ದೆಹಲಿ ಗಲಭೆಗಳ ಪ್ರಕರಣದ ಆರೋಪಿ ದೇವಾಂಗನಾ ಕಲಿತಾ ಅವರಿಗೆ ದೆಹಲಿ ಹೈಕೋರ್ಟ್ ನೀಡಿದ್ದ ರಿಲೀಫ್‌ಗೆ ಸುಪ್ರೀಂ ಕೋರ್ಟ್ ಶನಿವಾರ (ಜುಲೈ 20) ತಡೆ ನೀಡಿದೆ. ತನಿಖೆ ವೇಳೆ ದೆಹಲಿ ಪೊಲೀಸರು ಸಂಗ್ರಹಿಸಿದ್ದ, ಆದರೆ ಆರೋಪಪಟ್ಟಿಯಲ್ಲಿ ಉಲ್ಲೇಖಿಸದ ಅಥವಾ ಅವಲಂಬಿಸದ ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಪರಿಶೀಲಿಸಲು ಕಲಿತಾ ಅವರಿಗೆ ಹೈಕೋರ್ಟ್ ಅವಕಾಶ ನೀಡಿತ್ತು. ಇದೀಗ ಸುಪ್ರೀಂ ಕೋರ್ಟ್ ಈ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.
ಜೂನ್ 6ರಂದು ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರು ಕಲಿತಾ ಅವರ ಅರ್ಜಿಯ ವಿಚಾರಣೆ ನಡೆಸಿದ್ದರು. ಸೂಕ್ಷ್ಮ ವಿಚಾರಗಳಿರುವ ಕಾರಣ ಸಿಎಎ-ಎನ್‌ಆರ್‌ಸಿ ಪ್ರತಿಭಟನೆಯ ವಿಡಿಯೋಗಳು ಮತ್ತು ಪೊಲೀಸರು ಅವಲಂಬಿಸಿರುವ ವಾಟ್ಸಾಪ್ ಚಾಟ್‌ಗಳನ್ನು ನೀಡಲು ನಿರಾಕರಿಸಿದ್ದರು. ಆದರೆ, ಪೊಲೀಸರ ವಶದಲ್ಲಿರುವ ಹಾಗೂ ಪ್ರಾಸಿಕ್ಯೂಷನ್ ಅವಲಂಬಿಸದ ಇತರೆ ಎಲೆಕ್ಟ್ರಾನಿಕ್ ದಾಖಲೆಗಳನ್ನು ಪರಿಶೀಲಿಸಲು ಮಾತ್ರ ಆರೋಪಿಗೆ ಅವಕಾಶ ಕಲ್ಪಿಸಿದ್ದರು.
ಹೈಕೋರ್ಟ್‌ನ ಈ ಆದೇಶವನ್ನು ಪ್ರಶ್ನಿಸಿ ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಅಲೋಕ್ ಆರಾಧೆ ಅವರಿದ್ದ ವಿಭಾಗೀಯ ಪೀಠದ ಮುಂದೆ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ ರಾಜು, “ಆರೋಪ ನಿಗದಿಪಡಿಸುವ ಹಂತದಲ್ಲಿ ಪೊಲೀಸರು ಅವಲಂಬಿಸದ ದಾಖಲೆಗಳನ್ನು ಪರಿಶೀಲಿಸಲು ಆರೋಪಿಗೆ ಹಕ್ಕಿಲ್ಲ. ಇದು ಕೇವಲ ವಿಚಾರಣೆಯನ್ನು ವಿಳಂಬ ಮಾಡುವ ತಂತ್ರವಷ್ಟೇ” ಎಂದು ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿ ಪ್ರತಿಪಾದಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಲಿತಾ ಪರ ವಕೀಲರು, “ನನ್ನ ಕಕ್ಷಿದಾರರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿಡಿಯೋ ನಮಗೆ ಬೇಕಿದೆ. ಅವರು ಕಲ್ಲು ತೂರಾಟ ಮಾಡಿಲ್ಲ ಎಂಬುದು ವಿಡಿಯೋದಲ್ಲಿ ಸ್ಪಷ್ಟವಿದ್ದರೆ, ಅವರನ್ನು ಈ ಪ್ರಕರಣದಿಂದ ಕೈಬಿಡಬೇಕು. ಶಾಂತಿಯುತವಾಗಿ ಕುಳಿತಿದ್ದರೂ ಸುಖಾಸುಮ್ಮನೆ ವಿಚಾರಣೆ ಏಕೆ ಎದುರಿಸಬೇಕು?” ಎಂದು ಪ್ರಶ್ನಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರು, “ಈ ವಾದಗಳನ್ನು ವಿಚಾರಣೆಯ ಹಂತದಲ್ಲಿ ಮಂಡಿಸಬಹುದೇ ಹೊರತು, ಈ ಹಂತದಲ್ಲಿ ಪರಿಗಣಿಸಲು ಸಾಧ್ಯವಿಲ್ಲ” ಎಂದು ತಿಳಿಸಿ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದರು.




