ಪತಿಯ ವಿರುದ್ಧದ ‘ಕ್ರೌರ್ಯ’ದ ಆರೋಪಗಳನ್ನು ಸಾಬೀತುಪಡಿಸಲು ಪತ್ನಿ ವಿಫಲಳಾದ ಮಾತ್ರಕ್ಕೆ, ಆಕೆ ಯಾವುದೇ ಸೂಕ್ತ ಕಾರಣವಿಲ್ಲದೆ ಗಂಡನ ಮನೆಯನ್ನು ತೊರೆದಿದ್ದಾಳೆ ಎಂದು ಭಾವಿಸಲು ಸಾಧ್ಯವಿಲ್ಲ ಎಂದು ಗುಜರಾತ್ ಹೈಕೋರ್ಟ್ ಹೇಳಿದೆ.
ವೈವಾಹಿಕ ವ್ಯಾಜ್ಯ ಹಾಗೂ ಜೀವನಾಂಶಕ್ಕೆ ಸಂಬಂಧಿಸಿದ ಅರ್ಜಿಯೊಂದರ ವಿಚಾರಣೆ ನಡೆಸಿದ ಗುಜರಾತ್ ಹೈಕೋರ್ಟ್, ಪತಿ-ಪತ್ನಿಯರ ನಡುವಿನ ಭಿನ್ನಾಭಿಪ್ರಾಯ ಮತ್ತು ಪ್ರತ್ಯೇಕ ವಾಸಕ್ಕೆ ಸಂಬಂಧಿಸಿದಂತೆ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿಯುವ ಸಂದರ್ಭದಲ್ಲಿ ಈ ಪ್ರಮುಖ ಅವಲೋಕನ ಮಾಡಿದೆ.
ಇದನ್ನೂ ಓದಿ: ನಿರೀಕ್ಷಣಾ ಜಾಮೀನು ಕೋರಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದ ಮಲಯಾಳಂ ಚಿತ್ರ ನಿರ್ದೇಶಕ ರಂಜಿತ್
ಪತಿಯು ತನ್ನ ಅರ್ಜಿಯಲ್ಲಿ, “ಪತ್ನಿಯು ತನ್ನ ಮೇಲಿನ ಕ್ರೌರ್ಯದ ಆರೋಪಗಳನ್ನು ನ್ಯಾಯಾಲಯದಲ್ಲಿ ನಿರೂಪಿಸಲು ವಿಫಲವಾಗಿದ್ದಾಳೆ. ಹೀಗಾಗಿ ಆಕೆ ಯಾವುದೇ ಸೂಕ್ತ ಕಾರಣವಿಲ್ಲದೇ ಸ್ವಯಂಪ್ರೇರಿತವಾಗಿ ಗಂಡನ ಮನೆಯನ್ನು ತೊರೆದಿದ್ದಾಳೆ. ಆದ್ದರಿಂದ ಆಕೆಗೆ ಜೀವನಾಂಶ ಪಡೆಯುವ ಅರ್ಹತೆ ಇಲ್ಲ” ಎಂದು ವಾದಿಸಿದ್ದರು.
ಆದರೆ ಈ ವಾದವನ್ನು ತಳ್ಳಿಹಾಕಿದ ಹೈಕೋರ್ಟ್, “ಕಾನೂನಿನ ಚೌಕಟ್ಟಿನಲ್ಲಿ ‘ಕ್ರೌರ್ಯ’ವನ್ನು ಸಾಬೀತುಪಡಿಸಲು ಅಗತ್ಯವಿರುವ ಉನ್ನತ ಮಟ್ಟದ ಸಾಕ್ಷ್ಯಾಧಾರಗಳು ಸಿಗದಿದ್ದರೂ ಸಹ, ದಂಪತಿಗಳು ಒಟ್ಟಿಗೆ ಬಾಳಲು ಸಾಧ್ಯವಾಗದಂತಹ ಪರಿಸ್ಥಿತಿ ಅಥವಾ ಸನ್ನಿವೇಶಗಳು ಅಲ್ಲಿ ನಿರ್ಮಾಣವಾಗಿರಬಹುದು. ಕ್ರೌರ್ಯ ಸಾಬೀತಾಗದಿರುವುದು ಎಂದರೆ ಪತ್ನಿ ಯಾವುದೇ ಕಾರಣವಿಲ್ಲದೆ ಮನೆ ತೊರೆದಿದ್ದಾಳೆ ಎಂದರ್ಥವಲ್ಲ” ಎಂದು ಸ್ಪಷ್ಟಪಡಿಸಿದೆ.
ಇತ್ತೀಚೆಗೆ ಕೇರಳ ಹೈಕೋರ್ಟ್ ನೀಡಿದ ಮಹತ್ವದ ಆದೇಶ
ಇತ್ತೀಚೆಗೆ ಇಂತಹುದ್ದೆ ಮಹತ್ವದ ಆದೇಶವೊಂದನ್ನು ಕೇರಳ ಹೈಕೋರ್ಟ್ ಕೂಡಾ ನೀಡಿತ್ತು. ಸಂತ್ರಸ್ತೆಯ ಖಾಸಗಿ ಭಾಗದ (ಯೋನಿ ದ್ವಾರ) ಮೇಲೆ ಬಲವಂತವಾಗಿ ಕಂಪಿಸುವ ಸಾಧನವನ್ನು (Vibrator) ಇಡುವುದು ಕೂಡ ಭೇದನಾತ್ಮಕ ಲೈಂಗಿಕ ದೌರ್ಜನ್ಯ (Penetrative Sexual Assault) ಮತ್ತು ಅತ್ಯಾಚಾರಕ್ಕೆ ಸಮಾನವಾಗಿದೆ ಎಂದು ಹೇಳಿತ್ತು. ನ್ಯಾಯಮೂರ್ತಿ ಎ. ಬದರುದ್ದೀನ್ ಅವರಿದ್ದ ಏಕಸದಸ್ಯ ಪೀಠವು ಈ ಆದೇಶವನ್ನು ಹೊರಡಿಸಿತ್ತು.
ಖಾಸಗಿ ಭಾಗದ ಒಳಗೆ ಸಂಪೂರ್ಣವಾಗಿ ವಸ್ತುವನ್ನು ಸೇರಿಸದೇ ಇದ್ದರೂ, ಕಂಪಿಸುವ ಮೋಡ್‌ನಲ್ಲಿರುವ ಸಾಧನವನ್ನು ಯೋನಿ ದ್ವಾರ, ಲ್ಯಾಬಿಯಾ ಮೆಜೋರಾ ಅಥವಾ ವುಲ್ವಾದ ಭಾಗದ ಮೇಲೆ ಇಡುವುದು ಕೂಡ ಕಾನೂನಿನ ಪ್ರಕಾರ ‘ಸೇರ್ಪಡೆ’ (Insertion) ಎಂದೇ ಪರಿಗಣಿಸಲ್ಪಡುತ್ತದೆ. ಅದುವೂ ಅತ್ಯಾಚಾರವೇ ಎಂದು ಕೇರಳ ಹೈಕೋರ್ಟ್ ಸ್ಪಷ್ಟಪಡಿಸಿತ್ತು.




