ಸಾಹಿತ್ಯದ ಸ್ಥಿರತೆಯು ಸಮಕಾಲೀನತೆ, ನೈತಿಕತೆ ಹಾಗೂ ತಾತ್ವಿಕತೆಯ ನೆಲೆಗಟ್ಟಿನ ಮೇಲೆ ನಿಂತಿರುತ್ತದೆ. ಸಾಹಿತ್ಯವು ಸಾಂದರ್ಭಿಕವಾಗಿ ಹುಟ್ಟಿಕೊಂಡು ಓದು, ವಿಮರ್ಶೆ, ಚರ್ಚೆ ಹಾಗೂ ಸಂವಾದದ ಮೂಲಕ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಜೀವಂತವಾಗಿರುತ್ತದೆ ಎಂದು ಸರ್ಕಾರಿ ಸ್ವಾಯತ್ತ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಸಿದ್ಧಲಿಂಗ ದಬ್ಬಾ ಹೇಳಿದರು.
ಬೀದರ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಸಾಹಿತಿ ಡಾ.ರಾಮಚಂದ್ರ ಗಣಾಪೂರ ಅವರ ‘ಅನುಸಂಧಾನ’ ಲೇಖನಗಳ ಸಂಕಲನ ಕೃತಿ ಪರಿಚಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಈ ಕೃತಿಯಲ್ಲಿ ವಚನ ಸಾಹಿತ್ಯ, ದಾಸ ಸಾಹಿತ್ಯ, ಬಂಡಾಯ ಸಾಹಿತ್ಯ ಹಾಗೂ ವ್ಯಕ್ತಿ ಸಂಬಂಧಿತ ಲೇಖನಗಳು ಸೇರಿದಂತೆ ವೈವಿಧ್ಯಮಯ ವಿಷಯಗಳನ್ನು ಒಳಗೊಂಡ ಬರಹಗಳಿವೆ” ಎಂದು ತಿಳಿಸಿದರು.
ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘವು ಕಾರ್ಯಕ್ರಮವನ್ನು ಆಯೋಜಿಸಿತ್ತು. ಸಂಘದ ಅಧ್ಯಕ್ಷ ಅಪ್ಪಾರಾವ ಅಕ್ಕೋಣೆ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಹಾಗೂ ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ ಉಪಸ್ಥಿತರಿದ್ದರು.
ಕೃತಿ ಕರ್ತೃ ಡಾ.ರಾಮಚಂದ್ರ ಗಣಾಪೂರ ಅವರು ತಮ್ಮ ಸಾಹಿತ್ಯಿಕ ಅನುಭವಗಳನ್ನು ಹಂಚಿಕೊಂಡರು. ಡಾ. ಲಕ್ಷ್ಮೀಕಾಂತ ಪಂಚಾಳ ಹಾಗೂ ಡಾ. ಸಿದ್ದಪ್ಪ ಹೊಸಮನಿ ಅವರು ಕೃತಿಯ ಕುರಿತು ಅನಿಸಿಕೆ ವ್ಯಕ್ತಪಡಿಸಿದರು.
ಸಾಹಿತಿಗಳಾದ ಸಿ. ವಿಶ್ವನಾಥ ಭಕರೆ, ಡಾ. ಜಿ.ಎಸ್. ಕುಲಕರ್ಣಿ, ಡಾ. ಬಸವರಾಜ ಭಾಗಾ, ಸಿದ್ಧರಾಮ ಸರಸಂಬಿ, ಶಿವಯ್ಯ ಮಠಪತಿ, ಡಾ. ಶ್ರೀದೇವಿ ರಾಠೋಡ, ಡಾ.ವಿಜಯಕುಮಾರ ಪರುತೆ ಸೇರಿದಂತೆ ಹಲವು ಸಾಹಿತಿಗಳು ಭಾಗವಹಿಸಿದ್ದರು.
ಇದನ್ನೂ ಓದಿ : ಸಂಭ್ರಮದ ತೆರೆ ಕಂಡ ಬೀದರ್ ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನ: 12 ನಿರ್ಣಯ ಅಂಗೀಕಾರ




