ಅಸ್ಸಾಂನ ಗೋಲ್ಪಾರಾದಲ್ಲಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯೊಂದರ ಮುಸ್ಲಿಂ ವಿದ್ಯಾರ್ಥಿಯೊಬ್ಬ ಟಿಫಿನ್‌ನಲ್ಲಿ ಗೋಮಾಂಸ ತಂದಿದ್ದನೆಂಬ ಆರೋಪವು ವಿವಾದ ಹುಟ್ಟುಹಾಕಿದೆ. ಇದೇ ಆರೋಪದ ಮೇಲೆ ವಿದ್ಯಾರ್ಥಿ ಮತ್ತು ಆತನ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಈಗ, ಶಾಲೆಗೆ ಗೋಮಾಂಸ ತಂದಿದ್ದ ವಿದ್ಯಾರ್ಥಿ ಮತ್ತು ಅದನ್ನು ಹಂಚಿಕೊಂಡು ಸೇವಿಸಿದ ಇತರ ನಾಲ್ವರು ವಿದ್ಯಾರ್ಥಿಗಳನ್ನು ಶಾಲೆಯಿಂದ ಉಚ್ಛಾಟಿಸುವ ಆತಂಕ ಎದುರಾಗಿದೆ.
ಗೋಲ್ಪಾರಾ ಜಿಲ್ಲೆಯಲ್ಲು ಮುಸ್ಲಿಂ ಜನಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ. ಈ ಪ್ರದೇಶದಲ್ಲಿರುವ ಸದರಿ ಶಾಲೆಯಲ್ಲಿ ಟಿಫಿನ್ ಬಾಕ್ಸ್‌ಗಳಲ್ಲಿ ಕೇವಲ ಸಸ್ಯಾಹಾರಿ ಆಹಾರವನ್ನು ಮಾತ್ರ ತರಬೇಕು ಎಂದು ತಾಕೀತು ಮಾಡಲಾಗಿದೆ.
ಕೃಷ್ಣಾಯಿ ಪೊಲೀಸ್ ಠಾಣೆಯ ಪ್ರಭಾರ ಅಧಿಕಾರಿ ಆನಂದ ರಭಾ ಮಾತನಾಡಿ, ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ತಾಯಿ ಮತ್ತು ಮಗನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸ್ಥಳೀಯ ಸ್ವಸಹಾಯ ಸಂಘದೊಂದಿಗೆ ಗುರುತಿಸಿಕೊಂಡಿರುವ ಬಂಧಿತ ಮಹಿಳೆ ಪತಿಯನ್ನು ಕಳೆದುಕೊಂಡಿದ್ದು, ಒಬ್ಬಂಟಿ ಪೋಷಕಿಯಾಗಿದ್ದಾರೆ. ಬಾಲಕ ಅಪ್ರಾಪ್ತನಾಗಿರುವುದರಿಂದ ಆತನನ್ನು ಬಾಲನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ” ಎಂದು ಹೇಳಿದ್ದಾರೆ.
“ಪ್ರಕರಣಕ್ಕೆ ಸಂಬಂಧಿಸಿದಂತೆ ಇತರ ನಾಲ್ಕು ಹುಡುಗರನ್ನು ವಿಚಾರಣೆ ನಡೆಸಲಾಗುತ್ತಿದೆ” ಎಂದು ರಭಾ ಹೇಳಿದ್ದಾರೆ.
ಕಳೆದ ವಾರ ಶುಕ್ರವಾರ ಈ ಘಟನೆ ನಡೆದಿದೆ. ಆ ಸುದ್ದಿ ಹರಡುತ್ತಿದ್ದಂತೆ ಹಿಂದುತ್ವವಾದಿ ಕೋಮು ಸಂಘಟನೆಗಳು ಶಾಲೆಗೆ ನುಗ್ಗಿ ದಾಂಧಲೆ ನಡೆಸಿವೆ. ಐದು ಮುಸ್ಲಿಂ ವಿದ್ಯಾರ್ಥಿಗಳನ್ನು ಉಚ್ಚಾಟಿಸಲು ದುಂಬಾಲು ಬಿದ್ದಿವೆ. ಉಚ್ಛಾಟನೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಮಂಗಳವಾರ ಸಭೆ ನಡೆಸಲಾಗುವುದು ಎಂದು ಶಾಲಾ ವ್ಯವಸ್ಥಾಪನಾ ಅಭಿವೃದ್ಧಿ ಸಮಿತಿ (SDMC) ಅಧ್ಯಕ್ಷ ಸುಬ್ರತಾ ದಾಸ್ ತಿಳಿಸಿರುವುದಾಗಿ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
“ಜೂನ್ 5 ರಂದು 9ನೇ ತರಗತಿಯ ಐದು ವಿದ್ಯಾರ್ಥಿಗಳು ತಾವು ಟಿಫಿನ್‌ನಲ್ಲಿ ತಂದಿದ್ದ ಗೋಮಾಂಸವನ್ನು ಇಬ್ಬರು ಹಿಂದು ಸಹಪಾಠಿಗಳಿಗೆ ತಿನ್ನಿಸಲು ಯತ್ನಿಸಿದ್ದಾರೆ. ಆ ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ವಿಷಯ ತಿಳಿಸಿದರು. ಇದು ಸೂಕ್ಷ್ಮ ವಿಷಯವಾಗಿದ್ದರಿಂದ ಶಿಕ್ಷಕರು ಮತ್ತು ಪ್ರಾಂಶುಪಾಲರು ಶಾಲೆಯೊಳಗೇ ವಿಷಯವನ್ನು ಇತ್ಯರ್ಥಪಡಿಸಲು ಪ್ರಯತ್ನಿಸಿದರು. ಆದರೆ ಹುಡುಗರು ಮನೆಗೆ ಹೋಗಿ ತಮ್ಮ ಪೋಷಕರು ಮತ್ತು ಗ್ರಾಮದ ಇತರ ಜನರಿಗೆ ತಿಳಿಸಿದಾಗ ವಿಷಯ ಉಲ್ಬಣಗೊಂಡಿದೆ” ಎಂದು ದಾಸ್ ಹೇಳಿದ್ದಾರೆ.
ಆರೋಪಿ ಹುಡುಗರು ಮತ್ತು ಅವರ ಕುಟುಂಬದವರೊಂದಿಗೆ ಮಾತನಾಡಿರುವ ಸ್ಥಳೀಯ ಅಖಿಲ ಅಸ್ಸಾಂ ವಿದ್ಯಾರ್ಥಿ ಒಕ್ಕೂಟದ (AASU) ನಾಯಕ ಮಣಿದುಲ್ ಇಸ್ಲಾಂ, “ವಿವಿಧ ಗುಂಪುಗಳು ಮತ್ತು ಸಂಘಟನೆಗಳು ಇದರಲ್ಲಿ ಭಾಗಿಯಾಗಿದ್ದರಿಂದ ವಿಷಯ ಕೆಟ್ಟದಾಗಿ ಮಾರ್ಪಟ್ಟಿದೆ. ತಾವು ಟಿಫಿನ್ ಹಂಚಿಕೊಳ್ಳುತ್ತಿದ್ದಾಗ, ಇಬ್ಬರು ಸಹಪಾಠಿಗಳು ಬಂದು ಏನು ತಿನ್ನುತ್ತಿದ್ದೀರಿ ಎಂದು ಕೇಳಿದರು. ಅಲ್ಲಿಂದಲೇ ಈ ಸಮಸ್ಯೆ ಶುರುವಾಯಿತು ಎಂದು ಹುಡುಗರು ಹೇಳುತ್ತಿದ್ದಾರೆ” ಎಂದು ವಿವರಿಸಿದ್ದಾರೆ.
ಉಚ್ಛಾಟಿಸುವ ವಿಚಾರವನ್ನು ವಿರೋಧಿಸಿದ ಇಸ್ಲಾಂ, “ವಿಷಯ ಏನೇ ಇರಲಿ, ಇದರಿಂದಾಗಿ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು. ನಾವೆಲ್ಲರೂ ನೆರೆಹೊರೆಯವರಾಗಿ ವಾಸಿಸುವ ಈ ಪ್ರದೇಶದಲ್ಲಿ ಕೋಮು ಸೌಹಾರ್ದತೆಯನ್ನು ಮರಳಿ ತರುವತ್ತ ನಾವು ಗಮನ ಹರಿಸಬೇಕಾಗಿದೆ” ಎಂದಿದ್ದಾರೆ.
ಈ ಗದ್ದಲದ ನಡುವೆ ಜಿಲ್ಲಾಧಿಕಾರಿ ಪ್ರದೀಪ್ ತಿಮುಂಗ್ ಮತ್ತು ಎಸ್‌ಎಸ್‌ಪಿ ನವನೀತ್ ಮಹಾಂತ ಅವರು ಶಾಲೆಗೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ. “ಇಂತಹ ಘಟನೆ ನಡೆಯಬಾರದಿತ್ತು, ಇನ್ನು ಮುಂದೆ ನಡೆಯಬಾರದು. ಅಗತ್ಯವಿದ್ದರೆ ಟಿಫಿನ್‌ಗಳನ್ನು ಪರಿಶೀಲಿಸಬೇಕು. ವಿದ್ಯಾರ್ಥಿಗಳಿಗೆ ಶಾಲೆಗೆ ಹೆಚ್ಚೆಂದರೆ ಮೊಟ್ಟೆಗಳನ್ನು ತರಲು ಮಾತ್ರ ಅನುಮತಿಸಬೇಕು. ಮೀನು ಮತ್ತು ಮಾಂಸವನ್ನು ಅನುಮತಿಸಬಾರದು ಎಂದು ನಾನು ಈಗಾಗಲೇ ಶಾಲೆಗಳ ಇನ್ಸ್‌ಪೆಕ್ಟರ್‌ಗೆ ನಿರ್ದೇಶನ ನೀಡಿದ್ದೇನೆ” ಎಂದು ತಿಮುಂಗ್ ಹೇಳಿದ್ದಾರೆ.



