ರಸ್ತೆ ಕಾಮಗಾರಿ ಪರಿಶೀಲನೆ ವೇಳೆ ಆಮ್ ಆದ್ಮಿ ಪಕ್ಷದ (ಎಎಪಿ) ಕಾರ್ಯಕರ್ತನಿಗೆ ಹಲ್ಲೆ ಮಾಡಿದ ಆರೋಪದ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಗುರುವಾರ (ಅ. 8) ದೆಹಲಿ ಪೊಲೀಸರು ಹಾಗೂ ಉಪಮುಖ್ಯಮಂತ್ರಿ ಪರ್ವೇಶ್ ವರ್ಮಾ ಅವರಿಗೆ ನೋಟಿಸ್ ಜಾರಿ ಮಾಡಿದೆ.
ನ್ಯಾಯಮೂರ್ತಿ ಸಚಿನ್ ದತ್ತಾ ಅವರಿದ್ದ ಪೀಠವು ಪೊಲೀಸರು ಮತ್ತು ಸಚಿವ ಪರ್ವೇಶ್ ವರ್ಮಾ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಪ್ರಕರಣದ ಸ್ಥಿತಿಗತಿ ವರದಿಯ (ಸ್ಟೇಟಸ್ ರಿಪೋರ್ಟ್) ಕುರಿತು ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ಸೂಚಿಸಿದೆ. ನ್ಯಾಯಾಲಯವು ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 17ಕ್ಕೆ ಮುಂದೂಡಿದೆ.
ಅರ್ಜಿದಾರ ಸಾಹಿಬ್ ಸಿಂಗ್ ಅವರು ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆಯ ಜೊತೆಗೆ, ತಮಗೆ ಹಾಗೂ ತಮ್ಮ ಕುಟುಂಬ ಸದಸ್ಯರಿಗೆ ಪೊಲೀಸ್ ರಕ್ಷಣೆ ಒದಗಿಸುವಂತೆಯೂ ನ್ಯಾಯಾಲಯವನ್ನು ಕೋರಿದ್ದರು. ಆದರೆ, ಈ ಅರ್ಜಿಯ ಮಾನ್ಯತೆ (maintainability) ಕುರಿತಂತೆ ಪ್ರತಿವಾದಿಗಳು ನ್ಯಾಯಾಲಯದ ಮುಂದೆ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ.
ದೆಹಲಿಯ ಲೋಕೋಪಯೋಗಿ ಇಲಾಖೆಯ (PWD) ಸಚಿವರೂ ಆಗಿರುವ ಪರ್ವೇಶ್ ವರ್ಮಾ ಅವರು, ಕಳೆದ ಸೆಪ್ಟೆಂಬರ್ 27ರಂದು ಹೊರ ವರ್ತುಲ ರಸ್ತೆಯ (ಔಟರ್ ರಿಂಗ್ ರೋಡ್) ವಿಕಾಸ್‌ಪುರಿ ವಿಭಾಗದಲ್ಲಿ ಹೊಸದಾಗಿ ನಿರ್ಮಿಸಲಾದ ರಸ್ತೆಯ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ತಿಲಕ್ ನಗರದ ಎಎಪಿ ಶಾಸಕ ಜರ್ನೈಲ್ ಸಿಂಗ್ ಅವರ ಸಹವರ್ತಿಗೆ ಸಚಿವರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಹಲ್ಲೆಗೊಳಗಾದ ವ್ಯಕ್ತಿಯು ತಾನು ಶಾಸಕ ಜರ್ನೈಲ್ ಸಿಂಗ್ ಅವರ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ನಿರ್ವಹಿಸುವ ವ್ಯಕ್ತಿ ಎಂದು ಹೇಳಿಕೊಂಡಿದ್ದಾರೆ.
ಸಚಿವರು ಹಲ್ಲೆ ಮಾಡಿದ್ದಾರೆ ಎನ್ನಲಾದ ವಿಡಿಯೊವನ್ನು ಎಎಪಿ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಂಡಿದ್ದರು. ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಸಚಿವ ಪರ್ವೇಶ್ ವರ್ಮಾ ಅವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದರು.
ಈ ಘಟನೆ ಕುರಿತು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದ ಸಚಿವ ವರ್ಮಾ, “ರಸ್ತೆ ಪರಿಶೀಲನಾ ಸ್ಥಳದಲ್ಲಿದ್ದ ಎಎಪಿ ಕಾರ್ಯಕರ್ತರು ನನ್ನನ್ನು ಮತ್ತು ನನ್ನ ಕುಟುಂಬವನ್ನು ಗುರಿಯಾಗಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಇಂಥ ಪರಿಸ್ಥಿತಿಯಲ್ಲಿ ಯಾವುದೇ ಸಾಮಾನ್ಯ ಮನುಷ್ಯ ಹೇಗೆ ಪ್ರತಿಕ್ರಿಯಿಸುತ್ತಾನೋ ನಾನೂ ಅದೇ ರೀತಿ ಪ್ರತಿಕ್ರಿಯಿಸಿದ್ದೇನೆ ಅಷ್ಟೇ” ಎಂದು ಸ್ಪಷ್ಟನೆ ನೀಡಿದ್ದರು. ಇದೀಗ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು, ಮುಂದಿನ ವಿಚಾರಣೆ ನವೆಂಬರ್‌ನಲ್ಲಿ ನಡೆಯಲಿದೆ.




