ಸೋಮವಾರ ನಡೆದ ಮೋದಿ ಸರ್ಕಾರದ ಕ್ರೌರ್ಯ, ದೆಹಲಿ ಪೊಲೀಸರ ದಾಳಿ-ದೌರ್ಜ್ಯಗಳನ್ನು ಎದುರಿಸಿ ವಿದ್ಯಾರ್ಥಿಗಳು ಮರಳಿ ಒಗ್ಗೂಡಿದ್ದಾರೆ. ಮಂಗಳವಾರ ಮುಂಜಾನೆಯೇ ನೂರಾರು ವಿದ್ಯಾರ್ಥಿ-ಯುವಜನರು ಜಂತರ್ ಮಂತರ್‌ಗೆ ಧಾವಿಸಿದ್ದಾರೆ. ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ಪ್ರತಿಭಟನಾ ಧರಣಿ ಮುಂದುವರೆಸಿದ್ದಾರೆ.
ಸೋಮವಾರ, ಸಿಜೆಪಿ ನೇತೃತ್ವದಲ್ಲಿ ವಿದ್ಯಾರ್ಥಿ, ಯುವಜನರು ಸಂಸತ್ ಚಲೋ ಮೆರವಣಿಗೆ ಹಮ್ಮಿಕೊಂಡಿದ್ದರು. ಈ ವೇಳೆ, ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿ, ಯುವಜನರ ಮೇಲೆ ತೀವ್ರ ದಾಳಿ ನಡೆಸಿದ್ದರು. ಪ್ರತಿಭಟನೆಯ ವೇದಿಕೆಯನ್ನು ಧ್ವಂಸಗೊಳಿಸಿ, ಟೆಂಟ್‌ಗಳನ್ನು ಕಿತ್ತುಹಾಕಿದ್ದರು. ಆದಾಗ್ಯೂ, ಪ್ರತಿಭಟನೆ ಮುಂದುವರಿಸಲು ಸಿಜೆಪಿ ಕರೆ ನೀಡಿದ್ದು, ಪ್ರತಿಭಟನಾಕಾರರು ಮತ್ತೆ ಜಂತರ್ ಮಂತರ್‌ಗೆ ಮರಳಿದ್ದಾರೆ. ಯುವಜನರು ಪ್ರತಿಭಟನಾ ಸ್ಥಳಕ್ಕೆ ಬರುತ್ತಿರುವಂತೆಯೇ ಸರ್ಕಾರವು ಅಧಿಕ ಸಂಖ್ಯೆಯ ಪೊಲೀಸರನ್ನು ಜಂತರ್‌ಮಂತರ್‌ನಲ್ಲಿ ನಿಯೋಜಿಸಿದೆ.
ಸೋಮವಾರ ನಡೆದ ಹಿಂಸಾತ್ಮಕ ಘಟನೆಯಲ್ಲಿ 135ಕ್ಕೂ ಹೆಚ್ಚು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸುಮಾರು 70 ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ. ಹಿಂಸಾಚಾರ ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ಉಂಟುಮಾಡಿದ ಆರೋಪದಲ್ಲಿ ಅನಾಮಧೇಯ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ದೆಹಲಿ ಪೊಲೀಸರು ತಮ್ಮ ಪ್ರಕಟಣೆಯಲ್ಲಿ, ಪ್ರತಿಭಟನಾಕಾರರು ಅತ್ಯಂತ ಅನಿಯಂತ್ರಿತ ಮತ್ತು ಹಿಂಸಾತ್ಮಕವಾಗಿ ವರ್ತಿಸಿದ್ದಾರೆ ಹಾಗೂ ಪದೇ ಪದೇ ಎಚ್ಚರಿಕೆ ಮತ್ತು ಕಾನೂನುಬದ್ಧ ನಿರ್ದೇಶನಗಳನ್ನು ನೀಡಿದಾಗ್ಯೂ ನಿಷೇಧಾಜ್ಞೆಯನ್ನು ಉಲ್ಲಂಘಿಸಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನೊಂದೆಡೆ, ಪ್ರತಿಭಟನಾಕಾರರು ದೆಹಲಿ ಪೊಲೀಸರು :ಸಂಸತ್ ಚಲೋ’ ಮೆರವಣಿಗೆಯಲ್ಲಿದ್ದ ವಿದ್ಯಾರ್ಥಿಗಳ ಮೇಲೆ ಅತಿಯಾದ ಬಲಪ್ರಯೋಗ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಪರಿಸ್ಥಿತಿ ಉದ್ವಿಗ್ನಗೊಂಡ ಬಳಿಕ ಎಚ್ಚೆತ್ತ ಕೇಂದ್ರ ಸರ್ಕಾರವು ಪ್ರತಿಭಟನಾಕಾರರೊಂದಿಗೆ ಮಾತುಕತೆ ಆರಂಭಿಸಿದೆ. ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಸೋಮವಾರ ಮಧ್ಯಾಹ್ನ ತಮ್ಮ ಅಧಿಕೃತ ನಿವಾಸದಲ್ಲಿ ಸಿಜೆಪಿ ವಕ್ತಾರರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರನ್ನು ಭೇಟಿ ಮಾಡಿ ಅವರ ಬೇಡಿಕೆಗಳನ್ನು ಆಲಿಸಿದ್ದಾರೆ.
ಸಿಜೆಪಿ ನಾಯಕರು ಸಚಿವರ ಮುಂದೆ ಮೂರು ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ. ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕು, ನೀಟ್ 2026ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಹೊಣೆ ಹೊತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಹಾಗೂ ಪತ್ರಿಕೆ ಸೋರಿಕೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡ ಅಭ್ಯರ್ಥಿಗಳ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ, ಸರ್ಕಾರದಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ ಎಂದಿ ಸಿಜೆಪಿ ಹೇಳಿದೆ.
ಸಭೆಯ ಬಳಿಕೆ ಟ್ವೀಟ್ ಮಾಡಿರುವ ನಡ್ಡಾ, “ಸಿಜೆಪಿ ನಾಯಕರು ಸಲ್ಲಿಸಿದ ಮನವಿಯನ್ನು ಸ್ವೀಕರಿಸಿದ್ದು, ಈ ವಿಷಯವನ್ನು ಸೂಕ್ತ ಮಟ್ಟದಲ್ಲಿ ಚರ್ಚಿಸುತ್ತೇವೆ” ಎಂದು ಭರವಸೆ ನೀಡಿದ್ದಾರೆ.
ಮಾತುಕತೆಯ ನಂತರ ಪ್ರತಿಕ್ರಿಯಿಸಿದ ಸಿಜೆಪಿ ವಕ್ತಾರ ಸೌರವ್ ದಾಸ್, “ಸಚಿವರು ಚರ್ಚಿಸುವುದಾಗಿ ಹೇಳಿದ್ದರೂ ಯಾವುದೇ ಖಚಿತ ಭರವಸೆ ನೀಡಿಲ್ಲ, ಆದ್ದರಿಂದ ಬೇಡಿಕೆ ಈಡೇರುವವರೆಗೆ ಶಾಂತಿಯುತ ಪ್ರತಿಭಟನೆ ಮುಂದುವರಿಯಲಿದೆ” ಎಂದಿದ್ದಾರೆ.




