ಸಿಜೆಐ ವಿರುದ್ಧ ವಕೀಲರ ಆಕ್ರೋಶ: ನ್ಯಾಯಾಂಗದ ಘನತೆಗೆ ಧಕ್ಕೆ ಮತ್ತು ವಿಶ್ವಾಸಾರ್ಹತೆ ನಡುವಿನ ವೈರುಧ್ಯ!

Date:

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ವಿರುದ್ಧ ನ್ಯಾಯಾಲಯದಲ್ಲೇ ವಕೀಲರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ನ್ಯಾಯಾಂಗದ ಘನತೆ, ನ್ಯಾಯಾಧೀಶರ ನಿಷ್ಪಕ್ಷಪಾತತೆ ಹಾಗೂ ಜನಸಾಮಾನ್ಯರಿಗೆ ನ್ಯಾಯಾಂಗದ ಮೇಲಿರುವ ವಿಶ್ವಾಸದ ಕುರಿತು ಮಹತ್ವದ ಚರ್ಚೆಗೆ ಕಾರಣವಾಗಿದೆ. ನ್ಯಾಯಾಲಯದಲ್ಲಿ ಅಗೌರವ ತೋರುವುದು ಖಂಡನೀಯ ಎಂಬ ನಿಲುವಿನ ಜೊತೆಗೇ, ನ್ಯಾಯಾಂಗದ ತೀರ್ಪುಗಳು ಮತ್ತು ಕಾರ್ಯವೈಖರಿಯ ಬಗ್ಗೆ ಜನರಲ್ಲಿ ಹೆಚ್ಚುತ್ತಿರುವ ಅಸಮಾಧಾನವನ್ನು ನಿರ್ಲಕ್ಷಿಸಲು ಸಾಧ್ಯವೇ ಎಂಬ ಪ್ರಶ್ನೆಯೂ ಉಳಿದಿದೆ.

ಸೋಮವಾರ (ನ.16), ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಅಸಾಧಾರಣ ಘಟನೆಯೊಂದು ದೇಶದ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಹಲವು ಮೂಲಭೂತ ಪ್ರಶ್ನೆಗಳನ್ನು ಮುನ್ನೆಲೆಗೆ ತಂದಿದೆ. ನ್ಯಾಯ ಒದಗಿಸುವ ದೇಶದ ಅತ್ಯುನ್ನತ ಸಂಸ್ಥೆಯಾದ ಸುಪ್ರೀಂ ಕೋರ್ಟ್‌ನಲ್ಲಿಯೇ ವಕೀಲರೊಬ್ಬರು ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನಿಷ್ಪಕ್ಷಪಾತತೆ ಮತ್ತು ಹುದ್ದೆಗೆ ಅಗತ್ಯವಾದ ಪ್ರಾಮಾಣಿಕತೆಯನ್ನು ವಕೀಲ ಪ್ರವೀಣ್ ಸಿಂಘಾಲ್ ಪ್ರಶ್ನಿಸಿದ್ದಾರೆ.

- Advertisement -

ವಕೀಲ ಪ್ರವೀಣ್ ಸಿಂಘಾಲ್ ಅವರು ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಕುರಿತ ತಮ್ಮ ಅಹವಾಲಿಗೆ ಸಂಬಂಧಿಸಿದಂತೆ ತುರ್ತು ವಿಚಾರಣೆಗೆ ಮನವಿ ಮಾಡಿದ್ದರು. ನವೆಂಬರ್ 2ರಂದು ಮುಖ್ಯ ನ್ಯಾಯಮೂರ್ತಿಗಳ ಕಚೇರಿಗೆ ದಾಖಲೆಗಳನ್ನು ಸಲ್ಲಿಸಿದ್ದರು. ಆದರೂ, ಯಾವುದೇ ಪ್ರತಿಕ್ರಿಯೆ ಬಂದಿಲ್ಲವೆಂದು ಅವರು ಅಸಮಾಧಾನಗೊಂಡಿದ್ದರು. ಇದೇ ವಿಚಾರವನ್ನು ಅವರು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರಿದ್ದ ಪೀಠದ ಮುಂದೆ ಸೋಮವಾರ ಪ್ರಸ್ತಾಪಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಷೇರುದಾರರ ಇಂದಿನ ಜಾಗತಿಕ ಮಂತ್ರ- ‘ಅಮೆರಿಕವನ್ನು ನಂಬಿ ಹಣ...

ಅಮೆರಿಕನ್ನರು ಮಾತ್ರವಲ್ಲ, ವಿದೇಶಗಳ ಸಾಮಾನ್ಯ ಜನರೂ ಮುಗಿಬಿದ್ದು ಅಮೆರಿಕದ ಷೇರುಗಳನ್ನು ಕೊಳ್ಳುತ್ತಿದ್ದಾರೆ. ಅಮೆರಿಕದ ರಾಜಕೀಯ ನಾಯಕತ್ವದ ಬಗ್ಗೆ ಅವರಿಗೆ ಅಸಮಾಧಾನವಿದ್ದಿರಬಹುದು. ಆದರೆ ಅಮೆರಿಕನ್ ಕಂಪನಿಗಳ ಷೇರುಗಳ ಮೇಲೆ ಮಾತ್ರ ಅವರೆಲ್ಲರಿಗೂ ವಿಪರೀತ ವ್ಯಾಮೋಹ...

ಮಹಿಳೆ ಮಾಡುತ್ತಿರುವ ಬಿಟ್ಟಿ ಚಾಕರಿಗಳೇನೇನು? ಇದನ್ನೇಕೆ ಅರಿಯಲು ಮುಂದಾಗಿದೆ...

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸರ್ಕಾರದ ಗುರಿಗೆ ಒಂದು ದೊಡ್ಡ ಅಡ್ಡಿ ಎದುರಾಗಿದೆ. ಅದೇನೆಂದರೆ; ಸಾಕಷ್ಟು ಸಂಖ್ಯೆಯ ಮಹಿಳೆಯರನ್ನು ಉದ್ಯೋಗ ಕ್ಷೇತ್ರಕ್ಕೆ ತರುವುದು. ವಿಶ್ವಬ್ಯಾಂಕ್ ಪ್ರಕಾರ, 2047ರ ವೇಳೆಗೆ...

ಭದ್ರತೆಯ ಹೆಸರಿನಲ್ಲಿ ಮಾಂಸದಂಗಡಿಗಳಿಗೆ ಬೀಗ: ಸರ್ಕಾರದ ಈ ನಿರ್ಧಾರದ...

ಈ ಬೆಳವಣಿಗೆ ಕಾಂಗ್ರೆಸ್ ಸರ್ಕಾರದ ಆಡಳಿತಾತ್ಮಕ ಹೊಣೆಗಾರಿಕೆಯನ್ನೂ ಮುನ್ನೆಲೆಗೆ ತಂದಿದೆ. ಪ್ರಧಾನಿಯ ಭೇಟಿಯ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್‌ಗಳ ಆಗಮನ ಮತ್ತು ನಿರ್ಗಮನದ ಭದ್ರತೆಯನ್ನು ನಿರ್ಬಂಧಕ್ಕೆ ಕಾರಣವೆಂದು ಸಮರ್ಥಿಸಲಾಗುತ್ತಿದ್ದರೆ, ಅದಕ್ಕೂ ಸಮಗ್ರ ವಿವರಣೆ ಬೇಕಾಗುತ್ತದೆ. ಪ್ರಧಾನಿ...

ಆದರೆ, ಪೀಠವು ನ್ಯಾಯಾಲಯದ ನಿಗದಿತ ಕಾರ್ಯವಿಧಾನದಂತೆ ವಿಷಯವನ್ನು ಪ್ರಸ್ತಾಪಿಸಬೇಕೆಂದು ಸೂಚಿಸಿತು. ತಾಳ್ಮೆಯಿಂದ ಕಾಯಬೇಕೆಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಅವರು ಸೂಚಿಸಿದರು. ಆದರೆ, ಅದನ್ನು ವಕೀಲರು ನಿರಾಕರಿಸಿದರು. “ಮುಖ್ಯ ನ್ಯಾಯಮೂರ್ತಿಗಳು ಆ ಹುದ್ದೆಯಲ್ಲಿ ಕುಳಿತುಕೊಳ್ಳಲು ಅರ್ಹರಲ್ಲ ಮತ್ತು ಅವರಿಗೆ ಆ ಹುದ್ದೆಗೆ ಅಗತ್ಯವಾದ ಪ್ರಾಮಾಣಿಕತೆ ಇಲ್ಲ” ಎಂಬರ್ಥದಲ್ಲಿ ಜೋರು ದನಿಯಲ್ಲಿ ಆರೋಪ ಮಾಡಿದರು.

ವಕೀಲ ಪ್ರವೀಣ್ ಸಿಂಘಾಲ್ ಅವರ ದನಿ ಜೋರಾಗುತ್ತಿದ್ದಂತೆಯೇ, ವಿಚಾರಣೆಯ ಆಡಿಯೋ ಮತ್ತು ವಿಡಿಯೋ ಪ್ರಸಾರವನ್ನು ಸ್ಥಗಿತಗೊಳಿಸಲಾಯಿತು. ಭದ್ರತಾ ಸಿಬ್ಬಂದಿಗಳು ವಕೀಲರನ್ನು ನ್ಯಾಯಾಲಯದ ಕೊಠಡಿಯಿಂದ ಹೊರಗೆ ಕರೆದೊಯ್ದರು.

ಮರುದಿನ, ನವೆಂಬರ್ 17ರಂದು ಸುಪ್ರೀಂ ಕೋರ್ಟ್ ವಕೀಲರ ಸಂಘವು ಈ ಘಟನೆಯನ್ನು ನ್ಯಾಯಾಂಗ ನಿಂದನೆಯ ದೃಷ್ಟಿಯಿಂದ ಪರಿಗಣಿಸುವಂತೆ ಮನವಿ ಮಾಡಿತು. ವಕೀಲರ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಭಾರತದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರು ಅನುಮತಿ ನೀಡಿದರು. ಈ ಸಂಬಂಧದ ಅರ್ಜಿಯನ್ನು ನವೆಂಬರ್ 18ರಂದು ವಿಚಾರಣೆಗೆ ಪಟ್ಟಿ ಮಾಡುವುದಾಗಿ ಮುಖ್ಯ ನ್ಯಾಯಮೂರ್ತಿಗಳು ತಿಳಿಸಿದರು.

ಈ ಘಟನೆಯ ಬಗ್ಗೆ ಎರಡು ವಿಭಿನ್ನವಾದ ಚರ್ಚೆಗಳು ಆರಂಭವಾಗಿವೆ. ಮೊದಲನೆಯದಾಗಿ, ನ್ಯಾಯಾಲಯದಲ್ಲಿ ವಕೀಲರೊಬ್ಬರು ಮುಖ್ಯ ನ್ಯಾಯಮೂರ್ತಿಗಳನ್ನು ವೈಯಕ್ತಿಕವಾಗಿ ಅವಮಾನಿಸುವುದು ನ್ಯಾಯಾಂಗದ ಶಿಸ್ತು ಮತ್ತು ಘನತೆಗೆ ಧಕ್ಕೆ ತರುವುತ್ತವೆ ಎಂದು ವಿರೋಧ ವ್ಯಕ್ತವಾಗುತ್ತಿದೆ. ಎರಡನೆಯದಾಗಿ, ನ್ಯಾಯಾಂಗದ ಕಾರ್ಯವೈಖರಿ ಮತ್ತು ಕೆಲವು ತೀರ್ಪುಗಳ ಬಗ್ಗೆ ವಕೀಲರು ಮತ್ತು ಜನಸಾಮಾನ್ಯರಲ್ಲಿ ಅಸಮಾಧಾನ ಮೂಡುತ್ತಿರುವುದು ಇಂತಹ ಘಟನೆಗಳಿಗೆ ಕಾರಣವೆಂಬ ವಾದವೂ ಇದೆ.

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಅವರು ಈ ಘಟನೆಯನ್ನು ನ್ಯಾಯಾಂಗದ ಘನತೆ ಮತ್ತು ಶಿಸ್ತಿನ ದೃಷ್ಟಿಯಿಂದ ನೋಡುತ್ತಾರೆ. ನ್ಯಾಯಾಲಯದಲ್ಲಿ ವಕೀಲರಿಗೂ ಕಕ್ಷಿದಾರರಿಗೂ ತಮ್ಮ ಅಹವಾಲುಗಳನ್ನು ಮಂಡಿಸಲು ಅವಕಾಶವಿದೆ. ಆದರೆ, ಅದಕ್ಕೆ ಕಾನೂನುಬದ್ಧ ಕಾರ್ಯವಿಧಾನಗಳಿವೆ. ನ್ಯಾಯಾಧೀಶರ ವಿರುದ್ಧ ಅಸಮಾಧಾನವಿದ್ದರೂ ಅದನ್ನು ವ್ಯಕ್ತಪಡಿಸುವಾಗ ನ್ಯಾಯಾಲಯದ ಘನತೆಗೆ ಧಕ್ಕೆ ತರಬಾರದು ಎಂಬುದು ಅವರ ಅಭಿಪ್ರಾಯ.

ಈ ದಿನ.ಕಾಮ್‌ ಜೊತೆ ಮಾತನಾಡಿದ ಗೋಪಾಲಗೌಡರು, “ನ್ಯಾಯಾಲಯದ ಪಾವಿತ್ರ್ಯ, ಘನತೆ ಮತ್ತು ಶಿಸ್ತಿಗೆ ಧಕ್ಕೆಯಾಗುವ ರೀತಿಯಲ್ಲಿ ಯಾರೂ ವರ್ತಿಸಬಾರದು. ಕಕ್ಷಿದಾರರಾಗಲಿ, ವಕೀಲರಾಗಲಿ ನ್ಯಾಯಾಲಯದಲ್ಲಿ ಗೌರವಯುತವಾಗಿ ನಡೆದುಕೊಳ್ಳುವುದು ಅತ್ಯಂತ ಅವಶ್ಯಕ. ದೇಶದ ನಾಗರಿಕನಿಗೆ ನ್ಯಾಯ ಪಡೆಯಲು ಇರುವ ಅಂತಿಮ ಆಶ್ರಯ ನ್ಯಾಯಾಲಯ. ಅದು ದೇಶದ ಜನಸಾಮಾನ್ಯರ ಹಕ್ಕುಗಳನ್ನು ರಕ್ಷಿಸುವ ಭದ್ರಕೋಟೆಯಾಗಿದೆ. ಒಂದು ಪ್ರಕರಣ ವಿಚಾರಣೆಗೆ ಪಟ್ಟಿಯಾಗಿಲ್ಲ ಎಂದಾದರೆ, ಅದನ್ನು ನ್ಯಾಯಾಲಯದ ಗಮನಕ್ಕೆ ತರಲು ನಿರ್ದಿಷ್ಟ ಕಾರ್ಯವಿಧಾನವಿದೆ. ‘ನನ್ನ ಪ್ರಕರಣ ಈ ದಿನಾಂಕಕ್ಕೆ ಬರಬೇಕಿತ್ತು, ಆದರೆ ಬಂದಿಲ್ಲ. ಕನಿಷ್ಠ ನಾಳೆಯಾದರೂ ವಿಚಾರಣೆಗೆ ಪಟ್ಟಿ ಮಾಡಿ’ ಎಂದು ಗೌರವಯುತವಾಗಿ ಮನವಿ ಮಾಡಬಹುದು. ಅದನ್ನು ಬಿಟ್ಟು ನ್ಯಾಯಾಲಯದಲ್ಲಿ, ವಿಶೇಷವಾಗಿ ಮುಖ್ಯ ನ್ಯಾಯಮೂರ್ತಿಗಳ ಎದುರು, ಅಗೌರವದಿಂದ ಮಾತನಾಡುವುದು ಸರಿಯಲ್ಲ. ಅಂತಹ ವರ್ತನೆಯು ಕೇವಲ ಒಬ್ಬ ವ್ಯಕ್ತಿಗೆ ಮಾಡಿದ ಅವಮಾನವಲ್ಲ; ಮುಖ್ಯ ನ್ಯಾಯಮೂರ್ತಿಗಳ ಹುದ್ದೆಯ ಘನತೆಗೂ ನ್ಯಾಯಾಂಗ ಸಂಸ್ಥೆಯ ಗೌರವಕ್ಕೂ ಧಕ್ಕೆ ತರುವಂತಹದ್ದು” ಎಂದಿದ್ದಾರೆ.

Justice Gowda

“ನ್ಯಾಯಾಲಯಗಳು ಆರೋಪಿಗಳು, ಅಪರಾಧಿಗಳು ಮತ್ತು ಭಯೋತ್ಪಾದನೆಯ ಆರೋಪ ಎದುರಿಸುತ್ತಿರುವವರ ಪ್ರಕರಣಗಳನ್ನೂ ಕಾನೂನಿನ ಪ್ರಕಾರ ನಿರ್ಭೀತಿಯಿಂದ ವಿಚಾರಣೆ ನಡೆಸಿ ನ್ಯಾಯ ಒದಗಿಸಬೇಕಾಗುತ್ತದೆ. ನ್ಯಾಯಾಧೀಶರ ಮೇಲೆ ಸಂವಿಧಾನವು ಮಹತ್ತರವಾದ ಜವಾಬ್ದಾರಿಯನ್ನು ಹೊರಿಸಿದೆ. ಇಂತಹ ಸಂದರ್ಭದಲ್ಲಿ ವಕೀಲರೇ ನ್ಯಾಯಾಲಯದಲ್ಲಿ ಅನುಚಿತವಾಗಿ ವರ್ತಿಸಿದರೆ, ಅದು ಸಮಾಜದ ಮೇಲೆ ದುಷ್ಪರಿಣಾಮ ಬೀರಬಹುದು. ನ್ಯಾಯಾಂಗದ ಮೇಲಿನ ಸಾರ್ವಜನಿಕ ಗೌರವ ಮತ್ತು ವಿಶ್ವಾಸಕ್ಕೂ ಧಕ್ಕೆಯಾಗಬಹುದು” ಎಂದು ಹೇಳಿದ್ದಾರೆ.

“ಯಾರಿಗಾದರೂ ಅಹವಾಲುಗಳಿದ್ದರೆ, ಅವುಗಳನ್ನು ಪರಿಹರಿಸಿಕೊಳ್ಳಲು ಕಾನೂನುಬದ್ಧ ಕಾರ್ಯವಿಧಾನಗಳಿವೆ. ಆ ವಿಧಾನಗಳ ಮೂಲಕವೇ ಗೌರವಯುತವಾಗಿ ತಮ್ಮ ಸಮಸ್ಯೆಗಳನ್ನು ನ್ಯಾಯಾಲಯದ ಗಮನಕ್ಕೆ ತರಬೇಕು. ನ್ಯಾಯಾಲಯದ ಘನತೆ ಮತ್ತು ಶಿಸ್ತನ್ನು ಕಾಪಾಡುವುದು ಪ್ರತಿಯೊಬ್ಬ ವಕೀಲ ಮತ್ತು ಕಕ್ಷಿದಾರನ ಕರ್ತವ್ಯವಾಗಿದೆ” ಎಂದು ಪ್ರತಿಪಾದಿಸಿದ್ದಾರೆ.

ಗೋಪಾಲಗೌಡರ ಅಭಿಪ್ರಾಯದಲ್ಲಿ ನ್ಯಾಯಾಲಯದ ಘನತೆಯು ಕೇವಲ ನ್ಯಾಯಾಧೀಶರ ವೈಯಕ್ತಿಕ ಗೌರವಕ್ಕೆ ಸಂಬಂಧಿಸಿದ ವಿಷಯವಲ್ಲ. ಅದು ನ್ಯಾಯ ವಿತರಣೆಯ ವ್ಯವಸ್ಥೆಯ ಮೇಲಿನ ಸಾರ್ವಜನಿಕ ನಂಬಿಕೆಗೆ ಸಂಬಂಧಿಸಿದೆ.

ನಾಗರಿಕರು ನ್ಯಾಯಾಲಯದ ಮೆಟ್ಟಿಲೇರುವಾಗ ತನ್ನ ಸಮಸ್ಯೆಗೆ ಕಾನೂನುಬದ್ಧ ಪರಿಹಾರ ಸಿಗುತ್ತದೆ ಎಂಬ ವಿಶ್ವಾಸದಿಂದ ಬರುತ್ತಾರೆ. ನ್ಯಾಯಾಧೀಶರಿಗೆ ಯಾವುದೇ ರೀತಿಯ ಒತ್ತಡ ಅಥವಾ ಬೆದರಿಕೆಯಿಲ್ಲದೆ ತೀರ್ಪು ನೀಡುವ ವಾತಾವರಣ ಇರಬೇಕಾಗುತ್ತದೆ. ಹೀಗಾಗಿ, ವಕೀಲರ ವರ್ತನೆಯ ಪ್ರಶ್ನೆಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.

ಆದರೆ, ಇದಕ್ಕೆ ಪ್ರತಿಯಾದ ಮತ್ತೊಂದು ಪ್ರಶ್ನೆಯೂ ಇದೆ. ನ್ಯಾಯಾಂಗದ ಘನತೆಯನ್ನು ಕಾಪಾಡುವ ಜವಾಬ್ದಾರಿ ವಕೀಲರು ಮತ್ತು ಕಕ್ಷಿದಾರರಿಗೆ ಮಾತ್ರವೇ ಇದೆಯೇ? ನ್ಯಾಯಾಂಗ ಸಂಸ್ಥೆಯೂ ತನ್ನ ತೀರ್ಪುಗಳು, ನಡವಳಿಕೆ ಮತ್ತು ಕಾರ್ಯವೈಖರಿಯ ಮೂಲಕ ಜನರ ವಿಶ್ವಾಸವನ್ನು ಗಳಿಸಬೇಕಲ್ಲವೇ?

ಆದ್ದರಿಂದಲೇ, ಇತ್ತೀಚಿನ ವರ್ಷಗಳಲ್ಲಿ ನ್ಯಾಯಾಂಗದ ಕೆಲವು ತೀರ್ಪುಗಳು, ವಿಚಾರಣೆಗಳ ವಿಳಂಬ ಮತ್ತು ಶೋಷಿತ ಸಮುದಾಯಗಳ ನ್ಯಾಯದ ಪ್ರಶ್ನೆಗಳು ಗಂಭೀರ ಅಸಮಾಧಾನಕ್ಕೆ ಕಾರಣವಾಗಿವೆ ಎನ್ನುತ್ತಾರೆ ವಕೀಲ ವಿನಯ್ ಶ್ರೀನಿವಾಸ್.

ಈ ದಿನ.ಕಾಮ್‌ ಜೊತೆ ಮಾತನಾಡಿದ ಹೈಕೋರ್ಟ್‌ ವಕೀಲರಾದ ವಿನಯ್ ಶ್ರೀನಿವಾಸ್‌, “ದೇಶದ ಜನರಲ್ಲಿ ನ್ಯಾಯಾಂಗದ ಮೇಲಿನ ವಿಶ್ವಾಸ ಬಹಳಷ್ಟು ಕಡಿಮೆಯಾಗಿದೆ. ವಿಶೇಷವಾಗಿ ಮಹಿಳೆಯರು, ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರಂತಹ ಶೋಷಿತ ಸಮುದಾಯಗಳಲ್ಲಿ ನ್ಯಾಯಾಂಗದ ಮೇಲಿನ ವಿಶ್ವಾಸ ತೀವ್ರವಾಗಿ ಕುಸಿದಿದೆ” ಎಂದಿದ್ದಾರೆ.

“ಕಳೆದ ಹಲವು ವರ್ಷಗಳಿಂದ ನ್ಯಾಯಾಂಗದ ಕಾರ್ಯವೈಖರಿ ಮತ್ತು ತೀರ್ಪುಗಳನ್ನು ಗಮನಿಸಿದರೆ, ಕಾರ್ಮಿಕರ ಹಕ್ಕುಗಳ ವಿರುದ್ಧವಾಗಿ, ಗುತ್ತಿಗೆ ಕಾರ್ಮಿಕ ಪದ್ಧತಿಯನ್ನು ಪ್ರಶ್ನಿಸಿ ಹೋರಾಟ ನಡೆಸುತ್ತಿರುವ ಕಾರ್ಮಿಕರ ವಿರುದ್ಧವಾಗಿ ತೀರ್ಪುಗಳು ಬರುತ್ತಿರುವುದನ್ನು ನೋಡಬಹುದು. ಬಿಲ್ಕಿಸ್ ಬಾನೊ ಪ್ರಕರಣದಲ್ಲಿ, ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಅಪರಾಧಿಗಳನ್ನು ಅವಧಿಗೆ ಮುನ್ನ ಬಿಡುಗಡೆ ಮಾಡಲಾಯಿತು. ಆದರೆ, ಬಿಲ್ಕಿಸ್ ಬಾನೊ ಅವರ ಅಭಿಪ್ರಾಯವನ್ನೂ ಕೇಳಲಿಲ್ಲ. ಮತ್ತೊಂದೆಡೆ, ಉಮರ್ ಖಾಲಿದ್ ಪ್ರಕರಣದಲ್ಲಿ ಹಲವು ವರ್ಷಗಳಿಂದ ವಿಚಾರಣೆಯೇ ಆರಂಭವಾಗದೆ, ಅವರು ಜೈಲಿನಲ್ಲಿದ್ದಾರೆ. ಇಂತಹ ಬೆಳವಣಿಗೆಗಳು ನ್ಯಾಯಾಂಗದ ಮೇಲಿನ ಜನರ ವಿಶ್ವಾಸವನ್ನು ಕುಗ್ಗಿಸುತ್ತಿವೆ” ಎಂದು ಹೇಳಿದ್ದಾರೆ.

image 229

“ಕರ್ನಾಟಕದಲ್ಲಿಯೂ ಇದೇ ರೀತಿಯ ಸಮಸ್ಯೆಗಳಿವೆ. ಪಿಟಿಸಿಎಲ್ ಕಾಯ್ದೆಯು ಸಾಮಾಜಿಕ ಕಲ್ಯಾಣದ ಉದ್ದೇಶದಿಂದ ರೂಪಿಸಲಾದ ಕಾಯ್ದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ಕಳೆದುಕೊಂಡ ಭೂಮಿಯನ್ನು ಅವರಿಗೆ ಮರಳಿ ದೊರಕಿಸಿಕೊಡುವುದು ಇದರ ಮೂಲ ಆಶಯ. ಆದರೆ, ಈ ಕಾಯ್ದೆಗೆ ಸಂಬಂಧಿಸಿದಂತೆ ನ್ಯಾಯಾಲಯಗಳು ನೀಡುತ್ತಿರುವ ಕೆಲವು ತೀರ್ಪುಗಳು ಬಹಳಷ್ಟು ಸಮಸ್ಯಾತ್ಮಕವಾಗಿವೆ. ಭೂಮಿ ಕಳೆದುಕೊಂಡ ದಲಿತರು ಮತ್ತು ಆದಿವಾಸಿಗಳು ನ್ಯಾಯಕ್ಕಾಗಿ ಬಂದಾಗ ಕಾಲಮಿತಿಯ ಪ್ರಶ್ನೆಯನ್ನು ಮುಂದಿಡಲಾಗುತ್ತದೆ. ಕೆಲವು ಪ್ರಕರಣಗಳಲ್ಲಿ 23ರಿಂದ 25 ವರ್ಷಗಳ ನಂತರವೂ ಭೂಮಿಯ ವಿಚಾರವಾಗಿ ವ್ಯಾಜ್ಯಗಳು ಮುಂದುವರಿಯುತ್ತವೆ. ಆದರೆ, ಮೂಲ ಫಲಾನುಭವಿಗಳಿಗೆ ನ್ಯಾಯ ದೊರೆಯುವ ವಿಚಾರದಲ್ಲಿ ಕಾಲಮಿತಿ ಅಡ್ಡಿಯಾಗುತ್ತದೆ. ಇಂತಹ ತೀರ್ಪುಗಳು ಕಾಯ್ದೆಯ ಸಾಮಾಜಿಕ ನ್ಯಾಯದ ಆಶಯವನ್ನೇ ದುರ್ಬಲಗೊಳಿಸುತ್ತವೆ” ಎಂದಿದ್ದಾರೆ.

“ಇನ್ನೊಂದೆಡೆ, ದೊಡ್ಡ ಉದ್ಯಮ ಸಂಸ್ಥೆಗಳಿಗೆ ಸಂಬಂಧಿಸಿದ ಪ್ರಕರಣಗಳನ್ನೂ ಗಮನಿಸಬೇಕು. ಅಂಬಾನಿ ಕುಟುಂಬದ ವಂತಾರ ಯೋಜನೆಗೆ ಸಂಬಂಧಿಸಿದ ಕಾನೂನಾತ್ಮಕ ಪ್ರಶ್ನೆಗಳು, ಅದಕ್ಕೆ ಸಂಬಂಧಿಸಿದ ನ್ಯಾಯಾಂಗ ತೀರ್ಪುಗಳು ಹಾಗೂ ನಂತರ ನ್ಯಾಯಾಧೀಶರು ಅಂತಹ ಸಂಸ್ಥೆಗಳೊಂದಿಗೆ ಹೊಂದುವ ಸಂಬಂಧಗಳ ಬಗ್ಗೆ ಪ್ರಶ್ನೆಗಳು ಕೇಳಿಬರುತ್ತಿವೆ. ಅದಾನಿ ಸಮೂಹಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ನ್ಯಾಯಾಂಗದ ನಿಲುವು ಮತ್ತು ತೀರ್ಪುಗಳ ಬಗ್ಗೆಯೂ ಪ್ರಶ್ನೆಗಳಿವೆ. ಇವೆಲ್ಲವನ್ನೂ ಒಟ್ಟಾಗಿ ನೋಡಿದಾಗ ನ್ಯಾಯಾಂಗವು ಬಲಿಷ್ಠರು ಮತ್ತು ಪ್ರಭಾವಶಾಲಿಗಳ ಪರವಾಗಿ ನಡೆದುಕೊಳ್ಳುತ್ತಿದೆ, ಶೋಷಿತ ಸಮುದಾಯಗಳ ಹಿತಾಸಕ್ತಿಗೆ ವಿರುದ್ಧವಾದ ತೀರ್ಪುಗಳು ಬರುತ್ತಿವೆ ಎಂಬ ಅಭಿಪ್ರಾಯ ಜನರಲ್ಲಿ ಮೂಡುತ್ತಿದೆ” ಎಂದು ವಿವರಿಸಿದ್ದಾರೆ.

“ಮತದಾರರ ಪಟ್ಟಿಯ ಎಸ್‌ಐಆರ್‌ ಪ್ರಕ್ರಿಯೆ ವಿಚಾರದಲ್ಲಿಯೂ, ಬಿಹಾರದಲ್ಲಿ ನಡೆದ ಪರಿಷ್ಕರಣೆ ಮತ್ತು ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಲಕ್ಷಾಂತರ ಜನರ ಮತದಾನದ ಹಕ್ಕಿನ ಬಗ್ಗೆ ಆತಂಕ ವ್ಯಕ್ತವಾಗುತ್ತಿರುವಾಗ, ಮುಂದಿನ ಚುನಾವಣೆಯಲ್ಲಿ ಮತದಾನ ಮಾಡಬಹುದು ಎನ್ನುವ ರೀತಿಯ ಸುಪ್ರೀಂ ಕೋರ್ಟ್‌ನ ಹೇಳಿಕೆಗಳು ಬೇಜವಾಬ್ದಾರಿತನದಿಂದ ಕೂಡಿವೆ. ಎಸ್‌ಐಆರ್ ವಿಚಾರದಲ್ಲಿ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಮಾತ್ರವಲ್ಲ, ಸುಪ್ರೀಂ ಕೋರ್ಟ್ ಕೂಡ ತನ್ನ ಜವಾಬ್ದಾರಿಯನ್ನು ಒಪ್ಪಿಕೊಳ್ಳಬೇಕು. ಜನರ ಮತದಾನದ ಹಕ್ಕನ್ನು ರಕ್ಷಿಸುವ ವಿಚಾರದಲ್ಲಿ ನ್ಯಾಯಾಂಗ ಇನ್ನಷ್ಟು ಗಂಭೀರವಾಗಿ ನಡೆದುಕೊಳ್ಳಬೇಕಿತ್ತು” ಎಂದಿದ್ದಾರೆ.

ಈ ಲೇಖನ ಓದಿದ್ದೀರಾ?: ಭದ್ರತೆಯ ಹೆಸರಿನಲ್ಲಿ ಮಾಂಸದಂಗಡಿಗಳಿಗೆ ಬೀಗ: ಸರ್ಕಾರದ ಈ ನಿರ್ಧಾರದ ಹಿಂದಿನ ತರ್ಕವೇನು?

“ನ್ಯಾಯಾಂಗದಿಂದ ಬರುತ್ತಿರುವ ಇಂತಹ ಹಲವು ತೀರ್ಪುಗಳು ಮತ್ತು ಅದರ ಕಾರ್ಯವೈಖರಿಯಿಂದಾಗಿ ಜನರಲ್ಲಿ, ವಿಶೇಷವಾಗಿ ಶೋಷಿತ ಸಮುದಾಯಗಳಲ್ಲಿ, ನ್ಯಾಯಾಂಗದ ಮೇಲಿನ ವಿಶ್ವಾಸ ಬಹಳಷ್ಟು ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ವಕೀಲರೊಬ್ಬರು ನ್ಯಾಯಾಲಯದಲ್ಲಿ ಆಕ್ರೋಶ ವ್ಯಕ್ತಪಡಿಸಿದಾಗ ಅದನ್ನು ಜನರು ಯಾವ ರೀತಿಯಲ್ಲಿ ನೋಡುತ್ತಾರೆ ಎಂಬುದನ್ನೂ ಅರ್ಥಮಾಡಿಕೊಳ್ಳಬೇಕು. ಆದರೆ, ನ್ಯಾಯಾಂಗದ ಬಗ್ಗೆ ಜನರಲ್ಲಿ ಎಷ್ಟು ನೋವು, ಅಸಮಾಧಾನ ಮತ್ತು ಆಕ್ರೋಶ ಸಂಗ್ರಹವಾಗಿದೆ ಎಂದರೆ, ಯಾರಾದರೂ ನ್ಯಾಯಾಲಯದ ವಿರುದ್ಧ ಕಟುವಾಗಿ ಮಾತನಾಡಿದಾಗಲೂ ಕೆಲವರು ಅದನ್ನು ಸಮರ್ಥಿಸಿಕೊಳ್ಳುವ ಅಥವಾ ‘ಪರವಾಗಿಲ್ಲ ಬಿಡಿ’ ಎಂದು ಭಾವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

“ನ್ಯಾಯಾಂಗದ ಗೌರವ ಕಾಪಾಡಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಆ ಗೌರವವು ಕೇವಲ ನ್ಯಾಯಾಲಯದಲ್ಲಿ ಎಲ್ಲರೂ ಗೌರವಯುತವಾಗಿ ಮಾತನಾಡುವುದರಿಂದ ಮಾತ್ರ ಉಳಿಯುವುದಿಲ್ಲ. ನ್ಯಾಯಾಂಗದ ತೀರ್ಪುಗಳು, ಕಾರ್ಯವೈಖರಿ ಹಾಗೂ ಜನರಿಗೆ ದೊರೆಯುವ ನ್ಯಾಯದ ಮೇಲೆಯೂ ಅದರ ಗೌರವ ಅವಲಂಬಿತವಾಗಿರುತ್ತದೆ” ಎಂದಿದ್ದಾರೆ.

ವಿನಯ್ ಶ್ರೀನಿವಾಸ್ ಅವರ ಅಭಿಪ್ರಾಯದಲ್ಲಿ ನ್ಯಾಯಾಂಗದ ಮೇಲಿನ ವಿಶ್ವಾಸವು ಕೇವಲ ನ್ಯಾಯಾಲಯದಲ್ಲಿ ಪಾಲಿಸಲಾಗುವ ಶಿಷ್ಟಾಚಾರದ ಮೇಲೆ ಅವಲಂಬಿತವಾಗಿಲ್ಲ. ಸಮಾಜದ ದುರ್ಬಲ ವರ್ಗಗಳಿಗೆ ನ್ಯಾಯ ದೊರೆಯುವ ಅನುಭವದ ಮೇಲೆಯೂ ಅದು ಅವಲಂಬಿತವಾಗಿರುತ್ತದೆ.

ಅಂತೆಯೇ, ನ್ಯಾಯಾಂಗದ ಮೇಲಿನ ವಿಶ್ವಾಸ ಕುಸಿಯುತ್ತಿರುವುದಕ್ಕೆ ನ್ಯಾಯಾಧೀಶರ ನೇಮಕಾತಿ ಮತ್ತು ಅವರ ಕಾರ್ಯವೈಖರಿಯೂ ಕಾರಣವಾಗಬಹುದು ಎಂದಿದ್ದಾರೆ ಹಿರಿಯ ವಕೀಲ ಸಿ.ಎಸ್. ದ್ವಾರಕಾನಾಥ್.

ಈ ದಿನ.ಕಾಮ್‌ ಜೊತೆ ಮಾತನಾಡಿದ ಸಿ.ಎಸ್‌ ದ್ವಾರಕಾನಾಥ್, “ನಮ್ಮ ನ್ಯಾಯಾಂಗದ ಗುಣಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಮುಖ್ಯವಾಗಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ನ್ಯಾಯಾಧೀಶರು ನ್ಯಾಯಾಧೀಶರಿಗೆ ಇರಬೇಕಾದ ಶಿಸ್ತಿನ ರೀತಿಯಲ್ಲಿ ನಡೆದುಕೊಳ್ಳುತ್ತಿಲ್ಲ. ನ್ಯಾಯಾಧೀಶರು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಪಕ್ಷಪಾತದ ಧೋರಣೆ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿಯೂ ಈ ರೀತಿಯ ಪಕ್ಷಪಾತ ಹೆಚ್ಚಾಗುತ್ತಿರುವುದನ್ನು ನೋಡುತ್ತಿದ್ದೇವೆ. ಯಾವುದೋ ಒಂದು ರಾಜಕೀಯ ಪಕ್ಷಕ್ಕೆ ಅಥವಾ ಒಬ್ಬ ವ್ಯಕ್ತಿಗೆ ನಿಷ್ಠೆ ತೋರಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದರಿಂದಾಗಿ ನ್ಯಾಯಾಂಗದ ಮೇಲಿನ ಜನರ ನಂಬಿಕೆ ಕಡಿಮೆಯಾಗುತ್ತಿದೆ” ಎಂದಿದ್ದಾರೆ.

image 230

“ಜನಸಾಮಾನ್ಯರಿಗೇ ನ್ಯಾಯಾಂಗದ ಮೇಲಿನ ವಿಶ್ವಾಸ ಕಡಿಮೆಯಾಗುತ್ತಿದೆ ಎಂದಾದರೆ, ನ್ಯಾಯಾಂಗದೊಂದಿಗೆ ಪ್ರತಿದಿನ ವ್ಯವಹರಿಸುವ ವಕೀಲರ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಯೋಚಿಸಬೇಕು. ನ್ಯಾಯಾಧೀಶರಿಗೆ ನ್ಯಾಯಾಂಗದ ಮನೋಧರ್ಮ, ನಿಷ್ಪಕ್ಷಪಾತತೆ ಹಾಗೂ ನ್ಯಾಯಯುತವಾಗಿ ನಡೆದುಕೊಳ್ಳುವ ಗುಣ ಅತ್ಯಂತ ಮುಖ್ಯ. ಇಂತಹ ಗುಣಗಳಿಲ್ಲದ ವ್ಯಕ್ತಿಗಳನ್ನು ನ್ಯಾಯಾಧೀಶರನ್ನಾಗಿ ನೇಮಕ ಮಾಡುವುದು ನ್ಯಾಯಾಂಗದ ಮೇಲಿನ ವಿಶ್ವಾಸಕ್ಕೆ ಧಕ್ಕೆ ತರುತ್ತದೆ. ಆದ್ದರಿಂದ, ನ್ಯಾಯಾಂಗಕ್ಕೆ ನ್ಯಾಯಾಧೀಶರನ್ನು ನೇಮಕ ಮಾಡುವಾಗ ಅವರ ಕುಟುಂಬದ ಹಿನ್ನೆಲೆ ಅಥವಾ ಪ್ರಭಾವವನ್ನು ಮಾತ್ರ ಪರಿಗಣಿಸಬಾರದು. ಬದಲಾಗಿ, ಆ ವ್ಯಕ್ತಿ ಯಾವ ಸಾಮಾಜಿಕ ಮತ್ತು ವೃತ್ತಿಪರ ಹಿನ್ನೆಲೆಯಿಂದ ಬಂದಿದ್ದಾರೆ, ಅವರ ಮೌಲ್ಯಗಳೇನು, ವಕೀಲರಾಗಿ ವೃತ್ತಿ ನಡೆಸುತ್ತಿದ್ದಾಗ ಅವರ ನಡವಳಿಕೆ ಹೇಗಿತ್ತು, ನ್ಯಾಯಾಂಗದ ಬಗ್ಗೆ ಅವರ ದೃಷ್ಟಿಕೋನವೇನು, ಅವರು ಎಷ್ಟರಮಟ್ಟಿಗೆ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬಲ್ಲರು ಎಂಬುದನ್ನು ಪರಿಶೀಲಿಸಬೇಕು” ಎಂದು ಸೂಚಿಸಿದ್ದಾರೆ.

ನ್ಯಾಯಾಂಗದ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಉಳಿಸಿಕೊಳ್ಳಬೇಕಾದರೆ, ನ್ಯಾಯಾಧೀಶರ ನೇಮಕಾತಿಯಲ್ಲಿ ವ್ಯಕ್ತಿಯ ಹಿನ್ನೆಲೆ, ಮೌಲ್ಯಗಳು, ವೃತ್ತಿಪರ ನಡವಳಿಕೆ ಮತ್ತು ನ್ಯಾಯಾಂಗದ ಮನೋಧರ್ಮಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ನ್ಯಾಯಾಧೀಶರ ಕಾನೂನು ಜ್ಞಾನವೊಂದೇ ಉತ್ತಮ ನ್ಯಾಯ ವಿತರಣೆಗೆ ಸಾಕಾಗುವುದಿಲ್ಲ. ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ, ನಿಷ್ಪಕ್ಷಪಾತತೆ, ಸಾಮಾಜಿಕ ಸಂವೇದನೆ ಹಾಗೂ ನ್ಯಾಯಾಂಗದ ಮನೋಧರ್ಮವೂ ಅಗತ್ಯ ಎನ್ನುವುದು ಅವರ ವಾದ.

ಅಂದಹಾಗೆ, ಭಾರತದ ಸಂವಿಧಾನದ 129ನೇ ವಿಧಿಯು ಸುಪ್ರೀಂ ಕೋರ್ಟ್‌ಗೆ ನ್ಯಾಯಾಂಗ ನಿಂದನೆಗೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳುವ ಅಧಿಕಾರವನ್ನೂ ನೀಡಿದೆ. 1971ರ ನ್ಯಾಯಾಂಗ ನಿಂದನೆ ಕಾಯ್ದೆಯು ಸ್ಪಷ್ಟವಾದ ಕಾನೂನು ಚೌಕಟ್ಟನ್ನು ಒದಗಿಸಿದೆ. ಆದರೆ, ಈ ಕಾನೂನು ನ್ಯಾಯಾಲಯದ ವಿರುದ್ಧದ ಎಲ್ಲ ರೀತಿಯ ಟೀಕೆಗಳನ್ನು ಸಂಪೂರ್ಣವಾಗಿ ನಿಷೇಧಿಸುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗದ ಕಾರ್ಯವೈಖರಿ, ತೀರ್ಪುಗಳು ಮತ್ತು ಸಂಸ್ಥಾತ್ಮಕ ಸಮಸ್ಯೆಗಳ ಕುರಿತು ನ್ಯಾಯಸಮ್ಮತವಾದ ವಿಮರ್ಶೆಯನ್ನು ನಡೆಸಲು ಎಲ್ಲರಿಗೂ ಅವಕಾಶವಿದೆ.

ಆದಾಗ್ಯೂ, ಭಾರತೀಯ ನ್ಯಾಯಾಂಗದ ಕುರಿತು ಸಮಾಜದಲ್ಲಿ ನಡೆಯುತ್ತಿರುವ ಚರ್ಚೆಗಳು ಕೇವಲ ಓರ್ವ ವಕೀಲರ ವರ್ತನೆಗೆ ಮಾತ್ರ ಸೀಮಿತಗೊಂಡಿಲ್ಲ. ಬದಲಿಗೆ ಇದರ ಹಿಂದೆ ಅನೇಕ ವ್ಯವಸ್ಥಗತ ಸವಾಲುಗಳಿವೆ. ವರ್ಷಗಳವರೆಗೆ ಬಾಕಿ ಉಳಿಯುವ ಪ್ರಕರಣಗಳು, ವಿಚಾರಣೆಗಳಲ್ಲಿನ ವಿಳಂಬ, ನ್ಯಾಯ ಪಡೆಯಲು ತಗಲುವ ವಿಪರೀತ ವೆಚ್ಚ, ಜಾಮೀನು ಅರ್ಜಿಗಳ ವಿಲೇವಾರಿಯಲ್ಲಿನ ವಿಳಂಬ ಮತ್ತು ನ್ಯಾಯಾಧೀಶರ ನೇಮಕಾತಿಯಲ್ಲಿ ಪಾರದರ್ಶಕತೆಯ ಕೊರತೆ ಮುಂತಾದ ಗಂಭೀರ ಸಮಸ್ಯೆಗಳು ದೀರ್ಘಕಾಲದಿಂದ ಚರ್ಚೆಯಲ್ಲಿವೆ. ಈ ಎಲ್ಲ ಸಮಸ್ಯೆಗಳು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ಸಾಮಾನ್ಯ ಜನರ ಮೇಲೆ ತೀವ್ರವಾದ ಪರಿಣಾಮ ಬೀರುತ್ತವೆ.

ನ್ಯಾಯಾಂಗದ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಗಟ್ಟಿಗೊಳಿಸಲು ಅದರೊಳಗಿನ ಆಂತರಿಕ ಕಾರ್ಯವೈಖರಿಯಲ್ಲಿ ನಿರಂತರ ಸುಧಾರಣೆಗಳು ಆಗಬೇಕಿದೆ.

 

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಲ್ಕಿಸ್ ಬಾನೋ ಪ್ರಕರಣ: ಇಬ್ಬರು ಅಪರಾಧಿಗಳ ಶಿಕ್ಷೆ ಅಮಾನತು ಮಾಡಿದ ಸುಪ್ರೀಂ; ನೋವು-ಆಘಾತ ಎಂದ ಸಂತ್ರಸ್ತೆ

2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ನಡೆದ ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರ...

 ‘ಸ್ಟಿಂಗ್ ಆಪರೇಷನ್’ ಪ್ರಕರಣ: ತನಿಖೆಗೆ ಮೊಬೈಲ್ ನೀಡಲು ಕೃಪಾ ಆಳ್ವ ಹಿಂದೇಟು!

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ನಡೆದಿದೆ ಎನ್ನಲಾದ ‘ಸ್ಟಿಂಗ್ ಆಪರೇಷನ್’...

ಚುನಾವಣಾ ಆಯೋಗಕ್ಕೆ ಪ್ರತಿಪಕ್ಷಗಳ ‘ಇಂಟರಾಗೇಟರಿ’ ಅಸ್ತ್ರ: 48 ಪ್ರಶ್ನೆಗಳಿಗೆ ಉತ್ತರ ಕೋರಿ ಸುಪ್ರೀಂ ಮೊರೆ

ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಎದುರಿಸುತ್ತಿರುವ ಚುನಾವಣಾ ಆಯೋಗಕ್ಕೆ (ECI) ಕರಾರುವಕ್ಕಾದ ಮಾಹಿತಿ...

ಹಿರಿಯೂರು | ಕುಡಿಯುವ ನೀರಿಗೆ ಪರದಾಟ; ಸಮಸ್ಯೆ ಪರಿಹರಿಸಲು ನಗರಸಭೆಗೆ ಮನವಿ

ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿಯ ಚಿತ್ರದುರ್ಗದ ಹಿರಿಯೂರು ತಾಲೂಕು ಸಮಿತಿ ವತಿಯಿಂದ...