ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು/ಹೆಣ್ಣು ಮಕ್ಕಳ ಮೇಲಿನ ಅಪರಾಧಗಳ ಸರಣಿ ಮುಂದುವರಿದಿದೆ. ದಕ್ಷಿಣ ದೆಹಲಿಯ ಕಾಲ್ಕಾಜಿ ಮಂದಿರದ ಬಳಿಯ ಪಾರ್ಕ್‌ನಲ್ಲಿ 17 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಮೂವರು ಕಾಮುಕರು ಪೊಲೀಸರೆಂದು ಹೇಳಿಕೊಂಡು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿ, ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಸೋಮವಾರ (ಸೆ.21) ಸಂಜೆ ಸುಮಾರು 7 ಗಂಟೆಯಲ್ಲಿ ಸಂತ್ರಸ್ತ ಬಾಲಕಿ ತನ್ನ ಸ್ನೇಹಿತನೊಂದಿಗೆ ಕಾಲ್ಕಾಜಿ ಮಂದಿರಕ್ಕೆ ಪೂಜೆಗಾಗಿ ಬಂದಿದ್ದರು. ಪೂಜೆಯ ದೇವಾಲಯದ ಸಮೀಪದ ಪಾರ್ಕ್ ಮೂಲಕ ತೆರಳುತ್ತಿದ್ದರು. ಈ ವೇಳೆ, ಅವರನ್ನು ಅಡ್ಡಗಟ್ಟಿದ 25 ರಿಂದ 30 ವರ್ಷ ವಯಸ್ಸಿನ ಮೂವರು ಕಾಮುಕರು ತಮ್ಮನ್ನು ಪೊಲೀಸರು ಎಂದು ಪರಿಚಯಿಸಿಕೊಂಡಿದ್ದಾರೆ.
ಪೊಲೀಸರ ಸೋಗಿನಲ್ಲಿದ್ದ ಆರೋಪಿಗಳು “ಇಬ್ಬರೂ ಅಪ್ರಾಪ್ತರಾಗಿದ್ದು, ಪಾರ್ಕ್‌ನಲ್ಲಿ ಕುಳಿತು ಕಾನೂನು ಬಾಹಿರ ಕೆಲಸ ಮಾಡುತ್ತಿದ್ದೀರಿ, ನಿಮ್ಮ ವಿರುದ್ಧ ಪ್ರಕರಣ ದಾಖಲಿಸುತ್ತೇವೆ” ಎಂದು ಬೆದರಿಕೆ ಹಾಕಿದ್ದಾರೆ. ನಂತರ, ಬಾಲಕಿಯ ಸ್ನೇಹಿತನನ್ನು ಗಟ್ಟಿಯಾಗಿ ಹಿಡಿದುಕೊಂಡು, ಬಂದೂಕು ಮತ್ತು ಚಾಕುವಿನಿಂದ ಬೆದರಿಸಿ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಆಕೆಯ ಸ್ನೇಹಿತನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ, ಘಟನೆಯ ಬಗ್ಗೆ ಯಾರಿಗಾದರೂ ತಿಳಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾಗಿದ್ದಾರೆ.
ಈ ಕೃತ್ಯದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದು, ಅಮರ್ ಕಾಲೋನಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ, ಸಂತ್ರಸ್ತೆ ಮತ್ತು ಆಕೆಯ ಸ್ನೇಹಿತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಾಲಕಿಯ ದೂರಿನ ಆಧಾರದ ಮೇಲೆ ಬಿಎನ್‌ಎಸ್ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿಗಳ ಪತ್ತೆಗಾಗಿ ಪೊಲೀಸರು ಎಸ್‌ಟಿಐ ತಂಡ ರಚಿಸಿದ್ದಾರೆ. ತಂಡವು ಪಾರ್ಕ್ ಸುತ್ತಮುತ್ತಲಿನ ಸಿಸಿಟಿವಿ ಫೂಟೇಜ್‌ಗಳನ್ನು ಪರಿಶೀಲಿಸಿ, ಆರೋಪಿಗಳನ್ನು ಗುರಿಸಿದೆ. ಆರೋಪಿಗಳನ್ನು ಬಂಧಿಸಲು ಪೊಲೀಸ್ ತಂಡ ತೆರಳಿದಾಗ, ಪ್ರಮುಖ ಆರೋಪಿ ಆಸಿಫ್ ಎಂಬಾತ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ, ಆತನ ಕಾಲಿಗೆ ಗುಂಡು ಹಾರಿಸಿ, ಆತನನ್ನು ಬಂಧಿಸಿದ್ದಾರೆ. ಇತರ ಇಬ್ಬರು ಆರೋಪಿಗಳಾದ ಹೇಮಂತ್ ಹಾಗೂ ಮುಕೇಶ್‌ನನ್ನೂ ಬಂಧಿಸಿದ್ದಾರೆ.
ದೆಹಲಿಯಲ್ಲಿ ಕೇವಲ 10 ದಿನಗಳ ಅವಧಿಯಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ನಾಲ್ಕು ಲೈಂಗಿಕ ದೌರ್ಜನ್ಯದ ಘಟನೆಗಳು ನಡೆದಿವೆ.



