ಚಾಲುಕ್ಯರ ಕಾಲದಿಂದಲೂ ಬಾಗಲಕೋಟೆ ಜಿಲ್ಲೆಯಲ್ಲಿ ಬೌದ್ಧ ಪರಂಪರೆಯ ಕುರುಹುಗಳಿದ್ದು, ನಮ್ಮ ಇತಿಹಾಸ ಮತ್ತು ಸಾಂಸ್ಕೃತಿಕ ಅಸ್ಮಿತೆಯ ಅಧ್ಯಯನದ ಮೂಲಕ ಅವುಗಳನ್ನು ಗುರುತಿಸಿ ಮುನ್ನೆಲೆಗೆ ತರಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಎಫ್ ಎಚ್ ಜಕ್ಕಪ್ಪನವರ ಹೇಳಿದರು.
ಬಾಗಲಕೋಟೆ ನಗರದ ನವನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಧಮ್ಮಚಕ್ರ ಪರಿವರ್ತನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಬೌದ್ಧ ಧಮ್ಮ ಕೇವಲ ಸ್ವೀಕಾರಕ್ಕೆ ಸೀಮಿತವಾಗದೆ ಅದರ ತತ್ವಗಳನ್ನು ಜೀವನದಲ್ಲಿ ಪಾಲಿಸಬೇಕು. ಬೌದ್ಧ ವಿಹಾರಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಕುಟುಂಬ ಸಮೇತ ಪಾಲ್ಗೊಳ್ಳಬೇಕು ಎಂದರು.ಸಂವಿಧಾನ, ಮೀಸಲಾತಿ ಮತ್ತು ಸಾಮಾಜಿಕ ನ್ಯಾಯದ ಹಕ್ಕುಗಳ ರಕ್ಷಣೆಗೆ ಜಾಗೃತರಾಗಬೇಕು. ಕೀಳರಿಮೆ, ಅಸಮಾನತೆ ಹಾಗೂ ಗುಲಾಮಗಿರಿಯ ಮನೋಭಾವದಿಂದ ಹೊರಬಂದು ಸಾಮಾಜಿಕ ಬದಲಾವಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.
ಉಪನ್ಯಾಸಕ ನಟರಾಜ್ ಬುದಾಳ ಮಾತನಾಡಿ, ಬೌದ್ಧ ಧಮ್ಮವು ಜ್ಞಾನ, ವೈಚಾರಿಕತೆ, ಸಮಾನತೆ ಮತ್ತು ಮಾನವೀಯತೆಯ ಬದುಕಿನ ಮಾರ್ಗವಾಗಿದೆ. ಬುದ್ಧನ ವಿಚಾರಗಳನ್ನು ಅಧ್ಯಯನ ಮಾಡಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಉಪನ್ಯಾಸಕ ರಾಚಪ್ಪ ಮಾತನಾಡಿ, ಯಾವುದೇ ವಿಚಾರವನ್ನು ಪ್ರಶ್ನಿಸದೆ ಒಪ್ಪಿಕೊಳ್ಳದೆ ವಿವೇಚನೆ ಮತ್ತು ಅನುಭವದ ಮೂಲಕ ಸತ್ಯ ಅರಿಯಬೇಕು. ಬುದ್ಧನ ತತ್ವಗಳು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಪೂರಕವಾಗಿವೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಬುದ್ಧ ಧಮ್ಮಗಳ ಒಕ್ಕೂಟ ಸಮಿತಿಯ ಗೌರವಾಧ್ಯಕ್ಷ ಬಿ. ಗೋಪಾಲ ಮಾತನಾಡಿ, ಜಾತಿರಹಿತ ಸಮಾಜ ನಿರ್ಮಾಣ ಅಂಬೇಡ್ಕರ್ ಅವರ ಆಶಯವಾಗಿತ್ತು. ಬೌದ್ಧ ಧಮ್ಮದ ಅಧ್ಯಯನ ಮತ್ತು ಪ್ರಸಾರದಲ್ಲಿ ಪ್ರತಿ ಕುಟುಂಬದವರೂ ತೊಡಗಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರೇಮನಾಥ ಗರಸಂಗಿ, ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಚಿದಾನಂದ ಕಾಂಬಳೆ, ಯಲ್ಲಪ್ಪ ಬೆಂಡಿಗೇರಿ, ಎಸ್.ಕೆ. ದಾಸರ, ಮನೋಹರ ಕದಂ, ಯಲ್ಲಪ್ಪ ನಾರಾಯಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



