ಭಾರತದಲ್ಲಿ ಬಳಸಲಾಗುತ್ತಿರುವ ಎಲೆಕ್ಟ್ರಾನಿಕ್ ಮತಯಂತ್ರಗಳು (EVM) ಸಾರ್ವಜನಿಕ ವಲಯದ ಕಂಪನಿಗಳಿಂದ ತಯಾರಾಗುತ್ತವೆ. ಈ ಯಂತ್ರಗಳಿಗೆ ಇಂಟರ್ನೆಟ್, ಬ್ಲೂಟೂತ್ ಅಥವಾ ವೈ-ಫೈ ಸಂಪರ್ಕ ಇರುವುದಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ಸೋಮವಾರ ಹೇಳಿದ್ದಾರೆ.
ಎರಡು ದಿನಗಳ ಲಖನೌ ಪ್ರವಾಸದಲ್ಲಿರುವ ಗ್ಯಾನೇಶ್ ಕುಮಾರ್, ಐತಿಹಾಸಿಕ ಕೋಲ್ವಿನ್ ತಾಲ್ಲೂಕುದಾರ್ಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ, ಚುನಾವಣಾ ಪ್ರಕ್ರಿಯೆ, EVMಗಳ ವಿಶ್ವಾಸಾರ್ಹತೆ ಹಾಗೂ ಯುವ ಮತದಾರರ ಮಹತ್ವ ಕುರಿತು ಚರ್ಚಿಸಿದರು.
EVMಗಳ ಕುರಿತು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಭಾರತದಲ್ಲಿ ಬಳಸುವ ಮತಯಂತ್ರಗಳನ್ನು ಸಾರ್ವಜನಿಕ ವಲಯದ ಕಂಪನಿಗಳೇ ತಯಾರಿಸುತ್ತವೆ. ಅವುಗಳನ್ನು ಇಂಟರ್ನೆಟ್ ಅಥವಾ ಯಾವುದೇ ವೈರ್‌ಲೆಸ್ ತಂತ್ರಜ್ಞಾನಕ್ಕೆ ಸಂಪರ್ಕಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಸಾಮಾಜಿಕ ಜಾಲತಾಣಗಳಲ್ಲಿನ ಮಾಹಿತಿಯನ್ನು ಪರಿಶೀಲಿಸದೆ ಸ್ವೀಕರಿಸಬಾರದು ಅಥವಾ ಹಂಚಿಕೊಳ್ಳಬಾರದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ ಅವರು, ಯಾವುದೇ ಮಾಹಿತಿಯನ್ನು ನಂಬುವ ಮೊದಲು ಅದರ ಮೂಲ ಮತ್ತು ವಿಶ್ವಾಸಾರ್ಹತೆಯನ್ನು ಪರಿಶೀಲಿಸುವುದು ಅತ್ಯಗತ್ಯ ಎಂದರು.
1979ರ ತಮ್ಮ ವಿದ್ಯಾರ್ಥಿ ಜೀವನವನ್ನು ಸ್ಮರಿಸಿದ ಗ್ಯಾನೇಶ್ ಕುಮಾರ್, ತಮ್ಮ ಶಿಕ್ಷಕರು ಮತ್ತು ಶಾಲೆಯೊಂದಿಗಿನ ನೆನಪುಗಳನ್ನು ಹಂಚಿಕೊಂಡರು. ಅಮೆರಿಕಕ್ಕೆ ತೆರಳಲು ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ ತಾಯಿಯ ಆಶಯ ಹಾಗೂ ದೇಶದ ಮೇಲಿನ ಬಾಂಧವ್ಯ ತಮ್ಮನ್ನು ಭಾರತದಲ್ಲೇ ಉಳಿದು ಸಾರ್ವಜನಿಕ ಸೇವೆಗೆ ಸೇರುವಂತೆ ಪ್ರೇರೇಪಿಸಿತು ಎಂದು ಹೇಳಿದರು.
ನಂತರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕೇರಳ ಕೇಡರ್‌ನ ಭಾರತೀಯ ಆಡಳಿತ ಸೇವೆಗೆ (IAS) ಸೇರ್ಪಡೆಯಾದ ಅವರು, ತಮ್ಮ ಸಾರ್ವಜನಿಕ ಸೇವಾ ಪಯಣವು ಅಂತಿಮವಾಗಿ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಮುಖ್ಯ ಚುನಾವಣಾ ಆಯುಕ್ತ ಹುದ್ದೆಯವರೆಗೆ ಕರೆದೊಯ್ದಿದೆ ಎಂದು ಹೇಳಿದರು.
ಭಾರತದಲ್ಲಿ ಸುಮಾರು 100 ಕೋಟಿ ಮತದಾರರಿದ್ದು, ಇಷ್ಟು ದೊಡ್ಡ ಸಂಖ್ಯೆಯ ಜನರಿಗೆ ಚುನಾವಣೆ ನಡೆಸುವುದು ಅತ್ಯಂತ ದೊಡ್ಡ ಸವಾಲು. ಚುನಾವಣಾ ಪ್ರಕ್ರಿಯೆ ಸುಗಮವಾಗಿ ನಡೆಯಲು ಅಪಾರ ಸಂಖ್ಯೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: 20 ಬಂಡಾಯ ಸಂಸದರ ಅನರ್ಹತೆಗೆ ಆಗ್ರಹ: ಸುಪ್ರೀಂ ಕೋರ್ಟ್‌ಗೆ ಅಭಿಷೇಕ್ ಬ್ಯಾನರ್ಜಿ ಅರ್ಜಿ
18 ವರ್ಷ ಪೂರ್ಣಗೊಂಡ ಯುವಕರು ಮತದಾರರಾಗಿ ನೋಂದಾಯಿಸಿಕೊಳ್ಳುವಂತೆ ಕರೆ ನೀಡಿದ ಅವರು, ಸಂವಿಧಾನದ 326ನೇ ವಿಧಿಯನ್ನು ಉಲ್ಲೇಖಿಸಿದರು. ಚುನಾವಣಾ ಆಯೋಗದ ಡಿಜಿಟಲ್ ವೇದಿಕೆಗಳ ಮೂಲಕ ಮತದಾರರ ನೋಂದಣಿ ಸೌಲಭ್ಯ ಲಭ್ಯವಿದೆ ಎಂದರು.
ಯುವಕರು ತಮ್ಮನ್ನು ತಾವು ಮತದಾರರಾಗಿ ನೋಂದಾಯಿಸಿಕೊಳ್ಳುವುದರ ಜತೆಗೆ ಕುಟುಂಬದ ಸದಸ್ಯರು ಮತ್ತು ಸ್ನೇಹಿತರನ್ನೂ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
“ದೇಶದ ಪ್ರಜಾಪ್ರಭುತ್ವದ ಭವಿಷ್ಯವನ್ನು ರೂಪಿಸುವಲ್ಲಿ ಯುವಜನರು ಅತ್ಯಂತ ಪ್ರಮುಖ ಶಕ್ತಿ. ಅವರು ಜಾಗೃತಿಯಿಂದ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದರೆ ಪ್ರಜಾಪ್ರಭುತ್ವ ಮತ್ತಷ್ಟು ಬಲಗೊಳ್ಳಲಿದೆ” ಎಂದು ಗ್ಯಾನೇಶ್ ಕುಮಾರ್ ಹೇಳಿದರು.




