‘ಮಗಳು ಸಾವನ್ನಪ್ಪುವುದನ್ನು ನೋಡುವುದಕ್ಕಿಂತ, ಆಕೆ ವಿಚ್ಛೇದನ ಪಡೆದು ಬದುಕಿರುವುದೇ ಎಷ್ಟೋ ಮೇಲು’ ಎಂಬ ಗಂಭೀರ ಹಾಗೂ ಭಾವುಕ ಹೇಳಿಕೆಯೊಂದು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ತ್ವಿಶಾ ಶರ್ಮಾ ಅವರ ಸಾವು ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ನಲ್ಲಿ ಮೊಳಗಿದೆ. ವರದಕ್ಷಿಣೆ ಕಿರುಕುಳ, ಸಾಂಸ್ಥಿಕ ಪಕ್ಷಪಾತ ಹಾಗೂ ಸಾಕ್ಷ್ಯನಾಶದ ಆರೋಪಗಳ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ (Suo Motu) ಕೈಗೆತ್ತಿಕೊಂಡಿದ್ದು, ಸಿಬಿಐ ತನಿಖೆಗೆ ಒಲವು ತೋರಿದೆ.
ಉತ್ತರ ಪ್ರದೇಶದ ನೋಯ್ಡಾ ಮೂಲದ 32 ವರ್ಷದ ಮಾಡೆಲ್ ಹಾಗೂ ನಟಿ ತ್ವಿಶಾ ಶರ್ಮಾ ಅವರು, 2025ರ ಡಿಸೆಂಬರ್ 25ರಂದು ಭೋಪಾಲ್ ಮೂಲದ ವಕೀಲ ಸಮರ್ಥ್ ಸಿಂಗ್ ಅವರನ್ನು ವಿವಾಹವಾಗಿದ್ದರು. ಸಮರ್ಥ್ ಅವರ ತಾಯಿ ಗಿರಿಬಾಲಾ ಸಿಂಗ್ ನಿವೃತ್ತ ಜಿಲ್ಲಾ ನ್ಯಾಯಾಧೀಶರು. ಮದುವೆಯಾದ ಕೇವಲ ಐದು ತಿಂಗಳಲ್ಲಿ, ಅಂದರೆ 2026ರ ಮೇ 12ರಂದು ತ್ವಿಶಾ ಶರ್ಮಾ ಅವರು ಭೋಪಾಲ್‌ನ ಕಟಾರಾ ಹಿಲ್ಸ್‌ನಲ್ಲಿರುವ ತಮ್ಮ ಪತಿಯ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಪತಿ ಹಾಗೂ ಅತ್ತೆ ವರದಕ್ಷಿಣೆಗಾಗಿ ಕಿರುಕುಳ ನೀಡಿ, ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಟ್ಟು ತಮ್ಮ ಮಗಳನ್ನು ಹತ್ಯೆ ಮಾಡಿದ್ದಾರೆ ಎಂದು ತ್ವಿಶಾ ಅವರ ಕುಟುಂಬದವರು ಗಂಭೀರ ಆರೋಪ ಮಾಡಿದ್ದಾರೆ.
ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿರುವ ಈ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಮತ್ತು ವಿಪುಲ್ ಎಂ. ಪಾಂಚೋಲಿ ಅವರಿದ್ದ ತ್ರಿಸದಸ್ಯ ಪೀಠವು ಇಂದು (ಮೇ 25) ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಮಧ್ಯಪ್ರದೇಶ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ಅವರು, “ಇಂಥದ್ದೊಂದು ದುರದೃಷ್ಟಕರ ಘಟನೆಯನ್ನು ಎದುರಿಸುವುದಕ್ಕಿಂತ, ವಿಚ್ಛೇದಿತ ಮಗಳನ್ನು ಹೊಂದುವುದೇ ಮೇಲು” ಎಂದು ಮಾರ್ಮಿಕವಾಗಿ ನುಡಿದರು.
ಇದನ್ನು ಓದಿದ್ದೀರಾ? ತ್ವಿಶಾ ಶರ್ಮಾ ಸಾವು ಪ್ರಕರಣ: ನ್ಯಾಯಾಲಯಕ್ಕೆ ಶರಣಾದ ಪತಿ
ಪ್ರಕರಣದ ಸೂಕ್ಷ್ಮತೆಯನ್ನು ಅರಿತಿರುವ ಸುಪ್ರೀಂ ಕೋರ್ಟ್, ನಿಷ್ಪಕ್ಷಪಾತ ತನಿಖೆ ನಡೆಯುವ ವಿಶ್ವಾಸವನ್ನು ವ್ಯಕ್ತಪಡಿಸಿದೆ. ಅಲ್ಲದೆ, ನೊಂದ ಕುಟುಂಬದವರ ಹೇಳಿಕೆಗಳನ್ನು ವಿವಾದಗಳಿಗಾಗಿ ಬಳಸಿಕೊಳ್ಳದಂತೆ ಹಾಗೂ ಅವರ ನೋವನ್ನು ಹೆಚ್ಚಿಸದಂತೆ ಮಾಧ್ಯಮಗಳಿಗೆ ಕಿವಿಮಾತು ಹೇಳಿದೆ. ವರದಕ್ಷಿಣೆ ಸಾವು ಪ್ರಕರಣಗಳಲ್ಲಿ ಮಾಧ್ಯಮಗಳು ಕಡ್ಡಾಯವಾಗಿ ಸಂಯಮ ಕಾಯ್ದುಕೊಳ್ಳಬೇಕು ಹಾಗೂ ತನಿಖಾ ಪ್ರಕ್ರಿಯೆಗಳಿಗೆ ಧಕ್ಕೆಯಾಗದಂತೆ ವರದಿ ಮಾಡಬೇಕು ಎಂದು ನ್ಯಾಯಪೀಠ ಸಲಹೆ ನೀಡಿದೆ.
ಸಿಬಿಐ ತನಿಖೆಗೆ ಶಿಫಾರಸು
ಆರೋಪಿಯ ತಾಯಿ ನಿವೃತ್ತ ನ್ಯಾಯಾಧೀಶರಾಗಿರುವುದರಿಂದ ತನಿಖೆಯ ಮೇಲೆ ಪ್ರಭಾವ ಬೀರುವ ಹಾಗೂ ಸಾಂಸ್ಥಿಕ ಪಕ್ಷಪಾತ (Institutional bias) ನಡೆಯುವ ಸಾಧ್ಯತೆಗಳ ಬಗ್ಗೆ ತ್ವಿಶಾ ಕುಟುಂಬ ತೀವ್ರ ಕಳವಳ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಸರ್ಕಾರವು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಅಧಿಕೃತವಾಗಿ ಶಿಫಾರಸು ಮಾಡಿದ್ದು, ಸುಪ್ರೀಂ ಕೋರ್ಟ್ ಸಹ ಇದಕ್ಕೆ ಸಹಮತ ವ್ಯಕ್ತಪಡಿಸಿದೆ.
ಮತ್ತೊಂದೆಡೆ, ಮೊದಲ ಮರಣೋತ್ತರ ಪರೀಕ್ಷೆಯ ವರದಿಯಲ್ಲಿನ ಲೋಪಗಳ ಬಗ್ಗೆ ಅನುಮಾನಗಳಿದ್ದ ಕಾರಣ, ಮಧ್ಯಪ್ರದೇಶ ಹೈಕೋರ್ಟ್‌ನ ಆದೇಶದ ಮೇರೆಗೆ ದೆಹಲಿಯ ಏಮ್ಸ್ (AIIMS) ವೈದ್ಯರ ವಿಶೇಷ ತಂಡದಿಂದ ಭಾನುವಾರ ಎರಡನೇ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸದ್ಯ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪತಿ ಸಮರ್ಥ್ ಸಿಂಗ್‌ನನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯ ಆತನನ್ನು 7 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.




