ಬೆಳಗಾವಿ ಜಿಲ್ಲೆಯ ರಾಯಬಾಗ ರೈಲು ನಿಲ್ದಾಣದ ಸಮೀಪ ಮಂಗಳವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 6 ತಿಂಗಳ ಮಗು ಸೇರಿದಂತೆ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಮೃತರನ್ನು ಮಹಾಂತೇಶ್ ಮಾನೆ, ಅವರ ಪತ್ನಿ ಸಾಕ್ಷಿ ಮಾನೆ ಹಾಗೂ ಅವರ 6 ತಿಂಗಳ ಮಗು ಎಂದು ಗುರುತಿಸಲಾಗಿದೆ.
ಮಹಾಂತೇಶ್ ಮಾನೆ ಅವರು ಕುಟುಂಬದೊಂದಿಗೆ ಬೊಮ್ಮನಾಳ ಗ್ರಾಮದಿಂದ ಬೈಕ್‌ನಲ್ಲಿ ರಾಯಬಾಗ ಪಟ್ಟಣಕ್ಕೆ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ಪಟ್ಟಣದ ಹೊರವಲಯದ ರಸ್ತೆಯಲ್ಲಿ ಎದುರಿನಿಂದ ಅತಿ ವೇಗವಾಗಿ ಹಾಗೂ ರಾಂಗ್ ಸೈಡ್‌ನಲ್ಲಿ ಬಂದ ಗೂಡ್ಸ್ ಆಟೋ ಬೈಕ್‌ಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ದಂಪತಿ ಹಾಗೂ ಮಗು ರಸ್ತೆಗೆ ಎಸೆಯಲ್ಪಟ್ಟು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತ ಸಂಭವಿಸಿದ ಬಳಿಕ ಗೂಡ್ಸ್ ಆಟೋ ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ರಾಯಬಾಗ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾದ ಚಾಲಕನ ಪತ್ತೆಗೆ ಬಲೆ ಬೀಸಿದ್ದಾರೆ.



