ನೋಯ್ಡಾ ಮೂಲದ ಮಾಡೆಲ್ ಹಾಗೂ ನಟಿ ತ್ವಿಶಾ ಶರ್ಮಾ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಳೆದ 10 ದಿನಗಳಿಂದ ಪೊಲೀಸರ ಕಣ್ತಪ್ಪಿಸಿ ತಿರುಗುತ್ತಿದ್ದ ಅವರ ಪತಿ ಸಮರ್ಥ್ ಸಿಂಗ್, ಇಂದು(ಮೇ 22) ಮಧ್ಯ ಪ್ರದೇಶದ ಜಬಲ್ಪುರ ನ್ಯಾಯಾಲಯಕ್ಕೆ ಶರಣಾಗಿದ್ದು, ಪೊಲೀಸರು ಆರೋಪಿಯನ್ನು ತಮ್ಮ ವಶಕ್ಕೆ ಪಡೆದಿದ್ದಾರೆ
ಮಧ್ಯಪ್ರದೇಶ ಹೈಕೋರ್ಟ್‌ಗೆ ಸಲ್ಲಿಸಲಾಗಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಮರ್ಥ್ ಸಿಂಗ್ ಹಿಂಪಡೆದುಕೊಂಡ ಒಂದು ಗಂಟೆಯ ನಂತರವೇ ಈ ಬೆಳವಣಿಗೆ ನಡೆದಿದೆ. ನ್ಯಾಯಮೂರ್ತಿ ಅವನೀಂದ್ರ ಕುಮಾರ್ ಸಿಂಗ್ ಅವರ ಏಕಸದಸ್ಯ ಪೀಠದಿಂದ ಈ ಅರ್ಜಿಯನ್ನು ಹಿಂಪಡೆಯಲಾಗಿತ್ತು. ಕಳೆದ ವಾರ ಕೆಳ ಹಂತದ ನ್ಯಾಯಾಲಯವು ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ, ಗುರುವಾರ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯನ್ನು ಹಿಂಪಡೆದುಕೊಂಡ ಕಾರಣದಿಂದ, ಶರಣಾಗುವುದು ಬಿಟ್ಟು ಅವರಿಗೆ ಬೇರೆ ಯಾವ ಆಯ್ಕೆಯೂ ಉಳಿದಿರಲಿಲ್ಲ.
ಸಮರ್ಥ್ ಸಿಂಗ್ ಅವರ ತಾಯಿ ಗಿರಿಬಾಲಾ ಸಿಂಗ್ ಅವರು ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿದ್ದು, ಪ್ರಸ್ತುತ ಭೋಪಾಲ್ ಗ್ರಾಹಕ ನ್ಯಾಯಾಲಯದ ಮುಖ್ಯಸ್ಥೆಯಾಗಿದ್ದಾರೆ. ಅವರಿಗೆ ಕಳೆದ ವಾರ ಭೋಪಾಲ್ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಈ ಪ್ರಕರಣದ ಎಫ್‌ಐಆರ್‌ನಲ್ಲಿ ಅವರ ಹೆಸರನ್ನು ಸಹ ದಾಖಲಿಸಲಾಗಿದೆ.
ಇದನ್ನು ಓದಿದ್ದೀರಾ? ಬಂಗಾಳದ ‘ಭದ್ರಲೋಕ’ ಮಮತಾ ಸರ್ಕಾರದಿಂದ ದೂರ ಸರಿದಿದ್ದೇಕೆ?
ಮೇ 12 ರಂದು ಭೋಪಾಲ್‌ನ ಕಟಾರಾ ಹಿಲ್ಸ್ ಪ್ರದೇಶದಲ್ಲಿರುವ ಗಂಡನ ಮನೆಯಲ್ಲಿ ತ್ವಿಶಾ ಶರ್ಮಾ ಅವರ ಶವ ಪತ್ತೆಯಾಗಿತ್ತು. ತ್ವಿಶಾ ಅವರ ಕುಟುಂಬದವರು ಗಂಡ ಮತ್ತು ಅವರ ಮನೆಯವರ ಮೇಲೆ ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಮಾಡಿದ್ದಾರೆ.
ಸಮರ್ಥ್ ಸಿಂಗ್ ಮತ್ತು ಅವರ ತಾಯಿಯ ವಿರುದ್ಧ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 80(2), 85 ಮತ್ತು 3(5) ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆಯ ಸೂಕ್ತ ನಿಯಮಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಸಮರ್ಥ್ ಸಿಂಗ್ ಬಂಧನಕ್ಕೆ ನೆರವಾಗುವ ಮಾಹಿತಿ ನೀಡಿದವರಿಗೆ 30,000 ರೂ. ನಗದು ಬಹುಮಾನವನ್ನು ಪೊಲೀಸರು ಘೋಷಿಸಿದ್ದರು. ಜೊತೆಗೆ, ಅವರ ಪಾಸ್‌ಪೋರ್ಟ್ ರದ್ದುಗೊಳಿಸಲು ನ್ಯಾಯಾಲಯದ ಅನುಮತಿ ಕೋರಿ ಪೊಲೀಸರು ಅರ್ಜಿ ಸಲ್ಲಿಸಿದ್ದರು.




