ಹೋಟೆಲ್‌ಗಳು, ಬೇಕರಿಗಳು ಹಾಗೂ ಬೀದಿಬದಿ ಆಹಾರ ವ್ಯಾಪಾರಗಳು ಬಿಸಿಬಿಸಿ ತಿಂಡಿಗಳನ್ನು ಪ್ಯಾಕ್ ಮಾಡಲು ಅಥವಾ ಗ್ರಾಹಕರಿಗೆ ಬಡಿಸಲು ದಿನಪತ್ರಿಕೆಗಳನ್ನು ಬಳಸುವುದನ್ನು ನಿಷೇಧಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಪತ್ರಿಕೆಗಳ ಬಳಕೆಯಿಂದ ಸಾರ್ವಜನಿಕರಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುವುದರಿಂದ, ದೇಶಾದ್ಯಂತ ಎಲ್ಲ ಆಹಾರ ಉದ್ಯಮ ನಿರ್ವಾಹಕರು ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದೆ.
ಇತ್ತೀಚೆಗೆ ಮುಂಬೈನಲ್ಲಿ ವಡಾಪಾವ್ ಮಾರಾಟಗಾರರೊಬ್ಬರು ದಿನಪತ್ರಿಕೆಯಲ್ಲೇ ಆಹಾರವನ್ನು ಸುತ್ತಿ ಗ್ರಾಹಕರಿಗೆ ನೀಡುತ್ತಿದ್ದ ಘಟನೆ ಬೆಳಕಿಗೆ ಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಎಫ್‌ಎಸ್‌ಎಸ್‌ಎಐ ಮತ್ತು ಬೃಹನ್‌ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದರು. ಇದರ ಬೆನ್ನಲ್ಲೇ ಈ ಹೊಸ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ.
‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಪ್ಯಾಕೇಜಿಂಗ್) ನಿಯಮಾವಳಿ-2018’ರ ಅನ್ವಯ, ಆಹಾರವನ್ನು ಸಂಗ್ರಹಿಸಲು, ಸಾಗಿಸಲು ಅಥವಾ ಬಡಿಸಲು ದಿನಪತ್ರಿಕೆ ಸೇರಿದಂತೆ ಸರ್ಕಾರದ ಅನುಮೋದನೆ ಇಲ್ಲದ ಯಾವುದೇ ವಸ್ತುಗಳನ್ನು ಬಳಸುವುದು ಕಾನೂನುಬಾಹಿರ ಎಂದು ಪ್ರಾಧಿಕಾರ ಪುನರುಚ್ಚರಿಸಿದೆ.
ದಿನಪತ್ರಿಕೆಗಳ ಮುದ್ರಣಕ್ಕೆ ಬಳಸುವ ಶಾಯಿಯಲ್ಲಿ ಸೀಸ ಸೇರಿದಂತೆ ದೇಹಕ್ಕೆ ಹಾನಿಕಾರಕವಾದ ಅನೇಕ ಅಪಾಯಕಾರಿ ರಾಸಾಯನಿಕಗಳು ಮತ್ತು ಲೋಹಗಳು ಇರುತ್ತವೆ. ಬಿಸಿಯಾದ ಆಹಾರ ಪದಾರ್ಥಗಳನ್ನು ಪತ್ರಿಕೆಗಳ ಮೇಲೆ ಇಟ್ಟಾಗ ಈ ವಿಷಕಾರಿ ರಾಸಾಯನಿಕಗಳು ಸುಲಭವಾಗಿ ಆಹಾರದೊಂದಿಗೆ ಮಿಶ್ರಣಗೊಳ್ಳುತ್ತವೆ. ಇಂತಹ ಆಹಾರವನ್ನು ಸೇವಿಸುವುದರಿಂದ ಮನುಷ್ಯರಲ್ಲಿ ದೀರ್ಘಕಾಲೀನ ಮತ್ತು ಮಾರಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಅಪಾಯವಿರುತ್ತದೆ ಎಂದು FSSAI ಹೇಳಿದೆ.
ಜೊತೆಗೆ, ಪತ್ರಿಕೆಗಳು ಪ್ರಿಂಟಿಂಗ್ ಪ್ರೆಸ್‌ನಿಂದ ಓದುಗರ ಕೈ ಸೇರುವವರೆಗೆ ಅನೇಕ ಅಸ್ವಚ್ಛ ಪರಿಸರಗಳಲ್ಲಿ ದಾಸ್ತಾನಾಗಿರುವುದರಿಂದ, ಅವುಗಳಲ್ಲಿ ಬ್ಯಾಕ್ಟೀರಿಯಾ ಮತ್ತು ಇತರ ಸೂಕ್ಷ್ಮಾಣುಗಳು ಅತಿಹೆಚ್ಚು ಸಂಖ್ಯೆಯಲ್ಲಿರುತ್ತವೆ. ಇವು ಆಹಾರವನ್ನು ಕಲುಷಿತಗೊಳಿಸಿ ವಿಷಪೂರಿತವಾಗಿಸುವ ಮೂಲಕ ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗುತ್ತವೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬೀದಿ ಬದಿ ಆಹಾರ ಮಾರಾಟಗಾರರು, ಹೋಟೆಲ್‌ಗಳು, ಕ್ಲೌಡ್ ಕಿಚನ್‌ಗಳು ಹಾಗೂ ಕ್ಯಾಟರಿಂಗ್ ಸಂಸ್ಥೆಗಳು ಸೇರಿದಂತೆ ಪ್ರತಿಯೊಬ್ಬ ಆಹಾರ ಉದ್ಯಮಿಯೂ ಕಡ್ಡಾಯವಾಗಿ ಆಹಾರ ದರ್ಜೆಯ (ಫುಡ್-ಗ್ರೇಡ್) ಅನುಮೋದಿತ ಪ್ಯಾಕೇಜಿಂಗ್ ವಸ್ತುಗಳನ್ನು ಮಾತ್ರ ಬಳಸಬೇಕು ಎಂದು ಸೂಚಿಸಲಾಗಿದೆ.
ಕೇವಲ ವ್ಯಾಪಾರಿಗಳಷ್ಟೇ ಅಲ್ಲದೆ ಗ್ರಾಹಕರು ಸಹ ಈ ಬಗ್ಗೆ ಜಾಗೃತರಾಗಿರಬೇಕು. ಹೋಟೆಲ್ ಅಥವಾ ಅಂಗಡಿಗಳಲ್ಲಿ ಪತ್ರಿಕೆಗಳಲ್ಲಿ ಆಹಾರವನ್ನು ಪ್ಯಾಕ್ ಮಾಡಿಕೊಡುತ್ತಿದ್ದರೆ ಅದನ್ನು ತಕ್ಷಣವೇ ನಿರಾಕರಿಸಿ, ಸುರಕ್ಷಿತ ಹಾಗೂ ಆರೋಗ್ಯಕರ ಪ್ಯಾಕೇಜಿಂಗ್‌ಗೆ ಆದ್ಯತೆ ನೀಡುವಂತೆ ಸಾರ್ವಜನಿಕರಲ್ಲಿ ಎಫ್‌ಎಸ್‌ಎಸ್‌ಎಐ ಮನವಿ ಮಾಡಿದೆ.



