ವಿದೇಶಕ್ಕೆ ಕಳುಹಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸುವ ಪ್ರಕರಣಗಳು ಕೇವಲ ಆರ್ಥಿಕ ವಂಚನೆಗೆ ಸೀಮಿತವಾಗಿಲ್ಲ. ಇಂತಹ ಪ್ರಕರಣಗಳು ಮಾನವ ಕಳ್ಳಸಾಗಣೆಯ ರೂಪವನ್ನೂ ಪಡೆಯುತ್ತಿದ್ದು, ಇಮಿಗ್ರೇಷನ್ ಸಲಹಾ ಸೇವೆಯ ಹೆಸರಿನಲ್ಲಿ ನಡೆಯುತ್ತಿರುವ ಮಾನವ ಕಳ್ಳಸಾಗಣೆ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿದೆ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಕೆನಡಾಕ್ಕೆ ಕಳುಹಿಸುವುದಾಗಿ ಭರವಸೆ ನೀಡಿ ಮಹಿಳೆಯೊಬ್ಬರಿಂದ ₹5.80 ಲಕ್ಷ ಪಡೆದ ಆರೋಪ ಎದುರಿಸುತ್ತಿರುವ ಸತ್ಪಾಲ್ ಸಿಂಗ್ ಎಂಬಾತನಿಗೆ ನಿರೀಕ್ಷಣಾ ಜಾಮೀನು ನೀಡಲು ನ್ಯಾಯಮೂರ್ತಿ ಸುಮೀತ್ ಗೋಯೆಲ್ ನಿರಾಕರಿಸಿದ್ದಾರೆ. 2025ರ ಜೂನ್ 30ರಂದು ಸಂಗೂರು ಜಿಲ್ಲೆಯಲ್ಲಿ ದಾಖಲಾಗಿದ್ದ ಎಫ್ಐಆರ್ಗೆ ಸಂಬಂಧಿಸಿದಂತೆ ಸಿಂಗ್ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ವಂಚನೆ, ನಂಬಿಕೆ ದ್ರೋಹ ಹಾಗೂ 2012ರ ಪಂಜಾಬ್ ಮಾನವ ಕಳ್ಳಸಾಗಣೆ ತಡೆ ಕಾಯ್ದೆಯ ಸೆಕ್ಷನ್ 13ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಆಗಸ್ಟ್ 25ರಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, “ಇಮಿಗ್ರೇಷನ್ ಸಲಹಾ ಸೇವೆಯ ಹೆಸರಿನಲ್ಲಿ ನಡೆಯುತ್ತಿರುವ ಮಾನವ ಕಳ್ಳಸಾಗಣೆ ಹೆಚ್ಚುತ್ತಿರುವ ಆತಂಕಕಾರಿ ಸಮಸ್ಯೆಯಾಗಿದೆ. ವಿದೇಶಕ್ಕೆ ತೆರಳುವ ಕನಸು ಕಾಣುವ ಹಾಗೂ ಅದಕ್ಕಾಗಿ ಹಾತೊರೆಯುವ ಜನರ ದೌರ್ಬಲ್ಯವನ್ನು ಇಂತಹ ಜಾಲಗಳು ದುರುಪಯೋಗಪಡಿಸಿಕೊಳ್ಳುತ್ತಿವೆ” ಎಂದು ಹೇಳಿದೆ.
ಅಕ್ರಮವಾಗಿ ವಿದೇಶಕ್ಕೆ ಕಳುಹಿಸುವುದಾಗಿ ನಂಬಿಸಿ, ಬಳಿಕ ಅವರನ್ನು ಅಮಾನವೀಯ ಹಾಗೂ ಜೀವಕ್ಕೆ ಅಪಾಯಕಾರಿಯಾದ ಪರಿಸ್ಥಿತಿಗಳಿಗೆ ತಳ್ಳುವುದು ಗಂಭೀರ ಅಪರಾಧ. ಇದು ಮಾನವ ಘನತೆಗೆ ಧಕ್ಕೆ ತರುವುದಲ್ಲದೆ, ರಾಷ್ಟ್ರೀಯ ಹಿತಾಸಕ್ತಿಗೂ ವಿರುದ್ಧವಾಗಿದೆ. ಇಮಿಗ್ರೇಷನ್ ವಂಚನೆಗಳು ಅಂತಾರಾಷ್ಟ್ರೀಯ ಮಾನವ ಕಳ್ಳಸಾಗಣೆಯ ಮಟ್ಟಕ್ಕೆ ತಲುಪುವ ಸಂದರ್ಭಗಳಲ್ಲಿ ನ್ಯಾಯಾಲಯಗಳು ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕಠಿಣ ನಿಲುವು ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ದೂರುದಾರ ಮಹಿಳೆಗೆ ಕೆನಡಾಕ್ಕೆ ಕಳುಹಿಸುವುದಾಗಿ ಆರೋಪಿಗಳು ಭರವಸೆ ನೀಡಿದ್ದರು. ಇದನ್ನು ನಂಬಿದ ಮಹಿಳೆ ₹5.80 ಲಕ್ಷ ಪಾವತಿಸಿದ್ದರು. ಆದರೆ ಭರವಸೆ ಈಡೇರಿಸದ ಆರೋಪಿಗಳ ವಿರುದ್ಧ ದೂರು ನೀಡಲಾಗಿತ್ತು. ಪಡೆದ ಹಣವನ್ನೂ ಸಂಪೂರ್ಣವಾಗಿ ಹಿಂದಿರುಗಿಸಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಪಂಜಾಬ್ ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸಿದ ಸ್ಥಿತಿಗತಿ ವರದಿ ಪ್ರಕಾರ, ₹5.80 ಲಕ್ಷದ ವಂಚನೆಯಲ್ಲಿ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಪೈಕಿ ₹5.50 ಲಕ್ಷವನ್ನು ದೂರುದಾರರು ಸಿಂಗ್ ಖಾತೆಗೆ ವರ್ಗಾಯಿಸಿರುವುದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ. ಹಣದ ವಸೂಲಿ, ಪ್ರಕರಣದ ಹಿಂದಿರುವ ಸಂಭಾವ್ಯ ದೊಡ್ಡ ಜಾಲದ ತನಿಖೆ, ಇತರ ಆರೋಪಿಗಳ ಗುರುತು ಪತ್ತೆ ಹಾಗೂ ಹಣದ ವಹಿವಾಟಿನ ಪರಿಶೀಲನೆಗಾಗಿ ಸಿಂಗ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವುದು ಅಗತ್ಯ ಎಂದು ತನಿಖಾ ಸಂಸ್ಥೆ ವಾದಿಸಿತು.
ಸಿಂಗ್ ಪರ ವಕೀಲರು ಆರೋಪಗಳನ್ನು ನಿರಾಕರಿಸಿದ್ದು, ಪ್ರಕರಣದಲ್ಲಿ ತಮ್ಮ ಕಕ್ಷಿದಾರರನ್ನು ಸುಳ್ಳಾಗಿ ಸಿಲುಕಿಸಲಾಗಿದೆ ಎಂದು ವಾದಿಸಿದರು. ಮೂಲತಃ ಇದು ಹಣಕಾಸಿನ ವಿವಾದವಾಗಿದ್ದು, ಅದಕ್ಕೆ ಕ್ರಿಮಿನಲ್ ಪ್ರಕರಣದ ರೂಪ ನೀಡಲಾಗಿದೆ ಎಂದು ಅವರು ಹೇಳಿದರು. ಪ್ರಕರಣ ಸಂಬಂಧ ಬ್ಯಾಂಕ್ ಸ್ಟೇಟ್ಮೆಂಟ್, ಚೆಕ್ ವಹಿವಾಟುಗಳು, ಗೂಗಲ್ ಪೇ/ಯುಪಿಐ ದಾಖಲೆಗಳು, ವಾಟ್ಸ್ಆ್ಯಪ್ ಚಾಟ್ಗಳು ಸೇರಿದಂತೆ ಅಗತ್ಯ ದಾಖಲೆಗಳು ಈಗಾಗಲೇ ತನಿಖಾ ಸಂಸ್ಥೆಯಲ್ಲಿವೆ. ಹೀಗಾಗಿ ಆರೋಪಿಯನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವ ಅಗತ್ಯವಿಲ್ಲ. ತನಿಖೆಗೆ ಸಂಪೂರ್ಣ ಸಹಕರಿಸಲು ಸಿಂಗ್ ಸಿದ್ಧನಿದ್ದಾರೆ ಎಂದು ಅವರ ವಕೀಲರು ತಿಳಿಸಿದರು.
ಆದರೆ, ಆರೋಪಗಳು ಗಂಭೀರ ಹಾಗೂ ನಿರ್ದಿಷ್ಟವಾಗಿವೆ. ಎಫ್ಐಆರ್ನಲ್ಲೇ ಸಿಂಗ್ನ ಹೆಸರನ್ನು ನಿರ್ದಿಷ್ಟವಾಗಿ ದಾಖಲಿಸಲಾಗಿದೆ. ವಿದೇಶಕ್ಕೆ ಕಳುಹಿಸುವುದಾಗಿ ನಂಬಿಸಿ ₹5.80 ಲಕ್ಷ ವಂಚಿಸಿರುವ ಆರೋಪಕ್ಕೆ ಪ್ರಾಥಮಿಕ ತನಿಖೆಯಲ್ಲಿ ಸಮಂಜಸವಾದ ಆಧಾರ ಕಂಡುಬಂದಿದೆ ಎಂದು ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ: E20 ಪೆಟ್ರೋಲ್ ಬದಲಿಗೆ E10 ತರಲು ಇನ್ನೂ ನಿರ್ಧಾರವಾಗಿಲ್ಲ: BPCL ಸ್ಪಷ್ಟನೆ
ಇದು ಕೇವಲ ಆರ್ಥಿಕ ವಂಚನೆಯಲ್ಲ. ಸಾಮಾಜಿಕ ನಂಬಿಕೆಯನ್ನೇ ಬುಡಮೇಲು ಮಾಡುವಂತಹ ಅಪರಾಧವಾಗಿದ್ದು, ಮಾನವ ಕಳ್ಳಸಾಗಣೆ ಮತ್ತು ಗಡಿಯಾಚೆಗಿನ ಇಮಿಗ್ರೇಷನ್ ವಂಚನೆಯ ಅಂಶಗಳನ್ನು ಒಳಗೊಂಡಿದೆ. ಕಾನೂನುಬದ್ಧವಾಗಿ ವಿದೇಶಕ್ಕೆ ತೆರಳುವ ಭರವಸೆ ನೀಡಿ ದುರ್ಬಲ ವ್ಯಕ್ತಿಗಳನ್ನು ಸೆಳೆದು ಬಳಿಕ ಅವರನ್ನು ಶೋಷಣೆಗೆ ಒಳಪಡಿಸುವ ಪ್ರಕರಣಗಳು ಸಂಘಟಿತ ಮಾನವ ಕಳ್ಳಸಾಗಣೆಯ ವ್ಯಾಪ್ತಿಗೆ ಬರುತ್ತವೆ. ವಿದೇಶದಲ್ಲಿ ಉದ್ಯೋಗ ಅಥವಾ ಉತ್ತಮ ಅವಕಾಶಗಳಿಗಾಗಿ ತೆರಳಲು ಬಯಸುವ ಅಮಾಯಕ ಜನರ ಆಶಯಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಇಂತಹ ಮಧ್ಯವರ್ತಿಗಳ ಪ್ರವೃತ್ತಿ ಈ ಭಾಗದಲ್ಲಿ ಆತಂಕಕಾರಿ ರೀತಿಯಲ್ಲಿ ಕಂಡುಬರುತ್ತಿದೆ. ಇಂತಹ ವಂಚನೆಗಳಿಂದ ಜನರು ತೀವ್ರ ಆರ್ಥಿಕ ಹಾಗೂ ಭಾವನಾತ್ಮಕ ಸಂಕಷ್ಟಕ್ಕೆ ಒಳಗಾಗುವುದಲ್ಲದೆ, ಕಾನೂನುಬದ್ಧ ವಲಸೆ ವ್ಯವಸ್ಥೆಯ ಮೇಲಿನ ನಂಬಿಕೆಯೂ ಕುಸಿಯುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ನಿರೀಕ್ಷಣಾ ಜಾಮೀನು ನೀಡುವಾಗ ಆರೋಪಿಯ ವೈಯಕ್ತಿಕ ಹಕ್ಕುಗಳು ಮತ್ತು ಸಮಾಜದ ಹಿತಾಸಕ್ತಿಗಳ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು ಎಂದು ನ್ಯಾಯಮೂರ್ತಿ ಗೋಯೆಲ್ ಹೇಳಿದ್ದಾರೆ. ಆರೋಪಿಯ ಸುಳ್ಳು ಸಿಲುಕಿಸುವಿಕೆಗೆ ಈ ಹಂತದಲ್ಲಿ ಯಾವುದೇ ಸಮಂಜಸವಾದ ಆಧಾರವಿಲ್ಲ. ಹಣದ ವಸೂಲಿ, ಆರೋಪಗಳ ಸತ್ಯಾಸತ್ಯತೆ ಪರಿಶೀಲನೆ ಹಾಗೂ ಪ್ರಕರಣದ ಹಿಂದೆ ಮತ್ತಷ್ಟು ಆರೋಪಿಗಳ ಅಥವಾ ದೊಡ್ಡ ಜಾಲದ ಪಾತ್ರವಿದೆಯೇ ಎಂಬುದನ್ನು ಪತ್ತೆಹಚ್ಚಲು ಕಸ್ಟಡಿ ವಿಚಾರಣೆ ಅಗತ್ಯವಿದೆ. ಸಿಂಗ್ಗೆ ನಿರೀಕ್ಷಣಾ ಜಾಮೀನು ನೀಡಿದರೆ ತನಿಖೆಗೆ ಅಡ್ಡಿಯಾಗುವ ಸಾಧ್ಯತೆಯಿದೆ. ಹೀಗಾಗಿ ಪರಿಣಾಮಕಾರಿ ಹಾಗೂ ಮುಕ್ತ ತನಿಖೆಯ ಹಿತದೃಷ್ಟಿಯಿಂದ ನಿರೀಕ್ಷಣಾ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಿದೆ.




