2025-26ನೇ ಸಾಲಿನಲ್ಲಿ ಕೇಂದ್ರ ಸಚಿವರ ಅಧಿಕೃತ ನಿವಾಸಗಳ ನಿರ್ವಹಣೆಗಾಗಿ ಬರೋಬ್ಬರಿ 92.35 ಕೋಟಿ ರೂ. ಖರ್ಚು ಮಾಡಿರುವ ಕೇಂದ್ರ ಸರ್ಕಾರದ ನಡೆಯನ್ನು ‘ಕಾಕ್ರೋಚ್ ಜನತಾ ಪಾರ್ಟಿ’ (CJP) ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಈ ಬೃಹತ್ ಮೊತ್ತವನ್ನು ಸರ್ಕಾರಿ ಶಾಲೆಗಳ ನಿರ್ಮಾಣಕ್ಕೆ ಬಳಸಬಹುದಿತ್ತು ಎಂದು ಅದು ಅಸಮಾಧಾನ ವ್ಯಕ್ತಪಡಿಸಿದೆ.
ಕೇಂದ್ರ ಸಚಿವರ ನಿವಾಸಗಳ ನವೀಕರಣ, ಪೀಠೋಪಕರಣ ಅಳವಡಿಕೆ ಹಾಗೂ ದುರಸ್ತಿ ಕಾರ್ಯಗಳ ವಾರ್ಷಿಕ ವೆಚ್ಚವು ಸಾರ್ವಕಾಲಿಕ ದಾಖಲೆ ಬರೆದಿದೆ ಎಂಬ ‘ಪಿಟಿಐ’ (PTI) ಸುದ್ದಿಸಂಸ್ಥೆಯ ವರದಿಗೆ ಪ್ರತಿಕ್ರಿಯಿಸಿರುವ ಸಿಜೆಪಿ, “ನಿಮ್ಮ ಐಷಾರಾಮಿ ಮನೆಗಳನ್ನು ಸಿಂಗರಿಸುವುದನ್ನು ನಿಲ್ಲಿಸಿ, ಮೊದಲು ಶಾಲೆಗಳನ್ನು ಸರಿಪಡಿಸಿ!” ಎಂದು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದೆ.
”92 ಕೋಟಿ ರೂ. ಎಂದರೆ, 10 ಹೊಸ ವಿಶ್ವದರ್ಜೆಯ ಸರ್ಕಾರಿ ಶಾಲೆಗಳನ್ನು ನಿರ್ಮಿಸಬಹುದು. ಸರ್ಕಾರದ ಬಳಿ ಹಣ ಲಭ್ಯವಿದೆ, ಆದರೆ ಅದನ್ನು ಸರ್ಕಾರಿ ಶಾಲೆಗಳಿಗಾಗಿ ಬಳಸುವ ಇಚ್ಛಾಶಕ್ತಿಯ ಕೊರತೆಯಿದೆ” ಎಂದು ಪಕ್ಷ ಕಿಡಿಕಾರಿದೆ.
ಪಿಟಿಐ ಸುದ್ದಿಸಂಸ್ಥೆ ಮಾಹಿತಿ ಹಕ್ಕು ಕಾಯ್ದೆಯಡಿ (RTI) ಪಡೆದ ದತ್ತಾಂಶದ ಪ್ರಕಾರ, ಕೇಂದ್ರ ಸರ್ಕಾರವು 2025-26ನೇ ಸಾಲಿನಲ್ಲಿ ಸಚಿವರ ನಿವಾಸಗಳ ದುರಸ್ತಿ ಹಾಗೂ ನವೀಕರಣಕ್ಕಾಗಿ 92.35 ಕೋಟಿ ರೂ. ವೆಚ್ಚ ಮಾಡಿದೆ. ಗಮನಾರ್ಹವೆಂದರೆ, ಈ ಮೊತ್ತವು 2024-25ರಲ್ಲಿ 71.98 ಕೋಟಿ ರೂ. ಹಾಗೂ 2014-15ರಲ್ಲಿ ಕೇವಲ 27.47 ಕೋಟಿ ರೂ. ಗಳಷ್ಟಿತ್ತು.
ಮತ್ತೊಂದು ಬೆಳವಣಿಗೆಯಲ್ಲಿ, ಜೈಪುರದ ಶಾಲೆಯೊಂದರ ಬಳಿ ಪರಿಶೀಲನೆಗೆ ತೆರಳಿದ್ದ ಸಿಜೆಪಿ ತಂಡದ ಮೇಲೆ ನಡೆದ ಕಥಿತ ದಾಳಿಯನ್ನು ಖಂಡಿಸಿರುವ ಅಭಿಜೀತ್ ದೀಪ್ಕೆ, ಕ್ರಮ ಕೈಗೊಳ್ಳಲು 48 ಗಂಟೆಗಳ ಗಡುವು ನೀಡಿದ್ದಾರೆ. ತಪ್ಪಿದ್ದಲ್ಲಿ ಧರಣಿ ಕೂರುವುದಾಗಿ ಎಚ್ಚರಿಸಿದ್ದಾರೆ.
ಜುಲೈ 25ರಂದು ಹಿಂಪಡೆಯಲಾಗಿದ್ದ ರಾಷ್ಟ್ರವ್ಯಾಪಿ ಪ್ರತಿಭಟನೆಯ ವೇಳೆ ಕೇಂದ್ರ ಸರ್ಕಾರ ನೀಡಿದ್ದ ಭರವಸೆಗಳ ಪರಾಮರ್ಶೆಗಾಗಿ ಸಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯು ಸೋಮವಾರ ಸಭೆ ಸೇರುತ್ತಿರುವ ಬೆನ್ನಲ್ಲೇ ಸರ್ಕಾರದ ವಿರುದ್ಧ ಈ ಟೀಕೆ ವ್ಯಕ್ತವಾಗಿದೆ.
ಶಾಂತಿಯುತ ಪ್ರತಿಭಟನಾಕಾರರು ಮತ್ತು ವಿದ್ಯಾರ್ಥಿಗಳ ಮೇಲಿರುವ ಎಫ್‌ಐಆರ್ (FIR) ರದ್ದುಗೊಳಿಸುವುದು, ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದಿಂದಾಗಿ ‘ನೀಟ್’ (NEET-UG) ಪರೀಕ್ಷೆ ರದ್ದಾದಾಗ ಮನನೊಂದು ಆತ್ಮಹತ್ಯೆಗೆ ಶರಣಾದ ಅಭ್ಯರ್ಥಿಗಳ ಕುಟುಂಬಗಳಿಗೆ ಪರಿಹಾರ ಒದಗಿಸುವ ಭರವಸೆಯನ್ನು ಸರ್ಕಾರ ನೀಡಿತ್ತು. ಆದರೆ, ಈ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ಕುರಿತು ಸರ್ಕಾರವು ಇನ್ನೂ ಯಾವುದೇ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ ಎಂದು ಸಿಜೆಪಿ ಆರೋಪಿಸಿದೆ.
ಕೇಂದ್ರ ಸರ್ಕಾರವು ತಾನು ನೀಡಿದ ಭರವಸೆಗಳನ್ನು “ದುರ್ಬಲಗೊಳಿಸುವ, ವಿಳಂಬ ಮಾಡುವ, ತಪ್ಪಾಗಿ ಅರ್ಥೈಸುವ ಅಥವಾ ಮುರಿಯುವ” ಯಾವುದೇ ಪ್ರಯತ್ನ ಮಾಡಿದರೂ ಅದು ದೇಶದ ಯುವಜನತೆಗೆ ಮಾಡುವ ದೊಡ್ಡ “ವಿಶ್ವಾಸದ್ರೋಹ”ವಾಗಲಿದೆ ಎಂದು ಸಿಜೆಪಿ ಎಚ್ಚರಿಸಿದೆ. ಒಂದು ವೇಳೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ, ಸೋಮವಾರ ನಡೆಯುವ ಸಭೆಯಲ್ಲಿ ಮತ್ತೊಂದು ಸುತ್ತಿನ ಶಾಂತಿಯುತ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡುವ ಸಾಧ್ಯತೆಯ ಬಗ್ಗೆಯೂ ನಿರ್ಣಯ ಕೈಗೊಳ್ಳಲಾಗುವುದು ಎಂದು ಪಕ್ಷ ಸ್ಪಷ್ಟಪಡಿಸಿದೆ.




