AIADMK ಸರ್ಕಾರದ ಅವಧಿಯಲ್ಲಿ ಪ್ರವಾಸೋದ್ಯಮ ಸಚಿವರಾಗಿ ಸೇವೆ ಸಲ್ಲಿಸಿದ್ದ ಹಿರಿಯ ನಾಯಕ ವೆಲ್ಲಮಂಡಿ ನಟರಾಜನ್, ಬುಧವಾರ ರಾತ್ರಿ ತಮಿಳಗ ವೆಟ್ರಿ ಕಳಗಂ (TVK) ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.
ತಿರುಚಿ ಮೂಲದ ನಟರಾಜನ್ ಅವರು ಸುದೀರ್ಘ ಕಾಲದಿಂದ ಅಣ್ಣಾಡಿಎಂಕೆಯಲ್ಲಿ ಸಕ್ರಿಯರಾಗಿದ್ದರು. 2016ರ ವಿಧಾನಸಭಾ ಚುನಾವಣೆಯಲ್ಲಿ ತಿರುಚಿ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದ ಅವರು, ಜಯಲಲಿತಾ ಅವರ ಸಂಪುಟದಲ್ಲಿ ಪ್ರವಾಸೋದ್ಯಮ ಸಚಿವರಾಗಿದ್ದರು. ಜಯಲಲಿತಾ ಅವರ ನಿಧನದ ನಂತರ ಪಕ್ಷ ಇಬ್ಬಾಗವಾದಾಗ, ಅವರು ಆರಂಭದಲ್ಲಿ ಓ. ಪನ್ನೀರ್ಸೆಲ್ವಂ (OPS) ಬಣವನ್ನು ಬೆಂಬಲಿಸಿದ್ದರು. ಆದರೆ, 2026ರ ವಿಧಾನಸಭಾ ಚುನಾವಣೆಗೆ ಮುನ್ನ ಪನ್ನೀರ್ಸೆಲ್ವಂ ಡಿಎಂಕೆ ಸೇರ್ಪಡೆಯಾದಾಗ, ನಟರಾಜನ್ ಅವರು ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರ ನಾಯಕತ್ವವನ್ನು ಒಪ್ಪಿಕೊಂಡು ಮತ್ತೆ ಅಣ್ಣಾಡಿಎಂಕೆಗೆ ಮರಳಿದ್ದರು.
ಆದರೆ, ಬದಲಾದ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ನಿನ್ನೆ (ಮೇ.27) ತಡರಾತ್ರಿ 11 ಗಂಟೆ ಸುಮಾರಿಗೆ ಅಧಿಕೃತವಾಗಿ ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್. ಆನಂದ್ ಅವರ ಸಮ್ಮುಖದಲ್ಲಿ ಟಿವಿಕೆ ಸದಸ್ಯತ್ವ ಪಡೆದಿದ್ದಾರೆ.
ಇದನ್ನೂ ಓದಿ: ಎಐಎಡಿಎಂಕೆ ಶಾಸಕರಿಗೆ ಸಚಿವ ಸ್ಥಾನ ನೀಡಿದರೆ ಬೆಂಬಲ ವಾಪಸ್: ಟಿವಿಕೆ ಸರ್ಕಾರಕ್ಕೆ ಸಿಪಿಎಂ ಎಚ್ಚರಿಕೆ
“ನಾನು ಸುದೀರ್ಘ ಕಾಲದಿಂದ ಅಣ್ಣಾಡಿಎಂಕೆಯಲ್ಲಿದ್ದೆ. ಆದರೆ ಜಯಲಲಿತಾ ಅವರ ನಿಧನದ ನಂತರ ಪಕ್ಷ ಸರಣಿ ಸೋಲುಗಳನ್ನು ಕಾಣುತ್ತಿದೆ. ಪಕ್ಷದ ನಾಯಕರೆಲ್ಲರೂ ಒಟ್ಟಿಗೆ ಕುಳಿತು ಮುಂದಿನ ಹಾದಿಯ ಬಗ್ಗೆ ಚರ್ಚಿಸಬೇಕು ಎಂದು ನಾನು ಸಲಹೆ ನೀಡಿದ್ದೆ, ಆದರೆ ಅವರು ಅದನ್ನು ಸ್ವೀಕರಿಸಲಿಲ್ಲ. ಇತ್ತೀಚಿನ ಚುನಾವಣೆಯ ನಂತರ ಅಣ್ಣಾಡಿಎಂಕೆ ಮತ್ತೆ ಇಬ್ಬಾಗವಾಗಿದೆ, ಇದೆಲ್ಲವೂ ಸರಿಯಲ್ಲ. ಆದರೆ, ಟಿವಿಕೆ ಪಕ್ಷವು ಪೆರಿಯಾರ್, ಅಣ್ಣಾ, ಎಂಜಿಆರ್ ಮತ್ತು ಜಯಲಲಿತಾ ಸೇರಿದಂತೆ ನಮ್ಮ ಎಲ್ಲಾ ನಾಯಕರ ಸಿದ್ಧಾಂತಗಳನ್ನು ಒಪ್ಪಿಕೊಂಡಿದೆ. ಹಾಗಾಗಿಯೇ ನಾನು ಈ ಪಕ್ಷವನ್ನು ಸೇರಿದ್ದೇನೆ” ಎಂದು ಪ್ರತಿಕ್ರಿಯಿಸಿರುವುದಾಗಿ ದ ಹಿಂದೂ ವರದಿ ಮಾಡಿದೆ.




