ಸೋಲಾರ್ ಯೋಜನೆಗೆ ಸಂಬಂಧಿತ ವಂಚನೆ ಪ್ರಕರಣದಲ್ಲಿ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಸಿಲುಕಿಕೊಂಡಿದ್ದು, ಅಮೆರಿಕದಲ್ಲಿ ಪ್ರಕರಣ ಎದುರಿಸುತ್ತಿದ್ದಾರೆ. ಈಗ, ಅವರು ಅಮೆರಿಕದಲ್ಲಿ 10 ಶತಕೋಟಿ ಡಾಲರ್ ಹೂಡಿಕೆ ಮಾಡುವ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ. ಈ ಬೆನ್ನಲ್ಲೇ, ಅವರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ಕೈಬಿಡಲು ಅಮೆರಿಕದ ನ್ಯಾಯಾಂಗ ಇಲಾಖೆ (DOJ) ಯೋಜಿಸುತ್ತಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಅದಾನಿ ತಮ್ಮ ಪರವಾಗಿ ವಾದಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವೈಯಕ್ತಿಕ ವಕೀಲರಲ್ಲಿ ಒಬ್ಬರಾದ, ಪ್ರಮುಖ ಕಾನೂನು ಸಂಸ್ಥೆ ಸಲ್ಲಿವನ್ ಮತ್ತು ಕ್ರಾಮ್‌ವೆಲ್‌ನ ಸಹ-ಅಧ್ಯಕ್ಷರಾದ ರಾಬರ್ಟ್ ಜೆ ಗಿಯುಫ್ರಾ ಜೂನಿಯರ್ ನೇತೃತ್ವದ ಹೊಸ ಕಾನೂನು ತಂಡವನ್ನು ನೇಮಿಸಿಕೊಂಡಿದ್ದಾರೆ. ಈ ಬೆನ್ನಲ್ಲೇ, ಮಹತ್ವದ ಬದಲಾವಣೆ ಕಂಡುಬಂದಿದೆ. ಭಾರತೀಯ ಉದ್ಯಮಗಳಿಗೆ ಸಂಬಂಧಿಸಿದ ಇತ್ತೀಚಿನ ವರ್ಷಗಳ ಅತ್ಯಂತ ಹೈಪ್ರೊಫೈಲ್ ಕಾರ್ಪೊರೇಟ್ ವಂಚನೆ ಪ್ರಕರಣವೊಂದಕ್ಕೆ ದಿಢೀರ್ ಅಂತ್ಯ ಹಾಡುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.
2024ರ ನವೆಂಬರ್‌ನಲ್ಲಿ ಅಮೆರಿಕದ ಪ್ರಾಸಿಕ್ಯೂಟರ್‌ಗಳು ಬಹಿರಂಗಪಡಿಸಿದ ದೋಷಾರೋಪಣೆಯ ಆಧಾರದ ಮೇಲೆ ಅದಾನಿ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿತ್ತು. ಭಾರತ ಸರ್ಕಾರಿ ಅಧಿಕಾರಿಗಳಿಗೆ ಸುಮಾರು 26.5 ಕೋಟಿ ಡಾಲರ್ ಲಂಚ ನೀಡುವ ಬೃಹತ್ ಯೋಜನೆಯಲ್ಲಿ ಅದಾನಿ, ಅವರ ಸೋದರಸಂಬಂಧಿ ಸಾಗರ್ ಅದಾನಿ ಹಾಗೂ ಅವರ ಸಹಚರರು ಭಾಗಿಯಾಗಿದ್ದಾರೆ. ಸುಮಾರು 20 ವರ್ಷಗಳ ಅವಧಿಯಲ್ಲಿ 2 ಶತಕೋಟಿ ಡಾಲರ್ ಲಾಭ ತರಬಲ್ಲ ಮತ್ತು ಭಾರತದ ಅತಿದೊಡ್ಡ ನವೀಕರಿಸಬಹುದಾದ ಇಂಧನ ಯೋಜನೆಗಳಲ್ಲಿ ಒಂದಕ್ಕೆ ಬೆಂಬಲ ನೀಡಬಲ್ಲ ಸೌರ ಇಂಧನ ಒಪ್ಪಂದಗಳನ್ನು ಪಡೆಯಲು ಈ ಲಂಚದ ಹಣವನ್ನು ನೀಡಲಾಗಿತ್ತು. ಅಲ್ಲದೆ, ಅಂತರಾಷ್ಟ್ರೀಯ ಹೂಡಿಕೆದಾರರಿಂದ ಸಾಲ ಮತ್ತು ಬಾಂಡ್‌ಗಳ ಮೂಲಕ 3 ಬಿಲಿಯನ್ ಡಾಲರ್‌ಗಿಂತ ಹೆಚ್ಚಿನ ಹಣವನ್ನು ಸಂಗ್ರಹಿಸುವಾಗ ಈ ಭ್ರಷ್ಟಾಚಾರದ ವಿವರಗಳನ್ನು ಮರೆಮಾಚಿದ್ದಾರೆ ಎಂದು ಜಾರ್ಜ್‌ಶೀಟ್‌ನಲ್ಲಿ ಆರೋಪಿಸಲಾಗಿತ್ತು. ಅದಾನಿ, ಸಾಗರ್ ಅದಾನಿ ಮತ್ತು ಇತರರ ವಿರುದ್ಧ ಸೆಕ್ಯೂರಿಟೀಸ್ ವಂಚನೆ ಮತ್ತು ವೈರ್ ಫ್ರಾಡ್ ಪಿತೂರಿಯಂತಹ ಗಂಭೀರ ಆರೋಪಗಳನ್ನು ಹೊರಿಸಲಾಗಿತ್ತು.
ಈ ಪ್ರಕರಣದಿಂದ ಅದಾನಿ ಅವರನ್ನು ರಕ್ಷಿಸಲು ಗಿಯುಫ್ರಾ ಅವರು ನಿರಂತರ ಪ್ರಯತ್ನಗಳನ್ನು ನಡೆಸಿದ್ದರು. ಆ ಪ್ರಯತ್ನಗಳ ಫಲವಾಗಿ ಕಳೆದ ತಿಂಗಳು ವಾಷಿಂಗ್ಟನ್‌ನಲ್ಲಿರುವ ನ್ಯಾಯಾಂಗ ಇಲಾಖೆಯ ಪ್ರಧಾನ ಕಚೇರಿಯಲ್ಲಿ ರಹಸ್ಯ ಸಭೆಯೊಂದು ನಡೆದಿದೆ. ಈ ಸಭೆಯಲ್ಲಿ ಗಿಯುಫ್ರಾ ಅವರು ಸುಮಾರು 100 ಸ್ಲೈಡ್‌ಗಳ ಪ್ರೆಸೆಂಟೇಶನ್ ನೀಡಿ, ‘ಪ್ರಾಸಿಕ್ಯೂಟರ್‌ಗಳ ಬಳಿ ಮೂಲಭೂತ ಪುರಾವೆಗಳಿಲ್ಲ. ಈ ಪ್ರಕರಣವನ್ನು ದಾಖಲಿಸಲು ಅವರಿಗೆ ಕಾನೂನು ವ್ಯಾಪ್ತಿಯೂ ಇಲ್ಲ’ ಎಂದು ವಿವರಿಸಿದ್ದರು ಎನ್ನಲಾಗಿದೆ.
ಈ ಲೇಖನ ಓದಿದ್ದೀರಾ?: ವಿಭಜನೆ, ಸಾಲು-ಸಾಲು ಸೋಲು, ಪಕ್ಷಾಂತರದ ಪೆಟ್ಟು; ಅಸ್ತಿತ್ವಕ್ಕಾಗಿ ಹೋರಾಟುತ್ತಿದೆ ಎಐಎಡಿಎಂಕೆ
ಇದೇ ಪ್ರೆಸೆಂಟೇಶನ್‌ನ ಮತ್ತೊಂದು ಸ್ಲೈಡ್‌ನಲ್ಲಿ ಅಸಾಮಾನ್ಯ ಪ್ರಸ್ತಾಪವೊಂದನ್ನು ಮಂಡಿಸಲಾಗಿತ್ತು. ಅದರಂತೆ, ಒಂದು ವೇಳೆ ಪ್ರಾಸಿಕ್ಯೂಟರ್‌ಗಳು ಎಲ್ಲ ಆರೋಪಗಳನ್ನು ಕೈಬಿಟ್ಟರೆ, ಅದಾನಿ ಅವರು ಅಮೆರಿಕದ ಆರ್ಥಿಕತೆಯಲ್ಲಿ 10 ಶತಕೋಟಿ ಡಾಲರ್ ಹೂಡಿಕೆ ಮಾಡಲು ಮತ್ತು 15,000 ಉದ್ಯೋಗಗಳನ್ನು ಸೃಷ್ಟಿಸಲು ಸಿದ್ಧರಿದ್ದಾರೆ ಎಂದು ತಿಳಿಸಲಾಗಿತ್ತು. ಇದು ಟ್ರಂಪ್ ಅವರ ಚುನಾವಣಾ ಗೆಲುವಿನ ನಂತರ ಅದಾನಿ ನೀಡಿದ್ದ ಭರವಸೆಯ ಪ್ರತಿಧ್ವನಿಯಂತಿತ್ತು.
ಇದೇ ಸಭೆಯಲ್ಲಿ, ಸೆಕ್ಯೂರಿಟೀಸ್ ಅಂಡ್ ಎಕ್ಸ್ಚೇಂಜ್ ಕಮಿಷನ್ (SEC) ಹೂಡಿರುವ ನಾಗರಿಕ ಮೊಕದ್ದಮೆ ಮತ್ತು ಟ್ರೆಜರಿ ಇಲಾಖೆಯ ಪ್ರತ್ಯೇಕ ತನಿಖೆಯನ್ನು ಇತ್ಯರ್ಥಪಡಿಸಲು ಗಿಯುಫ್ರಾ ಪ್ರಯತ್ನಿಸಿದ್ದರು. ಈ ಎರಡೂ ಸಂಸ್ಥೆಗಳು ಈಗ ಅದಾನಿ ಅವರೊಂದಿಗೆ ರಾಜಿ ಮಾಡಿಕೊಳ್ಳಲು ಮತ್ತು ಆರ್ಥಿಕ ದಂಡವನ್ನು ವಿಧಿಸಲು ಸಿದ್ಧತೆ ನಡೆಸುತ್ತಿವೆ. ಆದಾಗ್ಯೂ, ಹೂಡಿಕೆಯ ಪ್ರಸ್ತಾವನೆಯು ಪ್ರಕರಣದ ಫಲಿತಾಂಶದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಎಂದು ಪ್ರಾಸಿಕ್ಯೂಟರ್‌ಗಳು ಪ್ರತಿಪಾದಿಸಿದ್ದಾರೆ. ಆದರೂ, ಈ ಆಫರ್‌ಗೆ ನ್ಯಾಯಾಂಗ ಇಲಾಖೆಯ ಅಧಿಕಾರಿಗಳಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.



