ತಮಿಳುನಾಡಿನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸರ್ಕಾರಕ್ಕೆ ಆರಂಭದಲ್ಲೇ ಮೈತ್ರಿ ಸಂಕಷ್ಟ ಎದುರಾಗುವ ಲಕ್ಷಣಗಳು ಗೋಚರಿಸಿವೆ. ಎಐಎಡಿಎಂಕೆ ಪಕ್ಷದ ಬಂಡಾಯ ಶಾಸಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಿದರೆ, ಟಿವಿಕೆ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಮರುಪರಿಶೀಲಿಸಬೇಕಾಗುತ್ತದೆ ಎಂದು ಸಿಪಿಐ(ಎಂ) ಎಚ್ಚರಿಕೆ ನೀಡಿದೆ.
ತಿರುವರೂರಿನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಎಂ ರಾಜ್ಯ ಕಾರ್ಯದರ್ಶಿ ಪಿ. ಷಣ್ಮುಗಂ, ವಿಜಯ್ ನೇತೃತ್ವದ ಸರ್ಕಾರಕ್ಕೆ ಸಿಪಿಎಂ ಬೆಂಬಲ ನೀಡಿದ್ದರ ಹಿಂದಿನ ಉದ್ದೇಶವನ್ನು ಸ್ಪಷ್ಟಪಡಿಸಿದರು. “ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುವುದನ್ನು ಮತ್ತು ಆ ಮೂಲಕ ಬಿಜೆಪಿ ಹಿಂಬಾಗಿಲಿನಿಂದ ಪ್ರವೇಶ ಮಾಡುವುದನ್ನು ತಡೆಯಲು ಮಾತ್ರವೇ ನಾವು ಟಿವಿಕೆ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದೆವು. ತಮಿಳುನಾಡಿನ ಪ್ರಜ್ಞಾವಂತ ಮತದಾರರು ಡಿಎಂಕೆ ಮತ್ತು ಎಐಎಡಿಎಂಕೆ ಎರಡೂ ಮೈತ್ರಿಕೂಟಗಳ ವಿರುದ್ಧ ಜನಾದೇಶ ನೀಡಿದ್ದಾರೆ. ಹೀಗಿರುವಾಗ, ಎಐಎಡಿಎಂಕೆಯ ಬಂಡಾಯ ಶಾಸಕರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡರೆ ಅದು ನೇರವಾಗಿ ಜನರ ತೀರ್ಪಿಗೆ ಹಾಗೂ ಟಿವಿಕೆ ನೀಡಿದ್ದ ಸ್ವಚ್ಛ ಆಡಳಿತದ ಭರವಸೆಗೆ ವಿರುದ್ಧವಾಗಿರಲಿದೆ,” ಎಂದು ಅವರು ಕಡ್ಡಿಮುರಿದಂತೆ ಹೇಳಿದರು.
ಇದನ್ನು ಓದಿದ್ದೀರಾ? ಇದು 140 ಕೋಟಿ ಜನರ ‘ಟೀಮ್ ಇಂಡಿಯಾ’ನೋ – ‘ಬಿಸಿಸಿಐ ಪ್ರೈವೇಟ್ ಲಿಮಿಟೆಡ್’ ಕಂಪನಿಯೋ?
ಇತ್ತೀಚೆಗೆ ಮುಕ್ತಾಯಗೊಂಡ 2026ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಕ್ಕಿರಲಿಲ್ಲ. ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಟಿವಿಕೆ, ಎಡಪಕ್ಷಗಳು (ಸಿಪಿಎಂ, ಸಿಪಿಐ), ವಿಸಿಕೆ, ಕಾಂಗ್ರೆಸ್ ಮತ್ತು ಐಯುಎಂಎಲ್ ಪಕ್ಷಗಳ ಬಾಹ್ಯ ಬೆಂಬಲದೊಂದಿಗೆ ಸರ್ಕಾರ ರಚಿಸಿತ್ತು. ಅದರಲ್ಲೂ ಮುಖ್ಯವಾಗಿ, ಮೇ 13 ರಂದು ನಡೆದ ವಿಶ್ವಾಸಮತ ಯಾಚನೆಯಲ್ಲಿ ಸಿಎಂ ವಿಜಯ್ ಅವರು ಒಟ್ಟು 144 ಶಾಸಕರ ಬೆಂಬಲದೊಂದಿಗೆ ಬಹುಮತ ಸಾಬೀತುಪಡಿಸಿದ್ದರು. ಈ ವೇಳೆ ಎಐಎಡಿಎಂಕೆ ಪಕ್ಷದ 24 ಬಂಡಾಯ ಶಾಸಕರು ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರ ವಿಪ್ ಧಿಕ್ಕರಿಸಿ ವಿಜಯ್ ಪರವಾಗಿ ಮತ ಚಲಾಯಿಸಿದ್ದರು. ಈಗ ಇದೇ ಬಂಡಾಯ ಶಾಸಕರಿಗೆ ಸಚಿವ ಸ್ಥಾನ ಹಾಗೂ ವಿವಿಧ ಮಂಡಳಿಗಳ ಅಧ್ಯಕ್ಷ ಸ್ಥಾನದ ಆಮಿಷವೊಡ್ಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
“ಎಐಎಡಿಎಂಕೆ ಬಂಡಾಯ ಗುಂಪನ್ನು ಸಚಿವ ಸಂಪುಟದಲ್ಲಿ ಸೇರಿಸಿಕೊಳ್ಳುವ ಹಂತಕ್ಕೆ ಟಿವಿಕೆ ಹೋಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಒಂದು ವೇಳೆ, ಅವರನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳುವ ನಿಲುವು ತೆಗೆದುಕೊಂಡರೆ, ಅನಿವಾರ್ಯವಾಗಿ ಸಿಪಿಎಂ ತನ್ನ ಬೆಂಬಲವನ್ನು ಮರುಪರಿಶೀಲಿಸಬೇಕಾಗುತ್ತದೆ,” ಎಂದು ಷಣ್ಮುಗಂ ಖಡಕ್ ಎಚ್ಚರಿಕೆ ನೀಡಿದ್ದಾರೆ. ಸದ್ಯ 144 ಬಲದೊಂದಿಗೆ ವಿಶ್ವಾಸಮತ ಗೆದ್ದಿರುವ ವಿಜಯ್ ಸರ್ಕಾರಕ್ಕೆ, ಎಡಪಕ್ಷಗಳು ಸೇರಿದಂತೆ ಮೈತ್ರಿ ಪಕ್ಷಗಳು ಬೆಂಬಲ ಹಿಂಪಡೆದರೆ ಸರ್ಕಾರ ಅಸ್ಥಿರಗೊಳ್ಳುವ ಭೀತಿ ಎದುರಾಗಲಿದೆ.




