ದೆಹಲಿಯ ಜಂತರ್ ಮಂತರ್‌ನಲ್ಲಿ ಅಕ್ಟೋಬರ್ 10ರಂದು ನಡೆಯಲಿರುವ ಬೃಹತ್ ಪ್ರತಿಭಟನೆಯಲ್ಲಿ ಹೆಚ್ಚಿನ ಜನರು ಸೇರುವುದನ್ನು ತಡೆಯಲು ಕೇಂದ್ರ ಸರ್ಕಾರ, ದೆಹಲಿ ಪೊಲೀಸರು ಒಂದಲ್ಲ ಒಂದು ರೀತಿಯಲ್ಲಿ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಪ್ರತಿಭಟನೆಗೆ ಬೆಚ್ಚಿರುವ ಕೇಂದ್ರ ಸರ್ಕಾರವು ಅಕ್ಟೋಬರ್ 10ರಂದು ಎರಡು ಪ್ರಮುಖ ರೈಲು ನಿಲ್ದಾಣಗಳಿಗೆ ತಲುಪಬೇಕಿದ್ದ ರೈಲುಗಳನ್ನು ರದ್ದು ಮಾಡಿದೆ. ಇದೀಗ ಸುಮಾರು 57 ಪ್ರಮುಖ ಮೆಟ್ರೋ ನಿಲ್ದಾಣಗಳನ್ನು ಮುಚ್ಚುವಂತೆ ದೆಹಲಿ ಪೊಲೀಸರು ದೆಹಲಿ ಮೆಟ್ರೋ ರೈಲು ನಿಗಮಕ್ಕೆ (DMRC) ಮನವಿ ಮಾಡಿ ಪತ್ರ ಬರೆದಿದ್ದಾರೆ.
ಶುಕ್ರವಾರ (ಅಕ್ಟೋಬರ್ 9) ರಾತ್ರಿ 9:00 ಗಂಟೆಯಿಂದಲೇ ಈ 57 ಮೆಟ್ರೋ ನಿಲ್ದಾಣಗಳ ಪ್ರವೇಶ (Entry) ಮತ್ತು ನಿರ್ಗಮನ (Exit) ಗೇಟ್‌ಗಳನ್ನು ಮುಚ್ಚಲು ಹಾಗೂ ಪರಿಸ್ಥಿತಿ ತಿಳಿಯಾಗುವವರೆಗೆ ಅಥವಾ ಮುಂದಿನ ಆದೇಶದವರೆಗೆ ಈ ನಿರ್ಬಂಧವನ್ನು ಮುಂದುವರಿಸಲು ಪತ್ರದಲ್ಲಿ ಕೋರಲಾಗಿದೆ. ಜೊತೆಗೆ ಈ ಭಾಗಗಳಲ್ಲಿ ಮೆಟ್ರೋ ರೈಲುಗಳ ಸಂಚಾರದ ಆವರ್ತನವನ್ನು ಕಡಿಮೆಗೊಳಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಇದನ್ನೂ ಓದಿ: ಅಕ್ಟೋಬರ್ 10ರಂದು ಜನರ ಧ್ವನಿ ಅಡಗಿಸಲು ರೈಲು ಸಂಚಾರವೇ ಸ್ತಬ್ಧ: ಪ್ರತಿಭಟನೆಗೆ ಬೆಚ್ಚಿದ ಸರ್ಕಾರದ ಅಮಾನವೀಯ ನಡೆ!
ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಾ ಬಂದಿರುವ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ರಾಜಧಾನಿಯಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಅಕ್ಟೋಬರ್ 10ರಂದು ಬೃಹತ್ ಪ್ರತಿಭಟನಾ ಸಮಾವೇಶಕ್ಕೆ ಕರೆ ನೀಡಿದೆ. ಜಂತರ್ ಮಂತರ್ ಪ್ರದೇಶದಲ್ಲಿ ಸಾವಿರಾರು ಜನ ಸೇರುವ ಸಾಧ್ಯತೆಯಿದೆ. ಆದರೆ ಎಂದಿನಂತೆ ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನಿರಾಕರಿಸಿ ಪ್ರತಿಭಟಿಸುವ ಹಕ್ಕಿನ ದಮನಕ್ಕೆ ಮುಂದಾಗಿದ್ದಾರೆ. ಈಗಾಗಲೇ ದೆಹಲಿ ಅರೆಸೇನಾ ಪಡೆ (CAPF) ಸೇರಿದಂತೆ 20,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಸಾರ್ವಜನಿಕರ ಸುರಕ್ಷತೆ ಮತ್ತು ಸಾರಿಗೆ ವ್ಯವಸ್ಥೆಯ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗುತ್ತಿದ್ದು, ಪ್ರಯಾಣಿಕರು ತಮ್ಮ ಪ್ರಯಾಣವನ್ನು ಯೋಜಿಸುವ ಮೊದಲು DMRC ನೀಡುವ ಅಧಿಕೃತ ಸೂಚನೆಗಳನ್ನು ಗಮನಿಸಬೇಕೆಂದು ದೆಹಲಿ ಪೊಲೀಸ್ ಉನ್ನತಾಧಿಕಾರಿಗಳು ಮನವಿ ಮಾಡಿದ್ದಾರೆ.




