ಬೆಂಗಳೂರು: ಕನ್ನಡ ರಂಗಭೂಮಿಯ ಮೇಲೆ ಕಾರ್ಪೊರೇಟ್ ಹಿಡಿತ ಹೆಚ್ಚಾಗುತ್ತಿದ್ದು ಈ ಬಗ್ಗೆ ಎಚ್ಚರಿಕೆ ಅಗತ್ಯ ಎಂದು ಹಿರಿಯ ಪತ್ರಕರ್ತ ಜಿ ಎನ್ ಮೋಹನ್ ಆತಂಕ ವ್ಯಕ್ತಪಡಿಸಿದರು.
‘ಸಂಚಯ’ ರಂಗತಂಡ ಹಮ್ಮಿಕೊಂಡಿದ್ದ ಮೂರು ದಿನಗಳ ‘ಜಿ ಎಸ್ ಅರ್ ನೆನಪಿನ ರಂಗ ಉತ್ಸವ’ದಲ್ಲಿ ಮಾತನಾಡಿದ ಅವರು ಈ ಹಿಂದೆ ನಾಲ್ಕು ಗೋಡೆಗಳ ಮಧ್ಯದಿಂದ ನಾಟಕಗಳನ್ನು ಜನಸಾಮಾನ್ಯರ ಬಳಿಗೆ ಕರೆದೊಯ್ಯುವ ಚಳವಳಿ ನಡೆಯಿತು. ಆದರೆ ಈಗ ಅದಕ್ಕೆ ತದ್ವಿರುದ್ಧವಾದ ಪ್ರವೃತ್ತಿ ಆರಂಭವಾಗಿದೆ. ಮತ್ತೆ ನಾಲ್ಕು ಗೋಡೆಯಲ್ಲಿ ರಂಗಭೂಮಿಯನ್ನು ಬಂಧಿಸುವ ಕೆಲಸ ನಡೆಯುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ರಂಗಭೂಮಿಯ ಮೇಲೆ ಕಾನೂನು ಕ್ರಮಗಳು ಹೆಚ್ಚಾಗುತ್ತಿದ್ದು ರಂಗ ಹಾಡುಗಳನ್ನು ಹಾಡಲೂ ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ರಂಗಭೂಮಿ ಹಣ ಮಾಡುವ ವ್ಯವಹಾರವಲ್ಲ. ಹಾಗಾಗಿ ಈ ಕಾನೂನುಗಳಿಗೆ ಮಾನವೀಯ ಮಾನದಂಡ ಅಗತ್ಯ. ರಂಗಭೂಮಿಯ ಸ್ಪರ್ಶಕ್ಕೆ ಸಿಕ್ಕವರು ಮಾನವೀಯತೆಯ ಬೆಳಕು ಹೊತ್ತು ಸಾಗುತ್ತಾರೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಹಿರಿಯ ಬೆಳಕು ತಜ್ಞ ಆರ್ ಮುದ್ದಣ್ಣ ಅವರಿಗೆ ಈ ಸಂದರ್ಭದಲ್ಲಿ ಜಿ ಎಸ್ ಆರ್ ನೆನಪಿನ ಮೊದಲ ವರ್ಷದ ರಂಗ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ರಂಗಭೂಮಿ ನನಗೆ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವ ಉತ್ಸಾಹವನ್ನು ಕೊಟ್ಟಿತು. ಹಳ್ಳಿಗಾಡಿನಿಂದ ಬಂದ ನನ್ನನ್ನು ದೂರದ ದೆಹಲಿಗೆ ಕರೆದೊಯ್ದು ಪ್ರತಿಭೆ ಪ್ರದರ್ಶಿಸಲು ಅವಕಾಶ ನೀಡಿತು ಎಂದರು.
ಹಿರಿಯ ರಂಗ ನಿರ್ದೇಶಕ ಸಿ ಬಸವಲಿಂಗಯ್ಯ ಅವರು ಮಾತನಾಡಿ ರಂಗಭೂಮಿ ಒಂದು ದ್ವೀಪವಲ್ಲ, ಸಾಮೂಹಿಕ ಚಟುವಟಿಕೆ. ರಂಗಭೂಮಿಯನ್ನು ಜನಪರ ಮಾಡುವ ಆಂದೋಲನ ಅಗತ್ಯ. ರಂಗಭೂಮಿಯನ್ನು ಆಧುನಿಕ ತಂತ್ರಜ್ಞಾನ ಇಲ್ಲವಾಗಿಸುತ್ತದೆ ಎನ್ನುವ ಆತಂಕ ಇಲ್ಲ ಎಂದರು.
ಸಂಚಯದ ಅಧ್ಯಕ್ಷರಾದ ಚಿತ್ರಶೇಖರ್ ಅವರು ಮಾತನಾಡಿ ಸಂಚಯ ತನ್ನ 38 ವರ್ಷಗಳ ಪಯಣದಲ್ಲಿ ಕನ್ನಡ ರಂಗಭೂಮಿಗೆ ಮಹತ್ವದ ನಾಟಕಗಳನ್ನು ಕೊಟ್ಟಿದೆ. ವ್ಯವಸಾಯಿ ಶಿಸ್ತನ್ನು ಅಳವಡಿಸಿಕೊಂಡಿದೆ ಎಂದರು. ಉತ್ಸವದ ಅಂಗವಾಗಿ ‘ಸಂಚಾರಿ’ ತಂಡ ‘ಹಕ್ಕಿಯನ್ನು ಪ್ರೀತಿಸಿದ ಬೆಟ್ಟ’ ಹಾಗೂ ‘ನೆನಪು’ ತಂಡ ‘ಜ್ಞಾತ ಪರ್ವ’ ನಾಟಕವನ್ನು ಪ್ರದರ್ಶಿಸಿತು.
ಸಂಚಯ ರಂಗತಂಡ ಹಮ್ಮಿಕೊಂಡಿದ್ದ ಜಿ ಎಸ್ ಆರ್ ನೆನಪಿನ ರಂಗ ಉತ್ಸವದಲ್ಲಿ ಹಿರಿಯ ಬೆಳಕು ತಜ್ಞ ಆರ್ ಮುದ್ದಣ್ಣ ಅವರಿಗೆ
ಪ್ರಶಸ್ತಿ ಪ್ರದಾನ ಮಾಡಲಾಯಿತು. ಚಿತ್ರದಲ್ಲಿ ಜಿ ಎನ್ ಮೋಹನ್, ಸಿ ಬಸವಲಿಂಗಯ್ಯ ಹಾಗೂ ಚಿತ್ರಶೇಖರ್ ಅವರು ಇದ್ದಾರೆ.




