ಇಬ್ಬರು ಅತ್ಯಾಚಾರಿಗಳ ಜೀವಾವಧಿ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿರುವ ಬೆಳವಣಿಗೆಯಿಂದ ತನಗೆ ತೀವ್ರ ಆಘಾತವಾಗಿದೆ ಮತ್ತು ತನ್ನ ಕಾಡಿದ ಹಳೆಯ ಭಯ ಮತ್ತೆ ಶುರುವಾಗಿದೆ ಎಂದು ಬಿಲ್ಕಿಸ್ ಬಾನೊ ಕಳವಳ ವ್ಯಕ್ತಪಡಿಸಿದ್ದಾರೆ. ಕಳೆದ 24 ವರ್ಷಗಳಿಂದ ನ್ಯಾಯಕ್ಕಾಗಿ ನಿರಂತರ ಹೋರಾಟ ನಡೆಸುತ್ತಿರುವ ತನಗೆ, ಕನಿಷ್ಠ ಮಾಹಿತಿ ನೀಡದೆ ಹಾಗೂ ತನ್ನ ವಾದವನ್ನು ಆಲಿಸದೆ ಸುಪ್ರೀಂ ಕೋರ್ಟ್ ಈ ಆದೇಶ ಹೊರಡಿಸಿರುವುದು ಅಚ್ಚರಿ ಮೂಡಿಸಿದೆ ಎಂದು ಅವರು ತಮ್ಮ ಹಿರಿಯ ವಕೀಲೆ ಶೋಭಾ ಗುಪ್ತಾ ಅವರ ಮೂಲಕ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ 28 ರಂದು ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಪ್ರಸನ್ನ ಬಿ. ವರಾಳೆ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠವು ಈ ಆದೇಶವನ್ನು ಹೊರಡಿಸಿದೆ. ಪ್ರಕರಣದ ಅಪರಾಧಿಗಳಾದ ಬಿಪಿನ್‌ಚಂದ್ ಕನೈಯಾಲಾಲ್ ಜೋಶಿ ಅಲಿಯಾಸ್ ಲಾಲಾ ಡಾಕ್ಟರ್ ಮತ್ತು ಪ್ರದೀಪ್ ರಮಣ್‌ಲಾಲ್ ಮೋದಿಯಾ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿರುವ ನ್ಯಾಯಾಲಯ, ವಿಚಾರಣಾ ನ್ಯಾಯಾಲಯವು ಜಾಮೀನಿನ ಷರತ್ತುಗಳನ್ನು ನಿಗದಿಪಡಿಸಬೇಕು ಎಂದು ನಿರ್ದೇಶನ ನೀಡಿದೆ.
ಈ ಇಬ್ಬರು ಮೇಲ್ಮನವಿದಾರರಲ್ಲಿ ಒಬ್ಬನ ಹೆಸರನ್ನು ಆರಂಭಿಕ ಎಫ್‌ಐಆರ್‌ನಲ್ಲಿ ದಾಖಲಿಸಿರಲಿಲ್ಲ ಮತ್ತು ಆತನನ್ನು ಸುಮಾರು ಮೂರು ವರ್ಷಗಳ ನಂತರ ಈ ಪ್ರಕರಣದಲ್ಲಿ ಸೇರಿಸಲಾಗಿತ್ತು ಎಂದು ಪೀಠವು ತನ್ನ ಆದೇಶದಲ್ಲಿ ಗಮನಿಸಿದೆ. ಅಪರಾಧಿಗಳು 17 ವರ್ಷಗಳಿಗೂ ಹೆಚ್ಚು ಸುದೀರ್ಘ ಕಾಲ ಜೈಲುವಾಸ ಅನುಭವಿಸಿದ್ದಾರೆ ಹಾಗೂ ಅವರಲ್ಲಿ ಒಬ್ಬನಿಗೆ ತೀವ್ರವಾದ ಅಂಗವೈಕಲ್ಯವಿದೆ ಎಂಬ ಅಂಶಗಳನ್ನು ಪರಿಗಣಿಸಿ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. 2017ರ ಬಾಂಬೆ ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಲಾದ ಮೇಲ್ಮನವಿ ಬಾಕಿ ಇರುವಾಗಲೇ ಶಿಕ್ಷೆಯನ್ನು ಅಮಾನತುಗೊಳಿಸಲಾಗಿದೆ.
”ನನಗೆ ಕೇವಲ 19 ವರ್ಷವಿದ್ದಾಗ ನನ್ನ ಮುದ್ದು ಮಗು, ನನ್ನ ಕುಟುಂಬ ಮತ್ತು ಮನುಷ್ಯತ್ವದ ಮೇಲಿದ್ದ ನನ್ನ ನಂಬಿಕೆಯನ್ನು ಕ್ರೂರವಾಗಿ ಕಸಿದುಕೊಳ್ಳಲಾಯಿತು” ಎಂದು ಬಿಲ್ಕಿಸ್ ಬಾನೊ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಅಂದಿನಿಂದ 24 ವರ್ಷಗಳ ಕಾಲ ನನಗಾಗಿ ಮತ್ತು ಎಲ್ಲ ಮಹಿಳೆಯರಿಗಾಗಿ ನಾನು ನ್ಯಾಯಕ್ಕಾಗಿ ಎದೆಗುಂದದೆ ಹೋರಾಡಿದ್ದೇನೆ. ಸಾರ್ವಜನಿಕರ ಬೆಂಬಲದಿಂದ ನನ್ನ ಬದುಕನ್ನು ಮರಳಿ ಕಟ್ಟಿಕೊಂಡಿದ್ದೆ ಹಾಗೂ ನನ್ನ ಪರವಾಗಿ ತೀರ್ಪುಗಳು ಬಂದಾಗಲೆಲ್ಲ ನ್ಯಾಯದ ಮೇಲಿನ ನನ್ನ ನಂಬಿಕೆ ಮರುಸ್ಥಾಪನೆಯಾಗಿತ್ತು. ಆದರೆ ಈಗಿನ ತೀರ್ಪು ನನ್ನಲ್ಲಿ ಹಾಗೂ ನನ್ನ ಕುಟುಂಬದಲ್ಲಿ ಮತ್ತೆ ಭಯವನ್ನು ಹುಟ್ಟುಹಾಕಿದೆ ಎಂದು ಅವರು ಹೇಳಿದ್ದಾರೆ.
ತನ್ನನ್ನು ಕನಿಷ್ಠ ಸಂಪರ್ಕಿಸದೆ ಹಾಗೂ ಕೋರ್ಟ್‌ನಲ್ಲಿ ತನ್ನ ಧ್ವನಿಯನ್ನು ಆಲಿಸದೆ ಸುಪ್ರೀಂ ಕೋರ್ಟ್ ಈ ಜಾಮೀನು ನಿರ್ಧಾರವನ್ನು ತೆಗೆದುಕೊಂಡಿದ್ದು ಹೇಗೆ ಎಂದು ಬಾನೊ ಕಟುವಾಗಿ ಪ್ರಶ್ನಿಸಿದ್ದಾರೆ. ಈ ಆದೇಶದ ವಿರುದ್ಧ ಹೋರಾಡುವುದಾಗಿ ಅವರು ಶಪಥ ಮಾಡಿದ್ದಾರೆ. ತನ್ನ ಮಕ್ಕಳ ಭವಿಷ್ಯಕ್ಕಾಗಿ, ಹತ್ಯೆಗೀಡಾದ ತನ್ನ 3 ವರ್ಷದ ಮಗು ಸಾಲೇಹಾಳ ನೆನಪಿಗಾಗಿ ಮತ್ತು ದೇಶದ ಸಮಸ್ತ ಮಹಿಳೆಯರ ಘನತೆಗಾಗಿ ಈ ನ್ಯಾಯದ ಹೋರಾಟವನ್ನು ಮುಂದುವರಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಈ ಜಾಮೀನು ಆದೇಶವು ಹಿಂದಿನ ವಿವಾದಾತ್ಮಕ ಬಿಡುಗಡೆಯ ಹಿನ್ನೆಲೆಯಲ್ಲಿ ಬಂದಿದೆ ಎಂಬುದು ಗಮನಾರ್ಹ. 2022ರ ಆಗಸ್ಟ್ 16ರಂದು ಗುಜರಾತ್ ಸರ್ಕಾರವು ಪ್ರಕರಣದ ಎಲ್ಲಾ 11 ಅಪರಾಧಿಗಳನ್ನು ಗೋಧ್ರಾ ಉಪ-ಜೈಲಿನಿಂದ ಅವಧಿಪೂರ್ವ ಬಿಡುಗಡೆ ಮಾಡಿತ್ತು. ಅವರನ್ನು ಸಿಹಿ ಹಂಚಿ, ಹಾರ ಹಾಕಿ ಸ್ವಾಗತಿಸಿದ್ದು ವ್ಯಾಪಕ ಆಕ್ರೋಶ ಹಾಗೂ ಪ್ರತಿಭಟನೆಗೆ ಕಾರಣವಾಗಿತ್ತು. ತರುವಾಯ 2024ರಲ್ಲಿ ಸುಪ್ರೀಂ ಕೋರ್ಟ್, ಗುಜರಾತ್ ಸರ್ಕಾರಕ್ಕೆ ಅಪರಾಧಿಗಳನ್ನು ಬಿಡುಗಡೆ ಮಾಡುವ ಅಧಿಕಾರವಿರಲಿಲ್ಲ ಮತ್ತು ಸತ್ಯಗಳನ್ನು ಮುಚ್ಚಿಟ್ಟು ಮೋಸದಿಂದ ಬಿಡುಗಡೆ ಆದೇಶ ಪಡೆಯಲಾಗಿತ್ತು ಎಂದು ತಿಳಿಸಿ, ಆ ಬಿಡುಗಡೆಯನ್ನು ರದ್ದುಗೊಳಿಸಿತ್ತು.
2002ರ ಮಾರ್ಚ್ 3ರಂದು ಗುಜರಾತ್‌ನ ಗೋಧ್ರೋತ್ತರ ಗಲಭೆಯ ಭೀಕರ ಸಂದರ್ಭದಲ್ಲಿ ದಹೋದ್ ಜಿಲ್ಲೆಯಲ್ಲಿ ಬಿಲ್ಕಿಸ್ ಬಾನೊ ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಆ ಸಮಯದಲ್ಲಿ ಅವರು ಪ್ರಾಣಭಯದಿಂದ ಗಲಭೆಕೋರರಿಂದ ತಪ್ಪಿಸಿಕೊಳ್ಳಲು ಓಡಿಹೋಗುತ್ತಿದ್ದರು. ಇದೇ ಸಂದರ್ಭದಲ್ಲಿ ಅವರ ಪುಟ್ಟ ಮಗು ಸೇರಿದಂತೆ ಕುಟುಂಬದ ಏಳು ಜನರನ್ನು ಅತ್ಯಂತ ಬರ್ಬರವಾಗಿ ಕೊಲೆ ಮಾಡಲಾಗಿತ್ತು



