SIR | ಮಹದೇವಪುರದ ಹಲವು ಬೂತ್‌ಗಳ 2002ರ ಮತಪಟ್ಟಿಯೇ ನಾಪತ್ತೆ; 40 ಸಾವಿರಕ್ಕೂ ಹೆಚ್ಚು ಮತದಾರರ ಭವಿಷ್ಯ ಅತಂತ್ರ

Date:

ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಯುತ್ತಿದೆ. ಬಿಎಲ್‌ಒಗಳು ಎಲ್ಲೆಡೆ ಎನ್ಯುಮರೇಷನ್ ಫಾರ್ಮ್‌ಗಳನ್ನು ವಿತರಣೆ ಮಾಡುತ್ತಿದ್ದಾರೆ. ಮತದಾರರ 2002ರ ಮತಪಟ್ಟಿಯ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆದರೆ, ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದ ಹಲವು ಬೂತ್‌ಗಳಿಗೆ ಸಂಬಂಧಿಸಿದ 2002ರ ಮತದಾರರ ಪಟ್ಟಿಗಳು ಲಭ್ಯವಾಗುತ್ತಿಲ್ಲ ಎಂದು ತಿಳಿದುಬಂದಿದೆ. ಸ್ಥಳೀಯರು ಆತಂಕಗೊಂಡಿದ್ದು, ಮತದಾನದ ಹಕ್ಕು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

- Advertisement -

ಮಹದೇವಪುರ ಕ್ಷೇತ್ರದ ನಾಗೊಂಡನಹಳ್ಳಿ, ಗಾಂಧಿಪುರ, ವಿಜಯನಗರ, ವಿನಾಯಕನಗರ, ಹಗದೂರು, ಇಮ್ಮಡಿಹಳ್ಳಿ, ವೈಟ್‌ಫೀಲ್ಡ್, ನಳ್ಳೂರಹಳ್ಳಿ, ಪಟ್ಟಂದೂರು ಅಗ್ರಹಾರ, ಅಂಬೇಡ್ಕರ್ ನಗರ ಹಾಗೂ ಪ್ರಶಾಂತ್ ಲೇಔಟ್ ವ್ಯಾಪ್ತಿಯ ಹಲವು ಬೂತ್‌ಗಳ 2002ರ ಮತದಾರರ ಪಟ್ಟಿ ಲಭ್ಯವಾಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಈ ಪ್ರದೇಶಗಳಲ್ಲಿ ಹಲವು ತಲೆಮಾರುಗಳಿಂದ ವಾಸಿಸುತ್ತಿರುವ ಹಳೆಯ ನಿವಾಸಿಗಳು 2002ರ ವೇಳೆಯೇ ಮತದಾರರಾಗಿದ್ದು, ಚುನಾವಣೆಗಳಲ್ಲಿ ಮತ ಚಲಾಯಿಸಿದ್ದಾರೆ. ಆದರೂ, ಪ್ರಸ್ತುತ SIR ಪ್ರಕ್ರಿಯೆಯಲ್ಲಿ ತಮ್ಮ ಹಿಂದಿನ ಮತದಾರರ ವಿವರಗಳನ್ನು ಪರಿಶೀಲಿಸಲು ಅಂದಿನ ಮತದಾರರ ಪಟ್ಟಿಯೇ ಸಿಗುತ್ತಿಲ್ಲ ಎಂದು ಸ್ಥಳೀಯರು ಆತಂಕಗೊಂಡಿದ್ದಾಎರ.

“ನಾವು ಇದೇ ಊರಿನಲ್ಲಿ ಹುಟ್ಟಿ ಬೆಳೆದಿದ್ದೇವೆ. ನಮ್ಮ ತಂದೆ-ತಾಯಿಯವರು ಇಲ್ಲಿಯೇ ಕೃಷಿ ಮಾಡಿಕೊಂಡು ಬದುಕಿದ್ದಾರೆ. 2002ರ ಚುನಾವಣೆಗೂ ಮೊದಲಿನಿಂದ ಮತ ಚಲಾಯಿಸುತ್ತಿದ್ದಾರೆ. ಆದರೆ, ಈಗ ನಮ್ಮ ಊರಿನ ಮತದಾರರ ಪಟ್ಟಿಯೇ ಲಭ್ಯವಿಲ್ಲ ಎಂದು ಹೇಳಲಾಗುತ್ತಿದೆ. ಹೀಗಿರುವಾಗ ನಮ್ಮ ಹಿಂದಿನ ಮತದಾರರ ದಾಖಲೆಗಳನ್ನು ಎಲ್ಲಿ ಹುಡುಕಬೇಕು?” ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.

ಸ್ಥಳೀಯರು ನೀಡಿರುವ ಮಾಹಿತಿಯ ಪ್ರಕಾರ, ಮಹದೇವಪುರ ವಿಧಾನಸಭಾ ಕ್ಷೇತ್ರದ ಕೆಳಗಿನ ಪ್ರದೇಶಗಳು ಮತ್ತು ಬೂತ್‌ಗಳಿಗೆ ಸಂಬಂಧಿಸಿದ 2002ರ ಮತದಾರರ ಪಟ್ಟಿಗಳು ಲಭ್ಯವಾಗುತ್ತಿಲ್ಲ ಎನ್ನಲಾಗಿದೆ.

ಪ್ರದೇಶಬೂತ್ ಸಂಖ್ಯೆಗಳು
ನಾಗೊಂಡನಹಳ್ಳಿ229, 230, 231
ಗಾಂಧಿಪುರ232, 233, 237, 238, 239, 240
ವಿಜಯನಗರ234, 235, 236
ವಿನಾಯಕನಗರ241, 242, 243
ಹಗದೂರು244, 245, 246
ಇಮ್ಮಡಿಹಳ್ಳಿ247, 248, 249, 250, 251, 252
ಅಂಬೇಡ್ಕರ್ ನಗರ253, 254, 255, 256, 257, 258
ಪ್ರಶಾಂತ್ ಲೇಔಟ್259, 260
ಪಟ್ಟಂದೂರು ಅಗ್ರಹಾರ302, 303, 304
ವೈಟ್‌ಫೀಲ್ಡ್305, 306, 307, 308, 309, 310, 311, 312
ನಳ್ಳೂರಹಳ್ಳಿ313, 314, 315, 316, 317, 318, 319

ಗಮನಾರ್ಹವಾಗಿ, ವೈಟ್‌ಫೀಲ್ಡ್ ಸುತ್ತಮುತ್ತಲಿನ ಈ ಪ್ರದೇಶಗಳು ಇಂದು ಬೆಂಗಳೂರಿನ ಪ್ರಮುಖ ತಂತ್ರಜ್ಞಾನ ಮತ್ತು ವಾಣಿಜ್ಯ ಕೇಂದ್ರಗಳಾಗಿ ಬೆಳೆದಿದ್ದರೂ, ಇವುಗಳಲ್ಲಿ ಬಹುತೇಕವು ಹಳೆಯ ಗ್ರಾಮಗಳಾಗಿವೆ. ಹಲವು ಕುಟುಂಬಗಳು ತಲೆಮಾರುಗಳಿಂದ ಇಲ್ಲಿಯೇ ವಾಸಿಸುತ್ತಿವೆ. ಈ ಎಲ್ಲ ಬೂತ್‌ಗಳಲ್ಲಿ ದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ಸಮುದಾಯಗಳ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 

ಸ್ಥಳೀಯರು ನೀಡಿರುವ ಮಾಹಿತಿಯ ಪ್ರಕಾರ, ನಾಗೊಂಡನಹಳ್ಳಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಒಕ್ಕಲಿಗ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗಾಂಧಿಪುರದಲ್ಲಿ ಮುಸ್ಲಿಂ, ಕ್ರೈಸ್ತ ಮತ್ತು ಪರಿಶಿಷ್ಟ ಜಾತಿ ಸಮುದಾಯಗಳು; ವಿಜಯನಗರದಲ್ಲಿ ಮುಸ್ಲಿಂ ಮತ್ತು ಪರಿಶಿಷ್ಟ ಜಾತಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಇಮ್ಮಡಿಹಳ್ಳಿಯಲ್ಲಿ ಒಕ್ಕಲಿಗ, ತಿಗಳ ಮತ್ತು ಪರಿಶಿಷ್ಟ ಜಾತಿ ಸಮುದಾಯಗಳು; ವಿನಾಯಕನಗರದಲ್ಲಿ ಒಕ್ಕಲಿಗ ಮತ್ತು ಪರಿಶಿಷ್ಟ ಜಾತಿ ಸಮುದಾಯಗಳು; ಹಗದೂರಿನಲ್ಲಿ ಒಕ್ಕಲಿಗ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ.

ವೈಟ್‌ಫೀಲ್ಡ್‌ನಲ್ಲಿ ಮುಸ್ಲಿಂ, ಕ್ರೈಸ್ತ, ಪರಿಶಿಷ್ಟ ಜಾತಿ, ರೆಡ್ಡಿ ಸಮುದಾಯದವರು ಹಾಗೂ ಅಪಾರ್ಟ್‌ಮೆಂಟ್ ನಿವಾಸಿಗಳಿದ್ದಾರೆ. ನಳ್ಳೂರಹಳ್ಳಿಯಲ್ಲಿ ಪರಿಶಿಷ್ಟ ಜಾತಿ ಮತ್ತು ರೆಡ್ಡಿ ಸಮುದಾಯಗಳು; ಪಟ್ಟಂದೂರು ಅಗ್ರಹಾರದಲ್ಲಿ ಪರಿಶಿಷ್ಟ ಜಾತಿ ಮತ್ತು ಕುರುಬ ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಅಂಬೇಡ್ಕರ್ ನಗರದಲ್ಲಿ ಪರಿಶಿಷ್ಟ ಜಾತಿ, ಕ್ರೈಸ್ತ, ಮುಸ್ಲಿಂ ಮತ್ತು ಕುರುಬ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಇಲ್ಲಿನ ಬಡವರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಹಾಗೂ ಕಡಿಮೆ ಶಿಕ್ಷಣ ಪಡೆದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಸಂಕೀರ್ಣವಾದ ಮತದಾರರ ಪಟ್ಟಿ ಪರಿಶೀಲನೆ ಮತ್ತು ದಾಖಲೆ ಸಂಗ್ರಹ ಪ್ರಕ್ರಿಯೆ ಇಲ್ಲಿನ ನಿವಾಸಿಗಳನ್ನು ಆತಂಕಕ್ಕೀಡುಮಾಡಿದೆ.

2002 ಮತದಾರರ ಪಟ್ಟಿಯ ಮಾಹಿತಿ ದೊರೆಯದೇ ಇರುವುದರ ಕುರಿತು ಈದಿನ.ಕಾಮ್ ಜೊತೆಗೆ ಮಾತನಾಡಿದ ಸ್ಥಳೀಯ ನಿವಾಸಿ, ರಾಜಕೀಯ ವಿಶ್ಲೇಷಕ ಮಣಿ ನಿಸರ್ಗ ಅವರು, “ಮಹದೇವಪುರ ಕ್ಷೇತ್ರದ ಹಲವು ಬೂತ್‌ಗಳಿಗೆ ಸಂಬಂಧಿಸಿದ ಸಂಪೂರ್ಣ ಮತದಾರರ ಪಟ್ಟಿಗಳೇ ಸಿಗುತ್ತಿಲ್ಲ. ಮಹದೇವಪುರ, ಆನೇಕಲ್, ಹೊಸಕೋಟೆ ಕ್ಷೇತ್ರಗಳ ಮತಪಟ್ಟಿಗಳಲ್ಲಿ ಹುಡುಕಾಟ ನಡೆಸಿದರೂ ಈ ಗ್ರಾಮಗಳ ದಾಖಲೆ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ” ಎಂದು ವಿವರಿಸಿದ್ದಾರೆ.

“ಅಧಿಕಾರಿಗಳನ್ನು ಪ್ರಶ್ನಿಸಿದರೆ, ‘ನಿಮ್ಮ ಊರಿನ ಮತದಾರರ ಪಟ್ಟಿಯನ್ನು ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಹುಡುಕಿದ್ದೇವೆ; ಆನೇಕಲ್ ಕ್ಷೇತ್ರದಲ್ಲಿಯೂ ಪರಿಶೀಲಿಸಿದ್ದೇವೆ. ಆದರೂ ದಾಖಲೆ ಸಿಗುತ್ತಿಲ್ಲ’ ಎನ್ನುತ್ತಿದ್ದಾರೆ. ಆದರೆ, 2002ರಲ್ಲಿ ಈ ಊರುಗಳ ಜನರು ಮತದಾರರಾಗಿದ್ದರು ಮತ್ತು ಮತ ಚಲಾಯಿಸಿದ್ದರು. ಹಾಗಿದ್ದರೆ ಆ ಮತದಾರರ ಪಟ್ಟಿ ಎಲ್ಲಿ ಹೋಯಿತು” ಎಂದು ಮಣಿ ಪ್ರಶ್ನಿಸಿದ್ದಾರೆ.

“2002ರಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ನಡೆದಿದ್ದರೂ, ಅದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಮತ್ತು ಮತದಾರರ ಪಟ್ಟಿಗಳನ್ನು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿಲ್ಲ” ಎಂದು ಅವರು ದೂರಿದ್ದಾರೆ.

ಈ ಲೇಖನ ಓದಿದ್ದೀರಾ?: ಕ್ಷೇತ್ರ ಮರುವಿಂಗಡಣೆ | ಇತಿಹಾಸ ಹಾಗೂ ದಕ್ಷಿಣ ಭಾರತದ ಹಕ್ಕು ಕಸಿಯಲು ಮುಂದಾಗಿದ್ದ ಮೋದಿ…

ಈಗ SIR ಪ್ರಕ್ರಿಯೆಯ ಭಾಗವಾಗಿ ಎನ್ಯುಮರೇಷನ್ ಫಾರ್ಮ್‌ಗಳನ್ನು ವಿತರಿಸಲಾಗುತ್ತಿದೆ. ಆದರೆ, ಹಿಂದಿನ ಮತದಾರರ ಪಟ್ಟಿಯ ಮಾಹಿತಿಯೇ ಲಭ್ಯವಿಲ್ಲದ ಕಾರಣ, ಫಾರ್ಮ್‌ನಲ್ಲಿ ಕೇಳಲಾಗಿರುವ ಹಳೆಯ ಮತದಾರರ ವಿವರಗಳನ್ನು ನಮೂದಿಸಲು ಜನರು ಪರದಾಡುತ್ತಿದ್ದಾರೆ.

“ಎನ್ಯುಮರೇಷನ್ ಫಾರ್ಮ್ ಕೊಟ್ಟಿದ್ದಾರೆ. ಆದರೆ, ಅದನ್ನು ಭರ್ತಿ ಮಾಡಲು ಬೇಕಾದ ಹಿಂದಿನ ಮತದಾರರ ಮಾಹಿತಿಯೇ ಸಿಗುತ್ತಿಲ್ಲ. ಜನರಿಗೆ ಯಾವ ಮಾಹಿತಿ ಬರೆಯಬೇಕು, ಯಾವ ದಾಖಲೆ ನೀಡಬೇಕು ಎಂಬುದು ಅರ್ಥವಾಗುತ್ತಿಲ್ಲ” ಎಂದು ಮಣಿ ವಿವರಿಸಿದ್ದಾರೆ.

“ನಾವು ಇಲ್ಲಿನ ಮೂಲ ನಿವಾಸಿಗಳು. ನಮ್ಮ ತಂದೆ ಕೃಷಿಕರಾಗಿದ್ದರು. 2002ರ ವೇಳೆಯೇ ನಮ್ಮ ಕುಟುಂಬದವರು ಮತದಾರರ ಪಟ್ಟಿಯಲ್ಲಿದ್ದರು. ಆಗ ಮತಪಟ್ಟಿ ಪರಿಷ್ಕರಣೆಯೂ ನಡೆದಿತ್ತು ಎಂಬುದು ನಮಗೆ ನೆನಪಿದೆ. ಆದರೆ ಈಗ ದಾಖಲೆ ಡೌನ್‌ಲೋಡ್ ಮಾಡಲು ಹೋದರೆ ನಮ್ಮ ಊರಿನ ಪಟ್ಟಿಯೇ ಕಾಣಿಸುತ್ತಿಲ್ಲ” ಎಂದು ಅವರು ಹೇಳಿದ್ದಾರೆ.

2002ರ ಮತಪಟ್ಟಿ ಲಭ್ಯವಿಲ್ಲ ಎಂಬ ವಿಷಯವೇ ಈ ಪ್ರದೇಶದ ಶೇ.90ರಿಂದ 95ರಷ್ಟು ಜನರಿಗೆ ಇನ್ನೂ ತಿಳಿದಿಲ್ಲ ಎನ್ನಲಾಗಿದೆ. ಫಾರ್ಮ್‌ಗಳನ್ನು ಭರ್ತಿ ಮಾಡುವಾಗ ಅಥವಾ ಹಿಂದಿನ ಮತದಾರರ ವಿವರಗಳನ್ನು ಹುಡುಕಲು ಮುಂದಾದಾಗ ಮಾತ್ರ ಸಮಸ್ಯೆ ಗಮನಕ್ಕೆ ಬರುತ್ತಿದೆ.

“ಒಂದೆಡೆ, 2002ರ ಮತಪಟ್ಟಿಯ ದಾಖಲೆಗಳು ದೊರೆಯುತ್ತಿಲ್ಲ. ಮತ್ತೊಂದೆಡೆ, ಬಿಎಲ್‌ಒಗಳು ಈಗ ಎನ್ಯುಮರೇಷನ್‌ ಫಾರ್ಮ್ ಮಾತ್ರವೇ ವಿತರಿಸುವ ಬದಲು, ದಾಖಲೆಗಳನ್ನೂ ಸಂಗ್ರಹಿಸುತ್ತಿದ್ದಾರೆ. ದಾಖಲೆಗಳನ್ನು ಕೇಳುತ್ತಿದ್ದಾರೆ. ಯಾವ ದಾಖಲೆ ನೀಡಬೇಕು, ಯಾರಿಗೆ ದಾಖಲೆ ಅಗತ್ಯ, ಯಾವ ಹಂತದಲ್ಲಿ ಸಲ್ಲಿಸಬೇಕು ಎಂಬ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ಇಲ್ಲ. ಬಿಎಲ್‌ಒಗಳಿಗೂ ಪ್ರಕ್ರಿಯೆಯ ಬಗ್ಗೆ ಸ್ಪಷ್ಟತೆ ಇಲ್ಲದಂತೆ ಕಾಣುತ್ತಿದೆ. ಇದರಿಂದ ಜನರು ತೀವ್ರ ಒತ್ತಡಕ್ಕೆ ಒಳಗಾಗಿದ್ದಾರೆ” ಎಂದು ಮಣಿ ತಿಳಿಸಿದ್ದಾರೆ.

“SIR ಕುರಿತು ಸಮಗ್ರ ಜಾಗೃತಿ ಮೂಡಿಸದೆ, ಫಾರ್ಮ್‌ಗಳನ್ನು ವಿತರಿಸಿರುವುದರಿಂದ ಜನರು ಗೊಂದಲಕ್ಕೆ ಸಿಲುಕಿದ್ದಾರೆ. ಚುನಾವಣಾ ಆಯೋಗವು ಸ್ಥಳೀಯ ಭಾಷೆಯಲ್ಲಿ ಸ್ಪಷ್ಟ ಮಾರ್ಗಸೂಚಿ ಪ್ರಕಟಿಸಿ, ಸಾರ್ವಜನಿಕರಿಗೆ ಮಾಹಿತಿ ನೀಡಬೇಕು” ಎಂದು ಅವರು ಆಗ್ರಹಿಸಿದ್ದಾರೆ.

ಸ್ಥಳೀಯ ಮುಖಂಡರಿಂದ ಮನ್ಸೂರ್ ಅಲಿ ಖಾನ್‌ಗೆ ಮನವಿ

ಈ ಸಮಸ್ಯೆಗೆ ಸಂಬಂಧಿಸಿದಂತೆ ಸ್ಥಳೀಯ ಮುಖಂಡ ನಳ್ಳೂರಹಳ್ಳಿ ನಾಗೇಶ್ ಅವರು ಕಾಂಗ್ರೆಸ್ ನಾಯಕ ಮನ್ಸೂರ್ ಅಲಿ ಖಾನ್ ಅವರಿಗೆ ಮನವಿ ಸಲ್ಲಿಸಿ, 2002ರ ಮತದಾರರ ಪಟ್ಟಿ ಲಭ್ಯವಿಲ್ಲದಿರುವ ಸಮಸ್ಯೆಯನ್ನು ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.

ನಂತರ ಮನ್ಸೂರ್ ಅಲಿ ಖಾನ್ ಅವರು ರಾಜ್ಯ ಚುನಾವಣಾ ಅಧಿಕಾರಿಗಳನ್ನು ಭೇಟಿ ಮಾಡಿ, ಮಹದೇವಪುರ ಕ್ಷೇತ್ರದ ಹಳೆಯ ಗ್ರಾಮಗಳ ಮತದಾರರ ಪಟ್ಟಿಗೆ ಸಂಬಂಧಿಸಿದ ಸಮಸ್ಯೆಯನ್ನು ವಿವರಿಸಿದ್ದಾರೆ. ಈ ಕುರಿತು ಮನವಿಯನ್ನೂ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಸಮಸ್ಯೆಗೆ ಸ್ಪಷ್ಟ ಪರಿಹಾರ ದೊರೆತಿಲ್ಲ ಎಂದು ಸ್ಥಳೀಯರು ಅಸಮಾಧಾನಗೊಂಡಿದ್ದಾರೆ.

“ದಾಖಲೆಗಳನ್ನು ಹುಡುಕುತ್ತಿದ್ದೇವೆ, ವಿವಿಧ ಕ್ಷೇತ್ರಗಳ ಪಟ್ಟಿಗಳನ್ನು ಪರಿಶೀಲಿಸುತ್ತಿದ್ದೇವೆ ಎಂಬ ಉತ್ತರ ಮಾತ್ರ ಸಿಗುತ್ತಿದೆ. ಆದರೆ ಮತದಾರರು ಏನು ಮಾಡಬೇಕು ಎಂಬುದಕ್ಕೆ ಸ್ಪಷ್ಟ ಮಾರ್ಗಸೂಚಿ ನೀಡಿಲ್ಲ” ಎಂದು ಸ್ಥಳೀಯರು ದೂರಿದ್ದಾರೆ.

‘ಮತ ಹೋದರೆ ಹೋಗಲಿ’ ಎಂಬ ನಿರಾಸೆಗೆ ತಲುಪುತ್ತಿರುವ ಜನರು

2002ರ ಮತದಾರರ ಪಟ್ಟಿ ಸಿಗದಿರುವುದು ಮತ್ತು SIR ಪ್ರಕ್ರಿಯೆಯ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದಿರುವುದು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೆಲವರು ತಮ್ಮ ಮತದಾನದ ಹಕ್ಕಿನ ಬಗ್ಗೆಯೇ ನಿರಾಸೆ ವ್ಯಕ್ತಪಡಿಸುತ್ತಿದ್ದಾರೆ.

 “ಏನು ಮಾಡಬೇಕು ಎಂಬುದು ಗೊತ್ತಾಗದೆ ಕೆಲವರು ‘ಮತ ಹೋದರೆ ಹೋಗಲಿ ಬಿಡಿ; ರಾಜಕಾರಣಿಗಳಿಗೆ ಮತ ಹಾಕಿ ಏನು ಪ್ರಯೋಜನ?’ ಎಂದು ಹೇಳುತ್ತಿದ್ದಾರೆ. ಜನರನ್ನು ಇಂತಹ ನಿರಾಸೆಯ ಸ್ಥಿತಿಗೆ ತಳ್ಳುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ” ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಹಲವು ವರ್ಷಗಳಿಂದ ಮತ ಚಲಾಯಿಸುತ್ತಿರುವ ನಾಗರಿಕರು, ಆಡಳಿತದ ದಾಖಲೆಗಳ ಅಲಭ್ಯತೆಯಿಂದ ತಮ್ಮ ಮತದಾನದ ಹಕ್ಕಿನ ಬಗ್ಗೆ ಆತಂಕಪಡುವ ಪರಿಸ್ಥಿತಿ ನಿರ್ಮಾಣವಾಗಬಾರದು. ಸರ್ಕಾರ ಅಥವಾ ಚುನಾವಣಾ ವ್ಯವಸ್ಥೆಯ ಬಳಿ ಇರಬೇಕಾದ ದಾಖಲೆಗಳು ಲಭ್ಯವಿಲ್ಲದಿದ್ದರೆ, ಅದರ ಹೊಣೆಯನ್ನು ಸಾಮಾನ್ಯ ಮತದಾರರ ಮೇಲೆ ಹಾಕಬಾರದು ಎಂಬ ಆಗ್ರಹವೂ ಕೇಳಿಬಂದಿದೆ.

40 ಸಾವಿರಕ್ಕೂ ಹೆಚ್ಚು ಮತದಾರರ ಭವಿಷ್ಯದ ಪ್ರಶ್ನೆ

ಪಟ್ಟಿ ಲಭ್ಯವಿಲ್ಲ ಎಂದು ಹೇಳಲಾಗುತ್ತಿರುವ ಬೂತ್‌ಗಳ ವ್ಯಾಪ್ತಿಯಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಮತದಾರರು ಇರಬಹುದು ಎಂದು ಮಣಿ ಅವರು ಅಂದಾಜಿಸಿದ್ದಾರೆ.

“ಇದು ಒಬ್ಬರು ಅಥವಾ ಇಬ್ಬರು ಮತದಾರರ ಸಮಸ್ಯೆಯಲ್ಲ. ಹಲವು ಹಳೆಯ ಗ್ರಾಮಗಳು ಮತ್ತು ಸುಮಾರು 40 ಸಾವಿರಕ್ಕೂ ಹೆಚ್ಚು ಮತದಾರರ ಭವಿಷ್ಯದ ಪ್ರಶ್ನೆ. ಮತದಾರರ ಪಟ್ಟಿಯೇ ಸರ್ಕಾರದ ಬಳಿ ಇಲ್ಲದಿದ್ದರೆ, ಅದರ ಹೊಣೆಯನ್ನು ಜನರ ಮೇಲೆ ಹಾಕುವುದು ಹೇಗೆ” ಎಂದು ಅವರು ಪ್ರಶ್ನಿಸಿದ್ದಾರೆ.

ಮತದಾರರ ಪಟ್ಟಿಯ ಪರಿಷ್ಕರಣೆಯ ಉದ್ದೇಶ ಅರ್ಹ ಮತದಾರರ ಹೆಸರನ್ನು ಖಚಿತಪಡಿಸುವುದಾಗಿರಬೇಕೇ ಹೊರತು, ದಾಖಲೆಗಳ ಗೊಂದಲದಿಂದ ದೀರ್ಘಕಾಲದ ಮತದಾರರನ್ನು ಪಟ್ಟಿಯಿಂದ ಹೊರಗಿಡುವುದಾಗಬಾರದು ಎಂದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಚುನಾವಣಾ ಆಯೋಗವು ಮಹದೇವಪುರ ಕ್ಷೇತ್ರದ ಹಳೆಯ ಗ್ರಾಮಗಳಿಗೆ ಸಂಬಂಧಿಸಿದ 2002ರ ಮತದಾರರ ಪಟ್ಟಿಗಳನ್ನು ತಕ್ಷಣ ಪತ್ತೆಹಚ್ಚಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕು. ದಾಖಲೆಗಳು ಲಭ್ಯವಿಲ್ಲದಿದ್ದರೆ ಅದಕ್ಕೆ ಪರ್ಯಾಯ ಪರಿಶೀಲನಾ ವ್ಯವಸ್ಥೆಯನ್ನು ರೂಪಿಸಬೇಕು. ಎನ್ಯುಮರೇಷನ್ ಫಾರ್ಮ್ ಭರ್ತಿ, ದಾಖಲೆ ಸಲ್ಲಿಕೆ ಮತ್ತು ಮತದಾರರ ಅರ್ಹತೆಯ ಕುರಿತು ಸ್ಥಳೀಯ ಮಟ್ಟದಲ್ಲಿ ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು” ಎಂದು ಮಣಿ ಒತ್ತಾಯಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | SIR ರದ್ದತಿ ಆಗ್ರಹಿಸಿ ಸಿಪಿಐ(ಎಂ)ನಿಂದ ಮೇಣದಬತ್ತಿ ಪ್ರತಿಭಟನೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಹಾಗೂ...

ಸಿದ್ದರಾಮಯ್ಯ ‘ಸ್ಟಿಂಗ್’ ವಿವಾದದ ಅಸಲಿ ವೃತ್ತಾಂತವೇನು? ‘ಸತ್ಯಕ್ಕೇ ಜಯ’ ಎಂದು ಮಾಜಿ ಸಿಎಂ ಹೇಳಿದ್ದೇಕೆ?

ಕರ್ನಾಟಕ ರಾಜಕಾರಣದಲ್ಲಿ ಇದೀಗ ‘ಸ್ಟಿಂಗ್ ಆಪರೇಷನ್’ ಹೆಸರಿನಲ್ಲಿ ಹೊಸ ವಿವಾದ ಭುಗಿಲೆದ್ದಿದೆ....

ಐಡಿಬಿಐ ಬ್ಯಾಂಕ್ ಮಾರಾಟಕ್ಕೆ ಕೇಂದ್ರ ಸಂಪುಟ ಅಸ್ತು: ₹52,878 ಕೋಟಿಗೆ ಫೇರ್‌ಫ್ಯಾಕ್ಸ್ ತೆಕ್ಕೆಗೆ

ಐಡಿಬಿಐ (IDBI) ಬ್ಯಾಂಕ್‌ನ ‘ಕಾರ್ಯತಂತ್ರದ ಪುನರ್‌ರಚನೆ’ಗೆ (Strategic Restructuring) ಕೇಂದ್ರ ಸಚಿವ...