ದೇಶದ ಪ್ರಜಾಪ್ರಭುತ್ವವನ್ನು ಉಳಿಸಲು, ಮತಗಳ್ಳತನವನ್ನು ತಡೆಯಲು ಹಾಗೂ ಸಂವಿಧಾನವನ್ನು ರಕ್ಷಿಸಲು ನವೆಂಬರ್ 1ರಂದು ದೆಹಲಿಯಲ್ಲಿ ನಡೆಯಲಿರುವ ‘ದೆಹಲಿ ಚಲೋ’ ಮೆರವಣಿಗೆಯಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕರೆ ನೀಡಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಅವರು, ಕಾಂಗ್ರೆಸ್ ಸೇರಿದಂತೆ INDIA ಒಕ್ಕೂಟದ ನೇತೃತ್ವದಲ್ಲಿ ನಡೆಯಲಿರುವ ಈ ಮೆರವಣಿಗೆ ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಸೀಮಿತವಾದ ಪ್ರತಿಭಟನೆಯಲ್ಲ. ಇದು ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಗಾಗಿ ನಡೆಯುತ್ತಿರುವ ಹೋರಾಟ. ಪ್ರಜಾಪ್ರಭುತ್ವವನ್ನು ಉಳಿಸಲು, ಮತಗಳ್ಳತನಕ್ಕೆ ಅಂತ್ಯ ಹಾಡಲು ಹಾಗೂ ಸಂವಿಧಾನವನ್ನು ರಕ್ಷಿಸಲು ರಾಮಲೀಲಾ ಮೈದಾನದಲ್ಲಿ ಈ ಮೆರವಣಿಗೆ ನಡೆಯಲಿದೆ. ಭಾರತದ ಆತ್ಮವನ್ನು ಉಳಿಸುವ ಹೋರಾಟವಿದು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ಕಾರ್ಯವೈಖರಿಯಿಂದ ಅಸಮಾಧಾನಗೊಂಡಿರುವವರು ಸೇರಿದಂತೆ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸಲು ಬಯಸುವ ಎಲ್ಲರೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ರಾಜಕೀಯ ನಿಲುವುಗಳನ್ನು ಬದಿಗಿಟ್ಟು ಎಲ್ಲ ವಿದ್ಯಾರ್ಥಿ ಸಂಘಟನೆಗಳು ಮೆರವಣಿಗೆಯಲ್ಲಿ ಭಾಗವಹಿಸಬೇಕು. ದೇಶದ ಮೇಲೆ ದಾಳಿ ನಡೆಯುತ್ತಿದೆ, ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ, ಆಲೋಚನೆಗಳು ಹಾಗೂ ವಿಚಾರಧಾರೆಗಳಿಗೆ ಧಕ್ಕೆಯಾಗುತ್ತಿದೆ ಎಂದು ನಿಮಗೆ ಅನಿಸಿದರೆ, ನಮ್ಮೊಂದಿಗೆ ಕೈಜೋಡಿಸಿ. ಪ್ರತಿಭಟನೆಯಲ್ಲಿ ಭಾಗವಹಿಸುವವರು ಪೊಲೀಸರ ಕ್ರಮ ಅಥವಾ ಲಾಠಿ ಪ್ರಹಾರದ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಸಂವಿಧಾನ ಮತ್ತು ದೇಶವನ್ನು ರಕ್ಷಿಸಲು ಎಲ್ಲರೂ ಒಟ್ಟಾಗಿ ಹೆಜ್ಜೆ ಹಾಕಬೇಕು ಎಂದು ಕರೆ ನೀಡಿದ್ದಾರೆ.
SIR ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ಅಕ್ಟೋಬರ್ 30ರಂದು ಸಾರ್ವಜನಿಕ ಅಣಕು ಪದಚ್ಯುತಿ ಪ್ರಕ್ರಿಯೆ ನಡೆಸಲು ಇಂಡಿಯಾ ಒಕ್ಕೂಟ ನಿರ್ಧರಿಸಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ದೆಹಲಿಯ ರಾಜಾಜಿ ಮಾರ್ಗ ನಿವಾಸದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ದೀಪಾವಳಿ ವ್ಯಾಪಾರದ ಮೇಲೆ ರ‍್ಯಾಲಿ ಬಿಸಿ; ರಾಹುಲ್ ಗಾಂಧಿಗೆ ಮತ್ತೊಮ್ಮೆ ಪತ್ರ ಬರೆದ ದೆಹಲಿ ವ್ಯಾಪಾರಿಗಳ ಸಂಘ
ಈ ಕಾರ್ಯಕ್ರಮದ ಬಳಿಕ ನವೆಂಬರ್ 1ರಂದು ‘ಮತಗಳ್ಳತನ’ದ ವಿರುದ್ಧ ‘ದೆಹಲಿ ಚಲೋ’ ಮೆರವಣಿಗೆ ನಡೆಯಲಿದ್ದು, ಅದು ರಾಮಲೀಲಾ ಮೈದಾನದಲ್ಲಿ ಸಮಾವೇಶಗೊಳ್ಳಲಿದೆ. ಅಲ್ಲಿ ಸಾರ್ವಜನಿಕ ರ‍್ಯಾಲಿಯನ್ನೂ ಆಯೋಜಿಸಲಾಗಿದೆ.
ಪ್ರಜಾಪ್ರಭುತ್ವದ ರಕ್ಷಣೆ, ಮತದಾರರ ಹಕ್ಕುಗಳು ಮತ್ತು ಸಂವಿಧಾನದ ಆಶಯಗಳ ಸಂರಕ್ಷಣೆಯನ್ನು ಮುಂದಿಟ್ಟುಕೊಂಡು ನಡೆಯಲಿರುವ ಈ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವಂತೆ ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ.




