ಮಹಾರಾಷ್ಟ್ರದ ಆಡಳಿತಾರೂಢ ‘ಮಹಾಯುತಿ’ ಮೈತ್ರಿಕೂಟದಲ್ಲಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡಿವೆ. ಕೊಲ್ಲಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಗೋಕುಲ್ ಡೈರಿ) ಮಂಡಳಿಯ ನಿಯಂತ್ರಣ ಸಾಧಿಸುವ ವಿಚಾರದಲ್ಲಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ನಾಯಕ ರವೀಂದ್ರ ಧಂಗೆಕರ್ ಅವರು ತಮ್ಮದೇ ಮಹಾಯುತಿ ಸರ್ಕಾರದ ನಿರ್ಧಾರವನ್ನು ಬಹಿರಂಗವಾಗಿ ವಿರೋಧಿಸಿದ್ದಾರೆ. “ಕೊಲ್ಲಾಪುರದ ಅತ್ಯಂತ ಪ್ರಭಾವಿ ಸಹಕಾರಿ ಸಂಸ್ಥೆಯಾದ ಗೋಕುಲ್ ಡೈರಿಯ ವಿಷಯದಲ್ಲಿ ಸರ್ಕಾರವು ಅಧಿಕಾರವನ್ನು ಬಲವಂತವಾಗಿ ಅಥವಾ ಹಿಂಬಾಗಿಲಿನಿಂದ ಕಸಿದುಕೊಳ್ಳಲು ಯತ್ನಿಸಬಾರದು. ರೈತ-ಮತದಾರರು ನೀಡಿದ ತೀರ್ಪನ್ನು ಗೌರವಿಸಬೇಕು” ಎಂದು ಧಂಗೆಕರ್ ಆಗ್ರಹಿಸಿದ್ದಾರೆ.
ಇತ್ತೀಚೆಗೆ ನಡೆದ ಗೋಕುಲ್ ಹಾಲು ಸಹಕಾರಿ ಒಕ್ಕೂಟದ ಚುನಾವಣೆಯಲ್ಲಿ ಕಾಂಗ್ರೇಸ್ ನಾಯಕ ಸತೇಜ್ ಪಾಟೀಲ್ ನೇತೃತ್ವದ ಮೈತ್ರಿಕೂಟವು ಒಟ್ಟು 13 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಸಾಧಿಸಿತ್ತು. ಆಡಳಿತಾರೂಢ ಮಹಾಯುತಿ ಮೈತ್ರಿಕೂಟವು 12 ಸ್ಥಾನಗಳನ್ನಷ್ಟೇ ಗೆದ್ದು, ಅಧಿಕಾರದಿಂದ ದೂರ ಉಳಿದಿತ್ತು. ಆದರೆ, ಈ ಚುನಾವಣಾ ಫಲಿತಾಂಶದ ನಂತರ ಮಹಾರಾಷ್ಟ್ರ ರಾಜ್ಯ ಸಚಿವ ಸಂಪುಟವು ಹೊಸ ಪ್ರಸ್ತಾವನೆಯೊಂದಕ್ಕೆ ಅನುಮೋದನೆ ನೀಡಿ, ಗೋಕುಲ್ ಡೈರಿ ಮಂಡಳಿಗೆ ಐವರು ನಿರ್ದೇಶಕರನ್ನು ನೇಮಕ ಮಾಡುವ ಅಧಿಕಾರವನ್ನು ಸರ್ಕಾರಕ್ಕೆ ವಹಿಸಿಕೊಂಡಿದೆ. ಈ ಪೈಕಿ ನಾಲ್ಕು ನಿರ್ದೇಶಕರಿಗೆ ಮತದಾನದ ಹಕ್ಕನ್ನೂ ನೀಡಲಾಗಿದೆ. ಸರ್ಕಾರದ ಈ ನಡಾವಳಿಯು ಚುನಾವಣೆಯಲ್ಲಿ ಸೋತರೂ ಅಧಿಕಾರ ಹಿಡಿಯಲು ನಡೆಸುತ್ತಿರುವ ಕಾನೂನುಬಾಹಿರ ಯತ್ನವೆಂದು ಭಾರೀ ವಿರೋಧ ವ್ಯಕ್ತವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಶಿವಸೇನಾ ನಾಯಕ ರವೀಂದ್ರ ಧಂಗೆಕರ್, “ಸಹಕಾರಿ ಸಂಸ್ಥೆಗಳ ಚುನಾವಣಾ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸಬೇಕು. ಯಾರು ಬಹುಮತ ಗಳಿಸಿದ್ದಾರೋ ಅವರಿಗೆ ಅಧಿಕಾರ ಚಲಾಯಿಸಲು ಅವಕಾಶ ನೀಡಬೇಕು” ಎಂದು ಸ್ಪಷ್ಟಪಡಿಸಿದ್ದಾರೆ.
“ಕಾನೂನುಗಳನ್ನು ತಿದ್ದುಪಡಿ ಮಾಡಿ ನಾಲ್ಕು ಮತದಾನ ಹಕ್ಕಿನ ನಿರ್ದೇಶಕರನ್ನು ನೇಮಕ ಮಾಡುವ ಸರ್ಕಾರದ ನಿರ್ಧಾರ ತಪ್ಪು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ. ಯಾವುದೇ ನಿರ್ದಿಷ್ಟ ಪಕ್ಷವನ್ನು ಗುರಿಯಾಗಿಸಿಕೊಂಡು ನಾನು ಈ ಮಾತು ಹೇಳುತ್ತಿಲ್ಲ; ಆದರೆ, ವ್ಯವಸ್ಥೆ ಮತ್ತು ಪ್ರಜಾಸತ್ತಾತ್ಮಕ ನಿಯಮಗಳನ್ನು ಗೌರವಿಸದಿದ್ದರೆ ಭವಿಷ್ಯದ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ” ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ರವೀಂದ್ರ ಧಂಗೆಕರ್ ಅವರು ಮಹಾಯುತಿ ಮೈತ್ರಿಕೂಟದ ವಿರುದ್ಧ ಕಳೆದೊಂದು ತಿಂಗಳಲ್ಲಿ 2ನೇ ಬಾರಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಪುಣೆಯಲ್ಲಿ ನಡೆದ ರಾಜ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ಮಹಾಯುತಿ ಅಭ್ಯರ್ಥಿ ಸೋತಾಗ, ಧಂಗೆಕರ್ ಅವರು ಬಿಜೆಪಿ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸಿದ್ದರು. ಆಗ ಬಿಜೆಪಿ ನಾಯಕರು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ನಿಲುವನ್ನು ಪ್ರಶ್ನಿಸಿದ್ದರಾದರೂ ಶಿಂಧೆ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದರು.
ಇನ್ನು, ಕಾಂಗ್ರೆಸ್ ನಾಯಕ ಸತೇಜ್ ಪಾಟೀಲ್ ಕೂಡ ಮಹಾಯುತಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಗೋಕುಲ್ ಡೈರಿಯನ್ನು ತಮ್ಮ ವಶಕ್ಕೆ ಪಡೆಯಲು ಆಡಳಿತಾರೂಢ ಮೈತ್ರಿಕೂಟವು ಹತಾಶೆಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಸರ್ಕಾರಿ ಕೋಟಾದಲ್ಲಿ ನಿರ್ದೇಶಕರನ್ನು ನೇಮಕ ಮಾಡುವುದಲ್ಲದೆ, ಅವರನ್ನು ಗೋವಾ, ಸೂರತ್ ಹಾಗೂ ಉದಯಪುರಗಳಂತಹ ಸ್ಥಳಗಳಲ್ಲಿ ಇರಿಸಿ, ಅವರಿಗೆ ತಿಳಿಯದಂತೆ ಪ್ರಮಾಣಪತ್ರಗಳಿಗೆ ಸಹಿ ಪಡೆದುಕೊಳ್ಳಲಾಗುತ್ತಿದೆ ಎಂದು ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.



