ಭಾಲ್ಕಿ ತಾಲ್ಲೂಕಿನ ಸಿದ್ದೇಶ್ವರ ವಾಡಿ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ನಡೆದ ವೈಯಕ್ತಿಕ ಗಲಾಟೆಗೆ ಸಂಬಂಧಿಸಿದಂತೆ ರಾಜಕೀಯ ಪ್ರಭಾವ ಬಳಸಿ ಒಂದು ಗುಂಪಿನವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿ, ಮಾಜಿ ಶಾಸಕ ಪ್ರಕಾಶ್ ಖಂಡ್ರೆ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಧನ್ನೂರಾ ಪೊಲೀಸ್ ಠಾಣೆ ಎದುರು ಧರಣಿ ಸತ್ಯಾಗ್ರಹ ನಡೆಸಿದರು.
ಸಿದ್ದೇಶ್ವರ ವಾಡಿ ಗ್ರಾಮದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಪೊಲೀಸರು ಒಂದು ಗುಂಪಿನವರನ್ನು ಠಾಣೆಗೆ ಕರೆಸಿ ರಾಜಕೀಯ ಉದ್ದೇಶದಿಂದ ಪ್ರಕರಣ ದಾಖಲಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬೀದರ್ ಜಿಲ್ಲೆಯಲ್ಲಿ ಸಚಿವ ಈಶ್ವರ ಖಂಡ್ರೆ ಅವರ ರಾಜಕೀಯ ಪ್ರಭಾವ ಬಳಸಿಕೊಂಡು ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಈ ಮೂಲಕ ಕಾರ್ಯಕರ್ತರ ಧೈರ್ಯ ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಮಾಜಿ ಶಾಸಕ ಪ್ರಕಾಶ ಖಂಡ್ರೆ ಮಾತನಾಡಿ, “ಬಿಜೆಪಿ ಕಾರ್ಯಕರ್ತರ ಮೇಲೆ ಅನ್ಯಾಯವಾಗಿ ಪ್ರಕರಣ ದಾಖಲಿಸುವುದನ್ನು ತಕ್ಷಣ ನಿಲ್ಲಿಸಬೇಕು. ಪೊಲೀಸ್ ಇಲಾಖೆ ರಾಜಕೀಯ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು. ಎಷ್ಟೇ ಸುಳ್ಳು ಪ್ರಕರಣಗಳನ್ನು ದಾಖಲಿಸಿದರೂ ಬಿಜೆಪಿ ಕಾರ್ಯಕರ್ತರು ಎದೆಗುಂದುವುದಿಲ್ಲ. ಅನ್ಯಾಯದ ವಿರುದ್ಧದ ಹೋರಾಟದಿಂದ ಹಿಂದೆ ಸರಿಯುವುದಿಲ್ಲ” ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ, ಭಾಲ್ಕಿ ಮಂಡಲ ಅಧ್ಯಕ್ಷ ವೀರಣ್ಣ ಕಾರಬಾರಿ ಸೇರಿದಂತೆ ಮುಖಂಡರಾದ ಶಿವರಾಜ ಗಂದಗೆ, ಬಾಬುರಾವ್ ಕಾರಬಾರಿ, ಶಶಿ ಹೊಸಳ್ಳಿ, ಶ್ರೀಕಾಂತ ದಾನಿ, ಗಂಗಾಧರ ಹೊಸಳ್ಳಿ, ಸೂರ್ಯಕಾಂತ ಜಮಶೆಟ್ಟಿ, ಜೈಭೀಮ್ ಬಂದು, ಸಂಗಮೇಶ ಕಾರಮುಂಗೆ, ಸಿದ್ದು ಕಾಡದೆ, ಸುರೇಶ ಕಾನೆಕರ್, ಸಂಜು ಸಿಂಧೆ, ರೇವಣಸಿದ್ಧ ಜಾಡರ್, ಡಾ. ಮಹೇಶ ಭಾಲ್ಕಿ, ಮಹೇಶ ಸ್ವಾಮಿ, ಶ್ರೀಧರ ಶಿರಸಿ, ಓಂಕಾರ ಶಾರದೆ, ಡಾ. ಜಗದೀಶ ಭೂರೆ, ಲಕ್ಷ್ಮಣ ಮುದಾಳೆ, ಸಂತೋಷ ಪಾಟೀಲ, ಚಂದ್ರಕಾಂತ ಕಾರಬಾರಿ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಇದನ್ನೂ ಓದಿ : ಬೀದರ್ | ʼಬಸವ ಮಂಟಪʼ ಕೃತಿ ನಿಷೇಧಕ್ಕೆ ಆಗ್ರಹ: ರವಿ ಹಂಜ್ ಪ್ರತಿಕೃತಿ ದಹಿಸಿ ಪ್ರತಿಭಟನೆ



