ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಮುಚ್ಚಲ್ಪಡುತ್ತಿರುವ ಸರ್ಕಾರಿ ಮರಾಠಿ ಮಾಧ್ಯಮ ಶಾಲೆಗಳ ಸ್ಥಿತಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನೀಡಲಾಗುತ್ತಿರುವ ಕುಸಿಯುತ್ತಿರುವ ಬಜೆಟ್ ಅನುದಾನದ ಕುರಿತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಅವರು ತೀವ್ರ ಆತಂಕ ಹಾಗೂ ಬೇಸರ ವ್ಯಕ್ತಪಡಿಸಿದ್ದಾರೆ.
ಧುಳೆ ಜಿಲ್ಲೆಯ ಪ್ರೌಢಶಾಲೆಯೊಂದರಲ್ಲಿ ಆಯೋಜಿಸಲಾಗಿದ್ದ ‘ಸ್ಮಾರ್ಟ್ ಕ್ಲಾಸ್‌ರೂಮ್’ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ನ್ಯಾಯಮೂರ್ತಿಗಳು, ಮಹಾರಾಷ್ಟ್ರ ಸರ್ಕಾರದ ಅಭಿವೃದ್ಧಿ ಆದ್ಯತೆಗಳ ನಡುವಿನ ವ್ಯತ್ಯಾಸವನ್ನು ಮುಕ್ತವಾಗಿ ಪ್ರಸ್ತಾಪಿಸಿದರು.
ಇದನ್ನೂ ಓದಿ: ಮಹಾ ಕುಂಭಮೇಳ | ವಿವಾದಕ್ಕೆ ತಿರುಗಿದ ಖರ್ಗೆ ಹೇಳಿಕೆ
“ಮಹಾರಾಷ್ಟ್ರದಲ್ಲಿ ಮುಂಬರುವ ನಾಸಿಕ್-ತ್ರಯಂಬಕೇಶ್ವರ ಸಿಂಹಸ್ಥ ಕುಂಭಮೇಳದ ಮೂಲಸೌಕರ್ಯ ಅಭಿವೃದ್ಧಿಗಾಗಿ ಸುಮಾರು ₹32,000 ಕೋಟಿಯಿಂದ ₹34,000 ಕೋಟಿ ಹಾಗೂ ಪ್ರತ್ಯೇಕ ಕಾರಿಡಾರ್ ಯೋಜನೆಗೆ ₹11,000 ಕೋಟಿ ಖರ್ಚು ಮಾಡುತ್ತಿರುವುದಾಗಿ ಘೋಷಿಸಿದೆ. ಸರ್ಕಾರ ಮೂಲಸೌಕರ್ಯ ಅಥವಾ ಬೃಹತ್ ಯೋಜನೆಗಳಿಗೆ ಸಾವಿರಾರು ಕೋಟಿ ರೂಪಾಯಿ ವಿನಿಯೋಗಿಸುವುದಕ್ಕೆ ನನ್ನದೇನೂ ಅಭ್ಯಂತರವಿಲ್ಲ. ಆದರೆ, ಈ ಅನುದಾನದಿಂದ ಕೇವಲ ಶೇಕಡ 0.1 ರಷ್ಟು, ಅಂದರೆ ಸುಮಾರು ₹32 ಕೋಟಿ ರೂಪಾಯಿಯನ್ನು ಶಿಕ್ಷಣ ಕ್ಷೇತ್ರಕ್ಕೆ ವಿನಿಯೋಗಿಸಿದ್ದರೆ, ರಾಜ್ಯಾದ್ಯಂತ ಮುಚ್ಚಿಹೋಗಿರುವ 100 ರಿಂದ 125ಕ್ಕೂ ಹೆಚ್ಚು ಮರಾಠಿ ಮಾಧ್ಯಮ ಶಾಲೆಗಳನ್ನು ಮುಚ್ಚದಂತೆ ತಡೆಯಬಹುದಿತ್ತು,” ಎಂದು ನ್ಯಾ. ವರಾಳೆ ಪ್ರತಿಪಾದಿಸಿದರು.
ಇದೇ ವೇಳೆ ವಸತಿ/ಆಶ್ರಮ ಶಾಲೆಗಳ ದುಸ್ಥಿತಿಯ ಕುರಿತೂ ಉಲ್ಲೇಖಿಸಿದ ಅವರು, ಇತ್ತೀಚೆಗೆ ಗಡ್ಚಿರೋಲಿ ಜಿಲ್ಲೆಯ ಆಶ್ರಮ ಶಾಲೆಯೊಂದರಲ್ಲಿ ನೆಲದ ಮೇಲೆ ಮಲಗಿದ್ದ ಮೂವರು ಹೆಣ್ಣುಮಕ್ಕಳು ಹಾವಿನ ಕಡಿತಕ್ಕೆ ಒಳಗಾಗಿ ಮೃತಪಟ್ಟ ದುರಂತ ಘಟನೆಯನ್ನು ನೆನಪಿಸಿಕೊಂಡರು. ರಾಜ್ಯದ ಅನೇಕ ವಸತಿ ಶಾಲೆಗಳ ಮೂಲಸೌಕರ್ಯ ಸ್ಥಿತಿ ಅತ್ಯಂತ ಶೋಚನೀಯವಾಗಿದೆ ಎಂದು ಅವರು ವಿಷಾದಿಸಿದರು.
ಶಾಲಾ ಶಿಕ್ಷಣದಲ್ಲಿ ಮೂಲಸೌಕರ್ಯ, ಗುಣಮಟ್ಟದ ಕಂಪ್ಯೂಟರ್ ಪ್ರಯೋಗಾಲಯಗಳು ಹಾಗೂ ಆಧುನಿಕ ಬೋಧನಾ ವ್ಯವಸ್ಥೆ ಅಗತ್ಯವೆಂದು ಪ್ರತಿಪಾದಿಸಿದ ಅವರು, ಹಿಂದೆ ಶಿಕ್ಷಣ ಕ್ಷೇತ್ರಕ್ಕೆ ಶೇ. 8 ರಿಂದ 12 ರಷ್ಟು ಮೀಸಲಿಡುತ್ತಿದ್ದ ಬಜೆಟ್ ಪಾಲನ್ನು ಪ್ರಸ್ತುತ ಕಡಿತಗೊಳಿಸುತ್ತಿರುವುದು ಕಳವಳಕಾರಿ ಎಂದರು.




