ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯು 2027ರ ಫ್ರೆಬ್ರವರಿ-ಮಾರ್ಚ್ ತಿಂಗಳಲ್ಲಿ ನಡೆಯುವ ಸಂಭವವಿದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಉತ್ತರ ಪ್ರದೇಶದ ಮತದಾರ ಪಟ್ಟಿಯಲ್ಲಿ ಗಣನೀಯವಾಗಿ ಹೊಸ ಮತದಾರರ ಸೇರ್ಪಡೆ ಕಂಡುಬಂದಿದ್ದು, ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಕಳೆದ ಏಪ್ರಿಲ್‌ನಲ್ಲಿ SIR ಪ್ರಕ್ರಿಯೆ ಮುಗಿದ ಬಳಿಕ ಭಾರೀ ಸಂಖ್ಯೆಯಲ್ಲಿ ಮತದಾರರನ್ನು ಮತಪಟ್ಟಿಯಿಂದ ಹೊರಹಾಕಲಾಗಿತ್ತು. SIR ಪ್ರಕ್ರಿಯೆಗೂ ಮುನ್ನ ಯುಪಿಯಲ್ಲಿ 15.44 ಕೋಟಿಯಷ್ಟು ಇದ್ದ ಮತದಾರರ ಸಂಖ್ಯೆ ಎಸ್‌ಐಆರ್ ಅಂತಿಮ ಪಟ್ಟಿಯಲ್ಲಿ 13.39 ಕೋಟಿಗೆ ಇಳಿದಿತ್ತು. ಒಟ್ಟು 2.05 ಕೋಟಿ ಮತದಾರರು ಪಟ್ಟಿಯಿಂದ ಹೊರಗುಳಿದಿದ್ದರು. ಇದರಲ್ಲಿ ಬಹುಸಂಖ್ಯೆಯಲ್ಲಿ ಹಿಂದು ಮತದಾರರ ಹೆಸರುಗಳು ಹೊರಗುಳಿದಿರುವುದು ಹಲವರ ಅಭಿಪ್ರಾಯವಾಗಿದೆ.
ಬಿಜೆಪಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ಜಾರಿಗೆ ತರಲಾದ ಎಸ್‌ಐಆರ್, ಉತ್ತರ ಪ್ರದೇಶದಲ್ಲಿ ಬಿಜೆಪಿಗೇ ಆತಂಕ ಉಂಟುಮಾಡಿತು. ಬಿಜೆಪಿ ತಾನೇ ತೋಡಿದ ಬಾವಿಯಲ್ಲಿ ತಾನೇ ಬಿದ್ದಂತ ಪರಿಸ್ಥಿತಿಗೆ ಸಿಲುಕಿತು. ಇದಕ್ಕೆ ಇಂಬು ಕೊಡುವಂತೆ ಕಳೆದ ವಾರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮತದಾರರ ಪಟ್ಟಿಯಿಂದ 1.27 ಕೋಟಿ ಹಿಂದೂ ಮತವನ್ನು ಅಳಿಸಲಾಗಿದೆ ಎಂದು ಆರೋಪ ಮಾಡಿದ್ದರು. ಈ ಬೆನ್ನಲ್ಲೇ, ಮತಪಟ್ಟಿಗೆ ಹೊಸ ಮತದಾರರು ಸೇರಿಸಲು ಬಿಜೆಪಿ ಕಣಕ್ಕಿಳಿಯಿತು. ಏಪ್ರಿಲ್‌ನಿಂದ ನವೆಂಬರ್ 2ರ (ಹೊಸ ಮತದಾರರ ಸೇರ್ಪಡೆಯನ್ನು ಸ್ಥಗಿತಗೊಳಿಸಿದ ದಿನ) ನಡುವೆ ಬರೋಬ್ಬರಿ 17 ಲಕ್ಷ ಮತದಾರರು ಸೇರ್ಪಡೆಯಾಗಿರುವುದಾಗಿ ವರದಿಯಾಗಿದೆ. ಹಾಲಿ ಮತಪಟ್ಟಿಯಲ್ಲಿ ಮತದಾರರ ಸಂಖ್ಯೆ 13.56 ಕೋಟಿಗೆ ಏರಿಕೆಯಾಗಿದೆ.
ಎಸ್‌ಐಆರ್ ಪ್ರಕ್ರಿಯೆಯ ವೇಳೆಯೋ ಮತಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳದ, ಇದೀಗ ಏಕಾಏಕಿ ಮತಪಟ್ಟಿಗೆ ಸೇರಿಕೊಂಡು ಈ ಹೊಸ ಮತದಾರರು ಯಾರು ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ. ಆದರೆ, ಚುನಾವಣಾ ಆಯೋಗವು ಇದಕ್ಕೆ ಸಂಬಂಧಿಸಿದ ವಿವರಗಳನ್ನು ನೀಡಿಲ್ಲ. ಆದ್ದರಿಂದ,ಹೊಸದಾಗಿ ಸೇರ್ಪಡೆಯಾಗಿರುವವರು ಅಸಲಿ ಮತದಾರರೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಇದೆಲ್ಲದರ ನಡುವೆ, ಶುಕ್ರವಾರ ನಡೆದ ಸಭೆಯಲ್ಲಿ ಬಿಜೆಪಿ ರಾಜ್ಯ ನಾಯಕರು ನವೆಂಬರ್ 17ರಿಂದ ಡಿಸೆಂಬರ್ 16ರವರೆಗೆ ಹಿಂದು ಮತದಾರರನ್ನು ಮತಪಟ್ಟಿಗೆ ಸೇರಿಸುವ ಉದ್ದೇಶದಿಂದ ʻಮತದಾತಾ ಜೋಡೋ ಅಭಿಯಾನ್ʼ ನಡೆಸಲು ನಿರ್ಧರಿಸಿದ್ದಾರೆ. ಅದರಂತೆ ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 25 ಸಾವಿರ ಹಿಂದು ಮತದಾರರನ್ನು ಸೇರಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಇದಕ್ಕಾಗಿ ಹಲವು ಸಮಿತಿಗಳನ್ನು ಬಿಜೆಪಿ ರಚಿಸಿದ್ದು, ಅಭಿಯಾನದಲ್ಲಿ ಮನೆ ಮನೆಗೂ ತೆರಳಿ ಮತದಾರರನ್ನು ಹುಡುಕಿ ಚುನಾವಣೆ ಹೊತ್ತಿಗೆ ಒಂದು ಕೋಟಿ ಮತದಾರರನು ಪಟ್ಟಿಗೆ ಸೇರಿಸಬೇಕೆಂದು ತಾಕೀತು ಮಾಡಲಾಗಿದೆ.
ಹೊಸದಾಗಿ ಸೇರ್ಪಡೆಯಾಗುವ ಈ ಒಂದು ಕೋಟಿ ಮತದಾರಲ್ಲಿ ಅಸಲಿ ಎಷ್ಟು, ನಕಲಿ ಎಷ್ಟು ಎಂಬ ಶಂಕೆ ರಾಜಕೀಯ ವಲಯದಲ್ಲಿದೆ. ಯಾಕೆಂದರೆ ಬಿಜೆಪಿ ಚುನಾವಣಾ ವ್ಯವಸ್ಥೆಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿರುವುದು ರಹಸ್ಯವಾಗಿಯೇನು ಉಳಿದಿಲ್ಲ. ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ ವೋಟ್ ಚೋರಿ ಬಗ್ಗೆ 2025ರಲ್ಲಿ ಗಂಭೀರ ಆರೋಪಗಳು ಕೇಳಿಬಂದಿದ್ದವು. ಮಹದೇವಪುರ ಕ್ಷೇತ್ರದಲ್ಲಿ 40,009 ನಕಲಿ ವಿಳಾಸಗಳು, ಒಂದೇ ವಿಳಾಸದಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರನ್ನು ನೋಂದಾಯಿಸಿದ 10,452 ಪ್ರಕರಣಗಳು, ಸರಿ ಹೊಂದದ ಛಾಯಾಚಿತ್ರಗಳನ್ನು ಹೊಂದಿರುವ 4,132 ಹೆಸರುಗಳು ಮತಪಟ್ಟಿಯಲ್ಲಿದ್ದವು. ಈ ಅಕ್ರಮವು 2024ರ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಿದೆ ಎಂದು ರಾಹುಲ್ ಗಾಂಧಿ ವಾದಿಸಿದ್ದರು.
ಇದಕ್ಕೆ ಪೂರಕವೆಂಬಂತೆ ಕಾಂಗ್ರೆಸ್ ಅರ್ಭ್ಯರ್ಥಿ ಬಿಜೆಪಿ ಅಭ್ಯರ್ಥಿ ವಿರುದ್ಧ 32,707 ಮತಗಳಿಂದ ಸೋತರು. ರಾಹುಲ್ ಗಾಂಧಿ ವಿಶ್ಲೇಷಣೆಯ ಪ್ರಕಾರ ಬಿಜೆಪಿಯ ಮುನ್ನಡೆಯಲ್ಲಿ ಹೆಚ್ಚಿನ ಭಾಗವು ಮಹದೇವಪುರದಿಂದ ಬಂದಿದೆ. ಅಲ್ಲಿ ಕಾಂಗ್ರೆಸ್‌ಗಿಂತ ಬಿಜೆಪಿ 1.14 ಲಕ್ಷಕ್ಕೂ ಹೆಚ್ಚು ಮತಗಳ ಅಂತರವನ್ನು ದಾಖಲಿಸಿದೆ.
ಇನ್ನು ಮಹಾರಾಷ್ಟ್ರದಲ್ಲಿ 2024 ಲೋಕಸಭೆ ಚುನಾವಣೆ ಮತ್ತು ವಿಧಾನಸಭಾ ಚುನಾವಣೆ ನಡುವಿನ 5 ತಿಂಗಳ ಅವಧಿಯಲ್ಲಿ ಸುಮಾರು 39 ಲಕ್ಷ ಮತಗಳು ಸೇರ್ಪಡೆಯಾಗಿದ್ದವು. ಇವುಗಳಲ್ಲಿ ಬಹುಸಂಖ್ಯೆಯ ಮತಗಳು ನಕಲಿ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಹಿನ್ನೆಲೆಯಲ್ಲಿ, ಇದೀಗ, ಉತ್ತರ ಪ್ರದೇಶದಲ್ಲಿ ತರಾತುರಿಯಲ್ಲಿ ಸೇರ್ಪಡೆ ಮಾಡಲಾಗುತ್ತಿರುವ ಮತದಾರರಲ್ಲಿ ಅರ್ಹ ಮತದಾರರು ಎಷ್ಟಿರುತ್ತಾರೆ. ನಕಲಿ ಮತಗಳು ಎಷ್ಟಿರಲಿವೆ ಎಂಬ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್, ಸಮಾಜವಾದಿ ಪಕ್ಷ ಸೇರಿದಂತೆ ವಿಪಕ್ಷಗಳು ಎಸ್‌ಐಆರ್ ಪ್ರಕ್ರಿಯೆ ಮತ್ತು ಈಗ ನಡೆಯುತ್ತಿರುವ ತ್ವರಿತ ಮತ ಸೇರ್ಪಡೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿವೆ.



