ದೆಹಲಿಯಲ್ಲಿ ಅಕ್ಟೋಬರ್ 10ರಂದು ನಡೆಯಲಿರುವ ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿಭಟನೆಯ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಹಲವು ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ. ನವದೆಹಲಿ ಮತ್ತು ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣಗಳಿಗೆ ಬರುವ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ವರದಿಯಾಗಿದೆ.
ಅಕ್ಟೋಬರ್ 10ರ ಶನಿವಾರ ಬೆಳಗ್ಗೆ 4ರಿಂದ ಮಧ್ಯಾಹ್ನ 2ರವರೆಗೆ ಈ ನಿಲ್ದಾಣಗಳಿಗೆ ನಿಗದಿಯಾಗಿದ್ದ ಹಲವು ರೈಲುಗಳ ಸಂಚಾರ ರದ್ದಾಗಲಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಕ್ಟೋಬರ್ 9ರ ಮಧ್ಯಾಹ್ನ 2 ಗಂಟೆಯ ಬಳಿಕ ಮೂಲ ನಿಲ್ದಾಣಗಳಿಂದ ಹೊರಡಬೇಕಿದ್ದ ಮತ್ತು ಅಕ್ಟೋಬರ್ 10ರ ಬೆಳಗ್ಗೆ 4ರಿಂದ ಮಧ್ಯಾಹ್ನ 2ರ ನಡುವೆ ನವದೆಹಲಿ ಅಥವಾ ಹಜರತ್ ನಿಜಾಮುದ್ದೀನ್ ನಿಲ್ದಾಣ ತಲುಪಬೇಕಿದ್ದ ಮೇಲ್ ಹಾಗೂ ಎಕ್ಸ್‌ಪ್ರೆಸ್ ರೈಲುಗಳನ್ನು ಮೂಲ ನಿಲ್ದಾಣದಲ್ಲೇ ರದ್ದುಗೊಳಿಸಲು ನಿರ್ಧರಿಸಲಾಗಿದೆ.
ಪ್ರತಿಭಟನೆಯ ಹಿನ್ನೆಲೆಯಲ್ಲಿ ಮಧ್ಯ ದೆಹಲಿಯ ರಸ್ತೆಗಳಲ್ಲಿ ಹಾಗೂ ರೈಲು ನಿಲ್ದಾಣಗಳ ಸುತ್ತಮುತ್ತ ತೀವ್ರ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ ಎಂಬ ಗುಪ್ತಚರ ಮಾಹಿತಿ ಮತ್ತು ಸಂಚಾರ ಸಲಹೆಯ ಆಧಾರದ ಮೇಲೆ ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ಗುರುವಾರ ಸುಮಾರು 5,000 ಪ್ರಯಾಣಿಕರು ರೈಲುಗಳನ್ನು ತಪ್ಪಿಸಿಕೊಂಡಿದ್ದ ಹಿನ್ನೆಲೆಯಲ್ಲಿ, ಶನಿವಾರ ಪ್ರಯಾಣಿಕರಿಗೆ ಎದುರಾಗಬಹುದಾದ ತೊಂದರೆ ತಗ್ಗಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿರುವ CJP, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ರೈಲು ನಿಲ್ದಾಣಗಳ ಸುತ್ತಮುತ್ತ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆಯಿದೆ.
ಪೂರ್ವ ರೈಲ್ವೆ ಶುಕ್ರವಾರ (ಅ.9) ಪಶ್ಚಿಮ ಬಂಗಾಳದಿಂದ ಹೊರಡಬೇಕಿದ್ದ ಎರಡು ರಾಜಧಾನಿ ಎಕ್ಸ್‌ಪ್ರೆಸ್ ರೈಲುಗಳನ್ನು ರದ್ದುಗೊಳಿಸಿದೆ. 12301 ಹೌರಾ-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ಹಾಗೂ 12313 ಸೀಲ್ದಾ-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ಎರಡೂ ರೈಲುಗಳು ಅಕ್ಟೋಬರ್ 9ರಂದು ಪ್ರಯಾಣ ಆರಂಭಿಸಬೇಕಿತ್ತು.
ಅಕ್ಟೋಬರ್ 9 ಮತ್ತು 10ರಂದು ಸಂಚಾರ ನಡೆಸಬೇಕಿದ್ದ ರೈಲುಗಳನ್ನೂ ರದ್ದುಗೊಳಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅ.9ರಂದು 12964 ಉದಯಪುರ ಸಿಟಿ-ಹಜರತ್ ನಿಜಾಮುದ್ದೀನ್ ಹಾಗೂ 14727 ಶ್ರೀಗಂಗಾನಗರ-ತಿಲಕ್ ಬ್ರಿಡ್ಜ್ ರೈಲುಗಳು ರದ್ದಾಗಿವೆ. ಅದೇ ರೀತಿ ಅ.10ರಂದು 15308 ಸಿರ್ಸಾ-ತಿಲಕ್ ಬ್ರಿಡ್ಜ್, 12963 ಹಜರತ್ ನಿಜಾಮುದ್ದೀನ್-ಉದಯಪುರ ಸಿಟಿ, 14738 ತಿಲಕ್ ಬ್ರಿಡ್ಜ್-ಭಿವಾನಿ, 14737 ಭಿವಾನಿ-ತಿಲಕ್ ಬ್ರಿಡ್ಜ್, 14728 ತಿಲಕ್ ಬ್ರಿಡ್ಜ್-ಶ್ರೀಗಂಗಾನಗರ ರೈಲುಗಳು ರದ್ದಾಗಿವೆ ಎಂದು ವರದಿ ತಿಳಿಸಿದೆ.
CJP) ಪ್ರತಿಭಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಗೃಹ ಸಚಿವಾಲಯ ಹಾಗೂ ದೆಹಲಿ ಪೊಲೀಸರು ರಾಜಧಾನಿಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸುಮಾರು 23,000ಕ್ಕೂ ಹೆಚ್ಚು ಹೆಚ್ಚುವರಿ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (CAPF) ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ಒಟ್ಟು ಭದ್ರತಾ ಸಿಬ್ಬಂದಿಯ ಸಂಖ್ಯೆ 25,000ಕ್ಕೂ ಅಧಿಕವಾಗಿದೆ. ಪ್ರತಿಭಟನಾಕಾರರ ಸಂಚಾರವನ್ನು ನಿಯಂತ್ರಿಸಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ನವದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಗಿ ಕಾವಲು ಹಾಕಲಾಗಿದ್ದು, ಕೆಲವು ಮೆಟ್ರೋ ನಿಲ್ದಾಣಗಳ ಸೇವೆ ಹಾಗೂ ಪ್ರಮುಖ ರಸ್ತೆ ಸಂಚಾರದಲ್ಲೂ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಜತೆಗೆ ದೆಹಲಿಯ ಬಿಜೆಪಿ ಸರ್ಕಾರದ ನಿರ್ದೇಶನದಂತೆ ಅಕ್ಟೋಬರ್ 9 ಮತ್ತು 10ರಂದು ನಗರದಾದ್ಯಂತ ಮದ್ಯದಂಗಡಿಗಳನ್ನು ಕೂಡ ಮುಚ್ಚುವಂತೆ ಆದೇಶಿಸಲಾಗಿದೆ.
ಇದನ್ನೂ ಓದಿ: ಶನಿವಾರ ದೆಹಲಿಯಲ್ಲಿ ಸಿಜೆಪಿ 2ನೇ ಬೃಹತ್ ಪ್ರತಿಭಟನೆ
ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿರುವ ಸಿಜೆಪಿ (CJP) ಕರೆಗೆ ಸ್ಪಂದಿಸಿ ದೇಶದ ವಿವಿಧ ಭಾಗಗಳಿಂದ (ಪುಣೆ ಸೇರಿದಂತೆ ವಿವಿಧ ಕಡೆಗಳಿಂದ) ದೆಹಲಿಯತ್ತ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳು ಹಾಗೂ ಕಾರ್ಯಕರ್ತರು ಸೇರಿದಂತೆ ಒಟ್ಟು 10,000ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಸಂಘಟನೆ ಆರೋಪಿಸಿದೆ. ದೆಹಲಿ ಪೊಲೀಸರು ಭದ್ರತಾ ಕಾರಣಗಳು ಹಾಗೂ ಸೂಕ್ತ ಮುನ್ಸೂಚನೆ ಇಲ್ಲದಿರುವಿಕೆಯನ್ನು ಉಲ್ಲೇಖಿಸಿ ಅಕ್ಟೋಬರ್ 10ರ ಸಿಜೆಪಿ ಪ್ರತಿಭಟನೆಗೆ ಅಧಿಕೃತವಾಗಿ ಅನುಮತಿ ನಿರಾಕರಿಸಿದ್ದಾರೆ.
ಸದ್ಯ ಏಕಾಏಕಿ ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು (ವಿಶೇಷವಾಗಿ ರಾಜಧಾನಿ ಎಕ್ಸ್‌ಪ್ರೆಸ್ ಸೇರಿದಂತೆ ಪ್ರಮುಖ ರೈಲುಗಳನ್ನು) ರದ್ದುಗೊಳಿಸಿರುವುದು ಮತ್ತು ಮೂಲ ನಿಲ್ದಾಣಗಳಲ್ಲೇ ತಡೆಹಿಡಿಯುತ್ತಿರುವುದರಿಂದ ದೂರದೂರುಗಳ ಪ್ರಯಾಣಿಕರು, ಉದ್ಯೋಗಿಗಳು ಹಾಗೂ ರೋಗಿಗಳು ತೀವ್ರ ತೊಂದರೆಗೆ ಸಿಲುಕುವಂತಾಗಿದೆ. ಶನಿವಾರ ಮಧ್ಯಾಹ್ನದವರೆಗೆ ದೆಹಲಿ ಪ್ರವೇಶಿಸುವವರಿಗೆ ಸಾರಿಗೆ ಸಂಕಷ್ಟ ಎದುರಾಗಲಿದೆ.




