ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪ್ರಧಾನ ಕಾರ್ಯದರ್ಶಿ ಹಾಗೂ ಲೋಕಸಭೆಯ ಪಕ್ಷದ ನಾಯಕ ಅಭಿಷೇಕ್ ಬ್ಯಾನರ್ಜಿ ಅವರು ಪಕ್ಷದಿಂದ ಬಂಡಾಯವೆದ್ದು ಬೇರ್ಪಟ್ಟಿರುವ 20 ಸಂಸದರ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಆಗಸ್ಟ್ 25ರಂದು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.
ಈ ತಿಂಗಳ ಆರಂಭದಲ್ಲೇ ಅರ್ಜಿ ಸಲ್ಲಿಸಲಾಗಿದ್ದು, ಸುಪ್ರೀಂ ಕೋರ್ಟ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಮಾಹಿತಿಯಂತೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ನ್ಯಾಯಪೀಠವು ಆಗಸ್ಟ್ 25ರಂದು ಅರ್ಜಿಯ ವಿಚಾರಣೆ ನಡೆಸುವ ಸಾಧ್ಯತೆ ಇದೆ. ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರು ಪೀಠದ ಸದಸ್ಯರಾಗಿದ್ದಾರೆ.
ಬಂಡಾಯ ಸಂಸದರ ವಿರುದ್ಧ ಆರಂಭಿಸಲಾಗಿರುವ ಅನರ್ಹತೆ ಪ್ರಕ್ರಿಯೆಯಲ್ಲಿ ನಿರ್ಧಾರ ಕೈಗೊಳ್ಳಲು ಆಗುತ್ತಿರುವ ವಿಳಂಬವನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಲೋಕಸಭಾ ಸ್ಪೀಕರ್ ಮತ್ತು ಪ್ರಧಾನ ಕಾರ್ಯದರ್ಶಿ ಸೇರಿದಂತೆ 20 ಬಂಡಾಯ ಸಂಸದರನ್ನು ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ಟಿಎಂಸಿಯ ಸಂಸದೀಯ ಬಣದಲ್ಲಿನ ಬಂಡಾಯದಿಂದ ಈ ವಿವಾದ ಹುಟ್ಟಿಕೊಂಡಿದ್ದು, 20 ಸಂಸದರು ಪಕ್ಷದಿಂದ ಬೇರ್ಪಟ್ಟು ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (ಎನ್‌ಸಿಪಿಐ) ಜತೆ ಕೈಜೋಡಿಸಿದ್ದಾರೆ. ಈ ಬಂಡಾಯ ಸಂಸದರು ಲೋಕಸಭೆಯಲ್ಲಿ ಪ್ರತ್ಯೇಕ ಗುಂಪಾಗಿ ಮಾನ್ಯತೆ ನೀಡುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಜಂತರ್ ಮಂತರ್ ಪ್ರತಿಭಟನೆ: ಮಹಿಳೆಯರ ಮೇಲಿನ ದೌರ್ಜನ್ಯ ಆರೋಪಗಳ ತನಿಖೆಗೆ ಆದ್ಯತೆ ನೀಡಲು ಸುಪ್ರೀಂ ಸೂಚನೆ
ಟಿಎಂಸಿ ಮಾತ್ರ ಇದನ್ನು ಪಕ್ಷಾಂತರ ವಿರೋಧಿ ಕಾನೂನಿನ ವ್ಯಾಪ್ತಿಗೆ ಬರುವ ಪ್ರಕರಣ ಎಂದು ಪ್ರತಿಪಾದಿಸಿದೆ. ಸಂಸದರು ಟಿಎಂಸಿ ಚಿಹ್ನೆಯಡಿ ಚುನಾವಣೆಯಲ್ಲಿ ಗೆದ್ದಿದ್ದು, ಬಳಿಕ ಮತ್ತೊಂದು ರಾಜಕೀಯ ಸಂಘಟನೆಯೊಂದಿಗೆ ಗುರುತಿಸಿಕೊಂಡಿರುವುದು ಪಕ್ಷಾಂತರ ವಿರೋಧಿ ಕಾನೂನಿನಡಿ ಕ್ರಮಕ್ಕೆ ಅರ್ಹವಾಗುತ್ತದೆ ಎಂದು ಪಕ್ಷ ಹೇಳಿದೆ.
ಇದೇ ವೇಳೆ, ಶಿವಸೇನಾ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ನಾಯಕ ಅರವಿಂದ್ ಗಣಪತ್ ಸಾವಂತ್ ಸಲ್ಲಿಸಿದ್ದ ಅರ್ಜಿಯ ಮೇಲೂ ಜುಲೈನಲ್ಲಿ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿತ್ತು. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಶಿವಸೇನಾ (ಯುಬಿಟಿ)ಯ ಆರು ಸಂಸದರು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯೊಂದಿಗೆ ವಿಲೀನಗೊಂಡಿರುವುದನ್ನು ಮಾನ್ಯ ಮಾಡಿದ್ದನ್ನು ಸಾವಂತ್ ಪ್ರಶ್ನಿಸಿದ್ದರು.




