KPSC (ಕರ್ನಾಟಕ ಲೋಕಸೇವಾ ಆಯೋಗ) ನೇಮಕಾತಿ ಹಗರಣದ ಸಮಗ್ರ ತನಿಖೆಗಾಗಿ SIT ರಚಿಸಲು ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಹಗರಣದ ಹಿಂದಿರುವ ಸಂಪೂರ್ಣ ಪಿತೂರಿಯನ್ನು ಪತ್ತೆಹಚ್ಚಿ, ತಪ್ಪಿತಸ್ಥರನ್ನು ಕಾನೂನಿನ ಮುಂದೆ ತರಲು ಅಗತ್ಯ ಕ್ರಮ ಕೈಗೊಳ್ಳದ ಸರ್ಕಾರದ ನಡೆಗೆ ನ್ಯಾಯಪೀಠ ಕಿಡಿಕಾರಿದೆ.
ಪಶುವೈದ್ಯಾಧಿಕಾರಿಗಳು ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತಿತರರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಮಂಗಳವಾರ ನಡೆಸಿತು.
ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹಾಜರಾಗಿದ್ದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ಎಸ್‌ಐಟಿ ನೇತೃತ್ವಕ್ಕೆ ಸಂಬಂಧಿಸಿದಂತೆ ಅಲೋಕ್ ಕುಮಾರ್ ಅವರ ಹೆಸರನ್ನು ಬದಲಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಅದರಂತೆ, ಶೀಘ್ರದಲ್ಲೇ ಹೊಸ ಎಸ್‌ಐಟಿ ರಚಿಸಲಾಗುವುದು ಎಂದು ತಿಳಿಸಿದರು. ಈ ಸಂಬಂಧ ಹೊಸ ಅಧಿಕಾರಿಗಳ ಹೆಸರುಗಳಿರುವ ಮುಚ್ಚಿದ ಲಕೋಟೆಯನ್ನೂ ನ್ಯಾಯಪೀಠಕ್ಕೆ ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಹೈಕೋರ್ಟ್, ಈ ಹಿಂದೆ ಇದೇ ಪೀಠ ನೀಡಿದ್ದ ತನಿಖೆಯನ್ನು ಡಿ ನೋವೊ ಅಂದರೆ ಮೊದಲಿನಿಂದ ಹೊಸದಾಗಿ ಆರಂಭಿಸುವ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಆದರೂ ಸರ್ಕಾರ ಇನ್ನೂ ಎಸ್‌ಐಟಿ ರಚಿಸಿಲ್ಲ. ತನಿಖೆಗಾಗಿ ಅಗತ್ಯವಿರುವ ಸಕ್ಷಮ ಪೊಲೀಸ್ ಠಾಣೆಯನ್ನು ಸ್ಥಾಪಿಸಿಲ್ಲ ಹಾಗೂ ಸಿಐಡಿಯಿಂದ ಸಂಬಂಧಿತ ದಾಖಲೆಗಳನ್ನು ಪಡೆದುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.
ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿ ಹತ್ತು ದಿನಗಳು ಕಳೆದಿದ್ದರೂ, ಹೈಕೋರ್ಟ್ ಈ ಹಿಂದೆ ರಚಿಸಿದ್ದ ಎಸ್‌ಐಟಿಯಲ್ಲಿದ್ದ ಅಲೋಕ್ ಕುಮಾರ್ ಸೇರಿದಂತೆ ಇಬ್ಬರು ಅಧಿಕಾರಿಗಳ ಬದಲಿಗೆ ಹೊಸ ಹೆಸರುಗಳನ್ನು ಅಂತಿಮಗೊಳಿಸುವಲ್ಲಿ ವಿಳಂಬವಾಗಿರುವುದೇಕೆ ಎಂದು ಸರ್ಕಾರವನ್ನು ನ್ಯಾಯಪೀಠ ಪ್ರಶ್ನಿಸಿತು.
ಇದನ್ನೂ ಓದಿ: KPSC ಅಕ್ರಮ ಪ್ರಕರಣ; IAS ಅಧಿಕಾರಿ ಗಂಗ್ವಾರ್ ವಿರುದ್ಧ ಕಾನೂನು ಕ್ರಮಕ್ಕೆ ರಾಜ್ಯ ಸರ್ಕಾರ ಅನುಮತಿ
ಸರ್ಕಾರ ಪ್ರಸ್ತಾಪಿಸಿರುವ ಹೊಸ ಅಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆಗಳಿದ್ದರೆ ಸಲ್ಲಿಸುವಂತೆ ಅರ್ಜಿದಾರರ ಪರ ವಕೀಲರಿಗೆ ನ್ಯಾಯಾಲಯ ಸೂಚಿಸಿತು. ಬಳಿಕ ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 30ಕ್ಕೆ ಮುಂದೂಡಿತು.
ಈ ಹಿಂದೆ ಕೆಪಿಎಸ್‌ಸಿ ನೇಮಕಾತಿ ಹಗರಣದ ತನಿಖೆಯನ್ನು 100 ದಿನಗಳೊಳಗೆ ಪೂರ್ಣಗೊಳಿಸಿ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಹೈಕೋರ್ಟ್ ಗಡುವು ವಿಧಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಸಲ್ಲಿಸಿತ್ತು. ಇದೀಗ ಎಸ್‌ಐಟಿ ರಚನೆಯ ವಿಳಂಬದ ವಿಚಾರ ಮತ್ತೆ ನ್ಯಾಯಾಲಯದ ಗಮನ ಸೆಳೆದಿದ್ದು, ತನಿಖೆಯ ಮುಂದಿನ ಕ್ರಮಗಳ ಬಗ್ಗೆ ಕುತೂಹಲ ಮೂಡಿಸಿದೆ.





