ಮೀಸಲಾತಿ ಹೆಚ್ಚಳ ಮತ್ತು ನ್ಯಾಯಾಂಗದ ಮಿತಿ: ಸಾಮಾಜಿಕ ನ್ಯಾಯಕ್ಕೆ ಸಂವಿಧಾನಾತ್ಮಕ ಪರಿಹಾರವೇನು?

Date:

ಮೀಸಲಾತಿ ಬಯಸುವ ಜಾತಿಗಳೆಲ್ಲವೂ ಕೂಡ ವರ್ತಮಾನದ ಸಾಮಾಜಿಕ ಪರಿಸ್ಥಿತಿ ಮತ್ತು ಕಾನೂನು ನಿಯಮಗಳನ್ನು ಸಾಮಾಜಿಕ ನ್ಯಾಯದ ಬೆಳಕಿನಲ್ಲಿ ಅಂತಃಕರಣ ಪೂರ್ವಕವಾಗಿ ಅರ್ಥ ಮಾಡಿಕೊಳ್ಳಬೇಕಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾದಾಗ ಮಾತ್ರ ಸಾಮಾಜಿಕ ನ್ಯಾಯವೆಂಬ ಗಿಡಗಂಟೆಗಳ ಕೊರಳೊಳಗೆ ನಳನಳಿಸುವ ಹೂವುಗಳು ಅರಳಲು ಸಾಧ್ಯ.

ಸಾಮಾಜಿಕ ನ್ಯಾಯ ಮತ್ತು ಸಂವಿಧಾನಾತ್ಮಕ ನ್ಯಾಯ ಪರಸ್ಪರ ವಿರೋಧಿಗಳಲ್ಲ. ಇವೆರಡನ್ನೂ ಸಮನ್ವಯಗೊಳಿಸುವುದೇ ಪ್ರಜಾಪ್ರಭುತ್ವದ ನಿಜವಾದ ನಿರೀಕ್ಷೆ. ಪರಿಶಿಷ್ಟ ವರ್ಗಗಳ ಮೀಸಲಾತಿ ಹೆಚ್ಚಳ ಮಾಡುವಲ್ಲಿ ಅಂಥಾ ಸಮನ್ವಯ ಸರ್ಕಾರಕ್ಕೆ ಇತ್ತೇ ಎಂಬುದು ಅನುಮಾನ. ಸಮನ್ವಯ ಸಾಧಿಸಿ ಮೀಸಲಾತಿ ಕೋಟಾ ಹೆಚ್ಚಳದ ಕಾಯ್ದೆಯನ್ನು ಜಾರಿಗೆ ಸರ್ಕಾರ ತಂದಂತಿಲ್ಲ ಎಂಬುದಕ್ಕೆ ಇತ್ತೀಚಿನ ಉಚ್ಚ ನ್ಯಾಯಾಲಯದ ತೀರ್ಪೆ ಸಾಕ್ಷಿ.

- Advertisement -

ಅಕ್ಟೋಬರ್ 12, 2026 ಕರ್ನಾಟಕ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಕೋಟಾ ಹೆಚ್ಚಿಸಿ ಕರ್ನಾಟಕ ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿದ ದಿನ. ಹೆಚ್ಚಿಸಿದ್ದ ಕೋಟಾ ರದ್ದಾಗಿರುವುದು ಸಹಜವಾಗಿ ಪರಿಶಿಷ್ಟ ವರ್ಗಗಳಿಗೆ ಆಘಾತ ತಂದಿದೆ. ಹಾಗೆಯೇ, ಯಾವುದೇ ಮುಂದಾಲೋಚನೆ ಇಲ್ಲದೇ, ಆದೇಶ ಜಾರಿಗೆ ತಂದ ಸರ್ಕಾರಕ್ಕೂ ಅಷ್ಟೇ. ಅದೂ ಕೂಡ ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿಲ್ಲ ಎಂದು ಹೇಳದಿರಲು ಸಾಧ್ಯವೇ? ನ್ಯಾಯಾಲಯದ ತೀರ್ಪನ್ನು ಸಂಪುಟದಲ್ಲಿ ಚರ್ಚಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಉಪಮುಖ್ಯಮಂತ್ರಿ ಹೇಳಿರುವುದೇ ಅದಕ್ಕಿರುವ ಪುರಾವೆ. ಮತ್ತು ಆ ದಿಸೆಯಲ್ಲಿ ಸಂಪುಟದಲ್ಲಿ ಚರ್ಚಿಸಿ ಈಗಾಗಲೇ ಮೇಲ್ಮನವಿ ಸಲ್ಲಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಸದ್ಯ ಆ ಮಾತಂತಿರಲಿ, ನ್ಯಾಯಾಲಯದ ತೀರ್ಪು ಮತ್ತು ಸರ್ಕಾರದ ಆದೇಶ ಈ ಎರಡನ್ನೂ ಸಂಭವನೀಯ ಪರಿಹಾರದ ದೃಷ್ಟಿಯಿಂದ ಪರಾಮರ್ಶಿಸುವುದು ಅಗತ್ಯ. ಆದ್ದರಿಂದ ಅವುಗಳ ಹಿನ್ನೆಲೆಯತ್ತ ನೋಟ ಹರಿಸುವುದು ಅವಶ್ಯಕ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರಾಮಲೀಲೆಗಳಲ್ಲಿ ರಾಮ, ಹನುಮ, ಲಕ್ಷ್ಮಣ ಪಾತ್ರಗಳಲ್ಲಿ ದಾನಿಶ್ –...

ರಾಮನಾಗಿ ದಾನಿಶ್. ಹನುಮಂತನಾಗಿ ಯೂನುಸ್. ಲಕ್ಷ್ಮಣನಾಗಿ ಶೇರ್ ಖಾನ್. ರಾವಣನಾಗಿ ಇಕ್ಬಾಲ್ ಅಹ್ಮದ್. ಇವರೆಲ್ಲರೂ ಮುಸ್ಲಿಂ ಕಲಾವಿದರು. ಆದರೆ, ಇವರು ಅಭಿನಯಿಸಿರುವುದು ಹಿಂದುಗಳ ಮಹಾಕಾವ್ಯ ರಾಮಾಯಣದ ಪಾತ್ರಗಳಲ್ಲಿ. ಉತ್ತರ ಭಾರತದ ಹಲವು ರಾಮಲೀಲೆಗಳಲ್ಲಿ...

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ...

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್ ವಿರುದ್ಧದ ಯುದ್ಧದ ಆರ್ಥಿಕ ಪರಿಣಾಮಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ದೊಡ್ಡ ರಾಜಕೀಯ ಸವಾಲಾಗಿವೆ. ನವೆಂಬರ್ 3ರಂದು ನಡೆಯಲಿರುವ ಮಧ್ಯಂತರ...

ಖಾಲಿದ್‌ರಂತೆ ಸಿಜೆಪಿ ನಾಯಕರನ್ನೂ ದೀರ್ಘ ಜೈಲುವಾಸದ ಸುಳಿಯಲ್ಲಿ ಸಿಲುಕಿಸುವ...

ಚುನಾವಣಾ ಆಯೋಗದ ಅಕ್ರಮ ಪ್ರಶ್ನಿಸಿದ ಸಿಜೆಪಿ ನಾಯಕರ ವಿರುದ್ಧ ಸರಣಿ ದೂರು ದಾಖಲಿಸಲಾಗುತ್ತಿದೆ. ಮೋದಿ ಸರ್ಕಾರದ ಅವಧಿಯಲ್ಲಿ ‘ವಿಚಾರಣೆಯೇ ಒಂದು ಶಿಕ್ಷೆ’ ಎನ್ನುವ ತಂತ್ರ ಪುನರಾವರ್ತನೆಯಾಗುತ್ತಿದೆಯೇ? ಉಮರ್‌ ಖಾಲಿದ್‌ ರೀತಿಯಲ್ಲೇ ಸೌರವ್ ದಾಸ್,...

ಪರಿಶಿಷ್ಟ ಪಂಗಡದ ಹೋರಾಟ

ಒಂದು ಕಡೆ ಪರಿಶಿಷ್ಟ ಜಾತಿ ಅದರಲ್ಲೂ ಮಾದಿಗ ಸಮುದಾಯವು ಒಳಮೀಸಲಾತಿಗಾಗಿ ಕಾಲದಿಂದಲೂ ಹೋರಾಟ ಮಾಡಿಕೊಂಡೇ ಬರುತ್ತಿತ್ತು. ಮತ್ತೊಂದೆಡೆ, ಪರಿಶಿಷ್ಟ ಪಂಗಡದವರೂ ಕೂಡ, ಅವರಿಗೆ ನಿಗದಿಯಾಗಿರುವ ಶೇ.3ರಷ್ಟು ಮೀಸಲಾತಿ ಕೋಟಾವನ್ನು ಜನಸಂಖ್ಯಾನುಸಾರ ಶೇ.7ಕ್ಕೆ ಹೆಚ್ಚಿಸಲು ಸರ್ಕಾರದ ವಿರುದ್ಧ ಹೋರಾಟಕ್ಕಿಳಿದಿದ್ದರು. ಈ ನಿಟ್ಟಿನಲ್ಲಿ ‘ನಾಯಕ ವಿದ್ಯಾರ್ಥಿಗಳ ಒಕ್ಕೂಟ’ ಉಚ್ಚ ನ್ಯಾಯಾಲಯದಲ್ಲಿ ಸರ್ಕಾರವನ್ನು ಪ್ರತಿವಾದಿಯನ್ನಾಗಿಸಿ ರಿಟ್ ಸಲ್ಲಿಸಿತು. ನ್ಯಾಯಾಲಯ ರಿಟ್ಟನ್ನು ಪುರಸ್ಕರಿಸಿ, ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ವಿವರವಾದ ಮನವಿ ಸಲ್ಲಿಸಲು ರಿಟ್ ಅರ್ಜಿದಾರರಿಗೆ ಅನುಮತಿಸಿತು. ಮುಖ್ಯ ಕಾರ್ಯದರ್ಶಿಗಳು ಆದ್ಯತೆಯ ಮೇರೆಗೆ 6 ತಿಂಗಳ ಅವಧಿಯಲ್ಲಿ ಮನವಿಯನ್ನು ಪರಿಗಣಿಸಿ ಕಾರಣ ಸಹಿತ ಉತ್ತರಿಸಲು ತಾಕೀತು ಮಾಡಿತು.

ಇದನ್ನು ಓದಿದ್ದೀರಾ?: ಆರ್‌ಎಸ್‌ಎಸ್‌ ಕೇವಲ ಪುರುಷರಿರುವ ‘ಸಂವಿಧಾನ ವಿರೋಧಿ’ ಸಂಘಟನೆ: ರಾಹುಲ್ ಗಾಂಧಿ ವಾಗ್ದಾಳಿ

ನ್ಯಾಯಾಲಯವಷ್ಟೇ ಅಲ್ಲದೆ, ಪರಿಶಿಷ್ಟ ಪಂಗಡದವರು ಮೀಸಲಾತಿ ಕೋಟಾ ಹೆಚ್ಚಿಸಲು ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟದಲ್ಲಿ ನಿರತರಾದರು. ನಾಯಕ ಸಮುದಾಯದ ಕುಲಗುರುಗಳಾದ ಶ್ರೀ ಪ್ರಸನ್ನಾನಂದ ಸ್ವಾಮಿಗಳ ನೇತೃತ್ವದಲ್ಲಿ ಸಾವಿರಾರು ಮಂದಿ ಹರಿಹರ ತಾಲೂಕಿನ ರಾಜನಹಳ್ಳಿಯಿಂದ ಸುಮಾರು 300 ಕಿಲೋಮೀಟರ್ ದಾರಿಯನ್ನು ಕಾಲುನಡಿಗೆಯಲ್ಲಿ ಸವೆಸಿ ಬೆಂಗಳೂರಿಗೆ ಆಗಮಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಮೀಸಲಾತಿ3

ಆಯೋಗ ರಚನೆ

ಹೋರಾಟದ ಕಾವನ್ನು ತಣಿಸುವ ಇಚ್ಛೆಯಿಂದ ಸರ್ಕಾರ ನ್ಯಾ. ಹೆಚ್.ಎನ್. ನಾಗಮೋಹನದಾಸ್ ಅವರ ಆಯೋಗ ರಚಿಸಿತು. ಆಯೋಗ ಪರಿಶಿಷ್ಟ ವರ್ಗಗಳ ಶೈಕ್ಷಣಿಕ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಪರಾಮರ್ಶಿಸಿ ಜನಸಂಖ್ಯೆ ಸಹಿತ ಸರ್ಕಾರಕ್ಕೆ ವರದಿ ಸಲ್ಲಿಸಿತು. ಯಥಾಪ್ರಕಾರ ಸರ್ಕಾರದ ದಿವ್ಯ ನಿರ್ಲಕ್ಷದಿಂದ ವರದಿ ಸಮಾಜ ಕಲ್ಯಾಣ ಇಲಾಖೆಯ ಕಪಾಟಿನಲ್ಲಿ ಕೊಳೆಯುವಂತಾಯಿತು.  

ಸಮುದಾಯದ ಅಚಲ ಹೋರಾಟದಿಂದ ತೀವ್ರ ಒತ್ತಡಕ್ಕೆ ಸಿಲುಕಿದ ಸರ್ಕಾರ ಆಯೋಗದ ವರದಿ ಅಧ್ಯಯನಕ್ಕಾಗಿ ಸಚಿವ ಸಂಪುಟದ ಉಪಸಮಿತಿ ರಚಿಸಿ ಯಥಾಸ್ಥಿತಿ ಕಾಲದೂಡುವ ತಂತ್ರಕ್ಕೆ ಶರಣಾಯಿತು. ಸರ್ಕಾರದ ಈ (ಕು)ತಂತ್ರವನ್ನು ಅರಿತ  ಶ್ರೀ ಪ್ರಸನ್ನಾನಂದ ಸ್ವಾಮಿಗಳು ಬೆಂಗಳೂರಿನ ಸ್ವಾತಂತ್ರ್ಯೋಧ್ಯಾನದ ಆವರಣದಲ್ಲಿ ಅನಿರ್ದಿಷ್ಟ ಕಾಲ ಅಹೋರಾತ್ರಿ ಧರಣಿ ಹಮ್ಮಿಕೊಂಡರು. ಧರಣಿಯಲ್ಲಿ ನಿತ್ಯ ನೂರಾರು ಮಂದಿ ಭಾಗವಹಿಸಿ ಸ್ವಾಮೀಜಿಗಳಿಗೆ ಅಖಂಡ ಬೆಂಬಲ ಸೂಚಿಸತೊಡಗಿದರು. ಸ್ವಾಮೀಜಿಗಳ ಧರಣಿ ಯಶಸ್ಸಿನತ್ತ ಸಾಗತೊಡಗಿತು. ಈ ನಿಟ್ಟಿನಲ್ಲಿ ಸರ್ಕಾರ ಆತಂಕಿತವಾಯಿತು. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ಧರಣಿ ಸ್ಥಳಕ್ಕೆ ಭೇಟಿ ನೀಡಿ ಧರಣಿ ಅಂತ್ಯಗೊಳಿಸಲು ಇನ್ನಿಲ್ಲದ ಪ್ರಯತ್ನ ಮಾಡಿದರು. ಬೇಡಿಕೆ ಈಡೇರಿಸುವುದಾಗಿ ಆಶ್ವಾಸನೆ ಇತ್ತರೂ ಸ್ವಾಮೀಜಿಗಳು ಧರಣಿ ನಿಲ್ಲಿಸದೆ ಎಂದಿನಂತೆ ಮುಂದುವರಿಸಿದರು. ಆದೇಶ ಕೈಗೆ ಸಿಗುವವರೆಗೂ ಧರಣಿಯನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಕಟು ಮಾತಿನಲ್ಲಿ ಎಚ್ಚರಿಸಿದರು.

ಇದನ್ನು ಓದಿದ್ದೀರಾ?: ಒಬ್ಬ ರಾವಣ ಮತ್ತೊಬ್ಬ ರಾವಣನ ಮೇಲೆ ಬಾಣ ಬಿಡುವ ನಾಟಕ: ಮೋದಿ ವಿರುದ್ಧ ಧೃವ್ ರಾಠಿ ವ್ಯಂಗ್ಯ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬೇಡಿಕೆಗಳ ವಿಷಯದಲ್ಲಿ ಕಡೆಗೂ ಎಚ್ಚೆತ್ತು ಮುಂದೆ ಬರುವ ಸಾರ್ವತ್ರಿಕ ಚುನಾವಣೆಯನ್ನು ಎದುರಿಸಬೇಕಾಗಿರುವುದನ್ನು ಗಮನದಲ್ಲಿರಿಸಿಕೊಂಡು ಕ್ರಮ ತೆಗೆದುಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಸರ್ಕಾರಕ್ಕೆ ಉಂಟಾಯಿತು.

ಕೋಟಾ ಹೆಚ್ಚಿಸಿದ ಅಧ್ಯಾದೇಶ ಜಾರಿಗೆ

ವಾಲ್ಮೀಕಿ ಸ್ವಾಮೀಜಿಗಳ ನಿರಂತರ ಧರಣಿ ತೀವ್ರತೆ ಪಡೆದುಕೊಳ್ಳುತ್ತಾ ಹೋಗುತ್ತಿದ್ದಂತೆ ಸರ್ಕಾರ ಕೈಕಟ್ಟಿ ಕುಳಿತುಕೊಳ್ಳಲಾಗಲಿಲ್ಲ. ಈ ನಿಟ್ಟಿನಲ್ಲಿ ಮಂತ್ರಿ ಬಿ. ಶ್ರೀರಾಮುಲು ಅವರ ನೇತೃತ್ವದಲ್ಲಿ ಸಚಿವ ಸಂಪುಟದ ಉಪಸಮಿತಿಯೊಂದನ್ನು ರಚಿಸಲಾಯಿತು. ಸಮಿತಿ ವರದಿ ಕೊಟ್ಟಿತೋ ಅಥವಾ ಇಲ್ಲವೋ ಎಂಬುದು ತಿಳಿದಿಲ್ಲ. ಕಡೆಗೂ “ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ ಅಧ್ಯಾದೇಶ, 2022″(ordinance) ಅನ್ನು ಅಕ್ಟೋಬರ್ 23, 2022ರಂದು ಸರ್ಕಾರ ಹೊರಡಿಸಿತು(ಮುಂದೆ ಕಾಯ್ದೆಯಾಗಿ ಬದಲಾಗುವುದು). ಇದರಡಿಯಲ್ಲಿ ಪ್ರತ್ಯೇಕವಾಗಿ ಶಿಕ್ಷಣ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿಗಳು ಅಥವಾ ಹುದ್ದೆಗಳಲ್ಲಿನ ಮೀಸಲಾತಿ ಬಗ್ಗೆ ಡಿಸೆಂಬರ್ 28, 2022ರಂದು ಸರ್ಕಾರ ಆದೇಶ ಹೊರಡಿಸಿ ಮೀಸಲಾತಿ ಪ್ರಮಾಣವನ್ನು ಪರಿಶಿಷ್ಟ ಜಾತಿಗೆ ಶೇ.15 ರಿಂದ ಶೇ.17ಕ್ಕೆ ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ.3ರಿಂದ ಶೇ.7ಕ್ಕೆ ಹೆಚ್ಚಿಸಲಾಯಿತು. ಸರ್ಕಾರದ ಈ ಆದೇಶದಿಂದ ಒಟ್ಟಾರೆ ಮೀಸಲಾತಿ ಹಿಂದುಳಿದ ವರ್ಗಗಳನ್ನೂ ಒಳಗೊಂಡಂತೆ ಶೇ.56ಕ್ಕೆ ಹೆಚ್ಚಳವಾಯಿತು.

ಮೀಸಲಾತಿ 3

ಈ ಸಂದರ್ಭದಲ್ಲಿ ಸಹಜವಾಗಿ ಒಂದು ಪ್ರಶ್ನೆ ಉದ್ಭವಿಸದಿರದು. ಒಟ್ಟಾರೆ ಮೀಸಲಾತಿ ಶೇ.50ರ ಮಿತಿಯನ್ನು ಮೀರಬಾರದೆಂದು, ಸರ್ವೋಚ್ಚ ನ್ಯಾಯಾಲಯ ಕಟ್ಟಪ್ಪಣೆ ವಿಧಿಸಿದ್ದಾಗ್ಯೂ ಸರ್ಕಾರ ಲಕ್ಷ್ಯ ವಹಿಸಲಿಲ್ಲ ಏಕೆ? ಮತ್ತು ಆಯೋಗವೂ ಕೂಡ ತನ್ನ ವರದಿಯಲ್ಲಿ ಮೀಸಲಾತಿ ಮಿತಿಯನ್ನು ಸ್ಪಷ್ಟಪಡಿಸಿರುವ ಹಾಗೆ ಕಾಣಬರುವುದಿಲ್ಲ. ಇದು ಸರ್ಕಾರ ಪಕ್ಕಾ ರಾಜಕಾರಣದ ಮಗ್ಗುಲಲ್ಲಿ ನಿಂತು ತೆಗೆದುಕೊಂಡ ತೀರ್ಮಾನವೆಂಬುದನ್ನು ಸಾಕ್ಷ್ಯಾಧಾರ ಸಹಿತ ಸಾಬೀತುಪಡಿಸಬೇಕಾದ ಅವಶ್ಯಕತೆ ಇಲ್ಲ. ಸರ್ಕಾರ ಮೀಸಲಾತಿ ಕೋಟಾ ಶೇ.50ರಷ್ಟು ಮೀರಿ ಹೋಗಿರುವ ಕಾರಣ ಕಾನೂನು ಭದ್ರತೆಗಾಗಿ ರೂಪಿಸಿರುವ ಕಾಯ್ದೆಯನ್ನು ಸಂವಿಧಾನದ 9ನೆಯ ಅನುಸೂಚಿಗೆ ಸೇರಿಸಲು ಮುಂದಿನ ಕ್ರಮಕ್ಕಾಗಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿರುವುದಾಗಿ ಹೇಳಿಕೊಂಡಿತ್ತು. ಕೇಂದ್ರ ಸರ್ಕಾರಕ್ಕೂ ತಾಂತ್ರಿಕ ಮತ್ತು ರಾಜಕೀಯ ಕಾರಣದಿಂದ ಇದು ತ್ರಾಸದಾಯಕ ಕೆಲಸವಾಗಿರುವುದರಿಂದ ಸಕಾರಾತ್ಮಕ ಕ್ರಮವನ್ನು ನಿರೀಕ್ಷಿಸಲಾಗದು.  

ಕರ್ನಾಟಕ ಲೋಕಸೇವಾ ಆಯೋಗದ ಅಧಿಸೂಚನೆಗಳು

ಕರ್ನಾಟಕ ಲೋಕಸೇವಾ ಆಯೋಗ ಸರ್ಕಾರದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಪತ್ರಾಂಕಿತ ಅಧಿಕಾರಿಗಳು ಮತ್ತು ಬೆಂಗಳೂರು ಮಹಾನಗರ ಪಾಲಿಕೆಗಾಗಿ ಸಹಾಯಕ ಇಂಜಿನಿಯರ್ ಹುದ್ದೆಗಳನ್ನು ನೇಮಕ ಮಾಡುವ ದಿಸೆಯಲ್ಲಿ ಪ್ರತ್ಯೇಕವಾಗಿ ಎರಡು ಅಧಿಸೂಚನೆಗಳನ್ನು ಹೊರಡಿಸುವುದು. ಡಿಸೆಂಬರ್ 28, 2022ರ ಆದೇಶದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಹೆಚ್ಚಿಸಿದ ಮೀಸಲಾತಿ ಅನ್ವಯ ಅಧಿಸೂಚಿಸಲಾಗಿತ್ತು.

ಇದನ್ನು ಓದಿದ್ದೀರಾ?: ಉತ್ತರ ಕನ್ನಡ: ಹಾಲಕ್ಕಿಗಳ ಹಾಡು-ಪಾಡು ಮತ್ತು ಮರೀಚಿಕೆಯಾದ ಮೀಸಲಾತಿ

ಪತ್ರಾಂಕಿತ ಅಧಿಕಾರಿಯ ಹುದ್ದೆಗೆ ಅರ್ಜಿ ಸಲ್ಲಿಸಿದವರಲ್ಲಿ ಒಬ್ಬರು ಕರ್ನಾಟಕ ರಾಜ್ಯ ಮೇಲ್ಮನವಿ ಪ್ರಾಧಿಕಾರದಲ್ಲಿ ಪ್ರಶ್ನಿಸಿ ಅಧಿಸೂಚನೆಯನ್ನು ರದ್ದುಗೊಳಿಸುವಲ್ಲಿ ಸಫಲರಾಗುತ್ತಾರೆ. ಸಹಾಯಕ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದ ಕೆಲವರು ಮೀಸಲಾತಿ ಕೋಟಾವನ್ನು ಪ್ರಶ್ನಿಸಿ ನೇರವಾಗಿ ಉಚ್ಚ ನ್ಯಾಯಾಲಯದಲ್ಲಿ ರಿಟ್ ಸಲ್ಲಿಸುತ್ತಾರೆ. ಸರ್ಕಾರವೂ ಕೂಡ ಮೇಲ್ಮನವಿ ಪ್ರಾಧಿಕಾರದ ಆದೇಶವನ್ನು ರಾಜಕೀಯ ಕಾರಣಗಳಿಗಾಗಿ ಅನ್ಯಮಾರ್ಗವಿಲ್ಲದೆ ಪ್ರಶ್ನಿಸಬೇಕಾಗುತ್ತದೆ. ಆ ನಿಮಿತ್ತ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುತ್ತದೆ. ಉಚ್ಚ ನ್ಯಾಯಾಲಯ ಎರಡೂ ಪ್ರಕರಣಗಳನ್ನು ಒಟ್ಟುಗೂಡಿಸಿ ವಿಚಾರಣೆಯನ್ನು ಕೈಗೆತ್ತಿಕೊಳ್ಳುತ್ತದೆ.

ಉಚ್ಚ ನ್ಯಾಯಾಲಯದ ಅಂತಿಮ ತೀರ್ಪು

 ನ್ಯಾಯಾಲಯವು ಉಭಯ ಪಕ್ಷಗಾರರ ವಾದಗಳನ್ನು ವಿಮರ್ಶಿಸಿ ಇದೇ ಅಕ್ಟೋಬರ್ 12ರಂದು ರಿಟ್ ಅರ್ಜಿದಾರರ ಮನವಿಗಳನ್ನು ಪುರಸ್ಕರಿಸಿ ಸರ್ಕಾರ ಹೊರಡಿಸಿದ್ದ ಡಿಸೆಂಬರ್ 28, 2022ರ ಆದೇಶವನ್ನು ರದ್ದುಗೊಳಿಸುತ್ತದೆ. ನ್ಯಾಯಾಲಯ ತನ್ನ ಅಂತಿಮ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯ ವಿಧಿಸಿದ್ದ ಗರಿಷ್ಠ ಮೀಸಲಾತಿ ಕೋಟಾ ಶೇ.50ರ ಮಿತಿಯನ್ನು ಸರ್ಕಾರ ಮೀರಿ ಕೋಟಾ ನಿಗದಿಪಡಿಸಿರುವುದು ಸರ್ವೋಚ್ಛ ನ್ಯಾಯಾಲಯದ ತೀರ್ಪಿಗೆ ವಿರುದ್ಧವಾಗಿದೆ ಎಂದು ಸಮರ್ಥಿಸಿಕೊಂಡಿದೆ. ತನ್ನ ಸಮರ್ಥನೆಗೆ ಸರ್ವೋಚ್ಚ ನ್ಯಾಯಾಲಯದ ಕೆಲವು ಸಮುಚಿತ ತೀರ್ಪುಗಳನ್ನು ಉಲ್ಲೇಖಿಸಿದೆ. ಇಂದಿರಾ ಸಹಾನಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಆಜ್ಞಾಪಿಸಿರುವಂತೆ, ಒಟ್ಟಾರೆ ಮೀಸಲಾತಿ ಶೇ. 50ರಷ್ಟನ್ನು ಮೀರಬಾರದೆಂದು, ಒಂದು ವೇಳೆ, ಗರಿಷ್ಠ ಮಿತಿಯನ್ನು ಮೀರುವ ಸಂಭವ ಅನಿವಾರ್ಯ ಎಂದಾದರೆ, ಅದು ಅಸಾಧಾರಣ ಸಂದರ್ಭವಾಗಿರಬೇಕು. ಆದರೆ ಸರ್ಕಾರ ಮೀಸಲಾತಿ ಕೋಟಾ ಮಿತಿಯನ್ನು ಶೇ.56ಕ್ಕೆ ಹೆಚ್ಚಿಸಲು ಇರುವ ಅಸಾಧಾರಣ ಸಂದರ್ಭವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ವಿಫಲವಾಗಿದೆ ಎಂದು ತನ್ನ ತೀರ್ಪಿನಲ್ಲಿ ಹೇಳಿದೆ. ಸಂವಿಧಾನದ ವಿಧಿ 338(9)ರ ಅನ್ವಯ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳಿಗೆ ಸಂಬಂಧಿಸಿದಂತೆ, ಸರ್ಕಾರ ಪ್ರಮುಖ ನೀತಿ-ನಿರ್ಧಾರದ ವಿಷಯದಲ್ಲಿ ರಾಷ್ಟ್ರೀಯ ಆಯೋಗಗಳ ಸಲಹೆಗಳನ್ನು ಪಡೆದುಕೊಳ್ಳದಿರುವುದೂ ಸಹ ಸಂವಿಧಾನ ವಿರೋಧಿ ಎಂದು ಅಭಿಪ್ರಾಯಿಸಿ ಅಂತಿಮವಾಗಿ ಹೀಗೆ ಹೇಳಿದೆ- ಕಾಯ್ದೆಯ ಸೆಕ್ಷನ್ 3ರಲ್ಲಿ ಒಟ್ಟು ಮೀಸಲಾತಿಯು ಶೇಕಡ 50ರ ಮಿತಿಯನ್ನು ಮೀರಿರುವುದು ಸಂವಿಧಾನದ 14 ಮತ್ತು 15ನೇವಿಧಿಗಳನ್ನು  ಉಲ್ಲಂಘಿಸಿದೆಯಾದ್ದರಿಂದ ಕಾಯ್ದೆಯನ್ನು ರದ್ದುಗೊಳಿಸಿದೆ.  

ಅನುಸೂಚಿ 9 ಹೇಳುವುದೇನು?

ಸರ್ಕಾರ ಜಾರಿಗೆ ತಂದ ಡಿಸೆಂಬರ್ 28, 2022ರ ಕಾಯ್ದೆಯನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿತ್ತು ಎಂಬುದು ವರದಿಯಾಗಿತ್ತು. ಆ ಪ್ರಕಾರ ಕರ್ನಾಟಕ ಹೊರಡಿಸಿದ ಈ ಕಾಯ್ದೆಯನ್ನು ಅನುಸೂಚಿ 9ಕ್ಕೆ ಸೇರಿಸಲು ಸಾಧ್ಯವೇ? ಎಂಬ ಪ್ರಶ್ನೆ ಉದ್ಭವಿಸದಿರದು. ಈ ವಿಷಯದಲ್ಲಿ ಅನುಸೂಚಿ 9ಕ್ಕೆ ಸೇರಿಸಲು ಇರುವ ಕಾರಣವನ್ನು ಅವಲೋಕಿಸುವುದು ಸೂಕ್ತ.

ಭೂಸುಧಾರಣೆ ಕಾಯ್ದೆಗಳನ್ನು ನ್ಯಾಯಾಲಯಗಳ ವಿಚಾರಣೆಯಿಂದ ಹೊರಗಿಡಲು, ಸಂವಿಧಾನಕ್ಕೆ ತಂದ ಮೊದಲನೇ ತಿದ್ದುಪಡಿಯಲ್ಲಿ ಅನುಸೂಚಿ 9 ಅನ್ನು ಅನುಸೂಚಿಗಳ ಪಟ್ಟಿಯಲ್ಲಿ ಸೇರಿಸಲಾಯಿತು. ಭೂಸುಧಾರಣೆ ಕಾಯ್ದೆಗಳನ್ನು ಹೊರತುಪಡಿಸಿ ಯಾವುದೇ ಕಾಯ್ದೆಗಳನ್ನು 9ನೇ ಅನುಸೂಚಿಯಲ್ಲಿ ಸೇರಿಸಲು ಬರುವುದಿಲ್ಲ. ತಮಿಳುನಾಡಿನ ಮೀಸಲಾತಿ ಕಾಯ್ದೆಯನ್ನು ಅಂದಿನ ಕೇಂದ್ರ ಸರ್ಕಾರ ತಮಿಳುನಾಡಿನ ಒತ್ತಡಕ್ಕೆ ಮಣಿದು ಸೇರಿಸಿದೆ ಎಂಬುದು ಗಮನಾರ್ಹ. ಆ ಪ್ರಕರಣ ಇಂದಿಗೂ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದೆ ಎಂಬುದನ್ನೂ ಕೂಡ ಲಕ್ಷಿಸಬೇಕು.

ಮೀಸಲಾತಿ1

ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ

ಕರ್ನಾಟಕ ಸರ್ಕಾರವೇನೊ ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಿದೆ ಎಂದು ವರದಿಯಾಗಿದೆ. ಆದರೆ, ಅನೇಕ ರಾಜ್ಯಗಳು ಮೀಸಲಾತಿಯ ಗರಿಷ್ಠ ಮಿತಿ ಮೀರಿ ಹೋಗಿರುವುದನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಸಮರ್ಥಿಸಿಕೊಳ್ಳಲು ವಿಫಲವಾಗಿವೆ. ಹೀಗಿರುವಲ್ಲಿ ಕರ್ನಾಟಕ ಸರ್ಕಾರ ಮೀಸಲಾತಿ ಕೋಟಾ ಹೆಚ್ಚಿಸುವಲ್ಲಿ ಇರುವ ಅಸಾಧಾರಣ ಸನ್ನಿವೇಶವನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ವಿವರಿಸಬೇಕಾಗುತ್ತದೆ.

ಸರ್ವೋಚ್ಚ ನ್ಯಾಯಾಲಯದಲ್ಲಿ ಸರ್ಕಾರದ ನಿಲುವು

ಉಚ್ಚ ನ್ಯಾಯಾಲಯದಲ್ಲಿ ವಾದ ಏನೇ ಮಂಡಿಸಿರಲಿ ಅಥವಾ ತೀರ್ಪು ಏನೇ ಬಂದಿರಲಿ, ಸರ್ವೋಚ್ಚ ನ್ಯಾಯಾಲಯದಲ್ಲಿ ಮಾತ್ರ ವಾದ ತರ್ಕಬದ್ಧವಾಗಿರಬೇಕು. ಮೀಸಲಾತಿಯ ಪ್ರಶ್ನೆಯನ್ನು ಕೇವಲ ಶೇಕಡವಾರು ಅಂಕಿ ಅಂಶಗಳ ಲೆಕ್ಕಾಚಾರಕ್ಕೆ ಸೀಮಿತಗೊಳಿಸಬಾರದು. ಅದರ ಐತಿಹಾಸಿಕ ಅನ್ಯಾಯ, ಸಾಮಾಜಿಕ ಅಸಮಾನತೆ, ಶೈಕ್ಷಣಿಕ ಅವಕಾಶಗಳ ಕೊರತೆ ಮತ್ತು ಆಡಳಿತದಲ್ಲಿ ಸಮರ್ಪಕ ಪ್ರಾತಿನಿಧ್ಯ ಪಡೆಯಬೇಕೆಂಬ ಸಮುದಾಯಗಳ ನ್ಯಾಯ ಸಮ್ಮತ ಆಕಾಂಕ್ಷೆಗಳಿವೆ. ಅದೇ ಸಮಯದಲ್ಲಿ ಸಾಮಾಜಿಕ ನ್ಯಾಯವನ್ನು ಸಾಧಿಸುವ ಸಾಧನಗಳು ಸಂವಿಧಾನಾತ್ಮಕವಾಗಿ ಬಲಿಷ್ಠವಾಗಿರಬೇಕು. ಆದ್ದರಿಂದ ಕರ್ನಾಟಕ ಸರ್ಕಾರದ ಮುಂದಿರುವ ಸವಾಲು ಮೀಸಲಾತಿ ಹೆಚ್ಚಳವನ್ನು ಸಮರ್ಥಿಸುವುದಷ್ಟೇ ಅಲ್ಲ; ಆ ಹೆಚ್ಚಳಕ್ಕೆ ಅಗತ್ಯವಾದ ಕಾನೂನುಬದ್ಧ ಮತ್ತು ಸಾಕ್ಷಾಧಾರಿತ ನೆಲೆಯನ್ನು ಸರ್ವೋಚ್ಚ ನ್ಯಾಯಾಲಯದ ಮುಂದೆ ಪರಿಣಾಮಕಾರಿಯಾಗಿ ಮಂಡಿಸುವುದೂ ಆಗಿದೆ. ಸರ್ವೋಚ್ಚ ನ್ಯಾಯಾಲಯದ ತೀರ್ಪು ಏನು ಎಂಬುದನ್ನು ಊಹಿಸಲು ಆಗದು. ಆದುದರಿಂದ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಪರ್ಯಾಯವಾಗಿ ಪರಿಹಾರ ಕಂಡುಕೊಳ್ಳುವ ಅವಶ್ಯಕತೆ ಇದೆ.

ಸಂಕಷ್ಟಕ್ಕೆ ಪರಿಹಾರ ಇದೆಯೇ?

ಇದೆ. ಅದು ಸರಳವಲ್ಲದಿದ್ದರೂ ಅಸಾಧ್ಯವೇನಲ್ಲ. ಪರಿಹಾರವನ್ನು ಸಾಧ್ಯವಾಗಿಸುವ ದಿಸೆಯಲ್ಲಿ ವಿಮರ್ಶಿಸೋಣ. ಸದ್ಯ ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳಿಗೆ ಅನ್ವಯಿಸುವಂತೆ ಮೀಸಲಾತಿ ಜಾರಿ ಇರುವುದು 1990ರಲ್ಲಿ ಸಲ್ಲಿಕೆಯಾದ ನ್ಯಾ. ಒ. ಚಿನ್ನಪ್ಪ ರೆಡ್ಡಿ ವರದಿ ಆಧರಿಸಿದುದಾಗಿದೆ. ಅಂದಿದ್ದ ಸರ್ಕಾರಗಳು ಸುಮಾರು 4 ವರ್ಷಗಳ ಕಾಲ ವರದಿಯನ್ನು ಶೈತ್ಯಾಗಾರದಲ್ಲಿಟ್ಟು ಕಾಲ ತಳ್ಳುತ್ತಿದ್ದವು. 1994ರ ಪ್ರಾರಂಭಿಕ ತಿಂಗಳುಗಳಲ್ಲಿ ಅಂದಿನ ಸರ್ಕಾರಕ್ಕೆ ವರದಿ ಜಾರಿ ಮಾಡಲು ಪೂರಕವಾದ ಸನ್ನಿವೇಶ ಕಂಡುಬಂದಿರಬಹುದು. ಹೌದು, ಆ ನಿಟ್ಟಿನಲ್ಲಿ ಸರ್ಕಾರ ಮುಂದಡಿ ಇಡಲು ಪ್ರಯತ್ನಿಸುವುದು. ಅಷ್ಟರಲ್ಲಿ ಜಾಗೃತಗೊಂಡ ಒಕ್ಕಲಿಗ ಸಮುದಾಯದ ಮುಖಂಡರು ಹಠಾತ್ತನೆ ಹೋರಾಟಕ್ಕಿಳಿಯುತ್ತಾರೆ. ಬಲಾಢ್ಯ ಸಮುದಾಯವೊಂದರ ಹೋರಾಟ ತೀಕ್ಷ್ಣ ಸ್ವರೂಪ ಪಡೆದುಕೊಳ್ಳುತ್ತದೆ. ಅಂದಿದ್ದ ಮುಖ್ಯಮಂತ್ರಿಯ ಜಂಘಾಬಲವೇ ಉಡುಗಿ ಹೋಗುತ್ತದೆ.

ಸರ್ಕಾರದ ತೀರ್ಮಾನ

 ಏಪ್ರಿಲ್ 20 ,1994ರಂದು ಆಯೋಗ ಹಿಂದುಳಿದ ವರ್ಗ ಎಂದು ಪರಿಗಣಿಸದ ಜಾತಿಗಳನ್ನೂ ಒಳಗೊಂಡಂತೆ 3 ಪ್ರವರ್ಗಗಳಲ್ಲಿ ವರ್ಗೀಕರಿಸಿ ಮೀಸಲಾತಿಯನ್ನು ಜಾರಿಗೆ ತರುತ್ತದೆ. ಪರಿಶಿಷ್ಟ ವರ್ಗಗಳೂ ಸೇರಿದಂತೆ ಒಟ್ಟಾರೆ ಮೀಸಲಾತಿಗೆ ಒಳಪಟ್ಟ ಜಾತಿಗಳು ಸರಿ ಸುಮಾರು ಶೇ. 96ರಷ್ಟಾಗುತ್ತವೆ. ಮೀಸಲಾತಿಗೆ ಒಳಪಡದ ಜಾತಿಗಳು ಕೇವಲ ಶೇ.4ರಷ್ಟಿವೆ. ಶೇ.4ರಷ್ಟಿರುವ ಜಾತಿಗಳಿಗೆ ಶೇಕಡಾವಾರು ಮೀಸಲಾತಿ ನಿಗದಿಪಡಿಸುವುದು ಕಷ್ಟಸಾಧ್ಯ ಎಂಬ ಕಾರಣಕ್ಕೆ ಇಡಬ್ಲ್ಯೂಎಸ್ ಕರ್ನಾಟಕದಲ್ಲಿ ಜಾರಿಗೆ ಬಂದಿಲ್ಲ.

ಇದನ್ನು ಓದಿದ್ದೀರಾ?: ಬೇಡ್ತಿ ನದಿ ತಿರುವು ಯೋಜನೆಯೂ, ಬೊಮ್ಮಾಯಿ-ಕಾಗೇರಿ ಪೀಕಲಾಟವೂ

ನ್ಯಾಯಮೂರ್ತಿ ಚಿನ್ನಪ್ಪ ರೆಡ್ಡಿ ವರದಿ ಜಾರಿ ಸಂದರ್ಭದಲ್ಲಿ ಸರ್ಕಾರದ ಹುದ್ದೆಯಲ್ಲಿ ಸಾಕಷ್ಟು ಪ್ರಾತಿನಿಧ್ಯ ಹೊಂದಿದ್ದರೂ ಮತ್ತು ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿಲ್ಲದಿರುವ ಜಾತಿಗಳನ್ನು ವೈಜ್ಞಾನಿಕ ಮಾನದಂಡ ಅನುಸರಿಸಿ ವರದಿಯಿಂದ ಕೈ ಬಿಡಲಾಗಿದ್ದ ಜಾತಿಗಳನ್ನು ಪ್ರಸ್ತುತ ಮೀಸಲಾತಿ ಪಟ್ಟಿಯಿಂದ ಹೊರಗಿಡುವುದು.  ಹಾಗೇ ಕೈ ಬಿಡಲು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಕಾಯ್ದೆ 1995 ಸೆಕ್ಷನ್ 11ರ ಅನ್ವಯ ಹಿಂದುಳಿದ ವರ್ಗಗಳ ಆಯೋಗದಿಂದ ವರದಿ ಪಡೆಯುವುದು ಕಡ್ಡಾಯ. ಸದ್ಯ ಇವು ಪ್ರವರ್ಗ- 3a ಮತ್ತು 3b ಯಲ್ಲಿವೆ. ಇವುಗಳಲ್ಲಿ ಒಂದೆರಡು ಅರ್ಹ ಜಾತಿಗಳನ್ನು ಪ್ರವರ್ಗ- 2a ಗೆ ವರ್ಗಾಯಿಸಬಹುದು. ಹೀಗೆ ಹಿಂದುಳಿದ ವರ್ಗಗಳ ಪಟ್ಟಿಯಿಂದ ಕೈ ಬಿಟ್ಟ ಜಾತಿಗಳು ತಂತಾನೆ ಹೊಸದಾಗಿ ಸೃಜಿಸಿರುವ ಇಡಬ್ಲ್ಯೂಎಸ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳುತ್ತವೆ. (ಈ ಹಿಂದೆ ಪ್ರವರ್ಗ 2bಯಲ್ಲಿದ್ದ ಮುಸ್ಲಿಂ ಸಮುದಾಯವನ್ನು ಮರಳಿ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಬಹುದು.

ಮೀಸಲಾತಿ2

ಈ ಪ್ರಕ್ರಿಯೆಯಿಂದ ಪ್ರವರ್ಗ- 3a ಮತ್ತು3bಗೆ ಹಂಚಿಕೆಯಾಗಿರುವ ಶೇ.9ರಷ್ಟು ಕೋಟಾವನ್ನು ಈ ಕೆಳಕಂಡ ರೀತಿಯಲ್ಲಿ ಪುನರ್ ಹಂಚಿಕೆ ಮಾಡಬಹುದು. ಪರಿಶಿಷ್ಟ ಜಾತಿ- 17, ಪರಿಶಿಷ್ಟ ಪಂಗಡ- 7, ಪ್ರವರ್ಗ 1- 5, ಪ್ರವರ್ಗ 2a- 15 ಮತ್ತು 2b- 6 ಇಂತಾದರೆ ಒಟ್ಟು ಕೋಟಾ ಶೇಕಡ 50ರಷ್ಟನ್ನು ಮೀರುವುದಿಲ್ಲ. ಈ ಪ್ರಕ್ರಿಯೆಯಿಂದ ಮೀಸಲಾತಿಗೆ ಒಳಪಡದ ಸಮಸ್ತ ಜಾತಿಗಳೂ ಧಾರಾಳವಾಗಿ EWS ಪ್ರವರ್ಗದಲ್ಲಿ ಶೇ.10ರಷ್ಟು ಮೀಸಲಾತಿ ಪಡೆಯಲು ಅರ್ಹತೆ ಪಡೆದುಕೊಳ್ಳುತ್ತವೆ.

ಈ ಪ್ರಕ್ರಿಯೆಯನ್ನು ಭಾವನಾತ್ಮಕ ಹಿನ್ನೆಲೆಯಲ್ಲಿ ತೆಗೆದುಕೊಳ್ಳಬಾರದು. ಸರ್ಕಾರ ಮಾತ್ರ ಮುಕ್ತ ಮನಸ್ಸಿನಿಂದ ಈ ಮಾರ್ಗ ಅನುಸರಿಸುವ ಅವಶ್ಯಕತೆ ಇದೆ. ಇದನ್ನು ಅನುಸರಿಸಲು ಎಲ್ಲಾ ಜಾತಿ ವರ್ಗದವರೊಡನೆ ಮುಕ್ತ ಚರ್ಚೆ ಅತ್ಯಗತ್ಯ. ಮೀಸಲಾತಿ ಬಯಸುವ ಜಾತಿಗಳೆಲ್ಲವೂ ಕೂಡ ವರ್ತಮಾನದ ಸಾಮಾಜಿಕ ಪರಿಸ್ಥಿತಿ ಮತ್ತು ಕಾನೂನು ನಿಯಮಗಳನ್ನು ಸಾಮಾಜಿಕ ನ್ಯಾಯದ ಬೆಳಕಿನಲ್ಲಿ ಅಂತಃಕರಣ ಪೂರ್ವಕವಾಗಿ ಅರ್ಥ ಮಾಡಿಕೊಳ್ಳಬೇಕಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾದಾಗ ಮಾತ್ರ ಸಾಮಾಜಿಕ ನ್ಯಾಯವೆಂಬ ಗಿಡಗಂಟೆಗಳ ಕೊರಳೊಳಗೆ ನಳನಳಿಸುವ ಹೂವುಗಳು ಅರಳಲು ಸಾಧ್ಯ!

KN Lingappa
ಕೆ.ಎನ್. ಲಿಂಗಪ್ಪ
+ posts

ಲೇಖಕರು ನಿವೃತ್ತ ಕೆ.ಎ.ಎಸ್ ಅಧಿಕಾರಿ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯರು. ಮೀಸಲಾತಿ ಸಂಬಂಧಿತ ಪ್ರಶ್ನೆಗಳಿಗೆ ಸ್ಪಷ್ಟ ಚಿತ್ರಣ ಕೊಡಬಲ್ಲವರು. 'ಮೀಸಲಾತಿಯ ಒಳನೋಟ', 'ಮೀಸಲಾತಿಯ ಅಂತರಂಗ', 'ಮೀಸಲಾತಿಯ ಒಳ ಮುಖ' ಮತ್ತು 'ಮೀಸಲಾತಿಯ ಅಂತರಾಳ' ಅವರ ಕೃತಿಗಳು.

ಪೋಸ್ಟ್ ಹಂಚಿಕೊಳ್ಳಿ:

ಕೆ.ಎನ್. ಲಿಂಗಪ್ಪ
ಕೆ.ಎನ್. ಲಿಂಗಪ್ಪ
ಲೇಖಕರು ನಿವೃತ್ತ ಕೆ.ಎ.ಎಸ್ ಅಧಿಕಾರಿ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯರು. ಮೀಸಲಾತಿ ಸಂಬಂಧಿತ ಪ್ರಶ್ನೆಗಳಿಗೆ ಸ್ಪಷ್ಟ ಚಿತ್ರಣ ಕೊಡಬಲ್ಲವರು. 'ಮೀಸಲಾತಿಯ ಒಳನೋಟ', 'ಮೀಸಲಾತಿಯ ಅಂತರಂಗ', 'ಮೀಸಲಾತಿಯ ಒಳ ಮುಖ' ಮತ್ತು 'ಮೀಸಲಾತಿಯ ಅಂತರಾಳ' ಅವರ ಕೃತಿಗಳು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಸವಕಲ್ಯಾಣ | ಶರಣರ ಇತಿಹಾಸ ಉಳಿಸುವಲ್ಲಿ ಮಹಾರಾಷ್ಟ್ರದ ಕೊಡುಗೆ ಅಪಾರ: ಬಸವದೇವರು

ಶರಣ ಧರ್ಮ ಕರ್ನಾಟಕದಲ್ಲಿ ಹುಟ್ಟಿದರೂ, ಶರಣರ ಪರಂಪರೆ ಹಾಗೂ ವಚನ ಸಾಹಿತ್ಯವನ್ನು...

ಭಾಲ್ಕಿ | ಖಟಕ್ ಚಿಂಚೋಳಿಯಲ್ಲಿ ಧಮ್ಮಚಕ್ರ ಪ್ರವರ್ತನ ದಿನಾಚರಣೆ

ಭಾಲ್ಕಿ ತಾಲ್ಲೂಕಿನ ಖಟಕ್ ಚಿಂಚೋಳಿ ಗ್ರಾಮದಲ್ಲಿ 70ನೇ ಧಮ್ಮಚಕ್ರ ಪ್ರವರ್ತನ ದಿನ...

ದಸರಾ ಹಬ್ಬದಂದು 500ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳ ಪ್ರದರ್ಶಿಸಿದ ಉತ್ತರ ಪ್ರದೇಶದ ಶಾಸಕ

ಉತ್ತರ ಪ್ರದೇಶದ ಕುಂದಾ ಕ್ಷೇತ್ರದ 'ಜನಸತ್ತಾ ದಳ (ಲೋಕತಾಂತ್ರಿಕ)' ಪಕ್ಷದ ಪ್ರಭಾವಿ...