ಮತ ಎಣಿಕೆಗೂ ಮುನ್ನ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಬಿಜೆಪಿ ನಡುವೆ ಆರೋಪ ಪ್ರತ್ಯಾರೋಪಗಳು ಕೇಳಿಬರುತ್ತಿವೆ. ರಾಜ್ಯದ 293 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಇಂದು ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಲಿದೆ. ಈ ನಡುವೆ ಭಬಾನಿಪುರದಲ್ಲಿ ಬಿಜೆಪಿ ಏಜೆಂಟ್, ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿದೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕಣ್ಗಾವಲು ವ್ಯವಸ್ಥೆಗಳನ್ನು ಅಡ್ಡಿಪಡಿಸಲು ಬಿಜೆಪಿ ಉದ್ದೇಶಪೂರ್ವಕವಾಗಿ ಸ್ಟ್ರಾಂಗ್ ರೂಮ್‌ಗಳ ಬಳಿ ವಿದ್ಯುತ್ ಕಡಿತಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ಬಂಗಾಳ ಚುನಾವಣೆ | ಜಾತ್ಯತೀತ ಟಿಎಂಸಿ vs ಕೋಮುವಾದಿ ಬಿಜೆಪಿ: ಯಾರಿಗೆ ಒಲಿಯಲಿದೆ ಬಂಗಾಳ?
ಶ್ರೀರಾಮಪುರ, ಕೃಷ್ಣನಗರ, ಆಸ್ಗ್ರಾಮ್ ಮತ್ತು ಕೋಲ್ಕತ್ತಾದ ಕೆಲವು ಭಾಗಗಳು ಸೇರಿದಂತೆ ಅನೇಕ ಸ್ಥಳಗಳಲ್ಲಿ ವಿದ್ಯುತ್ ಕಡಿತವಾಗಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ ಎಂದು ಮಮತಾ ಬ್ಯಾನರ್ಜಿ ಎಕ್ಸ್ ಪೋಸ್ಟ್‌ನಲ್ಲಿ ದೂರಿದ್ದಾರೆ. ಹಾಗೆಯೇ ಸ್ಟ್ರಾಂಗ್ ರೂಮ್‌ಗಳಲ್ಲಿ ಇಡಲಾದ ಇವಿಎಂಗಳ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
“ಜಾಗರೂಕರಾಗಿರಿ. ರಾತ್ರಿಯಲ್ಲಿ ಎಚ್ಚರವಾಗಿರಿ. ದೂರುಗಳನ್ನು ದಾಖಲಿಸಿ. ಉದ್ದೇಶಪೂರ್ವಕವಾಗಿ ಲೋಡ್-ಶೆಡ್ಡಿಂಗ್ ಮಾಡಲಾಗುತ್ತಿದೆ ಎಂದು ನನಗೆ ವಿವಿಧ ಸ್ಥಳಗಳಿಂದ ವರದಿಗಳು ಬರುತ್ತಿವೆ. ಹೂಗ್ಲಿಯ ಸೆರಾಂಪೋರ್, ನಾಡಿಯಾದ ಕೃಷ್ಣನಗರ, ಬರ್ದ್ವಾನ್‌ನ ಆಸ್ಗ್ರಾಮ್ ಮತ್ತು ಕೋಲ್ಕತ್ತಾದ ಕ್ಷುದಿರಾಮ್ ಅನುಶಿಲನ್ ಕೇಂದ್ರದವರೆಗೆ, ಹಂತ ಹಂತವಾಗಿ ಲೋಡ್-ಶೆಡ್ಡಿಂಗ್ ಮಾಡಲಾಗುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ” ಎಂದಿದ್ದಾರೆ.
“ಸಿಸಿಟಿವಿ ಆಫ್ ಮಾಡಲಾಗುತ್ತಿದೆ ಮತ್ತು ವಾಹನಗಳು ಸ್ಟ್ರಾಂಗ್ ರೂಮ್‌ಗಳ ಒಳಗೆ ಮತ್ತು ಹೊರಗೆ ಸಂಚರಿಸುತ್ತಿವೆ. ನಾನು ಎಲ್ಲದರ ಮೇಲೆ ಕಣ್ಣಿಡಲು ರಾತ್ರಿಯಿಡೀ ಎಚ್ಚರವಾಗಿರುವಂತೆಯೇ, ನೀವು ಸಹ ರಾತ್ರಿಯಿಡೀ ಎಚ್ಚರವಾಗಿರಿ ಮತ್ತು ಸ್ಟ್ರಾಂಗ್ ರೂಮ್‌ಗಳಲ್ಲಿ ಜನರ ಮತಗಳನ್ನು ಕಾಪಾಡಿ ಎಂದು ನನ್ನ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡುತ್ತಿದ್ದೇನೆ” ಎಂದು ನಿನ್ನೆ ರಾತ್ರಿಯೇ ಎಕ್ಸ್‌ನಲ್ಲಿ ಬ್ಯಾನರ್ಜಿ ಪೋಸ್ಟ್ ಮಾಡಿದ್ದಾರೆ.
“ಎಲ್ಲಿಯಾದರೂ ಯಾವುದೇ ಅನುಮಾನಾಸ್ಪದ ವಾತಾವರಣ ಕಂಡುಬಂದರೆ ತಕ್ಷಣ ದೂರು ದಾಖಲಿಸಿ, ಸಿಸಿಟಿವಿ ಪರಿಶೀಲಿಸಲು ಒತ್ತಡ ಹೇರಿ. ಇದೆಲ್ಲವನ್ನೂ ಬಿಜೆಪಿಯ ಆಜ್ಞೆಯ ಮೇರೆಗೆ ಮಾಡಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.
ಈ ನಡುವೆ ಇಂದು ಮುಂಜಾನೆ ಭಬಾನಿಪುರ ವಿಧಾನಸಭಾ ಕ್ಷೇತ್ರದ ಸಖಾವತ್ ಸ್ಮಾರಕ ಶಾಲೆಯ ಕೌಂಟರ್ ಕೇಂದ್ರದ ಹೊರಗೆ ಟಿಎಂಸಿ ಮತ್ತು ಬಿಜೆಪಿಯ ಎಣಿಕೆ ಏಜೆಂಟ್‌ಗಳ ನಡುವೆ ಮಾತಿನ ಚಕಮಕಿ ನಡೆದಿದೆ.




