ಉತ್ತರ ಪ್ರದೇಶ ಲೋಕಸೇವಾ ಆಯೋಗವನ್ನು (UPPSC) ‘ಅತ್ಯಂತ ಭ್ರಷ್ಟ ಆಯೋಗ’ ಎಂದು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಮುಖೇಶ್ ಕುಮಾರ್ ವರ್ಮಾ ಎಂಬವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಬೆಳವಣಿಗೆಯು ದೇಶಾದ್ಯಂತ ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ. ಸಂಸ್ಥೆಗಳಲ್ಲಿ ಲೋಪವನ್ನು ಪ್ರಶ್ನಿಸುವುದು ಅಪರಾಧವೇ ಎಂದು ಆಕ್ರೋಶ ವ್ಯಕ್ತವಾಗಿದೆ.
ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪಾರದರ್ಶಕತೆ, ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಮೀಸಲಾತಿ ಹಂಚಿಕೆಯ ವೈಫಲ್ಯಗಳ ಕುರಿತು ಮಾಧ್ಯಮಗಳು ವರದಿ ಮಾಡಿದ್ದವು. ಆ ವರದಿಗಳನ್ನು ಉಲ್ಲೇಖಿಸಿ ಮುಖೇಶ್ ಕುಮಾರ್ ವರ್ಮಾ ಅವರು ಸಾಮಾಜಿಕ ಜಾಲತಾಣದಲ್ಲಿ ಆಯೋಗದ ವೈಫಲ್ಯವನ್ನು ಖಂಡಿಸಿದ್ದರು. “ಆಯೋಗವು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡಲು ಕೈಗೊಂಡ ನಿರ್ಧಾರಗಳು ಹಿಂದುಳಿದ ಮತ್ತು ಪರಿಶಿಷ್ಟ ವರ್ಗದ ಅಭ್ಯರ್ಥಿಗಳಿಗೆ ಅನ್ಯಾಯವೆಸಗುತ್ತಿವೆ” ಎಂದು ಅವರು ಆರೋಪಿಸಿದ್ದರು. ಅಲ್ಲದೆ, “ಪರೀಕ್ಷಾ ಪ್ರಕ್ರಿಯೆಯಲ್ಲಿ ಮೀಸಲಾತಿ ನಿಯಮಗಳ ಉಲ್ಲಂಘನೆ ಹಾಗೂ ಅಕ್ರಮಗಳು ನಡೆಯುತ್ತಿವೆ” ಎಂದು ದೂರಿದ್ದರು.
ಆ ಕಾರಣಕ್ಕಾಗಿ, ಮುಖೇಶ್ ವರ್ಮಾ ವಿರುದ್ಧ ಪ್ರಯಾಗ್‌ರಾಜ್‌ನ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆಯೋಗದ ಅಧಿಕಾರಿ ನೀಡಿದ ದೂರಿನನ್ವಯ ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಮಾಹಿತಿ ತಂತ್ರಜ್ಞಾನ (IT) ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.
ಸಾರ್ವಜನಿಕ ಸಂಸ್ಥೆಯ ಪಕ್ಷಪಾತಿ ಧೋರಣೆಯನ್ನು ಪ್ರಶ್ನಿಸಿ ‘ಅತ್ಯಂತ ಭ್ರಷ್ಟ ಸಂಸ್ಥೆ’ ಎಂದು ಬರೆದದ್ದನ್ನೇ ಆಧಾರವಾಗಿಟ್ಟುಕೊಂಡು, ಆಯೋಗದ ಅಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದ್ದಾರೆ. ಅಧಿಕಾರಿಗಳ ದೂರು ಪಡೆದ ಪೊಲೀಸರು ತಕ್ಷಣವೇ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಆಯೋಗ ಮತ್ತು ಪೊಲೀಸರ ಈ ಕ್ರಮದ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದೆ. ಸಾರ್ವಜನಿಕ ಸಂಸ್ಥೆಯೊಂದರ ಕಾರ್ಯವೈಖರಿಯನ್ನು ವಿಮರ್ಶಿಸಿದ್ದಕ್ಕಾಗಿ ಪೊಲೀಸ್ ದೂರು ದಾಖಲಿಸಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ. ಇದು ಕೇವಲ ಒಬ್ಬ ವ್ಯಕ್ತಿಯ ಮೇಲಿನ ಕ್ರಮವಾಗಿರದೆ, ಸಂಸ್ಥೆಗಳ ತಪ್ಪುಗಳನ್ನು ಬೆರಳು ಮಾಡಿ ತೋರಿಸುವ ಸಾಮಾನ್ಯ ಪ್ರಜೆಗಳು ಮತ್ತು ಪರೀಕ್ಷಾರ್ಥಿಗಳಿಗೆ ನೀಡಿದ ಬೆದರಿಕೆಯೆಂದು ಟೀಕಿಸಲಾಗುತ್ತಿದೆ.
ಈ ಲೇಖನ ಓದಿದ್ದೀರಾ?: ಕಾಂಗ್ರೆಸ್‌ನದ್ದು ವೋಟ್ ಬ್ಯಾಂಕ್ ರಾಜಕಾರಣವಾದರೆ, ಧರ್ಮ-ʼದೇಶಭಕ್ತಿʼಯ ಹೆಸರಿನಲ್ಲಿ ಬಿಜೆಪಿ ಮಾಡುತ್ತಿರುವುದೇನು?
ಅಂದಹಾಗೆ, ಭಾರತೀಯ ಸಂವಿಧಾನದ ವಿಧಿ 19(1)(a) ಪ್ರತಿಯೊಬ್ಬ ನಾಗರಿಕನಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ. ಸರ್ಕಾರದ ನೀತಿಗಳು, ಸರ್ಕಾರಿ ಆಯೋಗಗಳು ಅಥವಾ ಸಂಸ್ಥೆಗಳ ನಿರ್ಧಾರಗಳನ್ನು ಪ್ರಶ್ನಿಸುವುದು, ಟೀಕಿಸುವುದು ಪ್ರಜಾಪ್ರಭುತ್ವದ ಜೀವಾಳ ಕೂಡ. ಲೋಕಸೇವಾ ಆಯೋಗದಂತಹ ಸಂಸ್ಥೆಗಳು ಲಕ್ಷಾಂತರ ಯುವಜನರ ಭವಿಷ್ಯವನ್ನು ನಿರ್ಧರಿಸುತ್ತವೆ. ಇಂತಹ ಸಂಸ್ಥೆಗಳ ಪರೀಕ್ಷಾ ಪ್ರಕ್ರಿಯೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಅಥವಾ ಅಕ್ರಮಗಳ ಆರೋಪ ಕೇಳಿಬಂದಾಗ, ಅಭ್ಯರ್ಥಿಗಳು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುವುದು ಸಹಜ.
ಹೀಗಿರುವಾಗ, ಯುವಜನತೆಯ ಧ್ವನಿಯನ್ನು ಕಾನೂನಿನ ಬೆದರಿಕೆಯಿಂದ ಅಡಗಿಸಲು ಯತ್ನಿಸಿದರೆ, ಸಂಸ್ಥೆಗಳ ಮೇಲಿನ ಸಾರ್ವಜನಿಕರ ನಂಬಿಕೆ ಇನ್ನಷ್ಟು ಕುಸಿಯುತ್ತದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವುದು ಅಥವಾ ಸಂಸ್ಥೆಯ ಲೋಪಗಳನ್ನು ಎತ್ತಿ ತೋರಿಸುವುದು ಅಪರಾಧವಲ್ಲ; ಅದು ನಾಗರಿಕ ಕರ್ತವ್ಯ. ಆದರೆ, ಆಳುವವರು ವಿಮರ್ಶೆಗೆ ಕಿವಿಕೊಡುವ ಬದಲು ಅಧಿಕಾರದ ಮೂಲಕ ದಮನಕಾರಿ ಹಾದಿ ಹಿಡಿಯುತ್ತಿವೆ. ಇದು ಯುವಜನರನ್ನು ಮತ್ತಷ್ಟು ಗಟ್ಟಿ ಧ್ವನಿಯಲ್ಲಿ ಒಗ್ಗೂಡುವಂತೆ ಮಾಡುತ್ತದೆ ಎಂಬುದನ್ನು ಅಧಿಕಾರದಲ್ಲಿರುವವರು ಮರೆತಂತಿದೆ.



