ತಮಿಳುನಾಡು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಅವರು ಕೇಂದ್ರ ಸರ್ಕಾರದ ವಿಕ್ಷಿತ್ ಭಾರತ್ ಗ್ಯಾರಂಟಿ ಯೋಜನೆ (ವಿಬಿ-ಜಿ ರಾಮ್ ಜಿ) ಯೋಜನೆಯನ್ನು ವಿರೋಧಿಸಿದ್ದು, ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಈ ಹೊಸ ಬದಲಾವಣೆಯು ರಾಜ್ಯದ ಮೇಲೆ 5,000 ಕೋಟಿ ರೂ.ಗಳಿಗೂ ಹೆಚ್ಚು ಹೆಚ್ಚುವರಿ ಆರ್ಥಿಕ ಹೊರೆಯನ್ನು ಹೇರುತ್ತದೆ. ಇದು ಹಲವು ಸವಾಲುಗಳನ್ನು ಹೊಂದಿದೆ ಎಂದು ವಿಜಯ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ವಿಬಿ-ಜಿ ರಾಮ್ ಜಿ ಕಾಯ್ದೆ 2025ರಲ್ಲಿ ಹಲವು ನಿಬಂಧನೆಗಳನ್ನು ಸಡಿಲಿಕೆ ಮತ್ತು ಬದಲಾವಣೆ ಮಾಡುವ ಅಗತ್ಯವಿದೆ. ಈ ಬದಲಾವಣೆಯ ಹೊರತು ಯೋಜನೆಯ ಸುಗಮ ಮತ್ತು ಪರಿಣಾಮಕಾರಿ ಅನುಷ್ಠಾನ ಸಾಧ್ಯವಿಲ್ಲ. ಗ್ರಾಮೀಣ ಉದ್ಯೋಗ ಕಾರ್ಯಕ್ರಮದ ಮೇಲೆ ಅವಲಂಬಿತವಾಗಿರುವ ಗ್ರಾಮೀಣ ಜನರ ಮೇಲೆ ಇದು ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿಯನ್ನು ಭೇಟಿಯಾದ ತಮಿಳು ಸಿಎಂ ವಿಜಯ್; ಮೇಕೆದಾಟು ಯೋಜನೆ ಅನುಮತಿಸದಂತೆ ಒತ್ತಾಯ
ಹಾಗೆಯೇ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ‘ಮಹಾತ್ಮಾ ಗಾಂಧಿ’ ಅವರ ಹೆಸರನ್ನು ಯಥಾವತ್ತಾಗಿ ಉಳಿಸಿಕೊಳ್ಳಬೇಕು ಎಂದೂ ಸಿಎಂ ವಿಜಯ್ ಪತ್ರದಲ್ಲಿ ಪ್ರತ್ಯೇಕವಾಗಿ ವಿನಂತಿಸಿದ್ದಾರೆ. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಗಾಂಧೀಜಿಯವರ ಪರಂಪರೆ ಮತ್ತು ಸಾರ್ವಜನಿಕ ನಂಬಿಕೆಯೊಂದಿಗೆ ಬೆರೆತುಹೋಗಿದೆ. ಆದ್ದರಿಂದ ಅವರ ಹೆಸರನ್ನು ಯೋಜನೆಯಲ್ಲಿ ಯಥಾವತ್ತಾಗಿ ಉಳಿಸಬೇಕು ಎಂದು ಮನವಿ ಮಾಡಿದ್ದಾರೆ.
ಇನ್ನು ಈ ಯೋಜನೆಯ ನಿಧಿ ಹಂಚಿಕೆಯನ್ನು ಉಲ್ಲೇಖಿಸಿದ ವಿಜಯ್, ಪ್ರಸ್ತುತ ಕೇಂದ್ರ ಮತ್ತು ರಾಜ್ಯದ ನಡುವೆ 60:40 ಅನುಪಾತವನ್ನು ಕಡ್ಡಾಯಗೊಳಿಸಲಾಗಿದೆ. ಆದರೆ MGNREGS (ಮನರೇಗಾ) ಎರಡು ದಶಕಗಳಿಂದ ವಿಭಿನ್ನ ರಚನೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಈ ಹಠಾತ್ ಬದಲಾವಣೆಯು ರಾಜ್ಯ ಖಜಾನೆಯ ಮೇಲೆ ಒತ್ತಡವನ್ನುಂಟು ಮಾಡುತ್ತದೆ. ಇದರಿಂದಾಗಿ ಉದ್ಯೋಗದ ದಿನಗಳೂ ಕಡಿಮೆಯಾಗಬಹುದು ಅಥವಾ ಇತರ ಅಗತ್ಯ ಕಲ್ಯಾಣ ಯೋಜನೆಗಳಿಗೆ ಹಣ ಇಲ್ಲದಂತಾಗಬಹುದು ಎಂದು ವಿಜಯ್ ಆತಂಕ ವ್ಯಕ್ತಪಡಿಸಿದ್ದಾರೆ.
ಹಾಗೆಯೇ ವೇತನ ಮತ್ತು ಆಡಳಿತಾತ್ಮಕ ವೆಚ್ಚಗಳಿಗೆ ಕೇಂದ್ರ ಸರ್ಕಾರವೇ 100% ಧನಸಹಾಯ ನೀಡಬೇಕು. ಸಾಮಗ್ರಿ ವೆಚ್ಚವನ್ನು 75:25 ಅನುಪಾತದಲ್ಲಿ ಹಂಚಿಕೊಳ್ಳಬೇಕು ಎಂದು ಸಿಎಂ ವಿಜಯ್, ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಹೊಸದಾಗಿ ಅಧಿಕಾರ ಹಿಡಿದಿರುವ ಸಿಎಂ ವಿಜಯ್ ಅವರು ಕೇವಲ ಸಿನಿಮಾ ತಾರೆಯಾಗಿ ಉಳಿಯದೆ, ರಾಜ್ಯದ ಆರ್ಥಿಕ ಹಿತಾಸಕ್ತಿ ಹಾಗೂ ಒಕ್ಕೂಟ ವ್ಯವಸ್ಥೆಯ ಪರವಾಗಿ ಕೇಂದ್ರದ ವಿರುದ್ಧ ಮೊದಲ ಪ್ರಮುಖ ರಾಜಕೀಯ ರಾಜತಾಂತ್ರಿಕ ಸಮರ ಸಾರಿರುವಂತಿದೆ. ಹಾಗೆಯೇ ಯೋಜನೆಯ ಮೂಲ ಆಶಯವನ್ನು ಕಾಯ್ದುಕೊಳ್ಳಲು ಮಹಾತ್ಮ ಗಾಂಧೀಜಿಯವರ ಹೆಸರನ್ನೇ ಮುಂದುವರಿಸಬೇಕು ಎಂದು ಆಗ್ರಹಿಸುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಜಾತ್ಯತೀತ ಮತ್ತು ಸೌಹಾರ್ದಯುತ ರಾಜಕೀಯ ನಿಲುವನ್ನು ಸ್ಪಷ್ಟಪಡಿಸಿದ್ದಾರೆ ಎಂಬ ಚರ್ಚೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.




