ಲೋಕಸಭೆಯ ಒಟ್ಟು ಸದಸ್ಯ ಬಲವನ್ನು ಪ್ರಸ್ತುತ ಇರುವ 543 ರಿಂದ 850 ಕ್ಕೆ ಗಣನೀಯವಾಗಿ ಏರಿಸಲು ನರೇಂದ್ರ ಮೋದಿ ಸರ್ಕಾರವು ಸಕಲ ಸಿದ್ಧತೆಗಳನ್ನು ನಡೆಸುತ್ತಿದೆ. ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸುವ ಜನಪ್ರಿಯ ನೆಪದಲ್ಲಿ, ಕ್ಷೇತ್ರ ಮರುವಿಂಗಡಣೆಗೆ ಅವಕಾಶ ಮಾಡಿಕೊಡುವ ಸಂವಿಧಾನದ 131ನೇ ತಿದ್ದುಪಡಿ ಮಸೂದೆಯನ್ನು ಜಾರಿಗೆ ತರುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಆದರೆ, ಇತ್ತೀಚೆಗೆ ವಿರೋಧ ಪಕ್ಷಗಳು ಪ್ರದರ್ಶಿಸಿದ ಒಗ್ಗಟ್ಟಿನಿಂದಾಗಿ ಈ ಮಸೂದೆಯು ಲೋಕಸಭೆಯಲ್ಲಿ ಸೋಲುಂಡಿತ್ತು.
ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕಾರವಾಗಲು ನಿಯಮದಂತೆ ಕಡ್ಡಾಯವಾಗಿ ಮೂರನೇ ಎರಡರಷ್ಟು (2/3) ಬಹುಮತದ ಅಗತ್ಯವಿರುತ್ತದೆ. ಇತ್ತೀಚೆಗೆ ನಡೆದ ಮತದಾನ ಪ್ರಕ್ರಿಯೆಯ ವೇಳೆ ಸದನದಲ್ಲಿ ಒಟ್ಟು 528 ಸದಸ್ಯರು ಹಾಜರಿದ್ದರು. ಈ ಪೈಕಿ 298 ಸದಸ್ಯರು ಮಸೂದೆಯ ಪರವಾಗಿ ಮತ್ತು 230 ಸದಸ್ಯರು ಮಸೂದೆಯ ವಿರುದ್ಧವಾಗಿ ಮತ ಚಲಾಯಿಸಿದ್ದರು. ಮಸೂದೆ ಅಂಗೀಕಾರಕ್ಕೆ 352 ಮತಗಳ (ಮ್ಯಾಜಿಕ್ ಸಂಖ್ಯೆ) ಅಗತ್ಯವಿದ್ದ ಕಾರಣ, ಸರ್ಕಾರಕ್ಕೆ ಅಗತ್ಯ ಸಂಖ್ಯಾಬಲದ ಕೊರತೆಯಾಗಿ ಮಸೂದೆಯು ಬಿದ್ದುಹೋಗಿತ್ತು.
ಇದೀಗ ಮುಂಬರುವ ಮಳೆಗಾಲದ ಅಧಿವೇಶನದಲ್ಲಿ ಇದೇ ಮಸೂದೆಯನ್ನು ಮತ್ತೆ ಮಂಡಿಸಲು ಮೋದಿ ಸರ್ಕಾರವು ಹೊಸ ತಂತ್ರಗಾರಿಕೆ ರೂಪಿಸುತ್ತಿದೆ. ಮಸೂದೆಗೆ ಅಗತ್ಯವಿರುವ ಮೂರನೇ ಎರಡರಷ್ಟು ಬಹುಮತವನ್ನು ಹೇಗಾದರೂ ಸಂಪಾದಿಸಲು ಆಡಳಿತ ಪಕ್ಷವು ಕಸರತ್ತು ನಡೆಸುತ್ತಿದೆ. ಇದರ ಭಾಗವಾಗಿ, ಮಸೂದೆ ಪಾಸು ಮಾಡುವಾಗ ಸದನದಲ್ಲಿ ಇರದೆ ಗೈರು ಹಾಜರಾಗುವಂತೆ ಡಿಎಂಕೆ ಹಾಗೂ ಶರದ್ ಪವಾರ್ ನೇತೃತ್ವದ ಎನ್ಸಿಪಿ ಪಕ್ಷಗಳ ನಾಯಕರ ಮನವೊಲಿಸುವ ತೀವ್ರ ಯತ್ನಗಳು ತೆರೆಮರೆಯಲ್ಲಿ ಸಾಗಿವೆ.
2011ರ ಜನಗಣತಿಯ ಆಧಾರದ ಮೇಲೆ ಲೋಕಸಭಾ ಕ್ಷೇತ್ರಗಳನ್ನು ಮರುವಿಂಗಡಣೆ ಮಾಡುವುದು ಹಾಗೂ 2029ರ ಸಾರ್ವತ್ರಿಕ ಚುನಾವಣೆಯ ವೇಳೆಗೆ ಮಹಿಳಾ ಮೀಸಲಾತಿಯನ್ನು ಜಾರಿ ಮಾಡುವುದು ಈ ಮಸೂದೆಯ ಗುರಿ ಎಂದು ಕೇಂದ್ರ ಸರ್ಕಾರ ಸುಳ್ಳನ್ನು ಸಮರ್ಥಿಸಿಕೊಂಡಿದೆ.
ಆದರೆ, ವಿರೋಧ ಪಕ್ಷಗಳು ಸರ್ಕಾರದ ಈ ನಡೆಯನ್ನು ಕಟುವಾಗಿ ಟೀಕಿಸಿವೆ. ಮಹಿಳಾ ಮೀಸಲಾತಿಯನ್ನು ಕೇವಲ ಒಂದು ಗುರಾಣಿಯಾಗಿ ಬಳಸಿಕೊಂಡು ದೇಶದ ಚುನಾವಣಾ ನಕ್ಷೆಯನ್ನು ತಮಗೆ ಬೇಕಾದಂತೆ ಬದಲಾಯಿಸುವ ಹುನ್ನಾರ ಇದಾಗಿದೆ ಎಂದು ವಿಪಕ್ಷ ನಾಯಕರು ಆರೋಪಿಸಿದ್ದಾರೆ. ಮಹಿಳಾ ಮೀಸಲಾತಿಯನ್ನು ಕ್ಷೇತ್ರ ಮರುವಿಂಗಡಣೆಯ ಷರತ್ತಿನಿಂದ ಪ್ರತ್ಯೇಕಿಸಿ, ತಕ್ಷಣವೇ ಸ್ವತಂತ್ರವಾಗಿ ಜಾರಿಗೊಳಿಸುವಂತೆ ವಿಪಕ್ಷಗಳು ಪಟ್ಟು ಹಿಡಿದಿದ್ದು, ಸರ್ಕಾರವು ಈ ಬೇಡಿಕೆಯನ್ನು ತಿರಸ್ಕರಿಸಿದೆ.
ಕ್ಷೇತ್ರ ಮರುವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಮಸೂದೆಯು ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವಿನ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದೆ. ಮುಂಬರುವ ಮಳೆಗಾಲದ ಅಧಿವೇಶನದಲ್ಲಿ ಈ ಮಸೂದೆಯು ಮರುಮಂಡನೆಯಾಗಲಿದ್ದು, ಬಹುಮತ ಸಾಬೀತುಪಡಿಸಲು ಆಡಳಿತ ಪಕ್ಷ ನಡೆಸುತ್ತಿರುವ ರಾಜಕೀಯ ತಂತ್ರಗಾರಿಕೆಗಳು ಹಾಗೂ ವಿಪಕ್ಷಗಳ ಒಗ್ಗಟ್ಟಿನ ಪ್ರತಿರೋಧವು ದೇಶದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.




