ಇಲ್ಲದ ಜಿರಳೆಗಳಂತಹ ಯುವಕರು ಸಮಾಜದಲ್ಲಿದ್ದಾರೆ. ಅವರಲ್ಲಿ ಕೆಲವರು ಮಾಧ್ಯಮ, ಸಾಮಾಜಿಕ ಜಾಲತಾಣ, ಆರ್.ಟಿ.ಐ ಕಾರ್ಯಕರ್ತರು ಮತ್ತು ಇತರ ಸಾಮಾಜಿಕ ಕಾರ್ಯಕರ್ತರಾಗುತ್ತಾರೆ. ಆ ನಂತರ ಅವರು ಎಲ್ಲರ ಮೇಲೂ ದಾಳಿ ಮಾಡಲು ಶುರು ಮಾಡುತ್ತಾರೆ,” ಎಂದು ವಿವರಿಸಿದರು.
‘ಹಿರಿಯ ವಕೀಲ’ ಹುದ್ದೆಯು ಓರ್ವ ವ್ಯಕ್ತಿಯ ಸಾಧನೆಗೆ ನೀಡುವಂತಹ ಗೌರವವೇ ಹೊರತು, ಅದನ್ನು ಬಲವಂತವಾಗಿ ಬೆನ್ನಟ್ಟಿ ಪಡೆದುಕೊಳ್ಳಬಾರದು. “ಇದು ಕೇವಲ ಅಲಂಕಾರಿಕ ಸ್ಥಾನಮಾನವೇ? ಈ ರೀತಿ ಹುದ್ದೆಗಾಗಿ ದುಂಬಾಲು ಬೀಳುವುದು ನಿಮಗೆ ಸರಿಯಾಗಿ ಕಾಣುತ್ತದೆಯೇ?” ಎಂದು ನ್ಯಾಯಪೀಠ ಪ್ರಶ್ನಿಸಿತು.
ಇದನ್ನು ಓದಿದ್ದೀರಾ? ಕೇರಳಂ ‘ಕೈ’ ಹಿಡಿದ ‘ಪುಸ್ತಕ ಪ್ರೇಮಿ’ ಸಜ್ಜನ ಸತೀಶನ್ ಬಗ್ಗೆ ನಿಮಗೆಷ್ಟು ಗೊತ್ತು?
ಇತ್ತೀಚಿನ ದಿನಗಳಲ್ಲಿ ಕಪ್ಪು ಕೋಟು ಧರಿಸಿರುವ ಹಲವರ ಕಾನೂನು ಪದವಿಗಳ ಅಸಲಿಯತ್ತಿನ ಬಗ್ಗೆ ಅನುಮಾನಗಳಿವೆ, ಹೀಗಾಗಿ ಸಿಬಿಐ ಮೂಲಕ ಇಂತಹ ಪದವಿಗಳ ತಪಾಸಣೆ ಮಾಡಬೇಕೆಂದು ತಮಗೆ ಅನಿಸುತ್ತಿದೆ ಎಂದು ನ್ಯಾಯಮೂರ್ತಿಗಳು ಹೇಳಿದರು. ಈ ವಿಚಾರದಲ್ಲಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಯಾವುದೇ ಕಠಿಣ ಕ್ರಮ ಕೈಗೊಳ್ಳುವುದಿಲ್ಲ, ಏಕೆಂದರೆ ಅವರಿಗೆ ಈ ವಕೀಲರ ‘ಮತಗಳ ಅಗತ್ಯ’ ಇದೆ ಎಂದು ಅವರು ಕಟುವಾಗಿ ಟೀಕಿಸಿದರು.
ನ್ಯಾಯಾಲಯದ ಈ ಮಾತುಗಳಿಂದ ವಿಚಲಿತರಾದ ಅರ್ಜಿದಾರ ವಕೀಲರು, ನ್ಯಾಯಪೀಠದ ಕ್ಷಮೆ ಕೇಳಿದರು ಮತ್ತು ತಮ್ಮ ಅರ್ಜಿಯನ್ನು ಹಿಂಪಡೆಯಲು ಅನುಮತಿ ಕೋರಿದರು. ಬಳಿಕ ನ್ಯಾಯಪೀಠವು ಅವರಿಗೆ ಅರ್ಜಿಯನ್ನು ಹಿಂಪಡೆಯಲು ಸಮ್ಮತಿ ನೀಡಿತು.




