ವಿಭಜನೆ, ಸಾಲು-ಸಾಲು ಸೋಲು, ಪಕ್ಷಾಂತರದ ಪೆಟ್ಟು; ಅಸ್ತಿತ್ವಕ್ಕಾಗಿ ಹೋರಾಟುತ್ತಿದೆ ಎಐಎಡಿಎಂಕೆ

Date:

ಡಿಎಂಕೆ ಅಬ್ಬರದ ಎದುರು ಎಐಎಡಿಎಂಕೆ ಸಂಘಟನಾತ್ಮಕವಾಗಿ ಕುಸಿದಿದೆ. ಜೊತೆಗೆ, ಹಿಂದುತ್ವ, ಹಿಂದಿ ಹೇರಿಕೆಯನ್ನು ಪ್ರತಿಪಾದಿಸುವ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವುದರಿಂದ ಮತದಾರರ ವಿಶ್ವಾಸ ಗಳಿಸುವಲ್ಲಿಯೂ ವಿಫಲವಾಗಿದೆ. ಈಗ, ಮುಖ್ಯಮಂತ್ರಿ ವಿಜಯ್ ಅವರ ಟಿವಿಕೆ ಉದಯವು ಎಐಎಡಿಎಂಕೆಯನ್ನು ಮತ್ತಷ್ಟು ಕಂಗೆಡಿಸಿದೆ.

ತಮಿಳುನಾಡು ರಾಜಕೀಯದಲ್ಲಿ ಅಜೇಯ ಶಕ್ತಿಯಾಗಿ ಮೆರೆದಿದ್ದ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಇಂದು ತನ್ನ ಇತಿಹಾಸದಲ್ಲೇ ಅತ್ಯಂತ ಕಠಿಣ ಕಾಲಘಟ್ಟವನ್ನು ಎದುರಿಸುತ್ತಿದೆ. ಜೆ. ಜಯಲಲಿತಾ ಅವರಂತಹ ದೈತ್ಯ ನಾಯಕಿಯ ನಿಧನದ ನಂತರ ಹಳಿ ತಪ್ಪಿದ ಪಕ್ಷದ ಬಂಡಿ, ಈಗ ಸತತ ಚುನಾವಣಾ ಸೋಲುಗಳು ಮತ್ತು ಭೀಕರ ಪಕ್ಷಾಂತರದ ಬಿರುಗಾಳಿಗೆ ಸಿಲುಕಿ ಅಕ್ಷರಶಃ ದಿಕ್ಕೆಟ್ಟಿದೆ. ತನ್ನ ಅಸ್ತಿತ್ವದ ಅಳಿವು-ಉಳಿವಿನ ಆತಂಕದಲ್ಲಿದ್ದು, ತನ್ನ ನೆಲೆ ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ಇದೇ ಸಮಯದಲ್ಲಿ, ಟಿವಿಕೆ ಉದಯವು ಪ್ರಬಲವಾಗಿದ್ದು, ಸರ್ಕಾರ ರಚಿಸಿದೆ. ಎಐಎಡಿಎಂಕೆಯ 47 ಶಾಸಕರ ಪೈಕಿ ಅರ್ಧಕ್ಕೂ ಹೆಚ್ಚು ಮಂದಿ ಪಕ್ಷದೊಳಗೆ ಬಂಡಾಯವೆದ್ದು, ಮುಖ್ಯಮಂತ್ರಿ ವಿಜಯ್ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. ಈ ಬಂಡಾಯ ಬಣವು ಎಐಎಡಿಎಂಕೆ ವಿಭಜನೆಯನ್ನು ತೀವ್ರಗೊಳಿಸಿದೆ.

- Advertisement -

ಗಮನಾರ್ಹವೆಂದರೆ, ಕಳೆದ 60 ವರ್ಷಗಳಿಂದ ತಮಿಳುನಾಡು ರಾಜಕೀಯವನ್ನು ಆಳುತ್ತಿರುವ ದ್ರಾವಿಡ ಪಕ್ಷಗಳಿಗೆ ವಿಭಜನೆಗಳು ಹೊಸದೇನಲ್ಲ. ಆದರೂ, ಈ ಪಕ್ಷಗಳು ಎಷ್ಟೇ ಹೋಳುಗಳಾದರೂ ಅವರ ‘ದ್ರಾವಿಡ ಸಿದ್ಧಾಂತ’ ಮಾತ್ರ ಎಂದೂ ದುರ್ಬಲಗೊಂಡಿಲ್ಲ. ಆದರೆ, ಬಿಜೆಪಿ ಸಖ್ಯ ಬೆಳೆಸಿದ ಬಳಿಕ ಎಐಎಡಿಎಂಕೆ ತನ್ನ ಸಿದ್ಧಾಂತದೊಂದಿಗೆ ರಾಜಿ ಮಾಡಿಕೊಂಡಿರುವುದು ಕಂಡುಬರುತ್ತಿದ್ದರೂ, ದ್ರಾವಿಡ ಅಸ್ಮಿತೆ ತಮ್ಮಲ್ಲಿದೆ ಎಂದು ಪಕ್ಷವು ಪ್ರತಿಪಾದಿಸುತ್ತಲೇ ಬಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಎಐಎಡಿಎಂಕೆ ಹುಟ್ಟು – ಬೆಳವಣಿಗೆ

ದ್ರಾವಿಡ ಪಕ್ಷವೊಂದರ ನಿರಂತರ ವಿಭಜನೆಯೊಂದಿಗೆ ಎಐಎಡಿಎಂಕೆ ಅಸ್ವಿತ್ವಕ್ಕೆ ಬಂದಿದೆ. ಈ ಪಕ್ಷದ ಮೂಲ ‘ದ್ರಾವಿಡರ್ ಕಳಗಂ’ (ಡಿಕೆ) ಪಕ್ಷದಲ್ಲಿದೆ. ಸ್ವಾತಂತ್ರ್ಯ ಪೂರ್ವದಲ್ಲಿ 1944ರಲ್ಲಿ ಜಸ್ಟಿಸ್‌ ಪಾರ್ಟಿ ಮತ್ತು ಸೆಲ್ಫ್‌ ರೆಸ್ಪೆಕ್ಟ್‌ ಮೂವೆಮೆಂಟ್‌ ಒಗ್ಗೂಡುವಿಕೆಯಿಂದ ಡಿಕೆ ಪಕ್ಷ ರೂಪುಗೊಂಡಿತ್ತು. ಈ ಪಕ್ಷವು ಸ್ವತಂತ್ರ ‘ದ್ರಾವಿಡ ನಾಡು’ ಸ್ಥಾಪನೆಯ ಗುರಿ ಹೊಂದಿತ್ತು. ಪಕ್ಷವನ್ನು ಪೆರಿಯಾರ್ ಮತ್ತು ಸಿ.ಎನ್. ಅಣ್ಣಾದೊರೈ ಮುನ್ನಡೆಸುತ್ತಿದ್ದರು. ಆದರೆ, ಕಾಲಾನಂತರ, ಪೆರಿಯಾರ್ ಮತ್ತು ಅಣ್ಣಾದೊರೈ ನಡುವೆ ಭಿನ್ನಾಭಿಪ್ರಾಯಗಳು ಮೂಡಲು ಹೆಚ್ಚು ಸಮಯ ಹಿಡಿಯಲಿಲ್ಲ. ಡಿಕೆ ಪಕ್ಷವು ನೇರ ರಾಜಕೀಯ ಮತ್ತು ಚುನಾವಣೆಗಳಿಂದ ದೂರವಿರಬೇಕು ಎಂಬುದು ಪೆರಿಯಾರ್ ನಿಲುವಾಗಿತ್ತು. ಆದರೆ, ರಾಜಕೀಯ ಸ್ಪರ್ಧೆ ಅಗತ್ಯವೆಂಬುದು ಅಣ್ಣಾದೊರೈ ನಿರ್ಧಾರವಾಗಿತ್ತು. ಇಂತಹ ಹಲವು ಭಿನ್ನಾಭಿಪ್ರಾಯಗಳ ನಡುವೆ ಅಣ್ಣಾದೊರೈ 1949ರ ಸೆಪ್ಟೆಂಬರ್ 17ರಂದು ಡಿಕೆಯಿಂದ ಹೊರಬಂದು ‘ದ್ರಾವಿಡ ಮುನ್ನೇಟ ಕಳಗಂ’ (DMK) ಸ್ಥಾಪಿಸಿದರು.

ಹಿಂದಿ ಹೇರಿಕೆ ಮತ್ತು ಕಾಂಗ್ರೆಸ್‌ ವಿರುದ್ಧದ ಹೋರಾಟದ ಫಲವಾಗಿ 1967ರ ಚುನಾವಣೆಯಲ್ಲಿ ಡಿಎಂಕೆ 138 ಸ್ಥಾನಗಳನ್ನು ಗೆದ್ದುಕೊಂಡಿತು, ಅಣ್ಣಾದೊರೈ ಮುಖ್ಯಮಂತ್ರಿಯಾದರು. ಕೇಂದ್ರದ ತ್ರಿಭಾಷಾ ಸೂತ್ರದ ಬದಲಿಗೆ ಇಂಗ್ಲಿಷ್ ಮತ್ತು ತಮಿಳು ಭಾಷೆಗಳ ದ್ವಿಭಾಷಾ ಸೂತ್ರವನ್ನು ಜಾರಿಗೆ ತಂದರು. ಅಲ್ಲದೆ, ‘ಮದ್ರಾಸ್’ ರಾಜ್ಯಕ್ಕೆ ‘ತಮಿಳುನಾಡು’ ಎಂದು ಮರುನಾಮಕರಣ ಮಾಡಿದರು.

1969ರಲ್ಲಿ ಅಣ್ಣಾದೊರೈ ನಿಧನದ ನಂತರ ಕರುಣಾನಿಧಿ ಮುಖ್ಯಮಂತ್ರಿಯಾದರು. ಅವರಿಗೆ ಅಂದಿನ ಚಿತ್ರರಂಗದ ಸೂಪರ್ ಸ್ಟಾರ್ ಎಂ.ಜಿ. ರಾಮಚಂದ್ರನ್ (ಎಂಜಿಆರ್) ಬೆಂಬಲವಿತ್ತು. ಆದರೆ, ಎಂಜಿಆರ್ ಅವರ ಜನಪ್ರಿಯತೆ ಕರುಣಾನಿಧಿಗೆ ಕಂಟಕವಾಗಿ ಕಂಡಿತು. 1972ರಲ್ಲಿ ಎಂಜಿಆರ್ ಅವರನ್ನು ಡಿಎಂಕೆಯಿಂದ ಉಚ್ಚಾಟಿಸಲಾಯಿತು. ಒಂದು ವಾರದ ನಂತರ ಎಂಜಿಆರ್ ತಮ್ಮದೇ ಆದ ‘ಅಣ್ಣಾ ದ್ರಾವಿಡ ಮುನ್ನೇಟ ಕಳಗಂ’ (ADMK) ಸ್ಥಾಪಿಸಿದರು. ನಂತರ ಇದಕ್ಕೆ ‘ಆಲ್ ಇಂಡಿಯಾ’ (AI) ಎಂದು ಸೇರಿಸಿ, ‘ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇಟ ಕಳಗಂ’ (ಎಐಎಡಿಎಂಕೆ) ಎಂದು ಮರುನಾಮಕರಣ ಮಾಡಲಾಯಿತು.

ಎಂಜಿಆರ್‌ ರಾಜಕೀಯವಾಗಿಯೂ ತ್ವರಿತವಾಗಿ ಪ್ರವರ್ದಮಾನಕ್ಕೆ ಬರಲಾರಂಭಿಸಿದ್ದರು. ಇದು, ಕರುಣಾನಿಧಿ ಅವರಿಗೆ ಮುಳುವಾಗಲಾರಂಭಿಸಿತು. ಆದ್ದರಿಂದ, ಕರುಣಾನಿಧಿ ಅವರು ಎಂ.ಜಿ.ಆರ್  ಅವರನ್ನು ಒಬ್ಬ ಮಲಯಾಳಿ ಎಂದು ಬಿಂಬಿಸುವ ಮೂಲಕ ಅವರ ಪ್ರಭಾವ ಕುಗ್ಗಿಸಲು ಪ್ರಯತ್ನಿಸಿದರು. ಆದರೆ, ಎಂ.ಜಿ.ಆರ್ ಅವರ ಜನಪ್ರಿಯತೆ ಮಾತ್ರ ಕಿಂಚಿತ್ತೂ ಕುಂದಲಿಲ್ಲ. ಡಿಎಂಕೆ ಸರ್ಕಾರದ ವಿರುದ್ಧ ಎಂಜಿಆರ್ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದರು. ಮಾತ್ರವಲ್ಲದೆ, 1972ರಲ್ಲಿ ದೆಹಲಿಗೆ ತೆರಳಿ ‘ತಮಿಳುನಾಡು ಸರ್ಕಾರದ ಭ್ರಷ್ಟಾಚಾರದ ಕುರಿತು ತನಿಖೆ ನಡೆಸುವಂತೆ’ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. ಎಂಜಿಆರ್ ಆರೋಪಗಳ ಕುರಿತು ಪರಿಶೀಲಿಸುವಂತೆ ಕೇಂದ್ರ ಸರ್ಕಾರವು ತಮಿಳುನಾಡು ರಾಜ್ಯಪಾಲ ಕೆ.ಕೆ. ಶಾ ಅವರಿಗೆ ಸೂಚಿಸಿತು. ಅವರು ನೀಡಿದ ವರದಿಯು ಡಿಎಂಕೆ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿತು. ಈ ಆರೋಪ ಮತ್ತು ಇನ್ನೂ ಹಲವು ಕಾರಣಗಳಿಂದಾಗಿ, 1976ರ ಜನವರಿಯಲ್ಲಿ ಡಿಎಂಕೆ ಸರ್ಕಾರವನ್ನು ವಜಾಗೊಳಿಸಲಾಯಿತು. ಕರುಣಾನಿಧಿಯವರ ಮಗ ಎಂ.ಕೆ. ಸ್ಟಾಲಿನ್ ಮತ್ತು ಸೋದರಸಂಬಂಧಿ ಮುರಸೋಲಿ ಮಾರನ್ ಅವರನ್ನು ‘ಮಿಸಾ’ (MISA – ಆಂತರಿಕ ಭದ್ರತಾ ನಿರ್ವಹಣಾ ಕಾಯ್ದೆ) ಅಡಿಯಲ್ಲಿ ಜೈಲಿಗೂ ಹಾಕಲಾಯಿತು.

ನಿರೀಕ್ಷೆಯಂತೆ, 1977ರ ವಿಧಾನಸಭಾ ಚುನಾವಣೆಯ ಬಳಿಕ ಎಂಜಿಆರ್ ಅಧಿಕಾರಕ್ಕೆ ಬಂದರು. ಅವರಿಗೆ ಕಾಂಗ್ರೆಸ್‌ ಬೆಂಬಲ ನೀಡಿತ್ತು. ಆದರೆ, 1980ರಲ್ಲಿ ಚೌಧರಿ ಚರಣ್ ಸಿಂಗ್ ಅವರು ಪ್ರಧಾನಿ ಹುದ್ದೆಗೇರುವ ಪ್ರಯತ್ನವನ್ನು ಎಂ.ಜಿ.ಆರ್ ಬೆಂಬಲಿಸಿದ್ದರಿಂದ, ಎಂಜಿಆರ್‌ ಸರ್ಕಾರಕ್ಕೆ ಕಾಂಗ್ರೆಸ್‌ ನೀಡಿದ್ದ ಬೆಂಬಲವನ್ನು ಇಂದಿರಾ ಗಾಂಧಿಯವರು ಹಿಂಪಡೆದರು, ಎಐಎಡಿಎಂಕೆ ಸರ್ಕಾರವನ್ನು ವಜಾಗೊಳಿಸಿದರು. ಬಳಿಕ ಕಾಂಗ್ರೆಸ್ ಅನಿರೀಕ್ಷಿತವಾಗಿ ಡಿಎಂಕೆಯೊಂದಿಗೆ ಮೈತ್ರಿ ಮಾಡಿಕೊಂಡಿತು. ಆದರೆ, ಅದೇ ವರ್ಷ ನಡೆದ ಚುನಾವಣೆಯಲ್ಲಿ ಎಐಎಡಿಎಂಕೆ ಮತ್ತೆ ಭರ್ಜರಿ ಜಯ ಸಾಧಿಸಿ ಅಧಿಕಾರಕ್ಕೆ ಬಂದಿತು. ಎಂ.ಜಿ.ಆರ್ 1987ರಲ್ಲಿ ನಿಧನರಾಗುವವರೆಗೂ ಮುಖ್ಯಮಂತ್ರಿಯಾಗಿ ಮುಂದುವರಿದರು.

ಎಐಎಡಿಎಂಕೆ ವಿಭಜನೆ

ಎಂ.ಜಿ.ಆರ್ ನಿಧನದ ನಂತರ, ಎಐಎಡಿಎಂಕೆ ಮೊದಲು ಅವರ ಪತ್ನಿ ಜಾನಕಿ ಮತ್ತು ಅವರ ಸಹವರ್ತಿ, ನಟಿ ಜೆ. ಜಯಲಲಿತಾ (ಬ್ರಾಹ್ಮಣ ಸಮುದಾಯದವರು) ನೇತೃತ್ವದಲ್ಲಿ ಎರಡು ಬಣಗಳಾಗಿ ವಿಭಜನೆಯಾಯಿತು. ರಾಜ್ಯಪಾಲರು ಜಾನಕಿ ಅವರನ್ನು ವಿಶ್ವಾಸಮತ ಸಾಬೀತುಪಡಿಸಲು ಆಹ್ವಾನಿಸಿದರು. ಆದರೆ, ಸದನದಲ್ಲಿ ಎರಡೂ ಬಣಗಳ ನಡುವೆ ಉಂಟಾದ ಘರ್ಷಣೆಯಿಂದ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿ, ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಯಿತು. 1989ರ ಚುನಾವಣೆಯಲ್ಲಿ ಡಿಎಂಕೆ ಜಯಗಳಿಸಿತು. ಆದರೆ, 27 ಸ್ಥಾನಗಳೊಂದಿಗೆ ಎರಡನೇ ಸ್ಥಾನ ಪಡೆದ ಜಯಲಲಿತಾ ಬಣವು ನಿಜವಾದ ಎಐಎಡಿಎಂಕೆಯಾಗಿ ಹೊರಹೊಮ್ಮಿತು.

ಜಯಲಲಿತಾ ಪರ್ವ vs ಡಿಎಂಕೆ

ಜಯಲಲಿತಾ ಬಣವು ಅಧಿಕೃತ ಎಐಎಡಿಎಂಕೆಯಾಗಿ ಹೊರಹೊಮ್ಮುವಿಕೆಯು ಜಯಲಲಿತಾರನ್ನು ರಾಜಕೀಯವಾಗಿ ಪ್ರವರ್ದಮಾನಕ್ಕೆ ತಂದಿತು. ಜೊತೆಗೆ, ವಿಧಾನಸಭೆಯಲ್ಲಿ ಕರುಣಾನಿಧಿ ಮತ್ತು ಜಯಲಲಿತಾ ನಡುವಿನ ಮಹಾನ್ ರಾಜಕೀಯ ಸಂಘರ್ಷಗಳು ನಡೆದವು. 1989ರಲ್ಲಿ ಕರುಣಾನಿಧಿ ಅವರು ಬಜೆಟ್ ಮಂಡಿಸುವ ಸಮಯದಲ್ಲಿ ಉಭಯ ಪಕ್ಷಗಳ ನಡುವೆ ನಡೆದ ಘರ್ಷಣೆಯಲ್ಲಿ ಡಿಎಂಕೆ ಸದಸ್ಯರು ಜಯಲಲಿತಾ ಅವರ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು.

ಇದೆಲ್ಲ ಬೆಳವಣಿಗೆಗಳು ನಡೆಯುವ ಸಮಯದಲ್ಲಿಯೇ, ದ್ರಾವಿಡ ಪಕ್ಷಗಳ ಪರೋಕ್ಷ ಬೆಂಬಲದೊಂದಿಗೆ ಎಲ್‌ಟಿಟಿಇ ಸಂಘಟನೆ ಸಕ್ರಿಯವಾಗುತ್ತಿದೆ ಎಂಬ ಕಾರಣ ನೀಡಿ, 1991ರಲ್ಲಿ ಡಿಎಂಕೆ ಸರ್ಕಾರವನ್ನು ವಜಾಗೊಳಿಸಲಾಯಿತು. ಅದೇ ವರ್ಷ, ಚುನಾವಣಾ ಪ್ರಚಾರದ ನಡುವೆಯೇ ಶ್ರೀಪೆರಂಬದೂರಿನಲ್ಲಿ ರಾಜೀವ್ ಗಾಂಧಿಯವರ ಹತ್ಯೆಯಾಯಿತು. ಈ ಹತ್ಯೆಯು ಚುನಾವಣೆಯ ದಿಕ್ಕನ್ನೇ ಬದಲಿಸಿತು; ರಾಜ್ಯದ ಜನರು ಲೋಕಸಭೆಯಲ್ಲಿ ಕಾಂಗ್ರೆಸ್‌ಗೆ ಮತ್ತು ವಿಧಾನಸಭೆಯಲ್ಲಿ ಎಐಎಡಿಎಂಕೆಗೆ ಅಧಿಕಾರ ಭರ್ಜರಿ ಜಯ ತಂದುಕೊಟ್ಟರು. ಜಯಲಲಿತಾ ಮುಖ್ಯಮಂತ್ರಿಯೂ ಆದರು.

ಇದಾದ ನಂತರ, ದಶಕಗಳ ಕಾಲ ಈ ಎರಡು ದ್ರಾವಿಡ ಪಕ್ಷಗಳು ತಮಿಳುನಾಡಿನ ಅಧಿಕಾರದ ಚುಕ್ಕಾಣಿಯನ್ನು ಒಬ್ಬರಾದ ಮೇಲೆ ಒಬ್ಬರಂತೆ ಹಿಡಿಯುತ್ತಾ ಬಂದವು.

ಎಐಎಡಿಎಂಕೆ ವಿಭಜನೆ ಮತ್ತು ಅಸ್ವಿತ್ವದ ಪ್ರಶ್ನೆ

2016ರ ಡಿಸೆಂಬರ್‌ನಲ್ಲಿ ಮುಖ್ಯಮಂತ್ರಿ ಜಯಲಲಿತಾ ಅವರ ನಿಧನದೊಂದಿಗೆ ಈ ಚಿತ್ರಣ ಬದಲಾಯಿತು. ಎಐಎಡಿಎಂಕೆ ಪಕ್ಷವು ಓ. ಪನ್ನೀರ್ ಸೆಲ್ವಂ (OPS) ಮತ್ತು ಎಡಪ್ಪಾಡಿ ಕೆ. ಪಳನಿಸ್ವಾಮಿ (EPS) ನೇತೃತ್ವದ ಬಣಗಳಾಗಿ ವಿಭಜನೆಯಾಯಿತು. 2017ರಲ್ಲಿ ಈ ಬಣಗಳು ಮತ್ತೆ ಒಂದಾದವು. 2021ರವರೆಗೆ ಸರದಿಯ ಪ್ರಕಾರ ಇಬ್ಬರೂ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದರು. ಆದರೆ, 2022ರಲ್ಲಿ ನಡೆದ ಅಧಿಕಾರ ಸಂಘರ್ಷದ ನಂತರ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಪನ್ನೀರ್ ಸೆಲ್ವಂ ಅವರನ್ನು ಪಕ್ಷದಿಂದ ಹೊರಹಾಕಿದರು.

ಈ ಲೇಖನ ಓದಿದ್ದೀರಾ? : ತಮಿಳುನಾಡು | ವಿಜಯ್‌ ಸರ್ಕಾರಕ್ಕೆ AIADMK ಬಂಡಾಯ ಬಣ ಬೆಂಬಲ; ಮೋದಿ-ಶಾ ಕುತಂತ್ರವೇ?

ಆದಾಗ್ಯೂ, 2021ರ ಚುನಾವಣೆಯಲ್ಲಿ ಎಐಎಡಿಎಂಕೆ ಹೀನಾಯ ಸೋಲು ಕಂಡಿತು. ಆ ವರ್ಷ ಡಿಎಂಕೆ-ಕಾಂಗ್ರೆಸ್‌ ಮೈತ್ರಿಕೂಟ ಭಾರೀ ಬಹುಮತ ಪಡೆದು ಅಧಿಕಾರಕ್ಕೇರಿತು, ಎಂ.ಕೆ ಸ್ಟಾಲಿನ್ ಮುಖ್ಯಮಂತ್ರಿಯಾದರು.

2021ರ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡಾಗಿನಿಂದ ಎಐಎಡಿಎಂಕೆಗೆ ಸುಧಾರಿಸಿಕೊಳ್ಳಲು ಸಾಧ್ಯವಾಗಿಲ್ಲ. 2022ರಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆ, ಉಪಚುನಾವಣೆಗಳು ಹಾಗೂ 2024ರ ಲೋಕಸಭಾ ಚುನಾವಣೆಯಲ್ಲೂ ಪಕ್ಷವು ಹೀನಾಯ ಸೋಲುಗಳನ್ನು ಕಂಡಿದೆ. ಡಿಎಂಕೆ ಅಬ್ಬರದ ಎದುರು ಎಐಎಡಿಎಂಕೆ ಸಂಘಟನಾತ್ಮಕವಾಗಿ ಕುಸಿದಿರುವುದು ಒಂದೆಡೆಯಾದರೆ, ಹಿಂದುತ್ವ, ಹಿಂದಿ ಹೇರಿಕೆಯನ್ನು ಪ್ರತಿಪಾದಿಸುವ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವುದರಿಂದ ಪಕ್ಷವು ಮತದಾರರ ವಿಶ್ವಾಸ ಗಳಿಸುವಲ್ಲಿಯೂ ವಿಫಲವಾಗಿದೆ. ಈಗ, ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಉದಯವು ಎಐಎಡಿಎಂಕೆಯನ್ನು ಮತ್ತಷ್ಟು ಕಂಗೆಡಿಸಿದೆ.

ಸತತ ಸೋಲುಗಳಿಂದ ಕಂಗೆಟ್ಟಿರುವ ಶಾಸಕರು ಮತ್ತು ಮುಖಂಡರು ಈಗ ‘ಮುಳುಗುವ ಹಡಗಿನಿಂದ’ ಹೊರಬರಲು ಎದುರು ನೋಡುತ್ತಿದ್ದಾರೆ. ಬುಧವಾರ ನಡೆದ ವಿಶ್ವಾಸಮತ ಪರೀಕ್ಷೆಯು ಇದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ. ವಿಜಯ್ ಸರ್ಕಾರಕ್ಕೆ ಎಐಎಡಿಎಂಕೆಯ ಅರ್ಧಕ್ಕಿಂತ ಹೆಚ್ಚು ಶಾಸಕರು ಪಕ್ಷದ ವಿಪ್ ಉಲ್ಲಂಘಿಸಿ ಬೆಂಬಲ ಘೋಷಿಸಿದ್ದಾರೆ. ಇದು ಪಕ್ಷದ ಮೇಲಿನ ಎಡಪ್ಪಾಡಿ ಪಳನಿಸ್ವಾಮಿ ಅವರ ಹಿಡಿತವನ್ನು ಸಡಿಲಗೊಳಿಸಿದೆ.

ಪ್ರಸ್ತುತ ಸಂದರ್ಭದಲ್ಲಿ, ಎಐಎಡಿಎಂಕೆ ಕೇವಲ ಚುನಾವಣಾ ಸೋಲನ್ನು ಎದುರಿಸುತ್ತಿಲ್ಲ, ಬದಲಾಗಿ ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿದೆ. ಶಾಸಕರ ಗುಂಪು ಪಕ್ಷಾಂತರವು ಪಕ್ಷದ ಆಂತರಿಕ ಶಿಸ್ತನ್ನು ಧೂಳೀಪಟ ಮಾಡಿದೆ. ಉದಯನಿಧಿ ಸ್ಟಾಲಿನ್ ಅವರ ಬೆಳವಣಿಗೆ ಮತ್ತು ವಿಜಯ್ ಅವರ ರಾಜಕೀಯ ಉದಯದ ನಡುವೆ, ಎಐಎಡಿಎಂಕೆ ತನ್ನ ದ್ರಾವಿಡ ಪರಂಪರೆಯನ್ನು ಉಳಿಸಿಕೊಂಡು ಮತ್ತೆ ಪುಟಿದೇಳುವುದು ಅಷ್ಟು ಸುಲಭವಾಗಿ ಕಾಣುತ್ತಿಲ್ಲ!.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕರ್ನಾಟಕದ ನೀರಾವರಿ ಯೋಜನೆಗಳಿಗೆ ಕೇಂದ್ರದ ನೆರವು ಕೋರಿದ ಸಿಎಂ ಡಿಕೆ ಶಿವಕುಮಾರ್

ರಾಜ್ಯದ ಕುಡಿಯುವ ನೀರು, ನೀರಾವರಿ ಹಾಗೂ ಬರ ಪರಿಹಾರದ ಅಗತ್ಯಗಳನ್ನು ಈಡೇರಿಸಲು...

ಸಿಇಸಿ ಗ್ಯಾನೇಶ್‌ ಕುಮಾರ್‌ ಮನೆ ಮುಂದೆ ಕಾಂಗ್ರೆಸ್‌ ಪ್ರತಿಭಟನೆ; ‘ಗದ್ದಾರ್‌ ಗ್ಯಾನೇಶ್‌’ ಎಂದು ಗೋಡೆಗೆ ಬಣ್ಣ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್‌ ಕುಮಾರ್‌ ಅವರ ಆಗ್ರಾದ ವಿಜಯನಗರದಲ್ಲಿರುವ...

AAP ದೇಣಿಗೆಯಲ್ಲಿ ಶೇ.68 ಕುಸಿತ; ಇತರೆ ಪ್ರಾದೇಶಿಕ ಪಕ್ಷಗಳ ದೇಣಿಗೆಯಲ್ಲೂ ಭಾರೀ ಇಳಿಕೆ

ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ...

ಎಸ್‌ಐಆರ್‌ | 13 ಕೋಟಿ ಮತಗಳ ಮಾರಣಹೋಮ

ಭಾರತೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಅತ್ಯಂತ ಪ್ರಮುಖ ಅಡಿಪಾಯವೇ ಮತದಾನದ ಹಕ್ಕು. ದೇಶದ...